ನವದೆಹಲಿ[ಡಿ.18]: Justice Delayed Is Justice Denied... ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲೂ ಇದೇ ಮಾತು ಕೇಳಿ ಬಂದಿದೆ. 2012ರಲ್ಲಿ ದೆಹಲಿಯಲ್ಲಿ ನಡೆದಿದ್ದ ಈ ಭೀಕರ ಪ್ರಕರಣದ ವಿರುದ್ಧ ಇಡೀ ದೇಶವೇ ಸಿಡಿದೆದ್ದಿತ್ತು. ಪ್ರಕರಣ ಸಂಬಂಧ ದೆಹಲಿ ಪೊಲೀಸರು ಒಟ್ಟು ಆರು ಮಂದಿಯನ್ನು ಬಂಧಿಸಿದ್ದ ಬೆನ್ನಲ್ಲೇ ಇವರೆಲ್ಲರಿಗೂ ಗಲ್ಲು ಶಿಕ್ಷೆ ನೀಡಬೇಕೆಂಬ ಕೂಗು ಎದ್ದಿತ್ತು. ಸುಪ್ರೀಂ ಕೋರ್ಟ್ ಕೂಡಾ ಗಲ್ಲು ಶಿಕ್ಷೆ ವಿಧಿಸಿದೆ. ಹೀಗಿದ್ದರೂ ಈ ಪ್ರಕರಣ ನಡೆದು ಬರೋಬ್ಬರಿ 7 ವರ್ಷಗಳೇ ಕಳೆದಿವೆ ಆದರೂ ದೋಷಿಗಳ ಗಲ್ಲು ವಿಳಂಬವಾಗುತ್ತಿದೆ.

ನಾನು 'ನಿರ್ಭಯ': ಅತ್ಯಾಚಾರಿಗಳ ಕತ್ತಿಗೆ ಹಗ್ಗ ಹಾಕುವೆನೆಂದ ಪೇದೆ!

ಈ ಹತ್ಯಾಚಾರ ಪ್ರಕರಣದ ಒಟ್ಟು 6 ದೋಷಿಗಳಲ್ಲಿ ಓರ್ವ ಅಪ್ರಾಪ್ತನಾಗಿದ್ದರಿಂದ ಮೂರು ವರ್ಷ ಜೈಲುಶಿಕ್ಷೆ ಅನುಭವಿಸಿ ಹೊರ ಬಂದಿದ್ದಾನೆ. ಮತ್ತೊಬ್ಬ ಅಪರಾಧಿ ಜೈಲಿನಲ್ಲೇ ಆತ್ಮಹತ್ಯೆಗೆ ಶರಣಾಗಿದ್ದ. ಇನ್ನುಳಿದ ನಾಲ್ವರು ಅಪರಾಧಿಗಳು ಸದ್ಯ ತಿಹಾರ್ ಜೈಲಿನ ಪ್ರತ್ಯೇಕ ಕೊಠಡಿಗಳಲ್ಲಿದ್ದಾರೆ. ಸಿಸಿಟಿವಿ ಮೂಲಕ ಈ ನಾಲ್ವರ ಚಲನ ವಲನಗಳ ಮೇಲೆ ನಿಗಾ ಇಡಲಾಗಿದೆ. ಇತ್ತ ಕಾನೂನು ಪ್ರಕ್ರಿಯೆ ಮುಂದುವರೆದಿದ್ದು, ಗಲ್ಲು ವಿಳಂಬವಾಗುತ್ತಲೇ ಇದೆ.

ನಿರ್ಭಯಾ ಹತ್ಯಾಚಾರಿಗಳ ಅರ್ಜಿ ವಜಾ, ಗಲ್ಲು ಫಿಕ್ಸ್!

ಕೆಲ ದಿನಗಳ ಹಿಂದಷ್ಟೇ ನಿರ್ಭಯಾ ಅಪರಾಧಿಗಳಿಗೆ ಡಿ. 16ರಂದೇ ಗಲ್ಲು ಶಿಕ್ಷೆಯಾಗುತ್ತೆ ಎಂಬ ವರದಿಯೊಂದು ಹರಿದಾಡಿತ್ತು. ಇದಕ್ಕೆ ಪೂರಕ ಎಂಬಂತೆ ತಿಹಾರ್ ಸಿಬ್ಬಂದಿ ಗಲ್ಲು ಶಿಕ್ಷೆ ನೀಡುವ ಕೊಠಡಿ ಸ್ವಚ್ಛತಾ ಕಾರ್ಯ ಆರಂಭಗೊಂಡಿತ್ತು. ಅಲ್ಲದೇ ತಿಹಾರ್ ಜೈಲು ಸಿಬ್ಬಂದಿ ಗಲ್ಲಿಗೇರಿಸುವ ಹಗ್ಗ ತಯಾರಿಸುವಂತೆ ಬಕ್ಸರ್ ಜೈಲು ಸಿಬ್ಬಂದಿಗೆ ಆದೇಶಿಸಿದ್ದರು. ಇನ್ನೇನು ದೋಷಿಗಳಿಗೆ ಗಲ್ಲು ಆಗೇ ಬಿಡುತ್ತೆ ಎನ್ನುವಷ್ಟರಲ್ಲಿ ಅಪರಾಧಿಗಳಲ್ಲೊಬ್ಬನಾದ ಅಕ್ಷಯ್ ಸಿಂಗ್ ಗಲ್ಲು ಶಿಕ್ಷೆ ವಿರೋಧಿಸಿ ಸುಪ್ರೀಂ ಕೋರ್ಟ್ ಗೆ ಪರಿಶೀಲನಾ ಅರ್ಜಿ ಸಲ್ಲಿಸಿದ. ಹೀಗಾಗಿ ಗಲ್ಲು ಮತ್ತೆ ಮುಂದೆ ಹೋಯ್ತು.

