ನವದೆಹಲಿ[ಡಿ.08]: ಗಲ್ಲು ಶಿಕ್ಷೆಗೆ ಗುರಿಯಾಗಿರುವ 2012ರ ದಿಲ್ಲಿ ‘ನಿರ್ಭಯಾ ಗ್ಯಾಂಗ್‌ರೇಪ್‌-ಕೊಲೆ’ ಪ್ರಕರಣದ ಅಪರಾಧಿ ವಿನಯ್‌ ಶರ್ಮಾ ಸಲ್ಲಿಸಿದ್ದ ಕ್ಷಮಾದಾನ ಅರ್ಜಿ ವಿಷಯವು ಹೊಸ ತಿರುವು ಪಡೆದುಕೊಂಡಿದೆ. ‘ಕ್ಷಮಾದಾನ ಅರ್ಜಿಯನ್ನು ನಾನು ಸಲ್ಲಿಸಿಯೇ ಇರಲಿಲ್ಲ. ನನ್ನ ಒಪ್ಪಿಗೆ ಇಲ್ಲದೇ ಅರ್ಜಿ ಕಳಿಸಲಾಗಿದೆ. ಹೀಗಾಗಿ ಈ ಅರ್ಜಿಯನ್ನು ರಾಷ್ಟ್ರಪತಿಗಳು ಒಪ್ಪಿಕೊಳ್ಳದೇ ವಾಪಸು ಕಳಿಸಬೇಕು’ ಎಂದು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರಿಗೆ ಪತ್ರ ಬರೆದಿದ್ದಾನೆ. ಇದು ಆತ ಗಲ್ಲು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಅಥವಾ ಶಿಕ್ಷೆ ಜಾರಿಯನ್ನು ಮುಂದೂಡುವ ತಂತ್ರವಾಗಿರಬಹುದು ಎಂದು ಹೇಳಲಾಗಿದೆ.

ರೇಪಿಸ್ಟ್‌ಗಳಿಗೆ ಕ್ಷಮಾದಾನ ಇಲ್ಲ: ರಾಷ್ಟ್ರಪತಿ ಕೋವಿಂದ್

‘ದಿಲ್ಲಿ ಸರ್ಕಾರ ಹಾಗೂ ನಾನು ಇರುವ ತಿಹಾರ ಜೈಲಿನ ಅಧಿಕಾರಿಗಳು ಒಟ್ಟುಗೂಡಿ ದುರುದ್ದೇಶದೊಂದಿಗೆ ಈ ಅರ್ಜಿಯನ್ನು ಸಲ್ಲಿಸಿವೆ. ಈ ಅರ್ಜಿಗೆ ನಾನು ಸಹಿಯನ್ನೂ ಹಾಕಿರಲಿಲ್ಲ. ಅದಕ್ಕೆ ನನ್ನ ಒಪ್ಪಿಗೆಯೂ ಇರಲಿಲ್ಲ’ ಎಂದು ಪತ್ರದಲ್ಲಿ ಆತ ಬರೆದಿದ್ದಾನೆ. ಈ ಮೂಲಕ ಆ ಸಹಿ ನಕಲಿ ಎಂದು ಪರೋಕ್ಷವಾಗಿ ಆತ ಹೇಳಿದ್ದಾನೆ.

ಇತ್ತೀಚೆಗೆ ಈತನ ಕ್ಷಮಾದಾನ ಅರ್ಜಿಯನ್ನು ದಿಲ್ಲಿ ಸರ್ಕಾರ ಹಾಗೂ ಕೇಂದ್ರ ಸರ್ಕಾರಗಳು ತಿರಸ್ಕರಿಸಿ, ರಾಷ್ಟ್ರಪತಿಗಳಿಗೆ ಶಿಫಾರಸು ಮಾಡಿದ್ದವು.

‘ಗಲ್ಲು ಶಿಕ್ಷೆಗೆ ಗುರಿಯಾಗಿರುವ ನನ್ನ ಮುಂದೆ ಕಾನೂನು ಹೋರಾಟಕ್ಕೆ ಇನ್ನೂ ಹಲವು ಆಯ್ಕೆಗಳಿವೆ. ನಾನಿನ್ನೂ ಗಲ್ಲು ಶಿಕ್ಷೆ ತೀರ್ಪಿನ ವಿರುದ್ಧ ಕ್ಯುರೇಟಿವ್‌ ಅರ್ಜಿ ಸಲ್ಲಿಸಿಲ್ಲ. ಆ ಎಲ್ಲ ಆಯ್ಕೆಗಳನ್ನು ನಾನು ಪರಿಶೀಲಿಸುತ್ತಿದ್ದೇನೆ. ಅಲ್ಲಿಯವರೆಗೆ ನಾನು ಕ್ಷಮಾದಾನ ಅರ್ಜಿ ಸಲ್ಲಿಸುವ ಪ್ರಶ್ನೆಯೇ ಇಲ್ಲ. ಹೀಗಾಗಿ ನನ್ನ ಹೆಸರಿನಲ್ಲಿ ಸಲ್ಲಿಕೆಯಾಗಿರುವ ಅರ್ಜಿಯನ್ನು ವಾಪಸು ಕಳಿಸಬೇಕು’ ಎಂದು ಆತ ಕೋರಿದ್ದಾನೆ.

ಅರೆವೈದ್ಯ ವಿದ್ಯಾರ್ಥಿನಿಯ ಮೇಲೆ 2012ರ ಡಿಸೆಂಬರ್‌ನಲ್ಲಿ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ನಾಲ್ವರಲ್ಲಿ ವಿನಯ್‌ ಶರ್ಮಾ ಕೂಡ ಒಬ್ಬ. ನಾಲ್ವರು ದೋಷಿಗಳ ಪೈಕಿ ಶರ್ಮಾ ಮಾತ್ರವೇ ಕ್ಷಮಾದಾನಕ್ಕೆ ಅರ್ಜಿ ಸಲ್ಲಿಸಿದ್ದಾನೆ ಎಂದು ಹೇಳಲಾಗಿತ್ತು.

ನಿರ್ಭಯಾ ದೋಷಿಗಳಿಗೆ ಗಲ್ಲು ಶಿಕ್ಷೆಗೆ ಕ್ಷಣಗಣನೆ!

ಡಿಸೆಂಬರ್ 8ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