Asianet Suvarna News Asianet Suvarna News

ವಿಜಯ ದಿವಸ ಆಚರಿಸಿದರೆ ಸಾಲದು, ಯೋಧರ ಯೋಗಕ್ಷೇಮವನ್ನೂ ನೋಡಬೇಕಲ್ಲವೇ?

ಸೈನಿಕರ ‘ಜೀವನ ಶೈಲಿ’ಯ ಸವಾಲನ್ನು ಅರಿಯದವರು ನ್ಯೂರೋಸಿಸ್‌, ಸೈಕೋಸಿಸ್‌, ಹೈಪರ್‌ ಟೆನ್ಷನ್‌, ಹೃದ್ರೋಗ ಮುಂತಾದ ಪೋಸ್ಟ್‌ ಟ್ರಾಮಾಟಿಕ್‌ ಡಿಸಾರ್ಡರ್‌ಗಳನ್ನು ‘ಜೀವನ ಶೈಲಿಯ ರೋಗಗಳು’ ಎಂದು ಲೇಬಲ್‌ ಮಾಡಿ ನಿರ್ಲಕ್ಷಿಸುತ್ತಿದ್ದಾರೆ. ಈ ಮೂಲಕ ದೇಶ ಕಾಯುವ ಸೈನಿಕರಿಗೆ ಅವಮಾನಿಸಲಾಗುತ್ತಿದೆ.

Rajya Sabha Member Rajeev Chandrasekhar writes about plight of soldiers on vijay diwas
Author
Bengaluru, First Published Dec 16, 2019, 4:46 PM IST

49 ವರ್ಷಗಳ ಹಿಂದೆ ಡಿಸೆಂಬರ್‌ 16, 1971ರಂದು ಭಾರತೀಯ ಸೇನೆಯು ಪಾಕಿಸ್ತಾನದ ವಿರುದ್ಧದ ನಿರ್ಣಾಯಕ ಯುದ್ಧದಲ್ಲಿ ವಿಜಯ ಪತಾಕೆ ಹಾರಿಸಿತು. 13 ದಿನಗಳ ಯುದ್ಧವು ಲೆಫ್ಟಿನೆಂಟ್‌ ಕಮಾಂಡರ್‌ ಎ ಎ ಕೆ ನಿಯಾಜಿ ನೇತೃತ್ವದ ಪಾಕಿಸ್ತಾನದ ಸೇನಾಪಡೆಯ 93,000 ಸೈನಿಕರು ಶರಣಾಗುವ ಮೂಲಕ ಕೊನೆಗೊಂಡಿತು. ಅದರೊಂದಿಗೆ ಬಾಂಗ್ಲಾ ಎಂಬ ನೂತನ ದೇಶ ಉದಯವಾಯಿತು. 1971ರಲ್ಲಿ ಭಾರತವು ಪಾಕಿಸ್ತಾನವನ್ನು ಹೊಡೆದುರುಳಿಸಿದ್ದು ಸಮಕಾಲಿನ ಭಾರತದ ಇತಿಹಾಸದ ನಿರ್ಣಾಯಕ ಕ್ಷಣಗಳಲ್ಲಿ ಒಂದು.

3900 ಸೈನಿಕರು ಹುತಾತ್ಮರು

ಇವತ್ತು ವಿಜಯ್‌ ದಿವಸ್‌ ಆಚರಿಸುತ್ತಿದ್ದೇವೆ. ಈ ವಿಜಯವನ್ನು ನೀಡಿದ ಭಾರತೀಯ ಸಶಸ್ತ್ರ ಪಡೆಗಳ ಸೈನಿಕರ ಅಪ್ರತಿಮ ಸೇವೆ, ಶೌರ್ಯ ಮತ್ತು ತ್ಯಾಗಗಳನ್ನು ಸ್ಮರಿಸುತ್ತೇವೆ. ಈ ಯುದ್ಧದಲ್ಲಿ ಸುಮಾರು 3,900 ಸೈನಿಕರು ಹುತಾತ್ಮರಾದರು, ಸುಮಾರು 9,851 ಮಂದಿ ಗಾಯಗೊಂಡರು. ಗಾಯಗೊಂಡವರಲ್ಲಿ ಗೋರ್ಖಾ ರೈಫಲ್ಸ್‌ನ ಮೇಜರ್‌ ಜನರಲ್‌(ಅನಂತರ ಮೇಜರ್‌) ಇಯಾನ್‌ ಕಾರ್ಡೋಜೋ, ಎವಿಎಸ್‌ಎಂ, ಎಸ್‌ಎಂ ಕೂಡ ಒಬ್ಬರು. ಅವರ ಕತೆಯೇ ಒಂದು ದಂತಕತೆ.