ಈ ನಡುವೆ ಡಿ. 18ರಂದು ಅಕ್ಷಯ್ ಸಿಂಗ್ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಇದನ್ನು ವಜಾಗೊಳಿಸಿತು. ಹೀಗಾಗಿ ದೋಷಿಗಳಿಗೆ ಶೀಘ್ರದಲ್ಲೇ ಗಲ್ಲು ಶಿಕ್ಷೆಯಾಗಬಹುದೆಂಬ ಮಾತು ಮತ್ತೆ ಜೋರಾಯ್ತು. ಆದರೆ ಇದಾದ ಕೆಲವೇ ಗಂಟೆ ನಿರ್ಭಯಾ ತಾಯಿ ಸಲ್ಲಿಸಿದ ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ದೆಹಲಿ ಕೋರ್ಟ್ ವಿಚಾರಣೆಯನ್ನು 2020ರ ಜನವರಿ 7ಕ್ಕೆ ಮುಂದೂಡಿದೆ. ಅಲ್ಲದೇ ದೋಷಿಗಳಿಗೆ ಹೊಸ ನೋಟಿಸ್ ಜಾರಿಗೊಳಿಸವಂತೆ ತಿಹಾರ್ ಸಿಬ್ಬಂದಿಗೆ ಆದೇಶಿಸಿದೆ. ಹೀಗಾಗಿ ಗಲ್ಲು ಶಿಕ್ಷೆ ಮತ್ತೆ ವಿಳಂಬವಾಗಿದೆ.

ದೋಷಿಗಳಿಗೂ ಹಕ್ಕು ಇದೆ: ವಿಚಾರಣೆ ಮುಂದೂಡಿದ ದೆಹಲಿ ಕೋರ್ಟ್

ಇನ್ನು ಜನವರಿ 7 ರಂದು ಅರ್ಜಿ ವಿಚಾರಣೆ ನಡೆದರೂ ಅಪರಾಧಿಗಳ ಗಕಲ್ಲು ಶಿಕ್ಷೆ ಇನ್ನೂ ಹಲವಾರು ತಿಂಗಳು ವಿಳಂಬವಾಗುವ ಸಾಧ್ಯತೆಗಳಿವೆ. ದೇಶದ ಕಾನೂನಿನಲ್ಲಿ ಅಪರಾಧಿಗಳಿಗೂ ತಮ್ಮ ಪರ ವಾದಿಸುವ ಹಕ್ಕಿದೆ. ಹೀಗಾಗಿ ದೋಷಿಗಳು ಈ ಎಲ್ಲಾ ಕಾನೂನು ಮಾರ್ಗಗಳನ್ನು ಅನುಸರಿಸಿ ಗಲ್ಲು ಶಿಕ್ಷೆಯನ್ನು ಕೆಲ ಸಮಯ ಮುಂದೂಡುವ ಎಲ್ಲಾ ಪ್ರಯತ್ನ ಮಾಡುತ್ತಾರೆಂಬುವುದರಲ್ಲಿ ಅನುಮಾನವಿಲ್ಲ 

ಅಪರಾಧಿಗಳ ಮುಂದಿನ ಆಯ್ಕೆ ಏನು?

1. ಮತ್ತೆ ಸುಪ್ರೀಂಕೋರ್ಟ್ ಎದುರು ಕ್ಯುರೇಟಿವ್ ಅರ್ಜಿ ಸಲ್ಲಿಸಬಹುದು

2. ಈ ಅರ್ಜಿಯಲ್ಲಿ ಹೊಸ ಅಂಶಗಳಿದ್ದರೆ ಮಾತ್ರ ವಿಚಾರಣೆಗೆ ಅಂಗೀಕಾರ

3. ಕ್ಯುರೇಟವ್ ಅರ್ಜಿ ವಿಚಾರಣೆಗೆ ಕಾಲಮಿತಿ ಇಲ್ಲ, 6 ತಿಂಗಳೂ ಆಗಬಹುದು

4. ಈ ಅರ್ಜಿ ವಜಾ ಆದ ಬಳಿಕವಷ್ಟೇ ಗಲ್ಲುಶಿಕ್ಷೆ ಖಾಯಂ

5.  ಈ ಅರ್ಜಿ ವಜಾ ಬಳಿಕ ರಾಷ್ಟ್ರಪತಿಗೆ ಕ್ಷಮಾದಾನ ಅರ್ಜಿ ಸಲ್ಲಿಕೆ

6. ರಾಷ್ಟ್ರಪತಿಗಳು ಕ್ಷಮಾದಾನ ಅರ್ಜಿ ತಿರಸ್ಕರಿಸಿದರೆ ಗಲ್ಲುಶಿಕ್ಷೆ ಜಾರಿ ಖಚಿತ

ನಿರ್ಭಯಾ ಅತ್ಯಾಚಾರ ಪ್ರಕರಣ: ಈವರೆಗೆ ಏನೇನಾಯ್ತು? ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು