ಕೆಲಸದಿಂದ ವಜಾ: ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಐಟಿ ಉದ್ಯೋಗಿಗಳಿಗೆ ಸಂಕಷ್ಟ
ಆರ್ಥಿಕ ಹೊಡೆತವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಲು ಯತ್ನಿಸುತ್ತಿರುವುದರಿಂದ ಲಕ್ಷಾಂತರ ಜನ ಜಗತ್ತಿನಾದ್ಯಂತ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ಅದೇ ರೀತಿ ಈಗ ಅಮೆರಿಕಾದಲ್ಲಿರುವ ಐಟಿ ಉದ್ಯೋಗಿಗಳು ಕೂಡ ಸಂಕಷ್ಟಕ್ಕೀಡಾಗಿದ್ದಾರೆ.
ನ್ಯೂಯಾರ್ಕ್: ಇಡೀ ಜಗತ್ತೇ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದು, ಆರ್ಥಿಕ ಹೊಡೆತದಿಂದ ಪಾರಾಗಲು ಜಗತ್ತಿನಾದ್ಯಂತ ಹಲವು ಸಂಸ್ಥೆಗಳು ಸಾವಿರಾರು ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿ ಮನೆಗೆ ಕಳುಹಿಸುತ್ತಿವೆ. ಸಾಮಾಜಿಕ ಜಾಲತಾಣಗಳಾದ ಗೂಗಲ್, ಫೇಸ್‌ಬುಕ್, ಟ್ವಿಟ್ಟರ್, ಶೇರ್ ಚಾಟ್, ಆನ್‌ಲೈನ್ ಮಾರುಕಟ್ಟೆ ದೈತ್ಯ ಅಮೇಜಾನ್, ಹಾಗೆಯೇ ಐಟಿ ಸಂಸ್ಥೆ ಮೈಕ್ರೋಸಾಫ್ಟ್, ಆಹಾರ ಪೂರೈಕಾ ಸಂಸ್ಥೆ ಸ್ವಿಗ್ಗಿ ಹೀಗೆ ಬಹತೇಕ ಎಲ್ಲಾ ಸಂಸ್ಥೆಗಳು ತಮ್ಮ ಉದ್ಯೋಗಿಗಳ ಸಂಖ್ಯೆಯನ್ನು ಕಡಿಮೆ ಮಾಡಿ ಆರ್ಥಿಕ ಹೊಡೆತವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳಲು ಯತ್ನಿಸುತ್ತಿರುವುದರಿಂದ ಲಕ್ಷಾಂತರ ಜನ ಜಗತ್ತಿನಾದ್ಯಂತ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದಾರೆ. ಅದೇ ರೀತಿ ಈಗ ಅಮೆರಿಕಾದಲ್ಲಿರುವ ಐಟಿ ಉದ್ಯೋಗಿಗಳು ಕೂಡ ಸಂಕಷ್ಟಕ್ಕೀಡಾಗಿದ್ದಾರೆ.
ಅಮೆರಿಕಾದಲ್ಲಿ ಲಕ್ಷಾಂತರ ಸಂಖ್ಯೆಯ ಭಾರತೀಯರು ನೆಲೆಸಿದ್ದಾರೆ. ಅನೇಕರು ಅಲ್ಲಿನ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಈಗ ಜಾಗತಿಕವಾಗಿ ಸಂಸ್ಥೆಗಳು ಉದ್ಯೋಗ ಕಡಿತ ಮಾಡುತ್ತಿರುವುದರಿಂದ ಅಲ್ಲಿ ನೆಲೆಸಿರುವ ಸಾವಿರಕ್ಕೂ ಹೆಚ್ಚು ಐಟಿ ಉದ್ಯೋಗಿಗಳಿಗೆ ಸಂಕಷ್ಟ ಎದುರಾಗಿದೆ. ಹೀಗಾಗಿ ಅಲ್ಲೇ ಉಳಿಯುವುದಕ್ಕಾಗಿ ಐಟಿ ಉದ್ಯೋಗಿಗಳು ಹೊಸ ಕೆಲಸ ಹುಡುಕಲು ಹೆಣಗಾಡುತ್ತಿದ್ದಾರೆ.