ನಿರ್ಭಯಾ ರೇಪಿಸ್ಟ್‌ಗಳನ್ನು ನಾನು ಗಲ್ಲೆಗೇರಿಸ್ತೀನಿ: ರಕ್ತದಲ್ಲೇ ಪತ್ರ ಬರೆದ ಅಂತಾರಾಷ್ಟ್ರೀಯ ಶೂಟರ್!

1971ರ ಯುದ್ಧದ ಸಮಯದಲ್ಲಿ ನೆಲಬಾಂಬ್‌ ಮೇಲೆ ಹೆಜ್ಜೆ ಇಟ್ಟನಂತರ ಅವರು ತನ್ನ ಕಾಲನ್ನು ತಾವೇ ಚಾಕುವಿನಿಂದ ಕತ್ತರಿಸಿಕೊಂಡರು. ಯುದ್ಧ ಮುಗಿದ ನಂತರ ಅವರು ಮತ್ತೆ ಸೇವೆ ಮುಂದುವರೆಸಿದರು. ಅಂಗವಿಕಲರಾಗಿ ಬೆಟಾಲಿಯನ್‌ ಮತ್ತು ಬ್ರಿಗೇಡ್‌ನಲ್ಲಿ ಸೇವೆ ಸಲ್ಲಿಸಿದ ಮೊದಲ ಅಧಿಕಾರಿ ಇವರು.

ಅಂಗವಿಕಲ ಸೈನಿಕರ ನೋವು

ಇತ್ತೀಚೆಗೆ ಮೇಜರ್‌ ಜನರಲ್‌ ಕಾರ್ಡೋಜೋ ಕೇಂದ್ರೀಯ ಪ್ರತ್ಯಕ್ಷ ತೆರಿಗೆ ಮಂಡಳಿ (ಸಿಬಿಡಿಟಿ)ಯು ಅಂಗವಿಕಲರ ಪಿಂಚಣಿ ಮೇಲಿನ ತೆರಿಗೆ ವಿನಾಯ್ತಿಯನ್ನು ಹಿಂಪಡೆದುಕೊಳ್ಳುವ ಸುತ್ತೋಲೆ ಹೊರಡಿಸಿದ್ದರ ಬಗ್ಗೆ ಮತ್ತು ಯುದ್ಧೇತರ ಅಂಗವೈಕಲ್ಯದಿಂದ ಬಳಲುತ್ತಿರುವ ಸೈನಿಕರನ್ನು ನಿರ್ಲಕ್ಷಿಸುತ್ತಿರುವ ಬಗ್ಗೆ ತಮ್ಮ ದುಃಖ ಹೊರಹಾಕಿದರು. ಯುದ್ಧೇತರ ಅಂಗವಿಕಲ್ಯದಿಂದ ಬಳಲುವ ಸೈನಿಕರ ಸಮಸ್ಯೆಗಳನ್ನು ಕಡೆಗಣಿಸಿ, ಅದನ್ನು ‘ಜೀವನ ಶೈಲಿಯ ರೋಗ’ ಎಂಬಂತೆ ಪರಿಗಣಿಸುವ ಬಗ್ಗೆ ಮತ್ತು ಈ ಕುರಿತು ಲೆಫ್ಟಿನೆಂಟ್‌ ಜನರಲ್‌ ಒಬ್ಬರು ಆಕ್ಷೇಪಾರ್ಹವಾಗಿ ಮಾತನಾಡಿದ್ದರ ಬಗ್ಗೆಯೂ ಅವರು ಬೇಸರಗೊಂಡಿದ್ದರು.

