ಉದಯಪುರ ಹತ್ಯೆ ಖಂಡಿಸಿದ ಮುಸ್ಲಿಂ ಧರ್ಮಗುರುಗಳು, ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಆಗ್ರಹ!

* ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣ

* ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ನಂತರ ರಾಜ್ಯಾದ್ಯಂತ ಆಕ್ರೋಶ

* ಕ್ರೂರ ಹತ್ಯೆ ಖಂಡಿಸಿದ ಮುಸ್ಲಿಂ ಧಾರ್ಮಿಕ ಮುಖಂಡರು

Muslim clerics condemn Udaipur killing seek strictest punishment for culprits pod

ಜೈಪುರ(ಜೂ.29): ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯಾ ಲಾಲ್ ಹತ್ಯೆ ಪ್ರಕರಣದ ನಂತರ ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಈ ಕ್ರೂರ ಹತ್ಯೆಯನ್ನು ಎಲ್ಲಾ ಸಮುದಾಯಗಳು ಮತ್ತು ಹತ್ತಾರು ಸಂಘಟನೆಗಳು ಖಂಡಿಸಿವೆ. ಈ ಕೃತ್ಯವನ್ನು ಯಾರೂ ಬೆಂಬಲಿಸಿಲ್ಲ. ರಾಜ್ಯದ ಅನೇಕ ಪ್ರಜ್ಞಾವಂತ ನಾಗರಿಕರು ಮತ್ತು ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ರಾಜ್ಯದಲ್ಲಿ ಕೋಮು ಸೌಹಾರ್ದತೆಯನ್ನು ಕಾಪಾಡಲು ಕೊಡುಗೆ ನೀಡುವಂತೆ ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ. ದ್ವೇಷ ಮತ್ತು ಹಿಂಸಾಚಾರವನ್ನು ಹರಡುವ ಮೂಲಕ ಕೋಮು ವಾತಾವರಣವನ್ನು ಹಾಳು ಮಾಡಬೇಡಿ ಎಂದು ಮನವಿ ಮಾಡಲಾಗಿದೆ. 

ಉದಯಪುರದಲ್ಲಿ ನಡೆದ ಘಟನೆ ದುರದೃಷ್ಟಕರ ಎಂದು ರಾಜಸ್ಥಾನದ ಮುಖ್ಯ ಖಾಜಿ ಖಾಲಿದ್ ಉಸ್ಮಾನಿ ಬಣ್ಣಿಸಿದ್ದಾರೆ. ಕೇವಲ ಗಡ್ಡ ಬಿಟ್ಟರೆ, ಟೋಪಿ ಹಾಕುವುದರಿಂದ ಮುಸಲ್ಮಾನರಾಗುವುದಿಲ್ಲ, ಇಂತಹ ಘಟನೆ ಅತ್ಯಂತ ಅಸಹ್ಯಕರ. ಇದು ಇಡೀ ರಾಜ್ಯದ ಮೇಲೆ ಪರಿಣಾಮ ಬೀರುತ್ತದೆ. ಇಂತಹ ಘಟನೆಗಳನ್ನು ನಾವು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಮಾನವೀಯತೆಯೇ ದೊಡ್ಡ ವಿಚಾರ. ಇಸ್ಲಾಂ ನಮಗೆ ಇಂತಹ ಕೃತ್ಯವನ್ನು ಮಾಡಲು ಕಲಿಸುವುದಿಲ್ಲ. ಅಂತಹ ಮುಸ್ಲಿಮರನ್ನು ನಾವು ಬಹಿಷ್ಕರಿಸುತ್ತೇವೆ ಎಂದು ಹೇಳಿದರು. ಇಂಥವರು ನಮ್ಮ ಧರ್ಮಕ್ಕೆ ಮಾನಹಾನಿ ಮಾಡುತ್ತಾರೆ ಎಂದೂ ಕಿಡಿ ಕಾರಿದ್ದಾರೆ.

ಇಸ್ಲಾಂ ಶಾಂತಿ ಮತ್ತು ನೆಮ್ಮದಿಯ ಧರ್ಮ, ನಿರ್ದಯಿಯಾಗಿ ಕೊಲೆ ಮಾಡಿದವರಿಗೆ ಶಿಕ್ಷೆಯಾಗಬೇಕು

ಉದಯಪುರದಲ್ಲಿ ಸಂಭವಿಸಿದ ಹತ್ಯೆ ಸಹಿಸಿಕೊಳ್ಳುವಂತಹದ್ದಲ್ಲ. ನಾವು ಇದನ್ನು ಬಲವಾಗಿ ಖಂಡಿಸುತ್ತೇವೆ. ಇಸ್ಲಾಂನಲ್ಲಿ ಇಂತಹ ಘಟನೆಗಳಿಗೆ ಜಾಗವಿಲ್ಲ. ಇಸ್ಲಾಂ ಶಾಂತಿ ಮತ್ತು ನೆಮ್ಮದಿಯ ಧರ್ಮವಾಗಿದೆ ಎಂದು ರೆಹಮಾನ್ ಖಾಸ್ಮಿ ಹೇಳಿದರು. ಇಂತಹ ಘಟನೆಗಳಿಗೆ ಕಾರಣರಾದವರು ಕಿಡಿಗೇಡಿಗಳು ಮತ್ತು ಇಸ್ಲಾಂ ಧರ್ಮವನ್ನು ದೂಷಿಸುವ ಜನರು. ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದ ಅವರು ಶಾಂತಿ ಕಾಪಾಡುವಂತೆ ದೇಶವಾಸಿಗಳಿಗೆ ಮನವಿ ಮಾಡಿದರು.

ಪರಮ ದಯಾಮಯನಾದ ಭಗವಂತನ ಹೆಸರಿನಲ್ಲಿ ಯಾರನ್ನಾದರೂ ಕೊಲ್ಲುವುದು ಇಸ್ಲಾಂನಲ್ಲಿ ಸ್ವೀಕಾರಾರ್ಹವಲ್ಲ

ಮುಸ್ಲಿಮ್ ಕೌನ್ಸಿಲ್ ಸಂಸ್ಥಾನದ ರಾಜ್ಯಾಧ್ಯಕ್ಷ ಯೂನಸ್ ಚೋಪ್ದಾರ್ ಮಾತನಾಡಿ, ಉದಯಪುರ ಘಟನೆ ಖಂಡನೀಯ. ಇಂತಹ ಘಟನೆನ್ನು ಸಹಿಸಲು ಸಾಧ್ಯವೇ ಇಲ್ಲ. ಹಾಗೆ ಮಾಡುವ ಯಾರಾದರೂ ಕಠಿಣ ಶಿಕ್ಷೆಗೆ ಅರ್ಹರು. ಪರಮ ಕರುಣಾಮಯಿ ಭಗವಂತನ ಹೆಸರಿನಲ್ಲಿ ಯಾರೊಬ್ಬರ ಪ್ರಾಣ ತೆಗೆಯುವುದು ಇಸ್ಲಾಂನಲ್ಲಿ ಸ್ವೀಕಾರಾರ್ಹವಲ್ಲ. ಮುಸ್ಲಿಂ ಕೌನ್ಸಿಲ್ ರಾಜ್ಯದ ಸಾಮಾನ್ಯ ಜನರಿಗೆ ಶಾಂತಿ ಮತ್ತು ಸೌಹಾರ್ದತೆಗಾಗಿ ವಿನಂತಿಸಿದೆ. ಇದರೊಂದಿಗೆ ದೇಶದಲ್ಲಿ ಕೋಮು ವಾತಾವರಣ ನಿರಂತರವಾಗಿ ಹದಗೆಡುತ್ತಿದೆ ಎಂದು ಯೂನಸ್ ಚೌಕಿದಾರ್ ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ದೇಶದ ಪ್ರಧಾನಿ ಮೌನ ವಹಿಸಿರುವುದು ಹುದ್ದೆಯ ಘನತೆಗೆ ವಿರುದ್ಧವಾಗಿದೆ ಎಂದೂ ಹೇಳಿದ್ದಾರೆ. 

