ಕೊರೋನಾ ಎದುರಿಸಲು ಭಾರತಕ್ಕಿರುವ ಸಮಸ್ಯೆಗಳೇನು?
ಮಾರಕ ಕೊರೋನಾ ವೈರಸ್ಸಿಗೆ ಇಡೀ ಜಗತ್ತು ಬೆಚ್ಚಿ ಬಿದ್ದಿದೆ. ಭಾರತದಲ್ಲೂ ಸೋಂಕಿತರ ಸಂಖ್ಯೆ 147ಕ್ಕೆ ತಲುಪಿದೆ. ಕೊರೋನಾ ಸೋಂಕು ತಡೆಗಟ್ಟುವಲ್ಲಿ ಜನಸಂಖ್ಯೆಯೇ ಭಾರತಕ್ಕಿರುವ ದೊಡ್ಡ ಸವಾಲು. ಈ ಹಿನ್ನೆಲೆಯಲ್ಲಿ ಕೊರೋನಾ ತಡೆಗಟ್ಟಲು ಭಾರತಕ್ಕಿರುವ ಸವಾಲುಗಳೇನು ಎಂಬ ವರದಿ ಇಲ್ಲಿದೆ.
ಭಾರತದಲ್ಲಿ ಸೋಂಕಿತರ ಸಂಖ್ಯೆ ಇನ್ನೂ ಹೆಚ್ಚುವ ಅಪಾಯ ಇದೆ!
ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಭಾರತ ಇದುವರೆಗೆ 6,00,000ಕ್ಕೂ ಹೆಚ್ಚು ಜನರನ್ನು ಸ್ಕ್ರೀನಿಂಗ್‌ಗೆ ಒಳಪಡಿಸಿದೆ. ಇದೇ ಕಾರಣದಿಂದ ವಿಶ್ವ ಆರೋಗ್ಯ ಸಂಸ್ಥೆಯು ‘ದೇಶವು ತುರ್ತಾಗಿ ಮತ್ತು ಪಾರದರ್ಶಕವಾಗಿ ಪ್ರತಿಕ್ರಿಯಿಸುತ್ತಿದೆ ಎಂದು ಶ್ಲಾಘಿಸಿದೆ. ಆದಾಗ್ಯೂ ಸೋಂಕಿನಿಂದ ಈಗಾಗಲೇ ಇಬ್ಬರು ಮೃತಪಟ್ಟಿದ್ದು, ಸೋಂಕಿತರ ಸಂಖ್ಯೆ 147ಕ್ಕೆ ಏರಿಕೆಯಾಗಿದೆ. ಹಾರ್ವರ್ಡ್ ಗ್ಲೋಬಲ್ ಇನ್ಸ್ಟಿಟ್ಯೂಟ್ ಡೈರೆಕ್ಟರ್ ಡಾ.ಆಶಿಶ್ ಝಾ ಈ ಸಂಖ್ಯೆ ಇನ್ನೆರಡು ವಾರಗಳಲ್ಲಿ ಹೆಚ್ಚಬಹುದು, ಸೋಂಕಿತರನ್ನು ಇದುವರೆಗೆ ಸರಿಯಾಗಿ ಗುರುತಿಸಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಸ್ಕ್ರೀನಿಂಗ್ ಮಾಡಿದವರ ನಿಗಾಕ್ಕೆ ಕ್ವಾರಂಟೈನ್ ಹೋಮ್ಗಳಿಲ್ಲ
ಚೀನಾದಲ್ಲಿ ಕೊರೋನಾ ಭೀಕರತೆ ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತ ಭಾರತ ಸರ್ಕಾರ ಚೀನಾದ ವೀಸಾಗಳನ್ನು ರದ್ದು ಪಡಿಸಿತ್ತು. ಅಷ್ಟೇ ಅಲ್ಲದೆ ಹಲವು ದೇಶಗಳ ವೀಸಾಗಳನ್ನು ಏಪ್ರಿಲ್ 15ರ ವರೆಗೆ ಅಮಾನತು ಮಾಡಿದೆ. ಹಾಗೆಯೇ ಭಾರತೀಯರೂ ಸೇರಿದಂತೆ ಚೀನಾ, ಇಟಲಿ, ಇರಾನ್, ರಿಪಬ್ಲಿಕ್ ಆಫ್ ಕೊರಿಯಾ, ಫ್ರಾನ್ಸ್, ಸ್ಪೇನ್ ಮತ್ತು ಜರ್ಮನಿಗೆ ಫೆಬ್ರವರಿ 15ರ ನಂತರ ಭೇಟಿ ನೀಡಿರುವ ಎಲ್ಲರನ್ನೂ 14 ದಿನಗಳ ಕಾಲ ಕ್ವಾರಂಟೇನ್ ಹೋಂ (ಪ್ರತ್ಯೇಕ ಕೊಠಡಿ)ನಲ್ಲಿ ಇಟ್ಟು ನಿಗಾ ವಹಿಸಲಾಗುತ್ತಿದೆ. ಇದುವರೆಗೆ 21 ಏರ್ಪೋರ್ಟ್ ಮತ್ತು 77 ಬಂದರಿನಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ಪ್ರಯಾಣಿಕರನ್ನು ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ. ಈ ಸಂಖ್ಯೆಗೆ ಹೋಲಿಸಿದರೆ ನಮ್ಮ ದೇಶದಲ್ಲಿರುವ ಕ್ವಾರಂಟೇನ್ ಹೋಂಗಳ ಸಂಖ್ಯೆ ಕಡಿಮೆ. ಇದೇ ಕಾರಣದಿಂದಾಗಿ ಇನ್ನೂ ಹೆಚ್ಚು ಜನರಿಗೆ ಸೋಂಕು ತಗುಲಬಹುದು ಎಂಬುದು ಕೆಲ ತಜ್ಞರ ಅಭಿಪ್ರಾಯ.
ಮಲಿನ ಗಾಳಿಯಿಂದ ಮತ್ತಷ್ಟು ಸೋಂಕು ಹರಡುವ ಸಾಧ್ಯತೆ
ಈಗಾಗಲೇ ಆರೋಗ್ಯ ಸ್ಥಿತಿ ಹದಗೆಟ್ಟಿರುವ ವಯೋವೃದ್ಧರಲ್ಲಿ ಅಂದರೆ ಉಸಿರಾಟದ ಸಮಸ್ಯೆ, ಮಧುಮೇಹ, ಹೃದಯ ಸಂಬಂಧೀ ಕಾಯಿಲೆ ಇರುವವವರಲ್ಲಿ ಕೊರೋನಾ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ ಅಥವಾ ಅಂಥವರಲ್ಲಿ ಬಹುಬೇಗ ಹರಡುತ್ತದೆ. ಅದಕ್ಕೆ ತಕ್ಕಂತೆ ಭಾರತದಲ್ಲಿ ಹೃದಯ ಸಮಸ್ಯೆ ಮತ್ತು ಮಧುಮೇಹ ಇರುವ ಜನರೂ ಕೂಡ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇನ್ನೊಂದು ದೊಡ್ಡ ಆತಂಕ ಎಂದರೆ ಇಲ್ಲಿನ ಮಲಿನಯುಕ್ತ ಗಾಳಿ. ಇದರಿಂದಾಗಿ ಈಗಾಗಲೇ ಹಲವರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಇಂಥವರಿಗೂ ಕೊರೋನಾ ಸೋಂಕು ಬಹುಬೇಗ ತಗುಲುತ್ತದೆ.
ಕೊರೋನಾ ಚಿಕಿತ್ಸೆಗೆ ಅಗತ್ಯ ಇರುವ ಸೌಲಭ್ಯ ನಮ್ಮಲ್ಲಿದೆಯೇ?