ಈ ದಿನ 1971ರ ವಿಜಯವನ್ನು ಮಾತ್ರ ಆಚರಿಸದೆ, ಸೈನಿಕರ ಒತ್ತಡ, ದಣಿವನ್ನು ಅರ್ಥಮಾಡಿಕೊಳ್ಳುವಲ್ಲಿ ಇರುವ ಅಂತರವನ್ನು ಪರಿಹರಿಸುವ ಬಗ್ಗೆಯೂ ನಾವು ಯೋಚಿಸಬೇಕಿದೆ. ಸೈನಿಕರ ‘ಜೀವನ ಶೈಲಿ’ಯ ಸವಾಲನ್ನು ಅರಿಯದವರು ನ್ಯೂರೋಸಿಸ್‌, ಸೈಕೋಸಿಸ್‌, ಹೈಪರ್‌ ಟೆನ್ಷನ್‌, ಹೃದ್ರೋಗ ಮುಂತಾದ ಪೋಸ್ಟ್‌ ಟ್ರಾಮಾಟಿಕ್‌ ಡಿಸಾರ್ಡರ್‌ಗಳನ್ನು ‘ಜೀವನ ಶೈಲಿಯ ರೋಗಗಳು’ ಎಂದು ಕರೆದು ನಿರ್ಲಕ್ಷಿಸುತ್ತಿದ್ದಾರೆ. ಈ ಮೂಲಕ ದೇಶ ಕಾಯುವ ಸೈನಿಕರಿಗೆ ಅವಮಾನಿಸಲಾಗುತ್ತಿದೆ.

ವಿಶ್ವದ ಅಚ್ಚುಮೆಚ್ಚಿನ ವ್ಯಕ್ತಿಗಳಲ್ಲಿ ಮೋದಿ ನಂ.6, ಬಚ್ಚನ್‌ ನಂ.12

2018ರ ಜುಲೈನಲ್ಲಿ ಸಂಸತ್ತಿನಲ್ಲಿ ನಾನು ಈ ಬಗ್ಗೆ ಧ್ವನಿ ಎತ್ತಿದ್ದೆ. ಪೋಸ್ಟ್‌ ಟ್ರಾಮಾಟಿಕ್‌ ಡಿಸಾರ್ಡರ್‌ಗೆ ಒಳಗಾಗಿರುವ ಸೈನಿಕರ ಪ್ರಕರಣ ಮತ್ತು ಅದರ ಪರಿಣಾಮದ ಬಗ್ಗೆ ಆಳವಾದ ಸಂಶೋಧನೆ ನಡೆಸಬೇಕೆಂದು ಭಾರತ ಸರ್ಕಾರದ ಬಳಿ ಅಂದು ಮನವಿ ಮಾಡಿಕೊಂಡಿದ್ದೆ. ಇಂತಹ ಪ್ರಕರಣಗಳ ಬಗ್ಗೆ ಕಾಳಜಿ ವಹಿಸಲಾಗುತ್ತದೆಂದು ಮಿಲಿಟರಿ ವೈದ್ಯಕೀಯ ಮಂಡಳಿಗಳಿಂದ ಉತ್ತರ ಬಂದಿತ್ತು.

ದೇಶ ಕಾಯುವುದು ಲೈಫ್‌ಸ್ಟೈಲ್‌ ಅಲ್ಲ

ದೇಶ ಕಾಯುವುದು ಒಂದು ಜೀವನ ವಿಧಾನ ಅಲ್ಲ. ಒಬ್ಬ ಸೈನಿಕನು ತನಗೆ ವಹಿಸಲಾದ ಹೊಣೆಗಾರಿಕೆಯ ಸಾಧಕ-ಬಾಧಕಗಳನ್ನು ಮತ್ತು ತನ್ನ ಯೋಗಕ್ಷೇಮದ ಮೇಲೆ ಅದರ ಪ್ರಭಾವವನ್ನು ಲೆಕ್ಕಹಾಕುತ್ತಾ ಕೂರುವುದಿಲ್ಲ. ಸೈನಿಕನಿಗೆ ದೇಶವೇ ಮೊದಲು. ನಮ್ಮ ಸೈನಿಕರು ವಿಶ್ವದ ಅತ್ಯಂತ ಎತ್ತರದ ಯುದ್ಧಭೂಮಿ ಮತ್ತು ಹವಾಮಾನ ವೈಪರೀತ್ಯವಿರುವ ಸಿಯಾಚಿನ್‌ನಂತಹ ದುರ್ಗಮ ಸ್ಥಳಗಳಲ್ಲಿ ಸೇವೆ ಸಲ್ಲಿಸುತ್ತಾರೆ. ದೀರ್ಘ ಕಾಲ ಕುಟುಂಬವನ್ನು ಬಿಟ್ಟು ದೂರ ಇರುವುದರಿಂದ ಅವರ ಸೇವಾ ಪರಿಸ್ಥಿತಿಗಳು ನಮ್ಮೆಲ್ಲರಿಗಿಂತ ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚು ಕಠಿಣವಾಗಿರುತ್ತದೆ. ಇದರಿಂದಾಗಿಯೂ ಮಿಲಿಟರಿ ಸಿಬ್ಬಂದಿಯಲ್ಲಿ ಅಂಗವೈಕಲ್ಯ ಮತ್ತಷ್ಟುಉಲ್ಬಣಗೊಳ್ಳುವ ಸಾಧ್ಯತೆ ಇರುತ್ತದೆ.

