Asianet Suvarna News Asianet Suvarna News

ಮಕ್ಕಳ ಕಳ್ಳನೆಂದು ಅಟ್ಟಾಡಿಸಿ ಹತ್ಯೆ, ನಾಲ್ವರು ರೈತರ ಸ್ಥಿತಿ ಗಂಭೀರ!

ಮಕ್ಕಳ ಕಳ್ಳರೆಂದು ಸಮೂಹ ದಾಳಿ| 25 ಕಿ.ಮೀ ಅಟ್ಟಾಡಿಸಿಕೊಂಡು ಬಂದು ದಾಳಿ| ಓರ್ವ ಬಲಿ, ನಾಲ್ವರು ರೈತರ ಸ್ಥಿತಿ ಗಂಭೀರ

Madhya Pradesh 1 Dead As 6 Farmers Attacked Over Child Lifting Rumours
Author
Bangalore, First Published Feb 6, 2020, 11:39 AM IST

ಭೋಪಾಲ್‌[ಫೆ.06]: ಕೊಟ್ಟ ಹಣ ಮರಳಿ ಕೇಳಲು ಬಂದ ರೈತರ ಮೇಲೆ ಗುತ್ತಿಗೆದಾರನ ಗುಂಪೊಂದು ಅಟ್ಟಾಡಿಸಿಕೊಂಡು ಬಂದು ದಾಳಿ ನಡೆಸಿದ್ದೂ ಅಲ್ಲದೆ, ಬಳಿಕ ಅವರನ್ನು ಮಕ್ಕಳ ಕಳ್ಳರೆಂದು ಸುಳ್ಳು ಸುದ್ದಿ ಹಬ್ಬಿಸಿ ಮತ್ತೊಂದು ಗ್ರಾಮಸ್ಥರ ಮೂಲಕ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಮಧ್ಯಪ್ರದೇಶದಲ್ಲಿ ಬುಧವಾರ ನಡೆದಿದೆ. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ 6 ರೈತರ ಪೈಕಿ ಒಬ್ಬ ಸಾವನ್ನಪ್ಪಿದ್ದು, ಇನ್ನು ನಾಲ್ವರ ಸ್ಥಿತಿ ಗಂಭೀರವಾಗಿದೆ.

ಪ್ರಕರಣ ಹಿನ್ನೆಲೆ: ಸಂತ್ರಸ್ತ 6 ರೈತರು, ಧರ್‌ ಜಿಲ್ಲೆಯ ಖಿರಾಕಿಯಾ ಎಂಬ ಗ್ರಾಮದ ಗುತ್ತಿಗೆದಾರನಿಗೆ ಕಾರ್ಮಿಕರ ಪೂರೈಕೆ ಮಾಡಲು 2.5 ಲಕ್ಷ ರು. ನೀಡಿದ್ದರು. ಆದರೆ ಆತ ಕಾರ್ಮಿಕರನ್ನು ಪೂರೈಕೆ ಮಾಡಿರಲಿಲ್ಲ. ಬಳಿಕ ಈ ಬಗ್ಗೆ ಗದ್ದಲ ಉಂಟಾಗಿ, ಗುತ್ತಿಗೆದಾರ ಕೇವಲ 1 ಲಕ್ಷ ರು. ಮರಳಿಸಿದ್ದ. ಉಳಿದ ಹಣ ಪಡೆಯಲು ಬುಧವಾರ ಗ್ರಾಮಕ್ಕೆ ಬರುವಂತೆ ಸೂಚಿಸಿದ್ದ. ಈ ಹಿನ್ನೆಲೆಯಲ್ಲಿ ಹಣ ನೀಡಿದ್ದ 6 ರೈತರು 2 ಕಾರುಗಳಲ್ಲಿ ಖಿರಾಕಿಯಾ ಗ್ರಾಮಕ್ಕೆ ಬಂದಿದ್ದರು.

ಆದರೆ ಈ ವೇಳೆ ಮೊದಲೇ ಜನರನ್ನು ಸೇರಿಸಿದ್ದ ಗುತ್ತಿಗೆದಾರ, ಹಣ ಪಡೆಯಲು ಬಂದವರ ಮೇಲೆ ನೂರಾರು ಜನರ ಮೂಲಕ ದಾಳಿ ನಡೆಸಿದ್ದಾನೆ. ಈ ವೇಳೆ ರೈತರು ಕಾರಿನಲ್ಲಿ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಆದರೆ ಗುತ್ತಿಗೆದಾರನ ಕಡೆಯವರು ಬೆನ್ನು ಬಿಡದೆ ತಾವೂ ಕೂಡಾ ಸುಮಾರು 25 ಕಿ.ಮೀ ದೂರದವರೆಗೆ ಅವರನ್ನು ಓಡಿಸಿಕೊಂಡು ಹೋಗಿದ್ದಾರೆ. ಈ ನಡುವೆ ಪರಾರಿಯಾಗುತ್ತಿದ್ದವರ ಕಾರು, ಜುನಾಪಾನಿ ಎಂಬ ಗ್ರಾಮದ ಬಳಿ ಟ್ರಾಫಿಕ್‌ ಜಾಮ್‌ನಲ್ಲಿ ಸಿಕ್ಕಿಹಾಕಿಕೊಂಡಿದೆ. ಆಗ, ಕಾರಿನಲ್ಲಿ ಇದ್ದವರು ಮಕ್ಕಳ ಕಳ್ಳರು ಎಂದು ಗುತ್ತಿಗೆದಾರ ಸುಳ್ಳು ಸುದ್ದಿ ಹಬ್ಬಿಸಿದ್ದಾನೆ.

ಈ ಮಾತು ನಂಬಿದ ಜುನಾಪಾನಿ ಗ್ರಾಮಸ್ಥರು ಕೂಡಾ ಕಾರಿನಲ್ಲಿದ್ದವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ವೇಳೆ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಉಳಿದ 5 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪೈಕಿ 4 ಜನರ ಸ್ಥಿತಿ ಗಂಭೀರವಾಗಿದೆ.

Follow Us:
Download App:
  • android
  • ios