ಪೆಗಾಸಸ್: ಜನತೆಗೆ ತಮ್ಮ ಗೌಪ್ಯತೆ ಕಾಪಾಡಿಕೊಳ್ಳುವ ಹಕ್ಕಿದೆ, ಕೇಂದ್ರಕ್ಕೆ ಸುಪ್ರೀಂ ತರಾಟೆ!
* ಪೆಗಾಸಸ್ ಪ್ರಕರಣ, ಮೂವರು ತಜ್ಞರನ್ನೊಳಗೊಂಡ ಸಮಿತಿ ರಚಿಸಿದ ಸುಪ್ರೀಂ
* ದೇಶದ ಜನತೆಗೆ ತಮ್ಮ ಗೌಪ್ಯತೆ ಕಾಪಾಡಿಕೊಳ್ಳುವ ಹಕ್ಕಿದೆ
* ಸರ್ಕಾರ ರಾಷ್ಟ್ರೀಯ ಭದ್ರತೆಯ ವಿಚಾರವನ್ನ ಎತ್ತಿದ್ದಕ್ಕೆ ಕೇಂದ್ರ ಸರ್ಕಾರಕ್ಕೆ ತರಾಟೆ
ನವದೆಹಲಿ(ಅ.27): ಇಸ್ರೇಲ್(Isrel) ಕಂಪನಿಯ ಗೂಢಚರ್ಯ ತಂತ್ರಾಂಶ ‘ಪೆಗಾಸಸ್’(Pegasus) ಬಳಸಿ ಕೇಂದ್ರ ಸರ್ಕಾರ ಪತ್ರಕರ್ತರು ಸೇರಿ ದೇಶದ 300ಕ್ಕೂ ಹೆಚ್ಚು ಗಣ್ಯರ ಮೊಬೈಲ್ ಫೋನ್‌ಗೆ ಕನ್ನ ಹಾಕಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ಗೆ(Supreme Court) ತೀವ್ರ ಹಿನ್ನಡೆಯಾಗಿದೆ. ಈ ಪ್ರಕರಣದ ತನಿಖೆಗಾಗಿ ಸುಪ್ರೀಂ ಮೂವರು ತಜ್ಞರನ್ನೊಳಗೊಂಡ ಸಮಿತಿ ರಚಿಸಿದೆ. ಈ ಕೇಸ್ ಮೂಲಭೂತ ಹಕ್ಕುಗಳಿಗೆ(Fundamental Rights)( ಸಂಬಂಧಿಸಿದ್ದಾಗಿದೆ ಮತ್ತು ಧಮನಕಾರಿ ಪರಿಣಾಮ ಬೀರಬಹುದಾಗಿದೆ ಎಂದೂ ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಪೆಗಾಸಸ್ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಯಾವುದೇ ನಿರ್ದಿಷ್ಟ ಕಾರಣ ಸಿಕ್ಕಿಲ್ಲ. ಹೀಗಾಗಿ ಅರ್ಜಿದಾರರ ಪ್ರಾಥಮಿಕ ಹಂತದ ಸಲ್ಲಿಕೆಗಳನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ನ್ಯಾಯಾಲಯ ತಿಳಿಸಿದೆ. ಅಲ್ಲದೇ ನಾವು ಸರ್ಕಾರಕ್ಕೆ ನೋಟಿಸ್ ನೀಡಿದ್ದೆವು. ಈ ನಿಟ್ಟಿನಲ್ಲಿ ತೆಗೆದುಕೊಂಡ ಕ್ರಮಗಳ ಬಗ್ಗೆ ವಿವರ ನೀಡಲು ಸರ್ಕಾರಕ್ಕೆ ಸಾಕಷ್ಟು ಕಾಲಾವಕಾಶ ಕೊಡಲಾಗಿದೆ. ಆದರೂ ಪುನರಾವರ್ತಿತ ಅವಕಾಶಗಳ ನಡುವೆಯೂ ಅವರು ಸ್ಪಷ್ಟತೆ ಇಲ್ಲದ ಸೀಮಿತ ಅಫಿಡವಿಟ್ ಸಲ್ಲಿಸಿದ್ದಾರೆ. ಅವರು ಸ್ಪಷ್ಟವಾಗಿ ತಿಳಿಸಿದ್ದರೆ, ನಮ್ಮ ಹೊರೆ ಕಡಿಮೆಯಾಗುತ್ತಿತ್ತು. ಆದರೆ ಪ್ರತಿ ಬಾರಿ ರಾಷ್ಟ್ರೀಯ ಭದ್ರತಾ ವಿಚಾರವನ್ನಿಟ್ಟುಕೊಂಡು ಸತರ್ಕಾರ ಮುಕ್ತವಾಗಲು ಸಾಧ್ಯವಿಲ್ಲ ಎಂದಿದೆ.
