ನವದೆಹಲಿ(ಡಿ.07): ಹಾಸ್ಟೆಲ್ ಶುಲ್ಕ ವಿರೋಧಿಸಿ ಜೆಎನ್'ಯು ವಿದ್ಯಾರ್ಥಿಗಳ ಪ್ರತಿಭಟನೆ ಮುಂದುವರೆದಿದ್ದು, ಎಡಪಕ್ಷಗಳ ವಿದ್ಯಾರ್ಥಿ ಸಂಘಟನೆಗಳ ಹಠ ವಿದ್ಯಾರ್ಥಿಗಳ ಭವಿಷ್ಯವನ್ನು ಮಂಕಾಗಿಸಿವೆ.

ಈ ಕುರಿತು ಜೆಎನ್'ಯು ಹಳೆಯ ವಿದ್ಯಾರ್ಥಿ ಹಾಗೂ ಜೆಎನ್'ಯು ವಿದ್ಯಾರ್ಥಿ ಸಂಘಟನೆಯ ಮಾಜಿ ಅಧ್ಯಕ್ಷ ಸಂದೀಪ್ ಮಹಾಪಾತ್ರ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದು, ನಿರಂತರ ಪ್ರತಿಭಟನೆಗಳಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯ ಮಂಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

JNUನಲ್ಲಿ ಭುಗಿಲೆದ್ದ ಪ್ರತಿಭಟನೆ; ವಿದ್ಯಾರ್ಥಿಗಳು, ಪೊಲೀಸರ ನಡುವೆ ಘರ್ಷಣೆ

ದೇಶದ ಶೈಕ್ಷಣಿಕ ಸಂಸ್ಥೆಗಳ ಮೇಲೆ ಆರ್‌ಎಸ್‌ಎಸ್‌ ಪ್ರಭಾವ ಬೀರುತ್ತಿದೆ ಎಂಬುದು ಎಡಪಕ್ಷಗಳ ಹಾಗೂ ಅವರ ಬೆಂಬಲಿಗರ ಸವಕಲು ಆರೋಪ ಎಂಬುದು ಸಂದೀಪ್ ಮಹಾಪಾತ್ರ ಅಭಿಮತ.

ಶಿಕ್ಷಣ ಸಂಸ್ಥೆಗಳ ಮೇಲೆ ಆರ್‌ಎಸ್ಎಸ್ ಪ್ರಭಾವ ಒತ್ತಟ್ಟಿಗಿರಲಿ, ಎಡಪಕ್ಷಗಳ ಬೆಂಬಲಿತ ವಿದ್ಯಾರ್ಥಿ ಸಂಘಟನೆಗಳ ಹುಚ್ಚಾಟಕ್ಕೆ ಜೆಎನ್'ಯು ನಲುಗಿರುವುದನ್ನು ತುಂಬ ಸುಲಭವಾಗಿ ಗುರಿತಿಸಬಹುದು ಎನ್ನುತ್ತಾರೆ ಮಹಾಪಾತ್ರ.

ವಿದ್ಯಾರ್ಥಿಗಳ ಹಕ್ಕುಗಳಿಗಾಗಿ ಹೋರಾಡುತ್ತಿರುವುದಾಗಿ ಈ ಸಂಘಟನೆಗಳು ಪೋಸು ನೀಡುತ್ತವೆ. ಅಸಲಿಗೆ ಪ್ರತಿಭಟನೆಗಳ ಹೆಸರಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯವನ್ನೇ ಈ ಸಂಘಟನೆಗಳು ನಾಶ ಮಾಡುತ್ತಿವೆ ಎಂದು ಮಹಾಪಾತ್ರ ಆರೋಪಿಸಿದ್ದಾರೆ.

ಅನ್ಯಾಯದ ವಿರುದ್ಧ ಪ್ರತಿಭಟನೆ ಮಾಡುವುದು ಯಾವುದೇ ವ್ಯಕ್ತಿಯ ಸಾಂವಿಧಾನಿಕ ಹಕ್ಕು ಹೌದಾದರೂ, ಅದನ್ನೇ ಬಂಡವಾಳ ಮಾಡಿಕೊಂಡು ರಾಜಕೀಯ ಪಕ್ಷಗಳು ಮತ್ತು ಅದರ ವಿದ್ಯಾರ್ಥಿ ಸಂಘಟನೆಗಳು ವಿದ್ಯಾರ್ಥಿಗಳ ಜೀವನದೊಂದಿಗೆ ಚೆಲ್ಲಾಟವಾಡುತ್ತಿವೆ ಎಂದು ಮಹಾಪಾತ್ರ ಹರಿಹಾಯ್ದಿದ್ದಾರೆ.

ವಿದ್ಯಾರ್ಥಿ ಶಕ್ತಿಗೆ ಮಣಿದ ಜೆಎನ್‌ಯು: ಶುಲ್ಕ ಪ್ರಮಾಣ ಕಡಿತಕ್ಕೆ ಒಪ್ಪಿಗೆ!