ಮೈಕ್ರೋಸಾಫ್ಟ್ನಲ್ಲಿ 21 ವರ್ಷ ಕೆಲಸ ಮಾಡಿದ್ದ ಉದ್ಯೋಗಿಯ ವಜಾ, ಭಾವನಾತ್ಮಕ ಪತ್ರ ವೈರಲ್
ಅಮೆರಿಕಾದ ವಾಷಿಂಗ್ಟನ್ ಪೋಸ್ಟ್ ಪ್ರಕಾರ, ಕಳೆದ ವರ್ಷ ನವೆಂಬರ್‌ನಿಂದ ಇಲ್ಲಿಯವರೆಗೆ ಸುಮಾರು 200,000 ಐಟಿ ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಇದರಲ್ಲಿ ಗೂಗಲ್ (Google), ಮೈಕ್ರೋಸಾಫ್ಟ್ ( Microsoft), ಫೇಸ್‌ಬುಕ್ ( Amazon) ಮತ್ತು ಅಮೆಜಾನ್‌ನಂತಹ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಸೇರಿದ್ದಾರೆ. ಕೆಲವು ಸಂಸ್ಥೆಗಳ ಒಳಗೆ ಕೆಲಸ ಮಾಡುವವರು ನೀಡಿದ ಮಾಹಿತಿ ಪ್ರಕಾರ ಅವರಲ್ಲಿ ಶೇಕಡಾ 30 ರಿಂದ 40 ರಷ್ಟು ಉದ್ಯೋಗಿಗಳು ಭಾರತೀಯ ಮೂಲದ ಐಟಿ ಉದ್ಯೋಗಿಗಳಾಗಿದ್ದಾರೆ. ಅವರಲ್ಲಿ H-1B ಮತ್ತು L1 ವೀಸಾ ಹೊಂದಿರುವ ಉದ್ಯೋಗಿಗಳು ಗಮನಾರ್ಹ ಸಂಖ್ಯೆಯಲ್ಲಿದ್ದಾರೆ.
H-1B ವೀಸಾವು ವಲಸೆ ರಹಿತ ವೀಸಾ ಆಗಿದ್ದು, ಇದು ಅಮೆರಿಕಾದ ಕಂಪನಿಗಳಿಗೆ ಸೈದ್ಧಾಂತಿಕ ಅಥವಾ ತಾಂತ್ರಿಕ ಪರಿಣತಿಯ ಅಗತ್ಯವಿರುವ ವಿಶೇಷ ಉದ್ಯೋಗಗಳಲ್ಲಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ವೀಸಾದ ನೆರವಿನಿಂದ ಭಾರತ ಮತ್ತು ಚೀನಾದಂತಹ ದೇಶಗಳಿಂದ ಪ್ರತಿ ವರ್ಷ ಹತ್ತು ಸಾವಿರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಅಮೆರಿಕಾದ ತಂತ್ರಜ್ಞಾನ ಕಂಪನಿಗಳಿಗೆ ಅವಕಾಶವಿದೆ.
380 ಉದ್ಯೋಗಿಗಳನ್ನು ವಜಾಗೊಳಿಸಿದ ಸ್ವಿಗ್ಗಿ: ಸಂಸ್ಥೆಯ ಸಿಇಒ ಬರೆದ ಭಾವುಕ ಪತ್ರ ಇಲ್ಲಿದೆ
ಹಾಗೆಯೇ L-1A ಮತ್ತು L-1B ವೀಸಾಗಳು ಸಂಸ್ಥೆಯ ವ್ಯವಸ್ಥಾಪಕ ಸ್ಥಾನಗಳಲ್ಲಿ ಕೆಲಸ ಮಾಡುವ ಅಥವಾ ವಿಶೇಷ ಜ್ಞಾನವನ್ನು ಹೊಂದಿರುವ ತಾತ್ಕಾಲಿಕ ಇಂಟ್ರಾ ಕಂಪನಿ ವರ್ಗಾವಣೆದಾರರಿಗೆ ಲಭ್ಯವಿವೆ. ಬಹು ಮುಖ್ಯವಾಗಿ H-1B ನಂತಹ ವಲಸೆ ರಹಿತ ಕೆಲಸದ ವೀಸಾ ಹೊಂದಿರುವ ಗಣನೀಯ ಸಂಖ್ಯೆಯ ಭಾರತೀಯ ಐಟಿ ಉದ್ಯೋಗಿಗಳು (IT professionals), ಈಗ ದೇಶದಲ್ಲೇ ಉಳಿಯುವ ಸಲುವಾಗಿ ಹೊಸ ಉದ್ಯೋಗಗಳನ್ನು ಹುಡುಕಲು ಪರದಾಡುತ್ತಿದ್ದಾರೆ. ಉದ್ಯೋಗಳನ್ನು ಕಳೆದುಕೊಂಡಿರುವುದರಿಂದ ಅವರ ವಿದೇಶಿ ಕೆಲಸದ ವೀಸಾ ಹಾಗೂ ವೀಸಾ ಸ್ಥಿತಿ ಬದಲಾಗುವ ಸಾಧ್ಯತೆ ಇದೆ.