ರಾಜ್ಯಾದ್ಯಂತ ಸೆಕ್ಷನ್ 144 ಜಾರಿ, ಇಂಟರ್ನೆಟ್ ಬಂದ್

ಉದಯಪುರದ ಧನ್ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಇಬ್ಬರು ವ್ಯಕ್ತಿಗಳು ಟೈಲರ್‌ ಒಬ್ಬರ ಕತ್ತು ಕೊಯ್ದು ಹತ್ಯೆ ನಡೆಸಸಿದ ಘಟನೆಯ ನಂತರ ಮುಖ್ಯ ಕಾರ್ಯದರ್ಶಿ ಉಷಾ ಶರ್ಮಾ ಅವರು ಮಂಗಳವಾರ ಸಂಜೆ ಉನ್ನತ ಮಟ್ಟದ ಸಭೆ ನಡೆಸಿದರು ಮತ್ತು ರಾಜ್ಯಾದ್ಯಂತ ವಿಶೇಷ ನಿಗಾ ವಹಿಸುವಂತೆ ಎಲ್ಲಾ ವಿಭಾಗೀಯ ಆಯುಕ್ತರು, ಪೊಲೀಸ್ ಮಹಾನಿರೀಕ್ಷಕರು ಮತ್ತು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಸೂಚನೆಗಳನ್ನು ನೀಡಿದರು. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ರಾಜ್ಯದಾದ್ಯಂತ ಮುಂದಿನ 24 ಗಂಟೆಗಳ ಕಾಲ ಇಂಟರ್‌ನೆಟ್ ಸ್ಥಗಿತಗೊಳಿಸಿ, ಮುಂದಿನ ಒಂದು ತಿಂಗಳ ಕಾಲ ಎಲ್ಲ ಜಿಲ್ಲೆಗಳಲ್ಲಿ 144ನೇ ಸೆಕ್ಷನ್ ಜಾರಿ, ಎಲ್ಲರ ರಜೆ ರದ್ದುಗೊಳಿಸಿ ಸರ್ಕಾರದ ಪ್ರಕಟಣೆಯಲ್ಲಿ ಮುಖ್ಯ ಕಾರ್ಯದರ್ಶಿ ಪೊಲೀಸ್ ಮತ್ತು ಆಡಳಿತ ಅಧಿಕಾರಿಗಳು, ಶಾಂತಿ ಸಮಿತಿಯ ಸಭೆಯನ್ನು ಆಯೋಜಿಸಲು ಮತ್ತು ಉದಯಪುರ ಜಿಲ್ಲೆಯಲ್ಲಿ ಅಗತ್ಯಕ್ಕೆ ಅನುಗುಣವಾಗಿ ಕರ್ಫ್ಯೂ ವಿಧಿಸಲು ಸೂಚನೆಗಳನ್ನು ನೀಡಲಾಗಿದೆ.

ಏನಾಯ್ತು?:

ಉದಯ್‌ಪುರದ ಧನಮಂಡಿ ಪ್ರದೇಶದಲ್ಲಿರುವ ಕನ್ಹಯ್ಯಾ ಲಾಲ್‌ ಎಂಬಾತನ ಟೈಲರ್‌ ಅಂಗಡಿಗೆ ಆಗಮಿಸಿದ ಮಹಮ್ಮದ್‌ ರಿಯಾಜ್‌ ಅಖ್ತಾರಿ ಮತ್ತು ಮಹಮ್ಮದ್‌ ಬಟ್ಟೆಹೊಲೆಸುವ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಅಂಗಿಯ ಅಳತೆಯನ್ನು ಕನ್ಹಯ್ಯಾ ಲಾಲ್‌ ತೆಗೆದುಕೊಳ್ಳುವ ವೇಳೆ ಏಕಾಏಕಿ ದೊಡ್ಡ ಆಯುಧವೊಂದನ್ನು ಹೊರತೆಗೆದ ರಿಯಾಜ್‌ ಕತ್ತು ಕತ್ತರಿಸಿ ಹಾಕಿದ್ದಾನೆ. ಈ ಇಡೀ ಘಟನಾವಳಿಗಳನ್ನು ಮೊಹಮ್ಮದ್‌ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾನೆ. ಬಳಿಕ ಇಬ್ಬರೂ ಅಲ್ಲಿಂದ ಪರಾರಿಯಾಗಿದ್ದಾರೆ.

ಇದಾದ ಕೆಲ ಹೊತ್ತಿನಲ್ಲೇ ಜಾಲತಾಣದಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ ಧರ್ಮಾಂಧರು, ಇಸ್ಲಾಂಗೆ ಮಾಡಿದ ಅವಮಾನಕ್ಕೆ ಸೇಡು ತೀರಿಸಿಕೊಳ್ಳಲು ವ್ಯಕ್ತಿಯೊಬ್ಬನನ್ನು ಹತ್ಯೆ ಮಾಡಿದ್ದಾಗಿ ಘೋಷಣೆ ಮಾಡಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೂ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ನಮ್ಮ ಕತ್ತಿ ಅವರನ್ನು ಬಲಿ ಪಡೆಯಲಿದೆ ಎಂದಿದ್ದಾರೆ. ಅಲ್ಲದೆ ಪರೋಕ್ಷವಾಗಿ ನೂಪುರ್‌ ಶರ್ಮಾ ಅವರ ಹೆಸರನ್ನೂ ಪ್ರಸ್ತಾಪಿಸಿದ್ದಾರೆ.

ಈ ವಿಡಿಯೋ ಎಲ್ಲೆಡೆ ಹರಿದಾಡಿದ ಬೆನ್ನಲ್ಲೇ ಉದಯ್‌ಪುರ ಸೇರಿದಂತೆ ಎಲ್ಲೆಡೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದ್ದು, ಕೋಮುಗಲಭೆಯ ಭೀತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಮತ್ತು ನೆರೆಯ ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

Latest Videos
Follow Us:
Download App:
  • android
  • ios