ಮೇಕೆದಾಟು ಯೋಜನೆಗೆ ನ್ಯಾಯಾಧಿಕರಣದ ಕೊಕ್ಕೆ!
* ಮೇಕೆದಾಟು ಯೋಜನೆಗೆ ನ್ಯಾಯಾಧಿಕರಣದ ಕೊಕ್ಕೆ
* ಪರಿಸರ ನಿಯಮಗಳ ಉಲ್ಲಂಘನೆ ಆರೋಪ
* ಸ್ಥಳ ಪರಿಶೀಲನೆಗೆ ಎನ್‌ಜಿಟಿಯಿಂದ ಸಮಿತಿ
ನವದೆಹಲಿ(ಮೇ.26): ಮೇಕೆದಾಟುವಿನಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಯೋಜನೆಯಲ್ಲಿ ಪರಿಸರ ನಿಯಮಗಳ ಉಲ್ಲಂಘನೆ ಆಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆಗೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು (ಎನ್‌ಜಿಟಿ) ಸಮಿತಿಯೊಂದನ್ನು ರಚಿಸಿದೆ. ಆರೋಪದ ಪರಿಶೀಲನೆ ನಡೆಸಿ ಜುಲೈ 5ರ ಒಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.
ಇದೇ ವೇಳೆ, ನ್ಯಾ| ಕೆ. ರಾಮಕೃಷ್ಣನ್ ಹಾಗೂ ತಜ್ಞ ಸದಸ್ಯ ಕೆ. ಸತ್ಯಗೋಪಾಲ್ ಅವರಿದ್ದ ಪೀಠವು ಕೇಂದ್ರ ಪರಿಸರ ಸಚಿವಾಲಯ, ಜಲಸಂಪನ್ಮೂಲ ಸಚಿವಾಲಯ, ಕೇಂದ್ರೀಯ ಜಲ ಆಯೋಗ, ಕರ್ನಾಟಕ ಹಾಗೂ ತಮಿಳುನಾಡು ಸರ್ಕಾರಗಳಿಂದ ಸ್ಪಷ್ಟನೆ ಬಯಸಿ ನೋಟಿಸ್ ಕೂಡ ಜಾರಿ ಮಾಡಿದೆ.
‘ಕರ್ನಾಟಕವು ನಿಯಮ ಉಲ್ಲಂಘಿಸಿ ಮೇಕೆದಾಟುವಿನಲ್ಲಿ ಅಣೆಕಟ್ಟು ನಿರ್ಮಾಣಕ್ಕೆ ಉದ್ದೇಶಿಸಿದೆ. ವಿವಾದ ಸುಪ್ರೀಂ ಕೋರ್ಟ್‌ನಲ್ಲಿರುವ ಕಾರಣ ಕಾವೇರಿ ನದಿ ನೀರು ಪ್ರಾಧಿಕಾರ ಎರಡು ಸಲ ಈ ಪ್ರಸ್ತಾಪವನ್ನು ಅಂಗೀಕರಿಸದೆ ಮುಂದೂಡಿದೆ. ಅನುಮತಿ ಇಲ್ಲದೆ ಇದ್ದರೂ ಕರ್ನಾಟಕವು ಯೋಜನೆಯಲ್ಲಿ ಮುಂದಡಿ ಇಟ್ಟಿದೆ’ ಎಂದು ದಿನಪತ್ರಿಕೆಯೊಂದು ವರದಿ ಮಾಡಿತ್ತು. ಈ ವರದಿಯನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡ ನ್ಯಾಯಾಧಿಕರಣ, ‘ಪತ್ರಿಕಾ ವರದಿ ಪರಿಶೀಲಿಸಲಾಗಿದೆ. ಈ ಯೋಜನೆಯಿಂದ ಪರಿಸರದ ಮೇಲೆ ಪರಿಣಾಮ ಆಗಬಹುದು ಎಂದು ನಮಗೆ ಮನವರಿಕೆ ಆಗಿದೆ. ಹಾಗಾಗಿ ಈ ವಿಚಾರದಲ್ಲಿ ನ್ಯಾಯಾಧಿಕರಣದ ಮಧ್ಯಪ್ರವೇಶಿಸುತ್ತಿದೆ’ ಎಂದು ಹೇಳಿತು.
