ವೆಲ್ಲೂರು(ಜು.22): ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹತ್ಯಾ ಪ್ರಕರಣದ ಪ್ರಮುಖ ಅಪರಾಧಿ, ಗಲ್ಲು ಶಿಕ್ಷೆಗೆ ಗುರಿಯಾಗಿರುವ ನಳಿನಿ ಶ್ರೀಹರನ್‌ ವೆಲ್ಲೂರಿನ ಜೈಲಿನಲ್ಲಿ ಸೋಮವಾರ ಆತ್ಮಹತ್ಯೆ ಯತ್ನದ ಬೆದರಿಕೆ ಹಾಕಿ ಅಧಿಕಾರಿಗಳನ್ನು ಬ್ಲ್ಯಾಕ್‌ಮೇಲ್‌ ಮಾಡಿದ ಘಟನೆ ನಡೆದಿದೆ.

ಸಹಕೈದಿಯೊಬ್ಬರು ನಳಿನಿ ಬಗ್ಗೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ನಳಿನಿ ತಮ್ಮಿಂದ ಹೆಚ್ಚಿನ ಕೆಲಸ ಮಾಡಿಸುತ್ತಿದ್ದು, ಸದಾ ಕಿರುಕುಳ ನೀಡುತ್ತಿದ್ದಾರೆ. ಹೀಗಾಗಿ ನನಗೆ ಬೇರೆ ಸೆಲ್‌ ಕೊಡಿ ಎಂದು ಕೋರಿದ್ದರು. ಈ ಹಿನ್ನೆಲೆಯಲ್ಲಿ ಆ ಕೈದಿಯ ಸೆಲ್‌ ಬದಲಾಯಿಸಲಾಗಿತ್ತು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ನಳಿನಿ, ಸಹಕೈದಿಯನ್ನು ಮರಳಿ ತಮ್ಮ ಸೆಲ್‌ಗೆ ಹಾಕದೇ ಇದ್ದರೆ, ತಾವು ಆತ್ಮಹತ್ಯೆ ಮಾಡುವುದಾಗಿ ಹಿರಿಯ ಜೈಲಧಿಕಾರಿಗಳಿಗೆ ಬೆದರಿಕೆ ಹಾಕಿದರು. ಈ ಮೂಲಕ ಅಧಿಕಾರಿಗಳನ್ನೇ ಬ್ಲ್ಯಾಕ್‌ಮೇಲ್‌ ಮಾಡುವ ಯತ್ನ ಮಾಡಿದರು ಎಂದು ಜೈಲಧಿಕಾರಿಗಳು ತಿಳಿಸಿದ್ದಾರೆ.

ನನ್ನ ತಂದೆ ಒಳ್ಳೆ ವ್ಯಕ್ತಿಯಾಗಿದ್ರು, ಅವರನ್ನೇಕೆ ಸಾಯ್ಸಿದ್ರಿ? ರಾಜೀವ್ ಹಂತಕಿಯನ್ನು ಪ್ರಶ್ನಿಸಿದ್ದ ಪ್ರಿಯಾಂಕಾ!

ಈ ನಡುವೆ ನಳಿನಿ ಪರ ವಕೀಲೆ ಪುಗಲೆಂಧಿ, ನಳಿನಿ ಜೈಲಿನಲ್ಲಿ ಆತ್ಮಹತ್ಯೆ ಯತ್ನ ನಡೆಸಿದ್ದಾರೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಕಳೆದ 29 ವರ್ಷಗಳ ಜೈಲುವಾಸದ ಅವಧಿಯಲ್ಲಿ ನಳಿನಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿ ಕೇಳಿದ್ದು ಇದೇ ಮೊದಲು. ಇದನ್ನು ನಂಬಲಾಗುತ್ತಿಲ್ಲ. ಜೈಲು ನಳಿನಿಗೆ ಸುರಕ್ಷಿತವಾಗಿಲ್ಲ. ಪತಿ ಮುರುಗನ್‌ ಕೂಡ ಇದೇ ಜೈಲಿನಲ್ಲಿದ್ದು, ಸ್ವತಃ ಅವರೇ ಪತ್ನಿಯನ್ನು ಬೇರೆ ಜೈಲಿಗೆ ಸ್ಥಳಾಂತರಿಸಲು ಮನವಿ ಮಾಡಿದ್ದರು. ಹೀಗಾಗಿ, ಅವರನ್ನು ಬೇರೆ ಜೈಲಿಗೆ ಸ್ಥಳಾಂತರಿಸುವ ಬಗ್ಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾಗಿ ಹೇಳಿದ್ದಾರೆ.