Asianet Suvarna News Asianet Suvarna News

ಮಿಜೋರಾಂ ಏರ್‌ಪೋರ್ಟ್‌ನಲ್ಲೇ ಪತನಗೊಂಡ 14 ಜನರಿದ್ದ ಸೇನಾ ವಿಮಾನ

ಮಯನ್ಮಾರ್ ದೇಶಕ್ಕೆ ಸೇರಿದ ಸೇನಾ ವಿಮಾನವೊಂದು ಮೀಜೋರಾಂನ ಲೆಂಗಪುಯಿ ಏರ್‌ಪೋರ್ಟ್‌ನಲ್ಲಿ ಪತನಗೊಂಡಿದ್ದು, ಈ ವಿಮಾನದಲ್ಲಿ 14 ಜನರಿದ್ದರು ಎಂದು ತಿಳಿದು ಬಂದಿದೆ.

Myanmar Army plane carrying 14 people crashes at Mizoram Airport akb
Author
First Published Jan 23, 2024, 1:55 PM IST | Last Updated Jan 23, 2024, 1:55 PM IST

ಐಜ್ವಾಲ್: ಮಯನ್ಮಾರ್ ದೇಶಕ್ಕೆ ಸೇರಿದ ಸೇನಾ ವಿಮಾನವೊಂದು ಮೀಜೋರಾಂನ ಲೆಂಗಪುಯಿ ಏರ್‌ಪೋರ್ಟ್‌ನಲ್ಲಿ ಪತನಗೊಂಡಿದ್ದು, ಈ ವಿಮಾನದಲ್ಲಿ 14 ಜನರಿದ್ದರು ಎಂದು ತಿಳಿದು ಬಂದಿದೆ.  ಅವಘಡಕ್ಕೀಡಾದ ವಿಮಾನದಲ್ಲಿ ವಿಮಾನದ ಪೈಲಟ್ ಸೇರಿ 14 ಜನರಿದ್ದರು. ಇದರಲ್ಲಿ 6 ಜನರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಲೆಂಗಪುಯಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಿಜೋರಾಂ ಡಿಜಿಪಿ ಮಾಹಿತಿ ನೀಡಿದ್ದಾರೆ. ವಿಮಾನ ಪತನಗೊಂಡು ಬಿದ್ದಿರುವ ದೃಶ್ಯವನ್ನು ಸುದ್ದಿಸಂಸ್ಥೆ ಎಎನ್‌ಐ ಹಂಚಿಕೊಂಡಿದೆ. 

ಮಯನ್ಮಾರ್ ಸೇನೆ ಹಾಗೂ ಬಂಡುಕೋರರ ನಡುವಿನ ಆಂತರಿಕ ಕಲಹದಿಂದಾಗಿ ಕೆಲ ದಿನಗಳ ಹಿಂದಷ್ಟೇ 500ಕ್ಕೂ ಹೆಚ್ಚು ಸೈನಿಕರು ಗಡಿ ಭಾಗದ ಮಿಜೋರಾಂಗೆ ಓಡಿಬಂದು ಆಶ್ರಯ ಕಂಡು ಕೊಂಡಿದ್ದರು. ಹೀಗೆ ಮಯನ್ಮಾರ್‌ನ ಲ್ಯಾಂಗ್ಟ್ಲೈ ಜಿಲ್ಲೆಯಿಂದ ಪಲಾಯನಗೊಂಡಿದ್ದ ಸೈನಿಕರನ್ನು ಕರೆತರುವುದಕ್ಕಾಗಿ ಈ ವಿಮಾನವೂ ಮಿಜೋರಾಮಗೆ ಬಂದಿತ್ತು ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

ಮ್ಯಾನ್ಮಾರ್‌ ಗಡಿಗೆ ಬೇಲಿ ಹಾಕಲು ಕೇಂದ್ರ ಸರ್ಕಾರ ನಿರ್ಧಾರ: ಭಾರತದೊಳಗೆ ಮುಕ್ತ ಸಂಚಾರಕ್ಕೆ ಅಂತ್ಯ!

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಸರ್ವಾಧಿಕಾರಿ ಜುಂಟಾ ಸರ್ಕಾರ ಹಾಗೂ ಸ್ಥಳೀಯ ಬಂಡುಕೋರರ ನಡುವಿನ ಸಂಘರ್ಷ ತಾರಕಕ್ಕೇರಿರುವ ಪರಿಣಾಮ ನೂರಾರು ಸೈನಿಕರು ಜೀವ ಉಳಿಸಿಕೊಳ್ಳಲು ಭಾರತದ ಮಿಜೋರಂಗೆ ಪಲಾಯನ ಮಾಡಿ ಆಶ್ರಯ ಪಡೆದಿದ್ದಾರೆ. 600ಕ್ಕೂ ಹೆಚ್ಚು ಸೈನಿಕರು ಹೀಗೆ ಭಾರತಕ್ಕೆ ಪ್ರವೇಶಿಸಿದ್ದು, ಅವರನ್ನು ಮರಳಿ ಕಳುಹಿಸುವಂತೆ ಮಿಜೋರಂ ಸರ್ಕಾರ ಕೇಂದ್ರ ಸರ್ಕಾರದ ಮೊರೆ ಹೋಗಿದೆ.

