ನವದೆಹಲಿ (ಫೆ. 21): ನೇಣು ಕುಣಿಕೆಗೆ ಕೊರಳೊಡ್ಡುವ ದಿನ ಸಮೀಪಿಸುತ್ತಿದ್ದಂತೆ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳ ಪೈಕಿ ಒಬ್ಬಾತ ಜೈಲಿನಲ್ಲಿ ಹುಚ್ಚಾಟ ನಡೆಸಿದ್ದಾನೆ. ವಿನಯ್‌ ಕುಮಾರ್‌ ಶರ್ಮಾ ಎಂಬ ಈ ರೇಪಿಸ್ಟ್‌ ಜೈಲಿನ ಗೋಡೆಗೆ ತಲೆ ಚಚ್ಚಿಕೊಂಡಿದ್ದಾನೆ.

ಕಬ್ಬಿಣದ ಸರಳಿಗೆ ಕೈ ತುರುಕಿ ತೋಳಿಗೆ ಗಾಯ ಮಾಡಿಕೊಂಡಿದ್ದಾನೆ. ಆತನಿಂದ ತನ್ನ ತಾಯಿ ಹಾಗೂ ವಕೀಲರನ್ನೂ ಗುರುತು ಹಿಡಿಯಲು ಆಗುತ್ತಿಲ್ಲ ಎಂದು ಹೇಳಲಾಗಿದೆ.

ನಡೆಯಲಿಲ್ಲ ಆಟ, ಕೊನೆಗೂ ನಿರ್ಭಯಾ ಹಂತಕರಿಗೆ ಕುಣಿಕೆ ಫಿಕ್ಸ್!

ಇದರ ಬೆನ್ನಲ್ಲೇ ವಿನಯ್‌ ಶರ್ಮಾನ ಪರ ವಕೀಲರು ದೆಹಲಿ ಹೆಚ್ಚುವರಿ ಸೆಷನ್ಸ್‌ ನ್ಯಾಯಾಲಯಕ್ಕೆ ಆತನ ಪರ ವಕೀಲರು ಅರ್ಜಿ ಸಲ್ಲಿಸಿದ್ದಾರೆ. ಮಾನಸಿಕ ಅಸ್ವಾಸ್ಥ್ಯ, ಸ್ಕಿಟ್ಸೋಫ್ರೇನಿಯಾ (ದ್ವಂದ್ವ ಮನಸ್ಥಿತಿ), ತಲೆ ಹಾಗೂ ತೋಳಿನ ಗಾಯಕ್ಕೆ ತುತ್ತಾಗಿರುವ ಶರ್ಮಾಗೆ ಚಿಕಿತ್ಸೆ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಈ ಕುರಿತು ತಿಹಾರ್‌ ಜೈಲಿನ ಅಧಿಕಾರಿಗಳಿಗೆ ಗುರುವಾರ ನೋಟಿಸ್‌ ಜಾರಿಗೊಳಿಸಿರುವ ನ್ಯಾಯಾಧೀಶ ಧರ್ಮೇಂದರ್‌ ರಾಣಾ, ಶನಿವಾರದಂದು ಪ್ರತಿಕ್ರಿಯೆ ನೀಡಲು ಸೂಚಿಸಿದ್ದಾರೆ.

ಜೈಲಿನ ಅಧಿಕಾರಿಗಳ ಪ್ರಕಾರ, ತಿಹಾರ್‌ ಕಾರಾಗೃಹದ ಗೋಡೆಗೆ ಶರ್ಮಾ ತನ್ನ ತಲೆಯನ್ನು ಗುದ್ದಿ ಗಾಯಗೊಳಿಸಿಕೊಂಡಿದ್ದಾನೆ. ಭಾನುವಾರ ಮಧ್ಯಾಹ್ನ ಜೈಲ್‌ ನಂ.3ರಲ್ಲಿ ಈ ಘಟನೆ ನಡೆದಿದೆ. ಇದರ ಜತೆಗೆ ಸರಳುಗಳಿಗೆ ಕೈ ತುರುಕಿ ತೋಳಿಗೂ ಗಾಯ ಮಾಡಿಕೊಂಡಿದ್ದಾನೆ. ಆತನಿಗೆ ಜೈಲಿನಲ್ಲೇ ಚಿಕಿತ್ಸೆ ನೀಡಲಾಗಿದೆ.

ಈ ನಡುವೆ, ಶರ್ಮಾನ ಪರ ವಕೀಲರು ನ್ಯಾಯಾಲಯದ ವಿಚಾರಣೆ ವೇಳೆ, ತಮ್ಮ ಕಕ್ಷಿದಾರರು ತಮ್ಮ ತಾಯಿಯನ್ನೂ ಗುರುತಿಸುತ್ತಿಲ್ಲ. ಕುಟುಂಬದ ಸದಸ್ಯರ ಒತ್ತಾಯದ ಮೇರೆಗೆ ಜೈಲಿಗೆ ಹೋಗಿದ್ದೆ. ಆತನ ತಲೆಗೆ, ಬಲ ತೋಳಿಗೆ ಗಾಯವಾಗಿದ್ದು, ಬ್ಯಾಂಡೇಜ್‌ ಸುತ್ತಲಾಗಿದೆ. ಆತ ಮಾನಸಿಕ ಅಸ್ವಸ್ಥನಾಗಿದ್ದಾನೆ. ನನ್ನನ್ನೂ ಆತ ಗುರುತಿಸಿಲ್ಲ. ಜತೆಗೆ ನಿದ್ರೆಯ ಕೊರತೆಯಿಂದ ಬಳಲುತ್ತಿದ್ದಾನೆ ಎಂದು ವಾದಿಸಿದರು.

ಗಲ್ಲು ಸಜೆ ಮೇಲ್ಮನವಿ ವಿಚಾರಣೆ ಆರಂಭಕ್ಕೆ 6 ತಿಂಗಳ ಗಡುವು

ನಿರ್ಭಯಾ ಪ್ರಕರಣದ ನಾಲ್ವರೂ ಅಪರಾಧಿಗಳನ್ನು ಮಾ.3ರಂದು ಬೆಳಗ್ಗೆ 6 ಗಂಟೆಗೆ ನೇಣಿಗೇರಿಸುವಂತೆ ನ್ಯಾಯಾಲಯ ಮಾ.17ರಂದು ಡೆತ್‌ ವಾರಂಟ್‌ ಹೊರಡಿಸಿದೆ.