ನವದೆಹಲಿ(ಮೇ.26): ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೊರೋನಾ ಮಹಾಮಾರಿ ಭಾರತದಲ್ಲೂ ರುದ್ರ ನರ್ತನ ಆರಂಭಿಸಿದೆ. ದಿನೇ ದಿನೇ ಕೊರೋನಾ ಪೀಡಿತರ ಸಂಖ್ಯೆ ಹೆಚ್ಚುತ್ತಿದ್ದು, ಈಗಾಗಲೇ ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಹೀಗಿರುವಾಗ ಕೊರೋನಾ ನಿಯಂತ್ರಿಸುವ ನಿಟ್ಟಿನಲ್ಲಿ ದೇಶಾದ್ಯಂತ ಕಳೆದ ಎರಡು ತಿಂಗಳಿಂದ ಲಾಕ್‌ಡೌನ್ ಹೇರಲಾಗಿದ್ದು, ಇದು ಜನರನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಿದೆ. ಅಲ್ಲದೇ ದೇಶವನ್ನು ಆರ್ಥಿಕ ಹೊಡೆತ ಕೊಟ್ಟಿದೆ. ಹೀಗಿರುವಾಗ ಅನೇಕ ಮಂದಿ ಸಂಕಷ್ಟಕ್ಕೀಡಾದವರ ಸಹಾಯಕ್ಕೆ ಧಾವಿಸಿ, ನೋವನ್ನು ಮರೆಯುವಂತೆ ಮಾಡುತ್ತಿದ್ದಾರೆ. 

ಈ ನಿಟ್ಟಿನಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಕೂಡಾ ಜನರ ನೆರವಿಗೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಉದ್ಯಮಿ ಹಾಗೂ ಜನ ಸಾಮಾನ್ಯರೊಂದಿಗೆ ಚರ್ಚೆ ನಡೆಸಿ ಈ ವರದಿಯನ್ನು ಹಣಕಾಸು ಇಲಾಖೆಗೆ ತಲುಪಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಮಹಿಳಾ ಉದ್ಯಮಿಗಳ ಪರವಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಪತ್ರ ಬರೆದಿರುವ ರಾಜ್ಯಸಭಾ ಸದಸ್ಯ ರಾಜೀವ್‌ ಚಂದ್ರಶೇಖರ್‌ ಅವರು, ಮಹಿಳೆಯರು ಮುನ್ನಡೆಸುತ್ತಿರುವ ಉದ್ದಿಮೆಗಳಿಗೆ ಈಗಾಗಲೇ ಘೋಷಣೆ ಮಾಡಲಾದ 20  ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್‌ ಮೂಲಕ ಸಹಾಯ ಮಾಡುವಂತೆ ಸಲಹೆಗಳನ್ನು ನೀಡಿದ್ದಾರೆ.

ವಿಶ್ವದ ಎಲ್ಲಾ ಪ್ರಮುಖ ಆರ್ಥಿಕತೆಗಳು ಸಾಂಕ್ರಾಮಿಕ ರೋಗದಿಂದ ಪ್ರಭಾವಿತವಾಗಿವೆ. ಇದರಿಂದಾಗಿ ಪೂರೈಕೆಯಲ್ಲಿ ಅನೇಕ ಅಡೆತಡೆಗಳು ಕಂಡುಬಂದಿವೆ. ಭಾರತವೂ ಇದರಿಂದ ಹೊರತಾಗಿಲ್ಲ.

ಈ ಮಹಾಮಾರಿಯಿಂದಾಗಿ ಉತ್ಪಾದನೆ, ಕೃಷಿ ಸೇರಿ ಬಹುತೇಕ ಎಲ್ಲಾ ಕ್ಷೇತ್ರಗಳು ಭಾರೀ ನಷ್ಟ ಅನುಭವಿಸಿವೆ.

ಇಂತಹ ಪರಿಸ್ಥಿತಿಯಲ್ಲಿ ಭಾರತ ಸರ್ಕಾರ ರಾಜ್ಯ ಸರ್ಕಾರದ ನೆರವಿಗೆ ಧಾವಿಸುವುದರೊಂದಿಗೆ ಬಡ ವರ್ಗದ ಜನ ಹಾಗೂ ಉದ್ಯಮಿಗಳಿಗೆ ಆರ್ಥಿಕವಾಗಿ ಸಹಾಯ ಒದಗಿಸುವ ಕ್ರಮ ಕೈಗೊಂಡಿದೆ.

ಹೀಗಿರುವಾಗ ಹಣಕಾಸು ಸಚಿವಾಲಯ 1.7 ಲಕ್ಷ ಕೋಟಿ ಮೊತ್ತದ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಅತ್ತ ಭಾರತೀಯ ರಿಸರ್ವ್ ಬ್ಯಾಂಕ್ ಸಾಲಗಾರರಿಗೆ ನಿಟ್ಟುಸಿರು ಬಿಡುವಂತೆ ಮಾಡಿದೆ.

ಆದರೆ ಆರ್ಥಿಕತೆಗೆ ವೇಗ ನೀಡಲು ಘೋಷಿಸಲಾದ ಈ ಎಲ್ಲಾ ಕ್ರಮಗಳೊಂದಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾರತ ಉದ್ಯಮ ಹಾಗೂ ಸೇವಾ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಸ್ಪರ್ಧೆಯೊಡ್ಡಬಲ್ಲ ಯೋಜನೆ ಬಹಿರಂಗಪಡಿಸಿದ್ದಾರೆ. 

ಪ್ರಧಾನ ಮಂತ್ರಿಯ ಆತ್ಮನಿರ್ಭರ ಭಾರತ ಯೋಜನೆ ಭಾರತೀಯರು ತಮ್ಮ ಯೋಚಿಸುವ ಧಾಟಿ ಬದಲಾಯಿಸಿಕೊಂಡು ಭಾರತವನ್ನು ಅಭಿವೃದ್ಧಿಯ ಪಥದತ್ತ ಸಾಗಿಸಲು ಒಂದು ಅತ್ಯುತ್ತಮ ಅವಕಾಶವಾಗಿದೆ. ಪ್ರಧಾನ ಮಂತ್ರಿ ಮಾಡಿರುವ ಘೋಷಣೆಯಿಂದ ಭಾರತ ವಿಶ್ವಮಟ್ಟದಲ್ಲಿ ನಾಯಕತ್ವ ವಹಿಸುವುದಲ್ಲಿ ಅನುಮಾನವಿಲ್ಲ.

ಈ ಎಲ್ಲಾ ವಿಚಾರಗಳನ್ನು ಪ್ರಸ್ತಾಪಿಸಿದ ಬಳಿಕ ಸಂಸದ ರಾಜೀವ್ ಚಂದ್ರಶೇಖರ್ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ಗೆ  ಪತ್ರವೊಂದನ್ನು ಬರೆದಿದ್ದು, ಈ ಮೂಲಕ ಮಹಿಳಾ ಉದ್ಯಮಿಗಳಿಗೆ ನೆರವು ಒದಗಿಸುವಂತೆ ಸಲಹೆ ನೀಡಿದ್ದಾರೆ.

ಮಹಿಳಾ ಉದ್ಯಮಿಗಳಿಗೆ ಪ್ರತ್ಯೇಕ ಹಾಗೂ ಸರ್ವಾಂಗೀಣ ನೀತಿಯ ಅಗತ್ಯವಿದೆ. ಜತೆಗೆ ಅವರ ಉದ್ದಿಮೆಗಳನ್ನು ಸಂಕಷ್ಟದಿಂದ ಪಾರು ಮಾಡಲು ಪ್ರತ್ಯೇಕ ಹಣಕಾಸು ಪ್ಯಾಕೇಜ್‌ನ ಅವಶ್ಯಕತೆ ಕೂಡ ಇದೆ. ಲಾಕ್‌ಡೌನ್‌ ವೇಳೆ ಹಾಗೂ ಅದು ತೆರವಾದ ನಂತರ ಮಹಿಳಾ ಉದ್ಯಮಿಗಳಿಗೆ ಉತ್ಪಾದನೆ ವೆಚ್ಚ, ಬಾಡಿಗೆ, ವೇತನ ಪಾವತಿಗಾಗಿ ಬಂಡವಾಳದ ಅಗತ್ಯವಿದೆ.ಉದ್ಯಮಿಗಳು ಇಎಸ್‌ಐ, ಪಿಎಫ್‌ ಪಾವತಿಸುವ ಸಮಯವನ್ನು ವಿಸ್ತರಿಸಬೇಕಾಗಿದೆ ಎಂದಿದ್ದಾರೆ.