ಇದೇ ವೇಳೆ ವಿಷಯದ ಪರಿಶೀಲನೆಗೆ ಸಮಿತಿ ರಚನೆ ಮಾಡಿದ ಪೀಠ, ‘ಕೇಂದ್ರ ಪರಿಸರ ಸಚಿವಾಲಯದ ಬೆಂಗಳೂರು ಕಚೇರಿ, ಕಾವೇರಿ ಮೇಲುಸ್ತುವಾರಿ ಪ್ರಾಧಿಕಾರ, ಕಾವೇರಿ ನೀರಾವರಿ ನಿಗಮ ನಿಯಮಿತ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು/ಸದಸ್ಯರು ಇರಬೇಕು’ ಎಂದು ಸೂಚಿಸಿತು.
‘ಈ ಸಮಿತಿ ಸ್ಥಳಕ್ಕೆ ತೆರಳಿ ಪತ್ರಿಕೆಯಲ್ಲಿ ವರದಿ ಆದಂತೆ ಕಾಮಗಾರಿ ಆರಂಭ ಆಗಿದೆಯಾ? ಪರಿಸರಕ್ಕೆ ಏನಾದರೂ ಹಾನಿ ಆಗಿದೆಯಾ ಎಂಬುದನ್ನು ಪರಿಶೀಲಿಸಬೇಕು’ ಎಂದೂ ಅದು ನಿರ್ದೇಶಿಸಿತು.
ಸಮಿತಿ ಸ್ಥಳ ಪರಿಶೀಲಿಸುವಂತೆ ಮಾಡಲು ಕರ್ನಾಟಕದ ಮುಖ್ಯ ಅರಣ್ಯ ಸಂರಕ್ಷಣ ಅಧಿಕಾರಿಗಳು ನೋಡಲ್ ಏಜೆನ್ಸಿಯಂತೆ ಕಾರ‍್ಯನಿರ್ವಹಿಸಿ ಸಮಿತಿಯ ಭೇಟಿಗೆ ಅನುಕೂಲ ಕಲ್ಪಿಸಬೇಕು ಎಂದು ನ್ಯಾಯಾಧಿಕರಣ ತಿಳಿಸಿತು.
ಏನಿದು ಯೋಜನೆ?:
ಮೇಕೆದಾಟು ಯೋಜನೆ 9 ಸಾವಿರ ಕೋಟಿ ರು. ವೆಚ್ಚದ್ದಾಗಿದ್ದು, 4.75 ಟಿಎಂಸಿ ನೀರು ಬಳಕೆ ಉದ್ದೇಶ ಹೊಂದಿದೆ. ರಾಮನಗರ ಹಾಗೂ ಚಾಮರಾಜನಗರ ಜಿಲ್ಲೆಯ ಗಡಿಯಲ್ಲಿ ಈ ಸ್ಥಳ ಇದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಕುಡಿವ ನೀರು ಪೂರೈಸುವ ಯೋಜನೆ ಇದಾಗಿದೆ. 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಉದ್ದೇಶವನ್ನೂ ಹೊಂದಿದೆ. ಆದರೆ ತಮಿಳುನಾಡು ಯೋಜನೆಗೆ ಆಕ್ಷೇಪ ಎತ್ತಿ ಸುಪ್ರೀಂಕೋರ್ಟ್ ಮೊರೆ ಹೋಗಿದೆ.
ವಿವಾದ ಏನು?
- ನಿಯಮ ಉಲ್ಲಂಘಿಸಿ ಕರ್ನಾಟಕದಿಂದ ಅಣೆಕಟ್ಟೆ
- ಅನುಮತಿ ಇಲ್ಲದಿದ್ದರೂ ಯೋಜನೆ ಅನುಷ್ಠಾನ
- ದಿನಪತ್ರಿಕೆಯೊಂದರಿಂದ ಕರ್ನಾಟಕ ವಿರುದ್ಧ ವರದಿ
- ವರದಿ ಬಗ್ಗೆ ಎನ್‌ಜಿಟಿ ಸ್ವಯಂಪ್ರೇರಿತ ವಿಚಾರಣೆ
- ಮೇಕೆದಾಟು ವಿಷಯದಲ್ಲಿ ಮಧ್ಯಪ್ರವೇಶ ಘೋಷಣೆ