ರೇಪ್ ಇನ್ ಇಂಡಿಯಾ: ರಾಹುಲ್ ಕ್ಷಮೆಗೆ ಸದನದ ಒತ್ತಾಯ!
‘ಭಾರತ ರೇಪ್ ಇನ್ ಇಂಡಿಯಾ ಆಗಿ ಬದಲಾಗಿದೆ’| ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿವಾದಾತ್ಮಕ ಹೇಳಿಕೆ| ಲೋಕಸಭೆಯಲ್ಲಿ ಕೋಲಾಹಲ ಸೃಷ್ಟಿಸಿದ ರಾಹುಲ್ ಗಾಂಧಿ ಹೇಳಿಕೆ| ರಾಹುಲ್ ಗಾಂಧಿ ಕ್ಷಮೆ ಕೋರುವಂತೆ ಬಿಜೆಪಿ ಸದಸ್ಯರ ಒತ್ತಾಯ| ಸ್ಮೃತಿ ಇರಾನಿ ನೇತೃತ್ವದಲ್ಲಿ ಬಿಜೆಪಿ ಮಹಿಳಾ ಸದಸ್ಯರ ಪ್ರತಿಭಟನೆ| ಲೋಕಸಭೆ ಕಲಾಪ ಮುಂದೂಡಿದ ಸ್ಪೀಕರ್ ಓಂ ಬಿರ್ಲಾ|
ನವದೆಹಲಿ(ಡಿ.13): ಭಾರತ ‘ರೇಪ್ ಇನ್ ಇಂಡಿಯಾ’ ಆಗಿ ಬದಲಾಗುತ್ತಿದ್ದು, ಪ್ರಧಾನಿ ಮೋದಿ ಸರ್ಕಾರ ಅತ್ಯಾಚಾರ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹರಿಹಾಯ್ದಿದ್ದಾರೆ.
ರಾಹುಲ್ ಹೇಳಿಕೆ ತೀವ್ರ ವಿರೋಧ ಸೃಷ್ಟಿಯಾಗಿದ್ದು, ಭಾರತಕ್ಕೆ ಅಪಮಾನ ಮಾಡಿದ ರಾಹುಲ್ ಗಾಂಧಿ ಕ್ಷಮೆ ಕೇಳಬೇಕೆಂದು ಬಿಜೆಪಿ ಸದಸ್ಯರು ಸದನದಲ್ಲಿ ಒತ್ತಾಯಿಸಿದ್ದಾರೆ.
ರಾಹುಲ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಬಿಜೆಪಿ ಮಹಿಳಾ ಸಂಸದರು, ಕೇಂದ್ರ ಸಚಿವೆ ಸ್ಮೃತಿ ಇರಾನಿ ನೇತೃತ್ವದಲ್ಲಿ ರಾಹುಲ್ ವಿರುದ್ಧ ಮುಗಿ ಬಿದ್ದರು.
ಈ ದೇಶ ಮುನ್ನಡೆಸುವ ವ್ಯಕ್ತಿ ಹಿಂಸೆ ನಂಬುತ್ತಾರೆ: ಮೋದಿ ವಿರುದ್ಧ ವಾಗ್ದಾಳಿ!
ರಾಹುಲ್ ತಮ್ಮ ರಾಜಕೀಯ ಲಾಭಕ್ಕಾಗಿ ಭಾರತದ ಮಾನ ಹರಾಜು ಹಾಕುತ್ತಿದ್ದು, ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ದೇಶದ ಕ್ಷಮೆ ಕೋರಬೇಕೆಂದು ಸ್ಮೃತಿ ಇರಾನಿ ಒತ್ತಾಯಿಸಿದರು.
ಸದ್ಯ ರಾಹುಲ್ ಹೇಳಿಕೆಯಿಂದಾಗಿ ಲೋಕಸಭೆಯಲ್ಲಿ ತೀವ್ರ ಗದ್ದಲದ ವಾತಾವರಣ ನಿರ್ಮಾಣವಾಗಿದ್ದು, ಸ್ಪೀಕರ್ ಓಂ ಬಿರ್ಲಾ ಸದನವನ್ನು ಮುಂದೂಡಿದ್ದಾರೆ.
ಆದರೆ ಕ್ಷಮೆ ಕೋರಲು ನಿರಾಕರಿಸಿರುವ ರಾಹುಲ್ ಗಾಂಧಿ, ಸರಣಿ ಅತ್ಯಾಚಾರಗಳಿಂದ ಭಾರತದ ಮಾನ ಹರಾಜಾಗಿದೆಯೇ ಹೊರತು ತಮ್ಮ ಹೇಳಿಕೆಯಿಂದಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ಮೋದಿ ‘ಮೇಕ್ ಇನ್ ಇಂಡಿಯಾ’ ಬಗ್ಗೆ ಮಾತನಾಡುತ್ತಾರೆ ಆದರೆ ಭಾರತ ‘ರೇಪ ಇನ್ ಇಂಡಿಯಾ’ಆಗಿ ಪರಿವರ್ತನೆಯಾಗಿದೆ ಎಂದು ಜಾರ್ಖಂಡ್ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ರಾಹುಲ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.