ಅಮೆಜಾನ್ ಉದ್ಯೋಗಿಯೊಬ್ಬರು (Amazon staffer) ಮೂರು ತಿಂಗಳ ಹಿಂದಷ್ಟೇ ಉದ್ಯೋಗಕ್ಕಾಗಿ ಅಮೆರಿಕಾಗೆ ಬಂದಿದ್ದರು. ಆದರೆ ಈಗ ಮಾರ್ಚ್ 20 ಕಚೇರಿಯಲ್ಲಿ ನಿಮ್ಮ ಕಡೆ ದಿನ ಎಂದು ಹೇಳಿ ಸಂಸ್ಥೆ ಅವರನ್ನು ವಜಾಗೊಳಿಸಿದೆ. H-1B ವೀಸಾದಲ್ಲಿರುವರ ಪರಿಸ್ಥಿತಿ ಇನ್ನಷ್ಟು ಹದಗೆಡುತ್ತಿದೆ. ಏಕೆಂದರೆ ಅವರು 60 ದಿನಗಳಲ್ಲಿ ಹೊಸ ಉದ್ಯೋಗವನ್ನು ಹುಡುಕಬೇಕಾಗಿದೆ. ಇಲ್ಲದಿದ್ದರೆ ಅವರು ಭಾರತಕ್ಕೆ ಹಿಂತಿರುಗುವುದನ್ನು ಬಿಟ್ಟು ಬೇರೆ ದಾರಿ ಇಲ್ಲವಾಗಿದೆ. ಅಲ್ಲದೇ ಐಟಿ ಕಂಪನಿಗಳೆಲ್ಲವು ಉದ್ಯೋಗ ಕಡಿತದಲ್ಲಿ ತೊಡಗಿರುವಾಗ ಹೊಸ ಉದ್ಯೋಗ ಹುಡುಕುವುದು ಕಷ್ಟದ ಕೆಲಸ ಎಂಬುದು ಉದ್ಯೋಗಿಗಳಿಗೂ ತಿಳಿದಿದೆ.
ಮೈಕ್ರೋಸಾಫ್ಟ್‌ನಿಂದ (Microsoft) ವಜಾಗೊಂಡಿರುವ ಉದ್ಯೋಗಿಯೊಬ್ಬರು H-1B ವೀಸಾ ಹೊಂದಿದ್ದು, ಓರ್ವ ಪುತ್ರನನ್ನು ಹೊಂದಿದ್ದು, ಸಿಂಗಲ್ ಪೇರೆಂಟ್ ಆಗಿದ್ದಾರೆ. ಮಗ ಹೈಸ್ಕೂಲ್ ಮುಗಿಸಿ ಉನ್ನತ ಶಿಕ್ಷಣಕ್ಕೆ ಹೊರಡುವ ಈ ಸಂದರ್ಭದಲ್ಲಿ ಅವರ ಉದ್ಯೋಗ ಕಡಿತವಾಗಿರುವುದರಿಂದ ಅವರಿಗೆ ಈ ಪರಿಸ್ಥಿತಿ ಬಹಳ ಕಠಿಣವೆನಿಸಿದೆ. ಹೀಗೆ ಉದ್ಯೋಗದಿಂವ ವಜಾಗೊಂಡಿರುವ ಒಬ್ಬೊಬ್ಬರ ಸ್ಥಿತಿ ಒಂದೊಂದು ರೀತಿ ಆಗಿದ್ದು, ಇದು ಬಹಳ ಕಠಿಣ ಸಮಯ ಎಂದು ಅವರು ಹೇಳಿದ್ದಾರೆ.