Asianet Suvarna News Asianet Suvarna News

ಎನ್‌ಐಎಯಿಂದ ಐಸಿಸ್‌ ಬೇಟೆ: ಕರ್ನಾಟಕ, ಕೇರಳದ ಕೆಲವರ ಹತ್ಯೆ ಸಂಚು ಬಯಲು!

ಎನ್‌ಐಎಯಿಂದ ಐಸಿಸ್‌ ಬೇಟೆ| ಬೆಂಗಳೂರು ಸೇರಿ 11 ಕಡೆ ದಾಳಿ| 3 ಶಂಕಿತ ಉಗ್ರರ ಬಂಧನ| ಕರ್ನಾಟಕ, ಕೇರಳದ ಕೆಲವು ವ್ಯಕ್ತಿಗಳ ಹತ್ಯೆ ಸಂಚು ಬಯಲು

NIA conducts searches in Delhi Kerala Karnataka in ISIS module case 3 arrested pod
Author
Bangalore, First Published Mar 16, 2021, 7:27 AM IST

 ನವದೆಹಲಿ(ಮಾ.16): ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರಗಾಮಿ ಸಂಘಟನೆಯ ಹಿಂಸಾತ್ಮಕ ಸಿದ್ಧಾಂತವನ್ನು ಪ್ರಚಾರ ಮಾಡುತ್ತಿದ್ದ ಗುಂಪೊಂದರ ಚಟುವಟಿಕೆ ಭೇದಿಸುವಲ್ಲಿ ಯಶಸ್ವಿಯಾಗಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಬೆಂಗಳೂರು ಸೇರಿದಂತೆ 11 ಕಡೆ ಏಕಕಾಲದಲ್ಲಿ ಸೋಮವಾರ ದಾಳಿ ನಡೆಸಿದೆ. 3 ಮಂದಿ ಶಂಕಿತ ಉಗ್ರರನ್ನು ಬಂಧಿಸಿದೆ.

ಕೇರಳದ ಮೊಹಮ್ಮದ್‌ ಅಮೀನ್‌ ಎಂಬಾತ ನಡೆಸುತ್ತಿದ್ದ ಗುಂಪೊಂದರ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಎನ್‌ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರ ಜೊತೆಗೂಡಿ ಬೆಂಗಳೂರಿನ 2 ಕಡೆ, ಕೇರಳದ ಕಣ್ಣೂರು, ಮಲಪ್ಪುರಂ, ಕೊಲ್ಲಂ ಮತ್ತು ಕಾಸರಗೋಡು ಜಿಲ್ಲೆಯ 8 ಕಡೆ ಹಾಗೂ ದೆಹಲಿಯ 1 ಸ್ಥಳದಲ್ಲಿ ದಾಳಿ ನಡೆಸಿದ್ದಾರೆ. ಈ ವೇಳೆ ಅಮೀನ್‌ ಮತ್ತು ಆತನ ಸಹಚರರಾದ ಮುಷಬ್‌ ಅನ್ವರ್‌ ಹಾಗೂ ರಹೀಸ್‌ ರಶೀದ್‌ ಅವರನ್ನು ಬಂಧಿಸಿದ್ದಾರೆ.

ಶೋಧ ಕಾರ್ಯಾಚರಣೆಯ ವೇಳೆ ಉಗ್ರರಿಗೆ ಸೇರಿದ ವಿವಿಧ ಡಿಜಿಟಲ್‌ ಉಪಕರಣಗಳು, ಮೊಬೈಲ್‌, ಲ್ಯಾಪ್‌ಟಾಪ್‌, ಪೆನ್‌ಡ್ರೈವ್‌, ಸಿಮ್‌ ಕಾರ್ಡ್‌ಗಳು ಹಾಗೂ ಹಾರ್ಡ್‌ ಡಿಸ್ಕ್‌ಗಳನ್ನು ವಶಪಡಿಸಿಕ್ಳೊಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಗುಂಪು ವಿವಿಧ ಸಾಮಾಜಿಕ ಜಾಲತಾಣ ವೇದಿಕೆಗಳಾದ ಟೆಲಿಗ್ರಾಮ್‌, ಹೂಪ್‌ ಮತ್ತು ಇನ್‌ಸ್ಟಾಗ್ರಾಮ್‌ಗಳಲ್ಲಿ ವಿವಿಧ ಐಸಿಸ್‌ ಪ್ರಚಾರ ವಾಹಿನಿಗಳ ಮೂಲಕ ಐಸಿಸ್‌ನ ಹಿಂಸಾತ್ಮಕ ಸಿದ್ಧಾಂತದ ಪ್ರಚಾರದಲ್ಲಿ ತೊಡಗಿಕೊಂಡಿತ್ತು ಮತ್ತು ಹೊಸ ಸದಸ್ಯರ ನೇಮಕ, ಮನವೊಲಿಕೆಯಲ್ಲಿ ತೊಡಗಿಕೊಂಡಿತ್ತು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕದಲ್ಲಿ ದಾಳಿ, ಹತ್ಯೆಗೆ ಸಂಚು:

ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ 7 ಶಂಕಿತ ಉಗ್ರರು ಹಾಗೂ ಇತರ ಅನಾಮಧೇಯ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಅಮೀನ್‌ ನೇತೃತ್ವದಲ್ಲಿ ಗುಂಪು ಐಸಿಸ್‌ ಸಂಘಟನೆಗೆ ನಿಷ್ಠವಾಗಿ ನಡೆದುಕೊಳ್ಳುತ್ತಿತ್ತು. ಕರ್ನಾಟಕ ಮತ್ತು ಕೇರಳದಲ್ಲಿ ಕೆಲವು ವ್ಯಕ್ತಿಗಳ ಹತ್ಯೆಗೂ ಸಂಚು ರೂಪಿಸಿತ್ತು. ಅಲ್ಲದೇ ಈ ಗುಂಪಿನ ಸದಸ್ಯರು ಜಮ್ಮು- ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಧಾರ್ಮಿಕ ಮತಾಂತರ (ಹಿಜ್ರತ್‌)ನಲ್ಲಿಯೂ ತೊಡಗಿಕೊಂಡಿದ್ದರು. ಬಹ್ರೇನ್‌ನಿಂದ 2020ರ ಮಾಚ್‌ರ್‍ನಲ್ಲಿ ಭಾರತಕ್ಕೆ ಬಂದ ತಕ್ಷಣವೇ ಅಮೀನ್‌ ಜಮ್ಮು- ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದ್ದ. ಬಳಿಕ ಎರಡು ತಿಂಗಳ ಕಾಲ ದೆಹಲಿಯಲ್ಲಿಯೂ ವಾಸ್ತವ್ಯ ಹೂಡಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow Us:
Download App:
  • android
  • ios