ಇನ್ನು ಸುಪ್ರೀಂ ಕೋರ್ಟ್ ರಚಿಸಿರುವ ಮೂವರು ಸದಸ್ಯರ ಪೆಗಾಸಸ್ ತನಿಖಾ ಸಮಿತಿಯ ಮುಖ್ಯಸ್ಥರಾಗಿ ಮಾಜಿ ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ಅವರನ್ನು ಸುಪ್ರೀಂ ಕೋರ್ಟ್ ನೇಮಿಸಿದ್ದು, ಸಮಿತಿಯ ಇತರೆ ಸದಸ್ಯರಾಗಿ ಅಲೋಕ್ ಜೋಶಿ ಮತ್ತು ಸಂದೀಪ್ ಒಬೆರಾಯ್ ಅವರನ್ನು ನೇಮಕ ಮಾಡಲಾಗಿದೆ. ಈ ಸಮಿತಿಯ ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ಕಾರ್ಯ ನಿರ್ವಹಿಸಲಿದೆ.
ಇನ್ನು ಪೆಗಾಸಸ್ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತವಾಗಿ ತನಿಖೆ ನಡೆಸಿ 8 ವಾರಗಳಲ್ಲಿ ವರದಿ ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ, ಆರ್‌ವಿ ರವೀಂದ್ರನ್ ನೇತೃತ್ವದ ತಜ್ಞರ ಸಮಿತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
'ರಾಷ್ಟ್ರೀಯ ಭದ್ರತೆಯ ವಿಚಾರ ಬಂದಾಗ ಕೋರ್ಟ್ ಹಸ್ತಕ್ಷೇಪ ಮಾಡುವುದಿಲ್ಲ. ಹಾಗೆಂದು ಕೋರ್ಟ್ ಈ ವಿಚಾರದಲ್ಲಿ ಸುಮ್ಮನಿರುವುದಿಲ್ಲ. ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂಬಂತಹ ಸ್ವರೂಪದ ಆರೋಪಗಳಿವೆ. ಇದು ಧಮನಕಾರಿ ಪರಿಣಾಮಗಳನ್ನು ಹೊಂದಿರಬಹುದು. ವಿದೇಶಿ ಸಂಸ್ಥೆಗಳು ಕೂಡ ಭಾಗಿಯಾಗಿವೆ ಎಂಬ ಆರೋಪಗಳೂ ಇವೆ' ಎಂದು ನ್ಯಾಯಾಲಯ ಹೇಳಿದೆ.
ಪತ್ರಕರ್ತ ಸಲ್ಲಿಸಿದ ಪಿಐಎಲ್ ನಲ್ಲಿ ಏನಿದೆ?
ಹಿರಿಯ ಪತ್ರಕರ್ತರಾದ ಎನ್ ರಾಮ್ ಮತ್ತು ಶಶಿಕುಮಾರ್ ಸೇರಿದಂತೆ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಅರ್ಜಿಗಳಲ್ಲಿ ಬೇಹುಗಾರಿಕೆಗೆ ತೀವ್ರ ವಿರೋಧ ವ್ಕಕ್ತಪಡಿಸಲಾಗಿತ್ತು. ಕೇಂದ್ರ ಸರ್ಕಾರವು ಬೇಹುಗಾರಿಕೆ ಮೂಲಕ ಭಾರತದಲ್ಲಿನ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಚ್ಚಿ ಹಾಕಲು ಹೊರಟಿದೆ ಎಂದು ದೂಷಿಸಲಾಗಿತ್ತು.
ಏನಿದು ಪೆಗಾಸಸ್?