900 ಸೈನಿಕರು ಆತ್ಮಹತ್ಯೆಗೆ ಶರಣು!

ವಾಸ್ತವವಾಗಿ 2011-2019ರ ವರೆಗೆ ಅಂದಾಜು 900 ಸೈನಿಕರು ಆತ್ಮಹತ್ಯೆಗೆ ಶರಣಾಗಿರುವುದು ನಿಜಕ್ಕೂ ಆತಂಕಕಾರಿ. ಸೈನಿಕರೆಡೆಗೆ ನಾವು ಗಮನ ನೀಡಬೇಕಾದ ತುರ್ತಿದೆ ಎನ್ನುವುದರ ಸಂಕೇತ ಇದು. ಯುದ್ಧವನ್ನು ಬಿಡಿ, ಅದರಾಚೆಗೂ ಜಗತ್ತಿನಾದ್ಯಂತ ಸೈನಿಕರು ಒತ್ತಡ ಮತ್ತು ದಣಿವಿಂದ ಬಳಲುತ್ತಿದ್ದಾರೆ. ದುರದೃಷ್ಟವಶಾತ್‌ ಭಾರತದಲ್ಲಿಯೂ ಸಹ ಹೆಚ್ಚಿನ ಒತ್ತಡದಿಂದಾಗಿ ಸೈನಿಕರು ಅಂಗವೈಕಲ್ಯಕ್ಕೆ ತುತ್ತಾಗುತ್ತಿದ್ದಾರೆ. ಆದರೆ ಇಂತಹ ಸೈನಿಕರು ಸರ್ಕಾರದಿಂದ ಪಿಂಚಣಿ ಅಥವಾ ಅಂಗವೈಕಲ್ಯದ ಪ್ರಯೋಜನಗಳಿಲ್ಲದೆ ಸೇವೆಯಿಂದ ನಿವೃತ್ತಿ ಪಡೆಯುತ್ತಾರೆ.

ಅನೇಕರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿ ತಮ್ಮ ಅಂಗವೈಕಲ್ಯಕ್ಕೆ ಆರ್ಥಿಕ ಪರಿಹಾರ ಪಡೆಯಲು ದೀರ್ಘ ಕಾನೂನು ಹೋರಾಟ ನಡೆಸುತ್ತಾರೆ. ಸುಪ್ರೀಂಕೋರ್ಟ್‌ನದೇ ಆದೇಶಗಳು ಹಾಗೂ ಇನ್ನಿತರ ನಿಯಮಗಳ ಪ್ರಕಾರ, ನೇಮಕಾತಿ ವೇಳೆ ನಡೆಸಲಾಗುವ ಮೆಡಿಕಲ್‌ ಪರೀಕ್ಷೆಯಲ್ಲಿ ಪಾಸಾದ ಸೈನಿಕನಿಗೆ ನಂತರ ಅಂಗವೈಕಲ್ಯ ಉಂಟಾದರೆ ಆ ಅಂಗವೈಕಲ್ಯವನ್ನು ಸೇವಾವಧಿಯಲ್ಲಾದ ಅಂಗವೈಕಲ್ಯವೆಂದೇ ಪರಿಗಣಿಸಬೇಕು.

ಬ್ರಿಟನ್‌ ಲೇಬರ್‌ ಪಕ್ಷದ ಅಧ್ಯಕ್ಷ ಹುದ್ದೆ ರೇಸಲ್ಲಿ ಭಾರತೀಯ ಲಿಸಾ ನಂದಿ!

