ನವದೆಹಲಿ(ಏ.21): ದೆಹಲಿಯಲ್ಲಿ ಕೊರೋನಾ ಸೋಂಕಿನಿಂದಾಗಿ ಗಂಭೀರ ಸ್ಥಿತಿಗೆ ತಲುಪಿದ್ದ ರೋಗಿಯೊಬ್ಬರಿಗೆ ನೀಡಿದ್ದ ಪ್ಲಾಸ್ಮಾ ಥೆರಪಿ ಯಶಸ್ವಿಯಾಗಿದೆ. ಪ್ಲಾಸ್ಮಾ ಥೆರಪಿ ಬಳಿಕ ರೋಗಿ ಚೇತರಿಸಿಕೊಂಡಿದ್ದು, ಅವರನ್ನು ಇದೀಗ ವೆಂಟಿಲೇಟರ್‌ನಿಂದ ಹೊರಕ್ಕೆ ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇದು ದೇಶದಲ್ಲಿ ಕೊರೋನಾ ಸೋಂಕಿತರೊಬ್ಬರಿಗೆ ನೀಡಿದ ಮೊದಲ ಪ್ಲಾಸ್ಮಾ ಥೆರಪಿಯಾಗಿತ್ತು.

ದೆಹಲಿಯ ಸಾಕೇತ್‌ ಪ್ರದೇಶದಲ್ಲಿನ ಮ್ಯಾಕ್ಸ್‌ ಆಸ್ಪತ್ರೆಯಲ್ಲಿ 49 ವರ್ಷದ ರೋಗಿಯೊಬ್ಬರ ಆರೋಗ್ಯ ಹದಗೆಟ್ಟಹಿನ್ನೆಲೆಯಲ್ಲಿ ಕಳೆದ ವಾರದಿಂದ ಪ್ಲಾಸ್ಮಾ ಥೆರಪಿ ಆರಂಭಿಸಲಾಗಿತ್ತು. ಅದಾದ ಬಳಿಕ ರೋಗಿ ಆರೋಗ್ಯದಲ್ಲಿ ಚೇತರಿ ಕಂಡುಬಂದಿದೆ. ಅವರನ್ನು ಇದೀಗ ವೆಂಟಿಲೇಟರ್‌ ವ್ಯವಸ್ಥೆಯಿಂದ ಹೊರಕ್ಕೆ ತರಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅಮೆರಿಕದಲ್ಲಿ ಭಾರತೀಯರ ಮೇಲೆ ಪ್ಲಾಸ್ಮಾ ಥೆರಪಿ ಯಶಸ್ವಿ!

ಏನಿದು ಪ್ಲಾಸ್ಮಾ ಥೆರಪಿ?

ಕೊರೋನಾ ಪೀಡಿತನಾಗಿದ್ದ ವ್ಯಕ್ತಿಯೊಬ್ಬ ಪೂರ್ಣವಾಗಿ ಚೇತರಿಸಿಕೊಂಡ ಬಳಿಕ ಆತನ ದೇಹದಲ್ಲಿ ರೋಗನಿರೋಧಕ ಶಕ್ತಿ ಅಭಿವೃದ್ಧಿಗೊಂಡಿರುತ್ತದೆ. ಇಂಥ ವ್ಯಕ್ತಿಯ ರಕ್ತದಲ್ಲಿನ ಪ್ಲಾಸ್ಮಾ ತೆಗೆದು ಅದನ್ನು ಮತ್ತೊಬ್ಬ ರೋಗಿಗೆ ನೀಡಲಾಗುತ್ತದೆ. ಈ ಮೂಲಕ ಆತನ ರೋಗ ನಿರೋಧಕ ಶಕ್ತಿ ಹೆಚ್ಚಿಸಲಾಗುತ್ತದೆ. ಅದು ಫಲ ಕೊಟ್ಟರೆ ಆತ 2-3 ದಿನಗಳಲ್ಲಿ ಚೇತರಿಕೆ ಹಂತಕ್ಕೆ ತಲುಪುತ್ತಾನೆ.