ನವದೆಹಲಿ[ಡಿ.05]: ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕು ಎಂಬ ಆಗ್ರಹ ಮಂಡಿಸಿದ್ದ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಇದೀಗ ಕೇರಳ- ಕರ್ನಾಟಕ ನಡುವೆ ಹೊಸ ರೈಲು ಮಾರ್ಗಕ್ಕೆ ಬೇಡಿಕೆ ಇಟ್ಟಿದ್ದಾರೆ. ನಂಜನಗೂಡು- ವಯನಾಡ್‌- ನಿಲಂಬೂರು ರೈಲು ಯೋಜನೆಯನ್ನು ತ್ವರಿತಗೊಳಿಸಲು ಕೇರಳ ಸರ್ಕಾರಕ್ಕೆ ಕೇಂದ್ರ ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ವಯನಾಡ್‌ ಸಂಸದರೂ ಆಗಿರುವ ರಾಹುಲ್‌ ಗಾಂಧಿ ಲೋಕಸಭೆಯಲ್ಲಿ ಬುಧವಾರ ಈ ವಿಷಯ ಪ್ರಸ್ತಾಪಿಸಿದರು. ನಂಜನಗೂಡು- ವಯನಾಡ್‌- ನೀಲಂಬೂರು ರೈಲು ಮಾರ್ಗ ಜನರ ಕನಸಾಗಿದೆ. ದುರಾದೃಷ್ಟವೆಂದರೆ, ಹಲವಾರು ವರ್ಷಗಳಿಂದ ಇದು ಜಾರಿಯಾಗಿಲ್ಲ. ರೈಲು ಸಂಪರ್ಕ ಇಲ್ಲದಿರುವುದು ಹಾಗೂ ರಾಷ್ಟ್ರೀಯ ಹೆದ್ದಾರಿ 766 (ಬಂಡೀಪುರ)ರಲ್ಲಿ ರಾತ್ರಿ ಸಂಚಾರಕ್ಕೆ ನಿಷೇಧ ಹೇರಿರುವುದರಿಂದ ಅಂತಾರಾಜ್ಯ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಸಮಸ್ಯೆಯಾಗಿದೆ. ವಯನಾಡಿನ ಸಾಮರ್ಥ್ಯ ಹೊರಗೆಳೆಯಲು ರಾಜ್ಯ, ಅಂತಾರಾಜ್ಯ ಸಂಪರ್ಕವನ್ನು ಸುಧಾರಿಸಬೇಕು. ಉದ್ದೇಶಿತ ರೈಲು ಮಾರ್ಗದಿಂದ ಬೆಂಗಳೂರು ಹಾಗೂ ತ್ರಿವೇಂಡ್ರಮ್‌ ನಡುವಣ ಪ್ರಯಾಣ ಅವಧಿ ಕಡಿಮೆಯಾಗಲಿದೆ. ವಯನಾಡಿನ ಜನರಿಗೆ ಹೊಸ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ತಿಳಿಸಿದ್ದಾರೆ.

ಏನಿದು ಯೋಜನೆ?

ಮೈಸೂರು ಜಿಲ್ಲೆಯ ನಂಜನಗೂಡಿನಿಂದ ಚಾಮರಾಜನಗರ ಜಿಲ್ಲೆಯ ಮಧೂರು, ಕೇರಳದ ವಯನಾಡ್‌ ಜಿಲ್ಲೆಯಲ್ಲಿರುವ ಸುಲ್ತಾನ್‌ ಬತ್ತೇರಿ, ತಮಿಳುನಾಡಿನ ನೀಲಗಿರಿ ಜಿಲ್ಲೆಯ ದೇವಲ ಮೂಲಕ ಕೇರಳದ ನೀಲಂಬೂರು ತಲುಪುವ ರೈಲು ಮಾರ್ಗ ಇದು. ಸುಮಾರು 236 ಕಿ.ಮೀ. ಉದ್ದದ ಈ ರೈಲು ಮಾರ್ಗವನ್ನು ನಿರ್ಮಿಸಬೇಕು ಎಂದು ಕೇರಳ ಮೊದಲಿನಿಂದಲೂ ಲಾಬಿ ಮಾಡಿಕೊಂಡು ಬಂದಿದೆ. ಈ ಮಾರ್ಗದಿಂದ ಕೇರಳ ಜನರಿಗೆ ಮೈಸೂರು, ಬೆಂಗಳೂರು ತಲುಪುವ ಸಮಯ ಭಾರಿ ಪ್ರಮಾಣದಲ್ಲಿ ತಗ್ಗಲಿದೆ. ಸುಲ್ತಾನ್‌ ಬತ್ತೇರಿಯ ಜನ ಒಂದು ತಾಸಿನಲ್ಲಿ ಮೈಸೂರಿಗೆ ತಲುಪಬಹುದು. ಬೆಂಗಳೂರಿಗೆ 3 ತಾಸಿನಲ್ಲಿ ಸೇರಬಹುದು.

ಕೇರಳ ಈ ಯೋಜನೆಗೆ ಉತ್ಸುಕವಾಗಿದ್ದರೂ, ಕರ್ನಾಟಕ ಹಾಗೂ ತಮಿಳುನಾಡು ಅಷ್ಟೇನೂ ಆಸಕ್ತಿ ವ್ಯಕ್ತಪಡಿಸಿಲ್ಲ. ಈ ಯೋಜನೆಯ ವೆಚ್ಚ ಭರಿಸಲು ಎರಡೂ ರಾಜ್ಯಗಳು ಮುಂದೆ ಬರುತ್ತಿಲ್ಲ. ಅದೂ ಅಲ್ಲದೆ ಈ ರೈಲು ಮಾರ್ಗದ ಪೈಕಿ 22 ಕಿ.ಮೀ. ಬಂಡೀಪುರ ಹುಲಿ ರಕ್ಷಿತಾರಣ್ಯದೊಳಗೆ ಹಾದುಹೋಗಬೇಕಿರುವ ಕಾರಣ ವನ್ಯಜೀವಿ ತಜ್ಞರ ವಿರೋಧವೂ ಇದೆ.