ಹೈದರಾಬಾದ್[ನ.03]: ತೆಲಂಗಾಣದಲ್ಲಿ  26 ವರ್ಷದ ಪಶುವೈದ್ಯೆ ಮೇಲಿನ ಸಾಮೂಹಿಕ ಅತ್ಯಾಚಾರ ಹಾಗೂ ಕೊಲೆ ಪ್ರಕರಣಇಡೀ ದೇಶವ್ನನೇ ಬೆಚ್ಚಿ ಬೀಳಿಸಿದೆ. ಈ ಘೋರ ಕೃತ್ಯ ಖಂಡಿಸಿ ದೇಶಾದ್ಯಂತ ಜನರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಭಾರತ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಮಾತು ಹಲವರದ್ದಾಗಿದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಮಹಿಳೆಯರ ಸುರಕ್ಷತೆಗೆ ಯಾವ ಕ್ರಮ ಕೈಗೊಳ್ಳಬಹುದು ಎಂಬ ಕುರಿತಾಗಿಯೂ ಚರ್ಚೆಗಳು ನಡೆಯುತ್ತಿವೆ. ಸದ್ಯ ಹೈದರಾಬಾದ್ ರೇಪ್ ಪ್ರಕರಣ ಖಂಡಿಸಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡ ಮಹಿಳೆ ಈ ಕುರಿತಾಗಿ ನಿಡಿರುವ ಉತ್ತರ ಫುಲ್ ವೈರಲ್ ಆಗಿದೆ.

ಹೌದು ಪ್ರತಿ ಬಾರಿ ಇಂತಹ ಅತ್ಯಾಚಾರ ಪ್ರಕರಣಗಳು ಬೆಳಕಿಗೆ ಬಂದಾಗ ಮಹಿಳೆಯರ ಸುರಕ್ಷತೆಗಾಗಿ ಪೊಲೀಸ್ ಇಲಾಖೆ ಹಾಗೂ ಸರ್ಕಾರದ ವತಿಯಿಂದ ಕೆಲ ಪ್ರಕಟನೆಗಳನ್ನು ಹೊರಡಿಸಲಾಗುತ್ತದೆ. ಇವುಗಳಲ್ಲಿ ತಮ್ಮನ್ನು ತಾವು ಕಾಪಾಡುವುದು ಹೇಗೆ ಎಂಬ ಕೆಲ ಟಿಪ್ಸ್ ಕೂಡಾ ನೀಡಿರುತ್ತಾರೆ. ಅತ್ತ ರಾಜಕಾರಣಿಗಳು ಹಾಗೂ ಕೆಲ ಗಣ್ಯರು ಮಹಿಳೆಯರಿಗೆ ರಾತ್ರಿ ಪಾಳಿ ಕೆಲಸ ನೀಡಬಾರದೆನ್ನುತ್ತಾರೆ. ಒಟ್ಟಾರೆಯಾಗಿ ಮಹಿಳೆಯರು ಜಕತ್ತೊಲಾಗುತ್ತಿದ್ದಂತೆಯೇ ಮನೆ ಸೇರಬೇಕೆಂಬುವುದು ಬಹುತೇಕರ ಮಾತು.

ಆದರೆ ಈ ಸಲಹೆ ನಿಜಕ್ಕೂ ಮಹಿಳೆಯರನ್ನು ಕಾಪಾಡುತ್ತಾ? ಇದು ಸರಿನಾ? ಎಂಬ ಪ್ರಶ್ನೆಯೂ ಉದ್ಭಿವಿಸುತ್ತದೆ. ಯಾಕೆಂದರೆ ಕತ್ತಲಾಗುವುದರೊಳಗೆ ಮಹಿಳೆ ಮನೆ ಸೇರಿದರೂ ಅತ್ಯಾಚಾರ ಪ್ರಕರಣಗಳು ನಡೆಯುತ್ತವೆ. ಹೀಗಿರುವಾಗ ಹೈದರಾಬಾದ್ ವೈದ್ಯೆ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಮಹಿಳೆಯೊಬ್ಬರು ಕೊಟ್ಟಿರುವ ಸಲಹೆ ಸೋಶಿಯಲ್ ಮೀಡಿಯಾದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. 

ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದ ಅವರು 'ಹೆಣ್ಮಕ್ಕಳಿಗೆ ಕತ್ತಲಾಗುವ ಮೊದಲು ಮನೆ ಸೇರಿ ಎಂದು ಹೇಳುವ ಬದಲು, ಗಂಡು ಮಕ್ಕಳಿಗೆ ಸಂಜೆ 7 ಗಂಟೆಯೊಳಗೆ ಮನೆ ಸೇರಿ ಎನ್ನುವುದು ಚೆನ್ನಾಗಿರುತ್ತದೆ. ಹೀಗಿರುವಾಗ ಮಹಿಳೆಯರು ಸೇಫ್ ಆಗಿರುತ್ತಾರೆ ಹಾಗೂ ರಾತ್ರಿ ವೇಳೆ ಯಾವುದೇ ಅಡ್ಡಿ ಆತಂಕವಿಲ್ಲದೇ ಅವರು ಪ್ರಯಾಣಿಸಬಹುದು. ನನ್ನ ಸಮಸ್ಯೆಗೆ ಮೂಲ ಕಾರಣ 'ನೀನು'. ಆದುದರಿಂದ ನೀನು ಮನೆಯಲ್ಲಿರು. ಹೀಗಾದಲ್ಲಿ ನಮ್ಮ ಸುರಕ್ಷತೆಗಾಗಿ ಯಾವುದೇ ಪೊಲೀಸ್ ಅಧಿಕಾರಿ ಅಥವಾ ಸಹೋದರನನ್ನು ನಾವು ಅವಲಂಭಿಸಬೇಕಾಗಿಲ್ಲ' ಎಂದಿದ್ದಾರೆ.