ಕೆಲವು ತಿಂಗಳುಗಳ ಹಿಂದೆ ಗೃಹ ಸಚಿವಾಲಯದ ಪೊಲೀಸ್‌ ವಿಭಾಗದ ಕಾರ್ಯವೈಖರಿಯನ್ನು ಪ್ರಸ್ತುತಪಡಿಸುವ ಒಂದು ಕಾರ‍್ಯಕ್ರಮದಲ್ಲಿ, ಮನೆಯಿಂದ ಬಹುದೂರದಲ್ಲಿ ದೀರ್ಘಾವಧಿಯವರೆಗೆ ಸೈನಿಕರನ್ನು ನಿಯೋಜಿಸುವುದರಿಂದ ಸಿಎಪಿಎಫ್‌ ಯೋಧರು ಎದುರಿಸುತ್ತಿರುವ ಕಷ್ಟಗಳ ಬಗ್ಗೆ ಕಳವಳ ವ್ಯಕ್ತಪಡಿಸಲಾಯಿತು.

ಗೃಹ ಸಚಿವ ಅಮಿತ್‌ ಶಾ ಅವರು ತಕ್ಷಣವೇ ಪ್ರತಿ ಸೈನಿಕನೂ ತನ್ನ ಕುಟುಂಬದೊಂದಿಗೆ ವರ್ಷದಲ್ಲಿ 100 ದಿನ ಕಾಲ ಕಳೆಯಲು ಅನುಕೂಲವಾಗುವಂತೆ ಸೈನಿಕರ ನಿಯೋಜನಾ ವಿವರಗಳನ್ನು ಡಿಜಿಟಲೀಕರಣಗೊಳಸುವಂತೆ ಕೇಂದ್ರೀಯ ಸಶಸ್ತ್ರ ಪಡೆ ಮತ್ತು ಅಸ್ಸಾಂ ರೈಫಲ್ಸ್‌ನ ಎಲ್ಲಾ ಮಹಾನಿರ್ದೇಶಕರಿಗೆ ಸೂಚನೆ ನೀಡಿದರು. ಮತ್ತೊಂದು ಉತ್ತಮ ಉದಾಹರಣೆಯೆಂದರೆ ಇಂಡೋ ಟಿಬೆಟಿಯನ್‌ ಪೊಲೀಸ್‌ ಫೋರ್ಸ್‌ (ಐಟಿಬಿಪಿ) ಶಿಕ್ಷಣ ಮತ್ತು ಸ್ಟೆ್ರಸ್‌ ಕೌನ್ಸಿಲರ್‌ಗಳನ್ನು ನೇಮಕ ಮಾಡಿಕೊಳ್ಳುವ ಮೂಲಕ ಪ್ರಗತಿಪರ ಹೆಜ್ಜೆ ಇಟ್ಟು ಮಾದರಿಯಾಗಿದೆ. ಕೆಳದರ್ಜೆಯ ವಿಶೇಷ ಕೇಡರ್‌ಗಳಿಗೆ ಒತ್ತಡದಿಂದ ಹೊರಬರಲು ಇದು ನಿಜಕ್ಕೂ ಉಪಯೋಗವಾಗಲಿದೆ.

ಸೈನಿಕರ ದೂರುಗಳು ಇಳಿಮುಖ

ನರೇಂದ್ರ ಮೋದಿ ಅವರು 2014ರಲ್ಲಿ ಪ್ರಧಾನಿಯಾದಾಗ ಸೈನಿಕರ ದೂರುಗಳನ್ನು ಕಡಿಮೆಗೊಳಿಸುವುದಾಗಿ ಘೋಷಿಸಿದ್ದರು. ಆಗಿನಿಂದಲೂ ಸರ್ಕಾರ ಸೈನಿಕರ ಅಂಗವೈಕಲ್ಯದ ಬಗ್ಗೆ ಸಂವೇದನಾತ್ಮಕವಾಗಿ ಹಾಗೂ ಸೂಕ್ಷ್ಮ ದೃಷ್ಟಿಕೋನ ಹೊಂದಿದೆ. 2015ರಲ್ಲಿ ಮಾಜಿ ರಕ್ಷಣಾ ಸಚಿವರಾದ ದಿವಂಗತ ಮನೋಹರ್‌ ಪರ್ರಿಕರ್‌ ತಜ್ಞರ ಸಮಿತಿಯೊಂದನ್ನು ರಚಿಸಿ ದಾವೆ ಮತ್ತು ಸಾರ್ವಜನಿಕ ಕುಂದುಕೊರತೆಗಳನ್ನು ಕಡಿಮೆ ಮಾಡುವ ಕ್ರಮಗಳನ್ನು ಸೂಚಿಸಿದ್ದರು. 2018ರ ಫೆಬ್ರವರಿಯಲ್ಲಿ ರಕ್ಷಣಾ ಸಚಿವೆಯಾಗಿದ್ದ ನಿರ್ಮಲಾ ಸೀತಾರಾಮನ್‌ ಅವರು ಪಿಂಚಣಿ ಪ್ರಕರಣಗಳಲ್ಲಿ ಎಎಫ್‌ಟಿ ಆದೇಶದ ವಿರುದ್ಧ ಇದ್ದ ಮೇಲ್ಮನವಿಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು.

