3 ಕೃಷಿ ಕಾಯ್ದೆ ವಾಪಸ್ ಪಡೆದ್ರೂ ಪ್ರತಿಭಟನೆ ನಿಲ್ಲಿಸಲು ಮೋದಿಗೆ 1 ಷರತ್ತು ಹಾಕಿದ ಟಿಕಾಯತ್
* 3 ಕೃಷಿ ತಿದ್ದುಪಡಿ ಕಾಯ್ದೆ ವಾಪಸ್ ಪಡೆದ ಕೇಂದ್ರ ಸರ್ಕಾರ
* ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಘೋಷಣೆ
* ರೈತರ ನಿರಂತರ ಹೊರಾಟಕ್ಕೆ ಸಂದ ಜಯ
* ಆದರೂ ಪ್ರತಿಭಟನೆ ಮುಂದುವರೆಯಲಿದೆ ಎಂದ ರಾಕೇಶ್ ಟಿಕಾಯತ್
ನವದೆಹಲಿ, (ನ.19): ಕೇಂದ್ರ ಸರ್ಕಾರದ 3 ಕೃಷಿ (Farms Law) ತಿದ್ದುಪಡಿ ಕಾಯ್ದೆಗೆ ರೈತರಿಂದ ಅಪಾರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಅದನ್ನು ಹಿಂಪಡೆದಿದೆ. ಈ ಕುರಿತು ಪ್ರಧಾನಿ ನರೇಂದ್ರ ಮೋದಿ (Narendra Modi) ಇಂದು (ನವೆಂಬರ್ 19) ಬೆಳಗ್ಗೆ ಘೋಷಿಸಿದ್ದಾರೆ.
ಸರ್ಕಾರ ಅಂತಿಮವಾಗಿ ರೈತರ ಪ್ರತಿಭಟನೆಗೆ ತಲೆಬಾಗಿದ್ದಕ್ಕೆ ವಿರೋಧ ಪಕ್ಷಗಳು ಪ್ರತಿಕ್ರಿಯಿಸಿದ್ದು, ಅಭಿನಂದನೆ ಸಲ್ಲಿಸಿವೆ. ಆದ್ರೆ, ರೈತ ಹೋರಾಟ ರೂವಾರಿ,ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್ (Rakesh Tikait) ರೈತರ ಆಂದೋಲನ ವಾಪಸ್ ಪಡೆಯುವುದಿಲ್ಲ ಎಂದಿದ್ದಾರೆ.
"
ಕೃಷಿ ಕಾಯ್ದೆ ವಾಪಸ್, ಮೋದಿ ನಿರ್ಧಾರವನ್ನು ಸ್ವಾಗತಿಸಿದ ನಾಯಕರು, ಟಿಕಾಯತ್ ಹೇಳಿದ್ದು ಹೀಗೆ
ಹೌದು....ವಿವಾದಿತ ಮೂರು ಕೃಷಿ ಮಸೂದೆಗಳ ಕೇಂದ್ರ ಸರ್ಕಾರ ರದ್ದು ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಭಾರತೀಯ ಕಿಸಾನ್ ಯೂನಿಯನ್ ನಾಯಕ ರಾಕೇಶ್ ಟಿಕಾಯತ್, ರೈತರ ಆಂದೋಲನ (Farmers Protest) ತಕ್ಷಣವೇ ಹಿಂಪಡೆಯುವುದಿಲ್ಲ, ಸಂಸತ್ತಿನಲ್ಲಿ ಕೃಷಿ ಕಾನೂನುಗಳನ್ನು(farm laws) ರದ್ದುಪಡಿಸುವ ದಿನಕ್ಕಾಗಿ ನಾವು ಕಾಯುತ್ತೇವೆ. ಎಂಎಸ್ಪಿ (MSP) ಜೊತೆಗೆ ಸರ್ಕಾರವು ರೈತರ ಇತರ ಸಮಸ್ಯೆಗಳನ್ನು ಚರ್ಚಿಸಬೇಕು ಎಂದು ಟ್ವೀಟ್ ಮೂಲಕ ಸ್ಪಷ್ಟಪಡಿಸಿದ್ದಾರೆ.
ಮೂರು ವಿವಾದಾತ್ಮಕ ಕೃಷಿ ಮಸೂದೆಗಳನ್ನು ಹಿಂಪಡೆಯುವ ಪ್ರಧಾನಿ ನರೇಂದ್ರ ಮೋದಿಯವರ ಘೋಷಣೆ ಆರಂಭವಷ್ಟೇ. ಸಂಸತ್ತಿನಲ್ಲಿ ಈ ನಿರ್ಧಾರವನ್ನು ಅಂಗೀಕರಿಸಿದ ನಂತರವೇ ಪ್ರತಿಭಟನಾ ನಿರತ ರೈತರು ತಮ್ಮ ಮನೆಗಳಿಗೆ ಮರಳುತ್ತಾರೆ ಎಂದು ರಾಕೇಶ್ ಟಿಕಾಯತ್ ಹೇಳಿದ್ದಾರೆ..