ಪೆಗಾಸಸ್ ಎನ್ನುವುದು ಒಂದು ಗೂಢಚರ ತಂತ್ರಾಂಶ. ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್ ಈ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಮೊಬೈಲ್ ಬಳಕೆದಾರರ ಮಾಹಿತಿ ದೋಚಲು ಇದು ಸಹಕರಿಸುತ್ತಿದೆ. ಈ ಸ್ಪೈವೇರನ್ನು ಬಳಕೆ ಮಾಡಿಕೊಂಡು ವಿಶ್ವದ ಹಲವು ದೇಶಗಳ ಸರ್ಕಾರಗಳು ತಮ್ಮ ವಿರೋಧಿಗಳು, ರಾಯಭಾರಿಗಳು, ಹಿರಿಯ ಅಧಿಕಾರಿಗಳು, ಪತ್ರಕರ್ತರ ವಿರುದ್ಧ ಗೂಡಚರ್ಯೆ ನಡೆಸುತ್ತಿವೆ ಎನ್ನಲಾಗಿದೆ. ಹಾಗೆ ನೋಡಿದರೆ ಮಾಹಿತಿ-ದತ್ತಾಂಶಗಳನ್ನು ಕದಿಯುವ ಅನೇಕ ಸ್ಪೈವೇರ್‌ಗಳಿವೆ. ಇವುಗಳು ನಿರ್ದಿಷ್ಟಕಂಪನಿಯ ಆ್ಯಪ್‌ಗಳಲ್ಲದೆ ಥರ್ಡ್ ಪಾರ್ಟಿ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡಿದಾಗ ಫೋನ್‌ಗೆ ತನ್ನಿಂತಾನೇ ಇನ್‌ಸ್ಟಾಲ್ ಆಗಬಹುದು. ಆದರೆ ಪೆಗಾಸಸ್ ಹಾಗಲ್ಲ. ಯಾವುದೇ ಆ್ಯಪ್‌ಗಳನ್ನು ಇನ್‌ಸ್ಟಾಲ್ ಮಾಡದಿದ್ದರೂ ವಾಟ್ಸ್‌ಆ್ಯಪ್ ಮೂಲಕ ಅದು ಮೊಬೈಲ್‌ನೊಳಗೆ ಸೇರಿಕೊಳ್ಳುತ್ತದೆ.
ಹೇಗೆ ಕೆಲಸ ಮಾಡುತ್ತದೆ?
ಸ್ಮಾರ್ಟ್‌ಫೋನ್‌ಗಳಲ್ಲಿ ಇನ್‌ಸ್ಟಾಲ್ ಆಗಿರುವ ವಾಟ್ಸ್ ಆ್ಯಪ್ ಸಂಖ್ಯೆಗೆ ಒಂದು ಮಿಸ್ಡ್ ಕಾಲ್ ನೀಡುವ ಮೂಲಕ ಪೆಗಾಸಸ್ ಗೂಢಚರ್ಯೆ ಕೆಲಸ ಆರಂಭಿಸುತ್ತದೆ. ಫೋನ್ ಅನ್‌ಲಾಕ್ ಆದ ತಕ್ಷಣ ತನ್ನಿಂತಾನೆ ಇನ್‌ಸ್ಟಾಲ್ ಆಗುವ ಈ ವೈರಸ್ ಮೊಬೈಲ್‌ನ ಸೆಕ್ಯುರಿಟಿ ಆ್ಯಪ್‌ಗಳನ್ನು ತನಗೆ ಬೇಕಾದಂತೆ ಬದಲಿಸಿಕೊಂಡು ಎಲ್ಲೋ ದೂರದಲ್ಲಿರುವ ತನ್ನ ಒಡೆಯನ ಸರ್ವರ್‌ಗೆ ನಿರಂತರವಾಗಿ ಮಾಹಿತಿ ರವಾನಿಸಲು ಆರಂಭಿಸುತ್ತದೆ. ಫೋನಿನಲ್ಲಿ ಇರುವ ಪಾಸ್‌ವರ್ಡ್, ಕಾಂಟಾಕ್ಟ್, ಕ್ಯಾಲೆಂಡರ್ ಇವೆಂಟ್, ಟೆಕ್ಸ್ಟ್‌ಮೆಸೇಜ್, ಖಾಸಗಿ ದತ್ತಾಂಶ ಇತ್ಯಾದಿ ಎಲ್ಲಾ ಖಾಸಗಿ ಮಾಹಿತಿಯು ಆ ಸರ್ವರ್‌ನಲ್ಲಿ ಸತತವಾಗಿ ದಾಖಲಾಗುತ್ತಿರುತ್ತವೆ. ಮಾತ್ರವಲ್ಲದೆ, ಮೊಬೈಲಿನ ಕ್ಯಾಮರಾ ಮತ್ತು ಮೈಕ್ರೋಫೋನ್ ಬಳಸಿ ಇನ್ನಿತರ ಮಾಹಿತಿಯನ್ನು ಕೂಡ ಸಂಗ್ರಹಿಸುತ್ತದೆ. ಕೆಲವೊಮ್ಮೆ ಟೆಕ್ಸ್ಟ್‌ಸಂದೇಶದ ಮೂಲಕವೂ ಈ ಸ್ಪೈವೇರನ್ನು ಮೊಬೈಲ್‌ಗೆ ಕಳುಹಿಸಲಾಗುತ್ತದೆ. ಸಂದೇಶವನ್ನು ಓಪನ್ ಮಾಡಿದಾಗ ಮೊಬೈಲ್ ಬಳಕೆದಾರರಿಗೆ ತಿಳಿಯದಂತೆ ಇದು ಮೊಬೈಲಿನಲ್ಲಿ ಇನ್‌ಸ್ಟಾಲ್ ಆಗುತ್ತದೆ. ನೀವು ಎಲ್ಲಿದ್ದೀರಿ ಎಂಬ ಮಾಹಿತಿಯೂ ‘ಗೂಗಲ್ ಲೊಕೇಶನ್’ ಮೂಲಕ ಹಂಚಿಕೆಯಾಗುತ್ತದೆ. ಗೌಪ್ಯ ಸ್ಥಳದಲ್ಲಿ ನೀವು ಇದ್ದರೆ ನಿಮ್ಮ ಗಮನಕ್ಕೆ ಬಾರದೇ ಮೊಬೈಲ್ ಕ್ಯಾಮರಾಗಳು, ಮೈಕ್ರೋಫೋನ್‌ಗಳು ತನ್ನಿಂದ ತಾನಾಗಿಯೇ ಆಕ್ಟಿವೇಟ್ ಆಗುತ್ತವೆ. ಈ ಮೂಲಕ ಸ್ಥಳವನ್ನು ತಿಳಿದುಕೊಳ್ಳುತ್ತವೆ.
ಭಾರತದಲ್ಲೂ ಗೂಢಚರ್ಯೆ
ಪ್ರಧಾನಿ ನರೇಂದ್ರ ಮೋದಿ ಕ್ಯಾಬಿನೆಟ್‌ನ ಇಬ್ಬರು ಸಚಿವರು, ಮೂವರು ವಿಪಕ್ಷ ನಾಯಕರು, ಓರ್ವ ನ್ಯಾಯಾಧೀಶ, ಉದ್ಯಮಿಗಳು, ಚಳವಳಿಗಾರರು ಮತ್ತು 40ಕ್ಕೂ ಹೆಚ್ಚು ಪತ್ರಕರ್ತರು ಸೇರಿದಂತೆ 300ಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳು ಹ್ಯಾಕ್ ಆಗಿರುವ ಮಾಹಿತಿ ಬಯಲಾಗಿದೆ. ಸರ್ಕಾರಕ್ಕೆ ಮಾತ್ರ ಮಾರಾಟ ಮಾಡಲಾಗುವ ಇಸ್ರೇಲ್ ಮೂಲದ ಕಣ್ಗಾವಲು ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಸಾಫ್ಟ್‌ವೇರ್‌ನಿಂದ ಈ ಮೊಬೈಲ್ ಸಂಖ್ಯೆಗಳು ಹ್ಯಾಕ್ ಆಗಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ಒಕ್ಕೂಟ ವರದಿ ಮಾಡಿದೆ. ಆದರೆ ಯಾವುದೇ ವ್ಯಕ್ತಿಗಳ ಮೇಲೆ ಯಾವುದೇ ರೀತಿಯಲ್ಲಿ ಕಣ್ಗಾವಲು ವಹಿಸಿಲ್ಲ. ಎಂದು ಭಾರತ ಸರ್ಕಾರ ಹೇಳಿದೆ. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ತನ್ನೆಲ್ಲಾ ಪ್ರಜೆಗಳ ಗೌಪ್ಯತೆಯ ಹಕ್ಕು ಮೂಲಭೂತ ಹಕ್ಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಬದ್ಧವಾಗಿದೆ. ಜೊತೆಗೆ ಮಾಧ್ಯಮ ವರದಿಯನ್ನು ತನಿಖಾಧಿಕಾರಿ, ಪ್ರಾಸಿಕ್ಯೂಟರ್ ಮತ್ತು ತೀರ್ಪುಗಾರರ ಪಾತ್ರ ವಹಿಸುವ ಯತ್ನವನ್ನು ಭಾರತ ಸರ್ಕಾರ ತಳ್ಳಿ ಹಾಕಿದೆ.