ಕೋಲ್ಕತ್ತಾ ಬೀದಿಯಲ್ಲಿ ಸಾವಿರಾರು ಜನರ ಮಧ್ಯೆ ದೀದಿ: CAA ವಿರುದ್ಧ ಪ್ರತಿಭಟನೆ!

ಇವೆಲ್ಲ ಅಂಗವಿಕಲ ಸೈನಿಕರ ಕಲ್ಯಾಣಕ್ಕಾಗಿ ತೆಗೆದುಕೊಳ್ಳಲಾದ ಸಕಾರಾತ್ಮಕ ಹೆಜ್ಜೆಗಳು. ಇದರ ಹೊರತಾಗಿಯೂ ದೂರು ಸಲ್ಲಿಸಲು ಹಳೆಯ ಸವಕಲು ವಿಧಾನಗಳನ್ನು ಅನುಸರಿಸದೆ, ಹೆಚ್ಚು ವಾಸ್ತವವಾದ ಹಾಗೂ ದೃಢವಾದ ವ್ಯವಸ್ಥೆಯನ್ನು ಜಾರಿ ಮಾಡಬೇಕಾದ ಅಗತ್ಯವಿದೆ.

ನಮ್ಮ ಸೈನಿಕರನ್ನು ಕಾಡುವ ಪೋಸ್ಟ್‌ ಟ್ರಾಮಾಟಿಕ್‌ ಸ್ಟೆ್ರಸ್‌ ಡಿಸಾರ್ಡರ್‌ಗಳನ್ನು ಹೆಚ್ಚು ಗಂಭೀರವಾಗಿ ಹಾಗೂ ಸೂಕ್ಷ್ಮವಾಗಿ ಪರಿಗಣಿಸಬೇಕಾದ ಅಗತ್ಯವಿದೆ. ಅದಕ್ಕಾಗಿ ಇಂಡೋ ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌ ವ್ಯವಸ್ಥೆಯಲ್ಲಿರುವಂತೆ ನಾನ್‌-ಕಮಿಷನ್‌್ಡ ಆಫೀಸ್‌ ಮಟ್ಟದಲ್ಲಿ ಕೌನ್ಸೆಲಿಂಗ್‌ ಮತ್ತು ಕ್ಲಿನಿಕಲ್‌ ಸೈಕಾಲಜಿ ಮತ್ತು ವೃತ್ತಿಪರ ಕೌನ್ಸಿಲರ್‌ಗಳನ್ನು ನೇಮಿಸಬೇಕಿದೆ.

ಭಯೋತ್ಪಾದಕರೊಂದಿಗೆ ಕಾದಾಡುತ್ತಾ ಗಡಿ ಕಾಯುವ ಸೈನಿಕರೂ ನಮ್ಮಂತೆ ಮನುಷ್ಯರು. ಅವರಿಗೂ ಕುಟುಂಬವಿರುತ್ತದೆ, ಒತ್ತಡವಿರುತ್ತದೆ ಎನ್ನುವುದನ್ನು ನಾವೆಲ್ಲರೂ ಅರಿತುಕೊಳ್ಳಬೇಕು. ಕರ್ತವ್ಯದ ವೇಳೆ ಅಂಗವೈಕಲ್ಯ ಅನುಭವಿಸುವ ನಮ್ಮ ಸೈನಿಕರ ಸೇವೆ ಮತ್ತು ತ್ಯಾಗಗಳೆಡೆಗೆ ಗಮನ ನೀಡದೆ ನಿರ್ಲಕ್ಷಿಸುವುದು ಅಥವಾ ಅದನ್ನು ಕ್ಷುಲ್ಲಕವಾಗಿ ನೋಡುವುದು ನಾಚಿಕೆಗೇಡಿನ ಸಂಗತಿ.

- ರಾಜೀವ್‌ ಚಂದ್ರಶೇಖರ್‌

ರಾಜ್ಯಸಭಾ ಸದಸ್ಯ, ಬಿಜೆಪಿ

Follow Us:
Download App:
  • android
  • ios