Asianet Suvarna News Asianet Suvarna News

ಮೊದಲ ಬಾರಿಗೆ ಠಾಕ್ರೆ ಕುಟುಂಬಕ್ಕೆ ಸಿಎಂ ಹುದ್ದೆ, ಸೋನಿಯಾಗೆ ಧನ್ಯವಾದ ಎಂದ ಉದ್ಧವ್!

ನಾಳೆ, ನವೆಂಬರ್ 28ರಂದು ನೂತನ ಸಿಎಂ ಠಾಕ್ರೆ ಉದ್ಭವ!| ಮೈತ್ರಿ ನಾಯಕನಾಗಿ ಶಿವಸೇನೆ ಮುಖ್ಯಸ್ಥ ಆಯ್ಕೆ| ಮೊದಲ ಬಾರಿಗೆ ಠಾಕ್ರೆ ಕುಟುಂಬಕ್ಕೆ ಸಿಎಂ ಹುದ್ದೆ| 2 ಡಿಸಿಎಂ ಹುದ್ದೆ, ಸಚಿವ ಸ್ಥಾನ ಸಮಾನ ಹಂಚಿಕೆ?

Maharashtra Politics Uddhav Thackeray to take oath as CM on November 28
Author
Bangalore, First Published Nov 27, 2019, 9:06 AM IST

ಮುಂಬೈ[ನ.27]: ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ನೇತೃತ್ವದ ಸರ್ಕಾರ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ, ಮಹಾರಾಷ್ಟ್ರದಲ್ಲಿ ಶಿವಸೇನೆ- ಎನ್‌ಸಿಪಿ- ಕಾಂಗ್ರೆಸ್‌ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಿದ್ದು, ನೂತನ ಸರ್ಕಾರ ರಚಿಸಲು ಸಜ್ಜಾಗಿದೆ. ಮಂಗಳವಾರ ಸುಪ್ರೀಂಕೋರ್ಟ್‌ ತೀರ್ಪು ಪ್ರಕಟಿಸಿದ ತರುವಾಯ ನಡೆದ ದಿಢೀರ್‌ ಬೆಳವಣಿಗೆಯಲ್ಲಿ ಬಿಜೆಪಿ ಅಧಿಕಾರದಿಂದ ಕೆಳಗೆ ಇಳಿದಿದ್ದರೆ, ಉದ್ಧವ್‌ ನೇತೃತ್ವದಲ್ಲಿ ‘ಮಹಾ ವಿಕಾಸ್‌ ಅಘಾಡಿ’ (ಮಹಾ ವಿಕಾಸ ಮೈತ್ರಿಕೂಟ) ಹೆಸರಿನ ಹೊಸ ಮೈತ್ರಿಕೂಟ ಅಸ್ತಿತ್ವಕ್ಕೆ ಬಂದಿದ್ದು, ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ಅವರನ್ನು ರಾತ್ರಿ 9ಕ್ಕೆ ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಿದೆ.

ನವೆಂಬರ್ 27ರಂದು ಮುಂಬೈನ ಶಿವಾಜಿ ಸ್ಟೇಡಿಯಂನಲ್ಲಿ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಉದ್ಧವ್‌ ಠಾಕ್ರೆ ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇತ್ತೀಚಿನವರೆಗೂ ಚುನಾವಣಾ ರಾಜಕೀಯದಿಂದಲೇ ದೂರವಿದ್ದ ಠಾಕ್ರೆ ಕುಟುಂಬವು ಮುಖ್ಯಮಂತ್ರಿಯಂತಹ ಸಾಂವಿಧಾನಿಕ ಹುದ್ದೆ ಹೊಂದುತ್ತಿರುವುದು ಇದೇ ಮೊದಲು. ಇನ್ನು ಉಪಮುಖ್ಯಮಂತ್ರಿಯ 2 ಹುದ್ದೆಗಳು ಸೃಷ್ಟಿಯಾಗಲಿವೆ. ಎನ್‌ಸಿಪಿಯ ಜಯಂತ ಪಾಟೀಲ್‌ ಹಾಗೂ ಕಾಂಗ್ರೆಸ್‌ನ ಬಾಳಾಸಾಹೇಬ್‌ ಥೋರಟ್‌ ಅವರು ಉಪಮುಖ್ಯಮಂತ್ರಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಹಾರಾಷ್ಟ್ರ ರಾಜಕೀಯದಲ್ಲಿ ಕ್ಷಿಪ್ರ ಕ್ರಾಂತಿ: ಒಂದೇ ಕ್ಲಿಕ್‌ನಲ್ಲಿ ಎಲ್ಲಾ ಸುದ್ದಿಗಳು

ನಾಟಕೀಯ ವಿದ್ಯಮಾನ:

ಫಡ್ನವೀಸ್‌ ಹಾಗೂ ಉಪಮುಖ್ಯಮಂತ್ರಿ ಸ್ಥಾನಕ್ಕೆ ಎನ್‌ಸಿಪಿ ಬಂಡಾಯ ನಾಯಕ ಅಜಿತ್‌ ಪವಾರ್‌ ರಾಜೀನಾಮೆ ನೀಡಿದ ಬೆನ್ನಲ್ಲೇ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಮೈತ್ರಿಕೂಟದಲ್ಲಿ ಸಂಭ್ರಮ ಮನೆ ಮಾಡಿತು. ಸಂಜೆ ಟ್ರೈಡೆಂಟ್‌ ಹೋಟೆಲ್‌ನಲ್ಲಿ ಸಭೆ ಸೇರಿದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಶಾಸಕರು, ‘ಮಹಾರಾಷ್ಟ್ರ ವಿಕಾಸ್‌ ಅಘಾಡಿ’ ಎಂಬ ಮೈತ್ರಿಕೂಟ ರಚನೆಯ ಅಧಿಕೃತ ಗೊತ್ತುವಳಿ ಸ್ವೀಕರಿಸಿದರು. ಈ ಕೂಟದ ಮುಖ್ಯಸ್ಥರನ್ನಾಗಿ ಉದ್ಧವ್‌ ಠಾಕ್ರೆ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದರು. ಆಡಳಿತದ ಮಾರ್ಗಸೂಚಿಯಾಗಲಿರುವ ‘ಸಾಮಾನ್ಯ ಕನಿಷ್ಠ ಕಾರ್ಯಸೂಚಿ’ ಕುರಿತು ಈ ವೇಳೆ ಒಮ್ಮತಕ್ಕೆ ಬರಲಾಯಿತು. ಸಭೆಯಲ್ಲಿ ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಹಾಗೂ ಉದ್ಧವ್‌ ಠಾಕ್ರೆ ಅವರಿಗೆ ಭಾರೀ ಅದ್ಧೂರಿ ಸ್ವಾಗತ ದೊರಕಿತು.

ಸೋನಿಯಾಗೆ ಉದ್ಧವ್‌ ಧನ್ಯವಾದ:

ತಮಗೆ ಸಂದ ಗೌರವಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದ ಉದ್ಧವ್‌ ಠಾಕ್ರೆ, ‘ಸರ್ಕಾರ ರಚನೆಗೆ ಕಾರಣರಾದ ಸೋನಿಯಾ ಗಾಂಧಿ ಹಾಗೂ ಇತರರಿಗೆ ಧನ್ಯವಾದಗಳು. ನಾನು ಈ ರಾಜ್ಯದ ನೇತೃತ್ವ ವಹಿಸುವೆ ಎಂದು ಯಾವತ್ತೂ ಎಣಿಸಿರಲಿಲ್ಲ. ಈಗ ಎಲ್ಲರೂ ಒಂದಾಗಿ ದೇಶಕ್ಕೆ ಹೊಸ ದಿಶೆ ನೀಡುತ್ತಿದ್ದೇವೆ’ ಎಂದರು. ಇದೇ ವೇಳೆ, ‘ದೇವೇಂದ್ರ ಫಡ್ನವೀಸ್‌ ಮಾಡಿದ ಎಲ್ಲ ಆರೋಪಕ್ಕೆ ಉತ್ತರ ಕೊಡುವೆ. ನಮ್ಮ ಸಹಾಯದಿಂದ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ, ನಮಗೇ ಮೋಸ ಮಾಡಿದೆ. ನಾನು ಯಾವುದಕ್ಕೂ ಹೆದರಲ್ಲ. ಬೇಕಾದಾಗ ಅಪ್ಪಿಕೊಂಡು ಈಗ ನಮ್ಮನ್ನು ತೊರೆದಿದೆ ಬಿಜೆಪಿ. ಸುಳ್ಳು ಹೇಳುವುದು ನಿಜವಾದ ಹಿಂದುತ್ವವಲ್ಲ’ ಎಂದರು.

ಬಂಡೆದ್ದ ಅಜಿತ್‌ ಮನವೊಲಿಸಿದ್ದು ಪತಿ-ಪತ್ನಿ!