ಭಾರತದಲ್ಲಿ ಕೊರೋನಾ ಇನ್ನಷ್ಟುಭೀತಿ ಹುಟ್ಟಿಸುತ್ತದೆ ಎನ್ನಲು ಮತ್ತೊಂದು ಕಾರಣ ಇಲ್ಲಿನ ಬಡತನ. ವಿಶ್ವ ಬ್ಯಾಂಕ್ ಪ್ರಕಾರ ಭಾರತದಲ್ಲಿ 17.6 ಕೋಟಿ ಜನರು ಕಡುಬಡವರು. ಅಲ್ಲದೆ ವರದಿಯೊಂದರ ಪ್ರಕಾರ ಕೊರೋನಾ ಸೋಂಕಿತರಿಗೆ ಮತ್ತು ಶಂಕಿತರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಉಚಿತ ಪರೀಕ್ಷೆ ದೊರೆಯುತ್ತಿದೆ. ಅವುಗಳಲ್ಲಿ ಬಹುತೇಕ ಸರ್ಕಾರಿ ಆಸ್ಪತ್ರೆಗಳಲ್ಲಿ ಸೌಲಭ್ಯಗಳ ಕೊರತೆ ತಾಂಡವವಾಡುತ್ತಿದೆ. ಇನ್ನು ಖಾಸಗಿ ಆಸ್ಪತ್ರೆಗಳು ಬಡವರಿಗೆ ನಿಲುಕದ ನಕ್ಷತ್ರ. ಹೆಚ್ಚಿನ ಸಂಖ್ಯೆಯಲ್ಲಿ ಕೊರೋನಾ ಸೋಂಕು ತಗುಲಿದರೆ ಭಾರತದ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಉಂಟಾಗಬಹುದು. ಭಾರತದ ಬಹುತೇಕ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತವೆ. ಅಲ್ಲಿ ರೋಗಿಗಳಿಗೆ ತಕ್ಕಷ್ಟುಸಿಬ್ಬಂದಿಯೂ ಇಲ್ಲ, ಬೆಡ್ಗಳೂ ಇಲ್ಲ. ಇನ್ನೊಂದು ಮಹತ್ವದ ಮಾಹಿತಿ ಎಂದರೆ ಕರ್ನಾಟಕದಲ್ಲಿ ಪ್ರತಿ 507 ಜನರಿಗೆ ಒಬ್ಬ ವೈದ್ಯ ಇದ್ದಾನೆ, ಅದೂ ಸರ್ಕಾರಿ ವೈದ್ಯ ಅಲ್ಲ! ಖಾಸಗಿ ಆಸ್ಪತ್ರೆ ವೈದ್ಯರನ್ನೂ ಸೇರಿಸಿದ ಲೆಕ್ಕ ಇದು! ಇಷ್ಟಾಗಿಯೂ ಕರ್ನಾಟಕ ಈ ಸ್ಥಿತಿ ಅತ್ಯುತ್ತಮ ಎನ್ನಲಾಗುತ್ತಿದೆ. ಜಾರ್ಖಂಡ್, ಉತ್ತರ ಪ್ರದೇಶಗಳ ಸ್ಥಿತಿ ಇನ್ನಷ್ಟುಗಂಭೀರವಾಗಿದೆ.
ಸ್ಯಾನಿಟೈಸರ್ ಇರಲಿ, ಗ್ರಾಮೀಣ ಪ್ರದೇಶದಲ್ಲಿ ಸೋಪು, ನೀರೇ ಇಲ್ಲ!