ಹಲವು ಉದ್ಯಮಿಗಳು ರಾಜ್ಯಗಳ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆದಿದ್ದಾರೆ. ಆ ಸಾಲದ ಬಡ್ಡಿ ಹಾಗೂ ಅಸಲು ಪಾವತಿಯನ್ನು ಮುಂದೂಡಬಹುದಾಗಿದೆ. ಸಾಮಾನ್ಯವಾಗಿ ಏ.1ರಂದು ವೇತನ ಪರಿಷ್ಕರಣೆ ಆಗುತ್ತದೆ. ಆದರೆ ಈ ಬಾರಿ ವ್ಯವಹಾರವೇ ನಡೆದಿಲ್ಲದ ಕಾರಣ ಅದನ್ನು ಮುಂದೂಡುವ ಅಗತ್ಯವಿದೆ. ಸಣ್ಣ, ಅತಿ ಸಣ್ಣ ಉದ್ದಿಮೆಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಬೇಕು. ಏಕೆಂದರೆ ಅದೊಂದು ಹೆಚ್ಚುವರಿ ಹೊರೆಯಾಗಿದೆ. ಹಲವಾರು ಮಹಿಳಾ ಉದ್ಯಮಿಗಳು ಹಾಗೂ ಸ್ಟಾರ್ಟಪ್‌ ಕಂಪನಿಗಳು ತಮ್ಮ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದಿಲ್ಲ. ಜಿಎಸ್‌ಟಿಯನ್ನು ಹಣ ಸ್ವೀಕರಿಸಿದಾಗ ನೀಡುವಂತೆ ಮಾಡಬೇಕೇ ಹೊರತು, ಉತ್ಪನ್ನ ಪೂರೈಸಿದಾಗ ಅಲ್ಲ ಎಂದದ್ದಾರೆ.

ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಉದ್ದಿಮೆ (ಎಂಎಸ್‌ಎಂಇ)ಗಳಿಗೆ ಸಂಬಂಧಿಸಿದಂತೆ ಮೇ 2ರಂದು ರಾಜೀವ್‌ ಅವರು ವಿತ್ತ ಮಂತ್ರಿಗಳಿಗೆ ಪತ್ರ ಬರೆದು ಹಲವು ಸಲಹೆಗಳನ್ನು ಕೊಟ್ಟಿದ್ದರು. ಮೇ 14ರಂದು 150 ಮಹಿಳಾ ಉದ್ಯಮಿಗಳ ಜತೆ ವಿಡಿಯೋ ಕಾನ್ಪರೆನ್ಸ್‌ ಮೂಲಕ ಸಂವಾದ ನಡೆಸಿದ್ದರು. 20 ಲಕ್ಷ ಕೋಟಿ ರು. ಹಣಕಾಸು ಪ್ಯಾಕೇಜ್‌ ಸೇರಿದಂತೆ ಉದ್ದಿಮೆಗಳ ರಕ್ಷಣೆಗೆ ಸರ್ಕಾರ ಕೈಗೊಂಡಿರುವ ಹಲವು ಕ್ರಮಗಳನ್ನು ವಿವರಿಸಿದ್ದರು. ಇದೇ ವೇಳೆ ಮಹಿಳಾ ಉದ್ಯಮಿಗಳು ತಮ್ಮ ಕಳವಳಗಳನ್ನು ತೋಡಿಕೊಂಡಿದ್ದರು.

ಸ್ತ್ರೀ ಸಬಲೀಕರಣಕ್ಕಾಗಿ ಏನೇನು ಸಲಹೆ?

- ಮಹಿಳಾ ಉದ್ಯಮಿಗಳಿಗೆ ಪ್ರತ್ಯೇಕ ಹಣಕಾಸು ಪ್ಯಾಕೇಜ್‌

- ಉತ್ಪಾದನೆ ವೆಚ್ಚ, ಬಾಡಿಗೆ, ವೇತನ ಪಾವತಿಗೆ ಬಂಡವಾಳ

- ಉದ್ಯಮಿಗಳು ಇಎಸ್‌ಐ, ಪಿಎಫ್‌ ಪಾವತಿ ಸಮಯ ವಿಸ್ತರಣೆ

- ಸಾಲದ ಬಡ್ಡಿ ಹಾಗೂ ಅಸಲು ಪಾವತಿ ಮುಂದೂಡಿಕೆ ಅವಕಾಶ

- ಸಣ್ಣ, ಅತಿ ಸಣ್ಣ ಉದ್ದಿಮೆಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