ಮ್ಯಾನ್ಮಾರ್‌ನಿಂದ ಓಡಿಬಂದ ಸೈನಿಕರಿಗೆ ಮಾನವೀಯತೆಯ ಆಧಾರದ ಮೇಲೆ ಅಸ್ಸಾಂ ರೈಫಲ್ಸ್‌ ರೆಜಿಮೆಂಟ್‌ನ ಶಿಬಿರಗಳಲ್ಲಿ ಆಶ್ರಯ ನೀಡಲಾಗಿದೆ. ಈ ಹಿಂದೆ ಬಂದಿದ್ದ 450ಕ್ಕೂ ಹೆಚ್ಚು ಸೈನಿಕರನ್ನು ವಿಮಾನದಲ್ಲಿ ಮರಳಿ ಕಳುಹಿಸಲಾಗಿತ್ತು. ಆದರೂ ಅಲ್ಲಿಂದ ಸೈನಿಕರು ಗಡಿ ದಾಟಿ ಬರುವುದು ಹೆಚ್ಚುತ್ತಲೇ ಇದೆ ಎಂದು ಮಿಜೋರಂ ಮುಖ್ಯಮಂತ್ರಿ ಲಾಲ್ಡುಹೋಮ ಕಳವಳ ವ್ಯಕ್ತಪಡಿಸಿದ್ದಾರೆ.

ಮ್ಯಾನ್ಮಾರ್‌ನಲ್ಲಿ ಸೇನೆ-ಬಂಡುಕೋರರ ಸಂಘರ್ಷ : ಭದ್ರತೆಗಾಗಿ ಮ್ಯಾನ್ಮಾರ್‌ ಗಡಿಗೆ ಬೇಲಿ: ಅಮಿತ್‌ ಶಾ

ಈ ಕರಿತು ಶಿಲ್ಲಾಂಗ್‌ನಲ್ಲಿ ನಡೆದ ಈಶಾನ್ಯ ರಾಜ್ಯಗಳ ಮಂಡಳಿಯ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಜೊತೆ ಲಾಲ್ಡುಹೊಮ ಮಾತುಕತೆ ನಡೆಸಿದ್ದಾರೆ. ವಿದೇಶಿ ಸೈನಿಕರ ಆಗಮನದಿಂದ ಮಿಜೋರಂನ ಜನರಿಗೆ ತೊಂದರೆ ಉಂಟಾಗುವುದಕ್ಕಿಂತ ಮೊದಲು ಅವರನ್ನು ವಾಪಸ್‌ ಕಳುಹಿಸಬೇಕೆಂದು ಅವರು ಮನವಿ ಮಾಡಿದ್ದರು.

ಮ್ಯಾನ್ಮಾರ್‌ನಲ್ಲಿ ನಡೆಯುತ್ತಿದ್ದ ಜನಾಂಗೀಯ ಸಂಘರ್ಷದ ಲಾಭ ಪಡೆದು 2021ರಲ್ಲಿ ಸರ್ಕಾರದ ವಿರುದ್ಧ ಕ್ಷಿಪ್ರಕ್ರಾಂತಿ ನಡೆಸಿ ಜುಂಟಾ ಮಿಲಿಟರಿ ಪಡೆ ಆಡಳಿತವನ್ನು ತನ್ನ ವಶಕ್ಕೆ ಪಡೆದುಕೊಂಡಿತ್ತು. ಆನಂತರವೂ ಜನಾಂಗೀಯ ಸಂಘರ್ಷ ನಿಂತಿಲ್ಲ. ಈಗ ಭಾರತದ ಗಡಿ ರಾಜ್ಯವಾದ ರಖಾಯಿನ್‌ನಲ್ಲಿ ಸ್ಥಳೀಯ ಬಂಡುಕೋರರ ಅರಾಕನ್‌ ಸೇನೆಯು ಜುಂಟಾ ಮಿಲಿಟರಿಯ ಶಿಬಿರಗಳನ್ನು ವಶಪಡಿಸಿಕೊಂಡಿದೆ. ಹೀಗಾಗಿ ಜೀವ ಉಳಿಸಿಕೊಳ್ಳಲು ಸೈನಿಕರು ಮಿಜೋರಂಗೆ ಅಕ್ರಮವಾಗಿ ಪ್ರವೇಶಿಸಿ ಆಶ್ರಯ ಕೇಳುತ್ತಿದ್ದಾರೆ.

 

Latest Videos
Follow Us:
Download App:
  • android
  • ios