ಪೆಗಾಸಸ್, ಕೃಷಿ ಮಸೂದೆ ಗದ್ದಲಕ್ಕೆ ಇಡೀ ವಾರದ ಕಲಾಪ ಬಲಿ!
ವಾಷಿಂಗ್ಟನ್ ಪೋಸ್ಟ್, ದಿ ಗಾರ್ಡಿಯನ್ ಸೇರಿದಂತೆ 16 ಅಂತಾರಾಷ್ಟ್ರೀಯ ಮಾಧ್ಯಮಗಳು ಸೇರಿದಂತೆ ಭಾರತದ ‘ದಿ ವೈರ್’ ವೆಬ್‌ಸೈಟ್ ವಿಶ್ವಾದ್ಯಂತ 50 ಸಾವಿರ ಮೊಬೈಲ್ ಸಂಖ್ಯೆಗಳನ್ನು ಇಸ್ರೇಲ್‌ನ ಕಣ್ಗಾವಲು ಕಂಪನಿ ಎನ್‌ಎಸ್‌ಒ ಗ್ರೂಪ್‌ನ ಪೆಗಾಸಸ್ ಸಾಫ್ಟ್‌ವೇರ್‌ನಿಂದ ಹ್ಯಾಕ್ ಮಾಡಲಾಗಿದೆ ಎಂದು ವರದಿ ಮಾಡಿದ್ದವು.
ಉಗ್ರರ ಚಲನವಲನ ಗಮನಕ್ಕೆ ಅಭಿವೃದ್ಧಿಪಡಿಸಿರುವ ಸಾಫ್ಟ್‌ವೇರ್
ಪೆಗಾಸಸ್ ಅಭಿವೃದ್ಧಿಪಡಿಸಿ ಅದನ್ನು ಪರವಾನಗಿ (ಲೈಸನ್ಸ್) ಮೂಲಕ ವಿವಿಧ ಸರ್ಕಾರಗಳಿಗೆ ಮಾರಾಟ ಮಾಡುವುದು ಇಸ್ರೇಲ್‌ನ ಎನ್‌ಎಸ್‌ಒ ಗ್ರೂಪ್ ಒಡೆತನದಲ್ಲಿರುವ ಸೈಬರ್ ಟೆಕ್ನಾಲಜೀಸ್ ಕೆಲಸ. ಈ ಕಂಪನಿ ಮೇಲೆ ವಾಟ್ಸ್‌ಆ್ಯಪ್ ಹೂಡಿರುವ ದಾವೆಯಲ್ಲಿ ‘ಇದು ವಾಟ್ಸ್ ಆ್ಯಪ್‌ನ ನಿಯಮಗಳು ಮತ್ತು ಕ್ಯಾಲಿಫೋರ್ನಿಯಾದಲ್ಲಿ ಜಾರಿಯಲ್ಲಿರುವ ಕಾನೂನುಗಳ ಉಲ್ಲಂಘನೆ ’ ಎಂದು ಹೇಳಲಾಗಿದೆ. ಆದರೆ ಈ ಆರೋಪವನ್ನು ಎನ್‌ಎಸ್‌ಒ ತಳ್ಳಿ ಹಾಕಿ ಸ್ಪಷ್ಟನೆ ನೀಡಿದೆ. ಸ್ಮಾರ್ಟ್‌ಫೋನ್‌ಗಳ ಗೂಢಚರ್ಯೆ ಮಾಡುವ ಪೆಗಾಸಸ್ ತಂತ್ರಾಂಶವನ್ನು ಕೇವಲ ಸರ್ಕಾರಿ ಸಂಸ್ಥೆಗಳಿಗೆ ಮಾರಾಟ ಮಾಡುತ್ತೇವೆ. ಆದರೆ ಅದನ್ನು ಪತ್ರಕರ್ತರು ಅಥವಾ ಮಾನವ ಹಕ್ಕುಗಳ ಹೋರಾಟಗಾರರ ವಿರುದ್ಧ ಬಳಸಲು ಎಂದೂ ಪರವಾನಗಿ ನೀಡಿಲ್ಲ. ಉಗ್ರರ ಚಲನವಲನಗಳನ್ನು ಗಮನಿಸಲು ಸರ್ಕಾರಗಳಿಗೆ ನೀಡಲಾಗುವ ಸಾಫ್ಟ್‌ವೇರ್ ಇದಾಗಿದೆ. ಇದನ್ನು ಆಯಾ ಸರ್ಕಾರಗಳು ದುರ್ಬಳಕೆ ಮಾಡಿಕೊಂಡಿರಬಹುದು ಎಂದು ಎನ್‌ಎಸ್‌ಒ ಗ್ರೂಪ್ ಹೇಳಿದೆ. ಇದರ ಬಳಿಕ ಕೇಂದ್ರ ಸರ್ಕಾರದ ಮೇಲೆ ಆರೋಪಗಳು ಕೇಳಿಬಂದಿವೆ.