ಇಂದು ಅಧಿವೇಶನ:

‘ಬುಧವಾರವೇ ನೂತನ ಶಾಸಕರ ಪ್ರಮಾಣವಚನ ನಡೆಯಬೇಕು’ ಎಂಬ ಸುಪ್ರೀಂ ಕೋರ್ಟ್‌ ಆದೇಶದ ಬಳಿಕ ರಾಜ್ಯಪಾಲ ಭಗತ್‌ ಸಿಂಗ್‌ ಕೋಶಿಯಾರಿ ತಮ್ಮ ಪ್ರಕ್ರಿಯೆ ಆರಂಭಿಸಿ ಬುಧವಾರ ಬೆಳಗ್ಗೆ 8 ಗಂಟೆಗೆ ವಿಧಾನಸಭೆ ಅಧಿವೇಶನ ಕರೆದಿದ್ದಾರೆ. ಬಿಜೆಪಿಯ ಹಿರಿಯ ಶಾಸಕ ಕಾಳೀದಾಸ್‌ ಕೊಲಂಬಕರ್‌ ಅವರನ್ನು ಹಂಗಾಮಿ ಸಭಾಧ್ಯಕ್ಷ ಎಂದು ನೇಮಿಸಿದ್ದಾರೆ.

ದೊಡ್ಡಣ್ಣನ ಭೇಟಿಗೆ ದೆಹಲಿಗೆ ತೆರಳುವೆ, ಪ್ರಧಾನಿ ಮೋದಿ ಕುರಿತು ಪರೋಕ್ಷ ಪ್ರಸ್ತಾಪ

ಮಂಗಳವಾರ ಮಿತ್ರಪಕ್ಷಗಳ ಸಭೆಯಲ್ಲಿ ಮಾತನಾಡಿದ ಉದ್ಧವ್‌ ಠಾಕ್ರೆ, ನೂತನ ಸರ್ಕಾರ ಯಾವುದೇ ಕಾರಣಕ್ಕೂ ದ್ವೇಷದ ರಾಜಕೀಯ ಮಾಡುವುದಿಲ್ಲ. ನಾನು ಸರ್ಕಾರ ರಚನೆಯಾದ ಬಳಿಕ ದೆಹಲಿಗೆ ತೆರಳಿ ದೊಡ್ಡಣ್ಣನ ಭೇಟಿ ಮಾಡುವೆ ಎಂದು ಹೆಸರು ಹೇಳದೆಯೇ ಪ್ರಧಾನಿ ಮೋದಿ ಅವರ ಕುರಿತು ಪ್ರಸ್ತಾಪಿಸಿದರು. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ವೇಳೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಉದ್ಧವ್‌ ಠಾಕ್ರೆ ಅವರನ್ನು ತಮ್ಮ ಕಿರಿಯ ಸೋದರ ಎಂದು ಬಣ್ಣಿಸಿದ್ದರು.

ದೆಹಲಿ ಚಾಣಕ್ಯನ ಮಣಿಸಿದ ’ಮಹಾ’ ಚಾಣಾಕ್ಷ ಪವಾರ್‌!

ಸೋನಿಯಾಗೆ ಧನ್ಯವಾದಗಳು

ನಾನು ಈ ರಾಜ್ಯದ ನೇತೃತ್ವ ವಹಿಸುವೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಸರ್ಕಾರ ರಚನೆಗೆ ಕಾರಣರಾದ ಸೋನಿಯಾ ಗಾಂಧಿ ಹಾಗೂ ಇತರರಿಗೆ ಧನ್ಯವಾದಗಳು. ನಮ್ಮ ಸಹಾಯದಿಂದ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿ, ನಮಗೇ ಮೋಸ ಮಾಡಿದೆ. ಫಡ್ನವೀಸ್‌ ಮಾಡಿದ ಎಲ್ಲ ಆರೋಪಗಳಿಗೆ ತಕ್ಕ ಉತ್ತರ ನೀಡುವೆ.

- ಉದ್ಧವ್‌ ಠಾಕ್ರೆ, ಭಾವಿ ಮುಖ್ಯಮಂತ್ರಿ

ಮುಂದಿನ ಪ್ರಕ್ರಿಯೆ

- ಸರ್ಕಾರ ರಚನೆಗಾಗಿ ರಾಜ್ಯಪಾಲರ ಬಳಿ ಶಿವಸೇನೆ, ಎನ್‌ಸಿಪಿ ಕಾಂಗ್ರೆಸ್‌ ಹಕ್ಕು ಮಂಡನೆ

- ಬುಧವಾರ ವಿಧಾನಸಭೆಯ ವಿಶೇಷ ಅಧಿವೇಶನ, ನೂತನ ಶಾಸಕರ ಪ್ರಮಾಣ ವಚನ

- ಡಿ.1ರಂದು ಮುಂಬೈನ ಶಿವಾಜಿ ಪಾರ್ಕ್ನಲ್ಲಿ ನೂತನ ಸರ್ಕಾರದ ಪ್ರಮಾಣ ವಚನ ಸ್ವೀಕಾರ

- ಸ್ಪೀಕರ್‌ ಸೂಚಿಸಿದ ದಿನದಂದು ರಾಜ್ಯ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲಿರುವ ಸಿಎಂ

Follow Us:
Download App:
  • android
  • ios