Ramesh Kumar Controversy: ರಮೇಶ್ ಕುಮಾರ್ ರೇಪ್ ಹೇಳಿಕೆಗೆ ಮಹಿಳಾ ಆಯೋಗ ಸೇರಿ ದೇಶದಾದ್ಯಂತ ಖಂಡನೆ
- ರಮೇಶ್ ಕುಮಾರ್ ಅತ್ಯಾಚಾರ ಹೇಳಿಕೆಗೆ ದೇಶದಾದ್ಯಂತ ಹಲವರ ಖಂಡನೆ
- ರಾಷ್ಟ್ರೀಯ ಮಹಿಳಾ ಆಯೋಗದಿಂದ ವಿರೋಧ
- ಸಂಸತ್ ನಲ್ಲಿ ಇರಾನಿ, ಜಯಾಬಚ್ಚನ್ ಕಿಡಿ
ಬೆಂಗಳೂರು(ಡಿ.17): ಮಾಜಿ ಸ್ಪೀಕರ್ ರಮೇಶ್ ಕುಮಾರ್ (Ramesh Kumar) ಅವರು ಗುರುವಾರ ವಿಧಾನಸಭೆಯಲ್ಲಿ ಅತ್ಯಾಚಾರ ಆಗುವಾಗ ತಡೆಯಲು ಸಾಧ್ಯವಾಗದಿದ್ದರೆ ಮಲಗಿ ಎಂಜಾಯ್ ಮಾಡಿಬಿಡಬೇಕು ಎಂಬ ಅರ್ಥದ ನುಡಿಗಟ್ಟು ಉಲ್ಲೇಖ ಮಾಡಿದ ವಿಚಾರಕ್ಕೆ ಸಂಬಂಧಿಸಿ ಹಲವರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದೆ. ರಾಷ್ಟ್ರಮಟ್ಟದಲ್ಲಿ ಇದು ಚರ್ಚೆಯಾಗಿದೆ. ಸಂಸದೆ , ನಟಿ ಜಯಾಬಚ್ಚನ್, ಕೇಂದ್ರ ಸಚಿವೆ ಸ್ಮೃತಿ ಇರಾನಿ ಸೇರಿದಂತೆ ಹಲವು ಮಂದಿ ಈ ಹೇಳಿಕೆಯನ್ನು ಖಂಡಿಸಿದ್ದು, ಸ್ವಪಕ್ಷದವರಿಂದ ಕೂಡ ರಮೇಶ್ ಕುಮಾರ್ ಅವರ ಈ ಹೇಳಿಕೆಗೆ ವಿರೋಧ ವ್ಯಕ್ತವಾಗಿದೆ.
ಮಹಿಳಾ ಆಯೋಗದಿಂದ ವಿರೋಧ: ರಮೇಶ್ ಕುಮಾರ್ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ (Rekha sharma) ಶುಕ್ರವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು"ಅತ್ಯಂತ ದುಃಖಕರ, ದುರದೃಷ್ಟದ ಹೇಳಿಕೆಯಾಗಿದೆ. ದೇಶವು ಇನ್ನೂ ಸ್ತ್ರೀದ್ವೇಷ ಹೊಂದಿರುವ ಸಾರ್ವಜನಿಕ ಪ್ರತಿನಿಧಿಗಳನ್ನು ಹೊಂದಿದೆ ಎಂದು ರೇಖಾ ಶರ್ಮಾ ಟ್ವೀಟ್ ಮಾಡಿದ್ದಾರೆ. ಅಸಹ್ಯಕರವಾಗಿದೆ. ಸದನದಲ್ಲಿ ಕುಳಿತು ಈ ರೀತಿ ಹೇಳಿಕೆ ನೀಡುವುದಾದರೆ ಅವರೊಂದಿಗಿರುವ ಮಹಿಳೆಯರೊಂದಿಗೆ ಯಾವ ರೀತಿ ಅವರು ವರ್ತಿಸುತ್ತಾರೆ ಎಂದು ಮತ್ತೊಂದು ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿಯಿಂದ ಖಂಡನೆ: ಸದನದಲ್ಲಿ ರಮೇಶ್ ಕುಮಾರ್ ಆಡಿದ ಮಾತು ಸರಿಯಲ್ಲ, ಇದೊಂದು ಖಂಡನಾರ್ಹ ಮತ್ತು ಸಹಿಸಲಾಗದಂತಹ ಹೇಳಿಕೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾಂಗ್ರೆಸ್ ಹಿರಿಯ ನಾಯಕ ರಮೇಶ್ ಕುಮಾರ್ ನಡುವೆ ನಡೆದ ಸಂಭಾಷಣೆ ಖಂಡನಾರ್ಹ. ಹಿರಿಯ ಸದಸ್ಯರುಗಳು ಇತರರಿಗೆ ಮಾದರಿಯಾಗಿರಬೇಕು. ಈ ತರದ ವರ್ತನೆ ಖಂಡನಾರ್ಹ ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Singh Surjewala) ಟ್ವೀಟ್ ಮಾಡಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರೋಧ: ಮಹಿಳೆಯರ ಬಗ್ಗೆ ಗುರುವಾರ ಒಂದು ಪಕ್ಷಕ್ಕೆ ಸೇರಿದ ವ್ಯಕ್ತಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಪ್ರತಿಯೊಬ್ಬ ಜನಪ್ರತಿನಿಧಿ ಖಂಡಿಸಬೇಕು ಮಹಿಳೆಯರು, ಬಡವರ ಬಗ್ಗೆ ಅವರಿಗೆ ಕಾಳಜಿ ಇದ್ದರೆ ಸಂಸದರು ಸೇರಿ ಚರ್ಚೆ ಮಾಡೋಣ. ಈ ಹೇಳಿಕೆ ನೀಡಿರುವವರನ್ನು ತಕ್ಷಣ ಸಂಬಂಧಿಸಿದ ಪಕ್ಷ ಅಮಾನತು ಮಾಡಬೇಕೆಂದು ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಅಗತ್ಯ ಮತ್ತು ಅನಿವಾರ್ಯತೆ ಇದೆ ಎಂದು ಹೆಸರು ಉಲ್ಲೇಖಿಸದೆ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ (Smriti Irani ) ಸಂಸತ್ ಚಳಿಗಾಲ ಅಧಿವೇಶನದಲ್ಲಿ ರಮೇಶ್ ಕುಮಾರ್ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.
ಸಂಸದೆ ಜಯಾಬಚ್ಚನ್ ಖಂಡನೆ: ಲೋಕಸಭೆಯಲ್ಲಿ ಸಮಾಜವಾದಿ ಪಕ್ಷದ ಸಂಸದೆ ಜಯಾಬಚ್ಚನ್ (jaya bachchan) ಮಾತನಾಡಿ, ರಮೇಶ್ ಕುಮಾರ್ ಅವರ ಹೇಳಿಕೆ ನಾಚಿಕೆಗೇಡಿನ ವಿಷಯವಾಗಿದ್ದು, ಆ ಪಕ್ಷದ ನಾಯಕರು ಇಂಥವರ ವಿರುದ್ದ ಕ್ರಮ ಕೈಗೊಳ್ಳಬೇಕು. ಇಂತಹ ಮನಸ್ಥಿತಿ ಇರುವ ವ್ಯಕ್ತಿಗಳು ಸಂಸತ್ ಅಥವಾ ವಿಧಾನಸಭೆಗಳಲ್ಲಿ ಬದಲಾಯಿಸುವುದಾದರೂ ಹೇಗೆ? ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆರ
PARI ಮುಖ್ಯಸ್ಥೆ ಯೋಗಿತಾ ಭಾಯನಾ ಖಂಡನೆ:ದೆಹಲಿಯಲ್ಲಿ ಒಂಬತ್ತು ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿರುವ ದಿನದಂದೇ ಕಾಂಗ್ರೆಸ್ ಶಾಸಕರು ಇಂತಹ ಹೇಳಿಕೆ ನೀಡಿರುವುದು ನಾಚಿಕೆಯನ್ನುಂಟು ಮಾಡುತ್ತದೆ ಎಂದು PARI (People Against Rapes In India) ಮುಖ್ಯಸ್ಥೆ, ಅತ್ಯಾಚಾರ ವಿರೋಧಿ ಕಾರ್ಯಕರ್ತೆ, ಯೋಗಿತಾ ಭಾಯನಾ (Yogita Bhayana) ಟೀಕಿಸಿದ್ದಾರೆ. ರಮೇಶ್ ಕುಮಾರ್ ಅವರ ಹೇಳಿಕೆಯ ವಿಡಿಯೋವನ್ನು ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.