ಪ್ರತಿಭಟನೆ ಹೆಸರಲ್ಲಿ ದೇಶವನ್ನು ಒಡೆಯುವ ಮಾತುಗಳನ್ನಾಡುವ ಯುವ ವಿದ್ಯಾರ್ಥಿ ನಾಯಕರನ್ನು ನಾವು ಇದೇ ಕ್ಯಾಂಪಸ್'ನಲ್ಲಿ ನೋಡಿದ್ದೇವೆ. ಶಿಕ್ಷಕರನ್ನು ಘೇರಾವ್ ಹಾಕುವ, ಹಾಸ್ಟೆಲ್ ವಾರ್ಡರ್ನ್'ಗಳ ಮೇಲೆ ಹಲ್ಲೆ ನಡೆಸುವ ಆಘಾತಕಾರಿ ಬೆಳವಣಿಗೆಗಳು ನಡೆಯುತ್ತಿವೆ ಎಂದು ಮಹಾಪಾತ್ರ ಖೇದ ವ್ಯಕ್ತಪಡಿಸಿದ್ದಾರೆ.

ಈ ಸಂಘಟನೆಗಳಿಗೆ ವಿವಿಯಲ್ಲೇ ಇರುವ ಎಡಪಕ್ಷಗಳ ಸಿದ್ಧಾಂತ ಬೆಂಬಲಿಸುವ ಶಿಕ್ಷಕರ ಕುಮ್ಮಕ್ಕು ಇರುವುದು ದಿಟ. ಇಂತಹ ಚಟುವಟಿಕೆಗಳನ್ನು ಈ ಶಿಕ್ಷಕರು ಮೌನವಾಗಿಯೇ ಬೆಂಬಲಿಸುತ್ತಾರೆ ಎಂಬುದು ಮಹಾಪಾತ್ರ ಅವರ ಆರೋಪ.

ಜೆಎನ್‌ಯುನಲ್ಲಿ ಮತ್ತೆ ಆಜಾದಿ ಘೋಷಣೆ?

ದುರ್ಬಲ ಸಮುದಾಯಗಳ ವಿದ್ಯಾರ್ಥಿಗಳ ಹಕ್ಕುಗಳ ರಕ್ಷಣೆಗಾಗಿ ನಮ್ಮ ಹೋರಾಟ ಎಂಬುದು ಈ ಸಂಘಟನೆಗಳು ನೀಡುವ ಸಬೂಬು. ಅಸಲಿಗೆ ಇವರ ಆಡೋಟೋಪಕ್ಕೆ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಭವಿಷ್ಯವೇ ಮಂಕಾಗುತ್ತಿದೆ ಎಂದು ಮಹಾಪಾತ್ರ ಹರಿಹಾಯ್ದಿದ್ದಾರೆ.

ಎಡಪಕ್ಷಗಳು ಆರೋಪಿಸುವಂತೆ ಜೆಎನ್'ಯುವಿನಲ್ಲಿ ಆರ್‌ಎಸ್‌ಎಸ್‌ ಹಸ್ತಕ್ಷೇಪ ಎಳ್ಳಷ್ಟೂ ಇಲ್ಲ. ಆರ್‌ಎಸ್‌ಎಸ್‌ ದೇಶಾದ್ಯಂತ ಶೈಕ್ಷಣಿಕ ಸಂಸ್ಥೆಗಳನ್ನು ನಡೆಸುತ್ತಿದ್ದು, ಸರ್ಕಾರಿ ಶಿಕ್ಷಣ ಸಂಸ್ಥೆಗಳ ಮೇಲೆ ಪ್ರಭಾವ ಬೀರುವ ಅವಶ್ಯಕತೆ ಅದಕ್ಕಿಲ್ಲ. ವಿವಿಯಲ್ಲಿ ಇರುವ ಬಲಪಂಥೀಯ ವಿದ್ಯಾರ್ಥಿ ಸಂಘಟನೆಗಳು ಸ್ವತಂತ್ರ್ಯವಾಗಿ ಕಾರ್ಯನಿರ್ವಹಿಸುತ್ತವೆ ಎಂಬುದಕ್ಕೆ ನಾನೇ ಸಾಕ್ಷಿ ಎನ್ನುತ್ತಾರೆ ಸಂದೀಪ್ ಮಹಾಪಾತ್ರ.

ಜೆಎನ್‌ಯು ಪ್ರತಿಭಟನೆ ಇನ್ನೂ ಏಕೆ ನಿಂತಿಲ್ಲ? ಕಾರಣವೇನು?

ಒಟ್ಟಿನಲ್ಲಿ ಶಿಕ್ಷಣದ ಮೂಲಕ ಭವಿಷ್ಯ ಅರಸಬೇಕಾದ ವಿದ್ಯಾರ್ಥಿಗಳು ಬೇಡವಾದ ಪ್ರತಿಭಟನೆಗಳ ಸುಳಿಯಲ್ಲಿ ಸಿಕ್ಕು ಭವಿಷ್ಯವನ್ನು ಅಪಾಯಕ್ಕೆ ದೂಡಿಕೊಂಡಿದ್ದಾರೆ ಎಂಬುದು ಸಂದೀಪ್ ಮಹಾಪಾತ್ರ ವಾದವಾಗಿದೆ.