ಮೆಕ್ಸಿಕೋದಲ್ಲಿ ಹೆಚ್ಚು ಬಳಕೆ
ಜಗತ್ತಿನ ಹಲವು ದೇಶಗಳು ಈ ಪೆಗಾಸಸ್ ಸ್ಪೈವೇರ್ ಬಳಕೆ ಮಾಡುತ್ತಿದ್ದು, ಈ ಪೈಕಿ ವಿಶ್ವದಲ್ಲೇ ಮೆಕ್ಸಿಕೊ ದೇಶದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಸರ್ಕಾರಿ ವ್ಯವಸ್ಥೆ ಈ ಇಸ್ರೇಲಿ ಸೈಬರ್ ಗೂಢಚರ್ಯೆ ಸಾಫ್ಟ್‌ವೇರನ್ನು ಬಳಸುತ್ತಿದೆ. ಅಲ್ಲಿನ ಸರ್ಕಾರ 2016-17ರಿಂದ ಅಂದಾಜು 220 ಕೋಟಿ ರು. ವೆಚ್ಚ ಮಾಡಿ 500ಕ್ಕೂ ಹೆಚ್ಚು ಮಂದಿಯ ಫೋನ್‌ಗಳ ಮೇಲೆ ಗೂಢಚರ್ಯೆ ನಡೆಸಿತ್ತು ಎನ್ನಲಾಗಿದೆ.
ದುಬಾರಿ ಬೇಹುಗಾರ ಪೆಗಾಸಸ್!
ಇಸ್ರೇಲ್ ಮೂಲದ ಈ ಪೆಗಾಸಸ್ ಸಾಫ್ಟ್‌ವೇರನ್ನು ಖರೀದಿಸಿ ಬಳಸಬೇಕಾದರೆ ವಾರ್ಷಿಕವಾಗಿ 70-80 ಲಕ್ಷ ಡಾಲರ್ (ಸುಮಾರು 56 ಕೋಟಿ) ನೀಡಬೇಕಾಗುತ್ತದೆ. ಈ ಸ್ಪೈವೇರ್ ಬಳಸಿ ವಾರ್ಷಿಕವಾಗಿ 500 ಫೋನ್‌ಗಳನ್ನು ಹ್ಯಾಕ್ ಮಾಡಬಹುದಾಗಿದೆ.
ಮೊದಲು ಪತ್ತೆಯಾಗಿದ್ದು 2016ರಲ್ಲಿ
ಪೆಗಾಸಸ್ ಹೆಸರು ಮೊಟ್ಟಮೊದಲಿಗೆ ಕೇಳಿ ಬಂದಿದ್ದು 2016ರಲ್ಲಿ. ಯುಎಇ ಮಾನವ ಹಕ್ಕುಗಳ ಹೋರಾಟಗಾರ ಅಹ್ಮದ್ ಮನ್ಸೂರ್ ಇದರ ಅಸ್ತಿತ್ವವನ್ನು ಬಯಲಿಗೆಳೆದಿದ್ದರು. ಪೆಗಾಸಸ್ ಸ್ಪೈವೇರ್ ತಂತ್ರಾಶದ ಮೂಲಕ ಮನ್ಸೂರ್ ಅವರನ್ನು ಟಾರ್ಗೆಟ್ ಮಾಡಲಾಗಿತ್ತು. ಸಂದೇಹಾಸ್ಪದ ಸಂದೇಶಗಳು, ಲಿಂಕ್‌ಗಳು ಬಂದಾಗ ಅದನ್ನು ಇವರು ಸೆಕ್ಯುರಿಟಿ ಎಕ್ಸ್‌ಪರ್ಟ್‌ಗೆ ಕಳುಹಿಸುತ್ತಿದ್ದರು. ಲುಕ್‌ಔಟ್ ಎನ್ನುವ ಸೈಬರ್ ಸೆಕ್ಯುರಿಟಿ ಸಂಸ್ಥೆಯು ಇದೊಂದು ಗೂಢಚರ್ಯೆ ಸ್ಪೈವೇರ್ ಎನ್ನುವುದನ್ನು ದೃಢಪಡಿಸಿತ್ತು.