ಹತ್ರಾಸ್(ಅ.04): ಹತ್ರಾಸ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಹಾಗೂ ದಾಳಿ ನಡೆದ ಪ್ರಕರಣ ಸದ್ಯ ರಾಜಕೀಯ ತಿರುವು ಪಡೆದುಕೊಂಡಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹತ್ರಾಸ್‌ಗೆ ತಲುಪಿ ಸಂತ್ರಸ್ತೆ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದಾರೆ. ಈ ಭೇಟಿ ಬಳಿಕ ಮಾತನಾಡಿದ ರಾಹುಲ್ ಗಾಂಧಿ ಯಾವುದೇ ಶಕ್ತಿ ನಮ್ಮ ನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ. ಇನ್ನು ಈ ಭೇಟಿ ವೇಳೆ ಪ್ರಿಯಾಂಕಾ ಗಾಂಧಿ ಸಂತ್ರಸ್ತೆ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳುವ ವೇಳೆ ತೆಗೆದ ಫೋಟೋ ಒಂದು ಭಾರೀ ವೈರಲ್ ಆಗಿದೆ.

ಈ ಫೋಟೋ ವೈರಲ್ ಆದ ಬೆನ್ನಲ್ಲೇ ಸಿನಿಮಾ ನಿರ್ಮಾಪಕಿ ಅಲಂಕೃತಾ ಶ್ರೀವಾತ್ಸವ್‌ರವರು ಈ ಸಂಬಂಧ ಟ್ವೀಟ್ ಮಾಡುತ್ತಾ ಪ್ರಿಯಾಂಕಾ ಹಾಗೂ ರಾಹುಲ್ ಗಾಂಧಿಯ ಈ ನಡೆಯನ್ನು ಶ್ಲಾಘಿಸಿದ್ದಾರೆ. ಈ ಫೋಟೋ ಶೇರ್ ಮಾಡಿಕೊಂಡಿರುವ ಅಲಂಕೃತಾ ನೀವು ನನ್ನ ಹೃದಯ ಗೆದ್ದಿದ್ದೀರಿ ಎಂದು ಬರೆದಿದ್ದಾರೆ.

ಅಲ್ಲದೇ 'ನಿಮ್ಮ ಬಳಿ ಹೃದಯವಿದೆ. ಭಾರತಕ್ಕೀಗ ಕರುಣೆ ಹಾಗೂ ದಯೆಯ ಅಗತ್ಯವಿದೆ. ಅಲ್ದೇ ಸಂತ್ರಸ್ತರನ್ನು ಅಪ್ಪಿಕೊಳ್ಳುವ ಅಗತ್ಯವಿದೆ' ಎಂದಿದ್ದಾರೆ. ಅಲಂಕೃತಾರ ಈ ಟ್ವೀಟ್‌ಗೆ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನೇಕ ಮಂದಿ ಈ ಬಗ್ಗೆ ಕಮೆಂಟ್ ಮಾಡಿದ್ದಾರೆ. 

ಖುದ್ದು ಕಾರು ಡ್ರೈವ್ ಮಾಡಿ ಹತ್ರಾಸ್‌ ತೆರಳಿದ್ದ ಪ್ರಿಯಾಂಕ

"

ಏನಿದು ಪ್ರಕರಣ?:

ಯುವತಿ ಸೆ.14ರಂದು ದನಕ್ಕೆ ಮೇವು ತರಲೆಂದು ಹೊಲಕ್ಕೆ ಹೋಗಿದ್ದ ಸಂದರ್ಭದಲ್ಲಿ ಮೇಲ್ಜಾತಿಯ ನಾಲ್ಕು ಮಂದಿ ದುಪ್ಪಟ್ಟವನ್ನು ಕುತ್ತಿಗೆಗೆ ಸುತ್ತಿ ಎಳೆದೊಯ್ದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ವೇಳೆ ಯುವತಿಯ ಬೆನ್ನುಮೂಳೆಗೆ ಬಲವಾದ ಪೆಟ್ಟುಬಿದ್ದು ತೀವ್ರವಾಗಿ ಗಾಯಗೊಂಡಿದ್ದಳು. ಮಗಳ ಚೀರಾಟವನ್ನು ಕೇಳಿಸಿಕೊಂಡ ತಾಯಿ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಳು. ಈ ವೇಳೆ ಪೊಲೀಸರು ಅತ್ಯಾಚಾರ ದೂರು ಸ್ವೀಕರಿಸದೇ ಅಮಾನವೀಯವಾಗಿ ನಡೆದುಕೊಂಡಿದ್ದರು. ಬಳಿಕ ಸೆ.22ರಂದು ಕಾಟಾಚಾರಕ್ಕೆ ಯುವತಿಯಿಂದ ಹೇಳಿಕೆ ದಾಖಲಿಸಿಕೊಂಡಿದ್ದರು ಎಂದು ದೂರಲಾಗಿದೆ.

ತೀವ್ರ ಹಲ್ಲೆಗೆ ಒಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿಗೆ ಆರಂಭದಲ್ಲಿ ಅಲಿಗಢ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಯ ಸಫ್ದರ್‌ ಜಂಗ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಸೆ.29ರಂದು ಯುವತಿ ಸಾವಿಗೀಡಾಗಿದ್ದಳು. ಆ ಬಳಿಕ ಯುವತಿಯ ಮೃತದೇಹವನ್ನುಕುಟುಂಬಕ್ಕೂ ನೀಡದೇ ಹಾಥ್ರಸ್‌ಗೆ ತಂದು ಪೊಲೀಸರು ರಾತ್ರೋರಾತ್ರಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಈ ಘಟನೆಯ ಬಳಿಕ ಅತ್ಯಾಚಾರ ಸಂತ್ರಸ್ತ ಯುವತಿಯ ಸಾವಿನ ಪ್ರಕರಣ ದೇಶದ ಗಮನ ಸೆಳೆದಿತ್ತು.