ವೈರಸ್ ನಿಯಂತ್ರಣಕ್ಕೆ ಹ್ಯಾಂಡ್ ಸ್ಯಾನಿಟೈಸರ್ ಬಳಕೆ ಮಾಡಬೇಕಂದು ಸರ್ಕಾರವೇ ಸಲಹೆ ನೀಡಿದೆ. ಆದರೆ ಮಾಹಿತಿ ಪ್ರಕಾರ ಗ್ರಾಮೀಣ ಪ್ರದೇಶದ 50.7% ಜನರಿಗೆ ಸೋಪು, ನೀರಿನಂಥ ಮೂಲಭೂತ ಸೌಲಭ್ಯಗಳೇ ಇಲ್ಲ. ಹಾಗೆಯೇ ನಗರ ಪ್ರದೇಶದ 20.2% ಪ್ರದೇಶ ಅಂದರೆ ಒಟ್ಟು ಜನಸಂಖ್ಯೆಯ 40.5 % ಜನರಿಗೂ ಈ ಮೂಲಭೂತ ಸೌಲಭ್ಯಗಳಿಲ್ಲ.
ಹಾದಿ ತಪ್ಪಿಸುವ ಸುಳ್ಳು ಸುದ್ದಿಗಳು ದೊಡ್ಡ ಸಮಸ್ಯೆ
ಕೊರೋನಾ ಸೋಂಕಿಗಿಂತಾ ಹೆಚ್ಚಾಗಿ ಅದರ ಬಗೆಗೆ ಉಂಟಾಗಿರುವ ಭಯವೇ ಹೆಚ್ಚು ಅಪಾಯಕಾರಿಯಾಗಿ ಪರಿವರ್ತನೆಯಾಗುತ್ತಿದೆ. ಇದಕ್ಕೆ ಪುಷ್ಠಿ ನೀಡುವಂತೆ ಆಯುಷ್ ಸಚಿವಾಲಯ ಇತ್ತೀಚೆಗೆ ಕೊರೋನಾ ಸೋಂಕು ನಿಯಂತ್ರಣಕ್ಕೆ ಆಯುರ್ವೇದ, ಯುನಾನಿಯಂತಹ ಪರಾರಯಯ ಔಷಧಗಳನ್ನು ಬಳಸಬಹುದು ಎಂದಿತ್ತು. ಆದರೆ ಆರೋಗ್ಯ ತಜ್ಞರು ಹೋಮಿಯೋಪತಿಯಿಂದ ವೈರಸ್ ನಿಯಂತ್ರಣಕ್ಕೆ ಬರಲು ಸಾಧ್ಯವೇ ಇಲ್ಲ ಎಂಬ ಸ್ಪಷ್ಟನೆ ನೀಡಿದರು. ಅಷ್ಟೇ ಅಲ್ಲದೆ ಕೆಲ ಜನಪ್ರತಿನಿಧಿಗಳೇ ಗೋಮೂತ್ರದಿಂದ ಕೊರೋನಾ ನಿವಾರಣೆಯಾಗುತ್ತದೆ ಎಂಬ ಸುಳ್ಳುಸುದ್ದಿ ಹರಡುತ್ತಿದ್ದಾರೆ. ಅತ್ತ ಚೀನಾದಲ್ಲಿ 20,000 ಜನರನ್ನು ಕೊಲ್ಲಲು ಚೀನಾ ಸುಪ್ರೀಂಕೋರ್ಟ್ನಿಂದ ಅನುಮತಿ ಕೇಳಿದೆ, ಬೆಳ್ಳುಳ್ಳಿ ತಿಂದರೆ ಕೊರೋನಾ ಗುಣಮುಖವಾಗುತ್ತದೆ ಎಂಬ ಸುಳ್ಳುಸುದಿ ವೈರಲ್ ಆಗಿದ್ದವು. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಸುಳ್ಳುಸುದ್ದಿಗಳನ್ನು ಹುಟ್ಟುಹಾಕಿ ಭೀತಿ ಹುಟ್ಟಿಸುವುದು ಸಾಮಾನ್ಯ. ಆದರೆ ಭಾರತದಲ್ಲಿ ಅದು ಇನ್ನೂ ಹೆಚ್ಚು ಎಂಬುದು ಅಪಾಯಕಾರಿ.