PM Address to Nation: ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಘೋಷಿಸಿದ ಪ್ರಧಾನಿ ಮೋದಿ
ಇನ್ನು ಈ ಬಗ್ಗೆ ಖಾಸಗಿ ಸುದ್ದಿವಾಹಿನಿ ಜತೆ ಮಾತನಾಡಿರುವ ರಾಕೇಶ್ ಟಿಕಾಯತ್, ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸುವುದು ಸೇರಿದಂತೆ ಅನೇಕ ಸಮಸ್ಯೆಗಳು ಬಾಕಿ ಉಳಿದಿವೆ, ಇವುಗಳನ್ನು ಪ್ರಧಾನಿ ತಿಳಿಸಿಲ್ಲ. ಈ ಬಗ್ಗೆ ನಮಗೆ ಸ್ಪಷ್ಟಪಡಿಸಿದ ಬಳಿಕಷ್ಟೇ ಹಿಂತಿರುಗುತ್ತೇವೆ ಎಂದಿದ್ದು, ಸಂಸತ್ತಿನಲ್ಲಿ ಅದನ್ನು ಸರಿಯಾಗಿ ಅಂಗೀಕರಿಸುವವರೆಗೆ ರೈತರು ಅಂತಹ ಘೋಷಣೆಗಳನ್ನು ನಂಬುವುದಿಲ್ಲ ಎಂದು ಟಿಕಾಯತ್ ತಿಳಿಸಿದ್ದಾರೆ.
ಕೇಂದ್ರದ ನಿರ್ಧಾರ ಸ್ವಾಗತಿಸಿದ ಸಂಯುಕ್ತ ಕಿಸಾನ್ ಮೋರ್ಚಾ
ಮೂರು ಕೃಷಿ ಮಸೂದೆಗಳ ರದ್ದು ಪಡಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಂಯುಕ್ತ ಕಿಸಾನ್ ಮೋರ್ಚಾ ಸ್ವಾಗತಿಸಿದೆ.
ಎಲ್ಲಾ 3 ರೈತ ವಿರೋಧಿ ಕಾನೂನುಗಳನ್ನು ರದ್ದುಗೊಳಿಸುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ. ಮಸೂದೆಗಳ ರದ್ದು ಕುರಿತು ಸಂಸತ್ತಿನ ಕಾರ್ಯವಿಧಾನಗಳ ಮೂಲಕ ಜಾರಿಯಾಗುವ ಘೋಷಣೆಗಾಗಿ ಕಾಯುತ್ತೇವೆ. ಇದು ಸಾಧ್ಯವಾದರೆ, ಇದು ಭಾರತದಲ್ಲಿ ಒಂದು ವರ್ಷದ ರೈತರ ಹೋರಾಟಕ್ಕೆ ಐತಿಹಾಸಿಕ ವಿಜಯ ಸಿಕ್ಕಂತಾಗುತ್ತದೆ ಎಂದು ಹೇಳಿದೆ.
ರೈತರನ್ನ ಸಂಘಟಿಸಿದ ರಾಕೇಶ್ ಟಿಕಾಯತ್
ಈ ಕಾಲದಲ್ಲಿ ಓರ್ವ ವ್ಯಕ್ತಿಯ ಮಾತನ್ನು ಇನ್ನೊಬ್ಬ ಕೇಳಿಸಿಕೊಳ್ಳುವುದೇ ಕಷ್ಟ ಎಂಬಂತಿರುವಾಗ ಹಲವು ತಿಂಗಳ ಕಾಲ ಸಾವಿರಾರು ಮಂದಿಯನ್ನು ಒಂದೆಡೆ ಸೇರಿಸಿ ಪ್ರತಿಭಟನೆ ನಡೆಸುವುದು ಸುಲಭದ ಮಾತಲ್ಲ. ಜತೆಗೆ, ಒಂದು ಹೆಜ್ಜೆ ಅತ್ತಿತ್ತ ವಾಲದೇ ಎಲ್ಲರ ಮನಸ್ಥಿತಿಯನ್ನು ಸರಿದೂಗಿಸಿಕೊಳ್ಳುವುದು ಸಾಹಸವೇ ಸರಿ. ಇವೆಲ್ಲವೂ ನೆರವೇರಿದ ದೆಹಲಿ ಚಲೋ ಎಂಬ ಇಂತಹ ಚಳುವಳಿಯ ಹಿಂದಿನ ಮುಖ್ಯ ಶಕ್ತಿ 41 ರೈತ ಸಂಘಟನೆಗಳು. ಅದರಲ್ಲೂ ಪ್ರಮುಖಾತಿಪ್ರಮುಖ ಭಾರತೀಯ ಕಿಸಾನ್ ಯೂನಿಯನ್, ಮತ್ತದರ ಮಾಧ್ಯಮ ವಕ್ತಾರ ರಾಕೇಶ್ ಟಿಕಾಯತ್.
ದೆಹಲಿ ಚಲೋ ಎಂಬ ಚಳುವಳಿಯಿಂದ ದೇಶದ 72ನೇ ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿಯಲ್ಲಿ ಆದ ಘಟನೆಗಳು ಒಂದೆರಡಲ್ಲ. ಅವುಗಳನ್ನು ಪದಗಳಲ್ಲಿ ಹೇಳುವುದೂ ಕಷ್ಟವೇ. ದೇಶಕ್ಕೆ ದೇಶವನ್ನೇ ಭುಗಿಲೇಳುವ ಮನಸ್ಥಿತಿಗೆ ತರಬಲ್ಲ ಎಲ್ಲ ಕೃತ್ಯಗಳೂ ದೆಹಲಿಯಲ್ಲಿ ನಡೆದವು. ಶಾಂತಿಯ ಅಪ್ಪಟ ಪ್ರತಿರೂಪವಾಗಿ ನಡೆದ ಪ್ರತಿಭಟನೆ ಮಾತ್ರ ಹಿಂಸೆಯ ಕಾವಿಗೆ ಬದಲಾಗಿತ್ತು.