ಕಣ್ಣೂರು(ಮಾ.28): ಆಫ್ಘಾನಿಸ್ತಾನದ ಕಾಬೂಲ್‌ನ ಸಿಖ್‌ ಗುರುದ್ವಾರದ ಮೇಲೆ ಈ ವಾರದ ಆದಿಯಲ್ಲಿ ಆತ್ಮಾಹುತಿ ಭಯೋತ್ಪಾದಕ ದಾಳಿ ಮಾಡಿದ್ದು ಕೇರಳದ ಕಣ್ಣೂರು ಮೂಲದ ಇಸ್ಲಾಮಿಕ್‌ ಸ್ಟೇಟ್‌ (ಐಸಿಸ್‌) ಉಗ್ರ, ಕರ್ನಾಟಕ ಗಡಿಯ ಕಾಸರಗೋಡಿನಲ್ಲಿ ಅಂಗಡಿಕಾರನಾಗಿದ್ದ ಅಬು ಖಯ್ಯೂಮ್‌ ಅಲಿಯಾಸ್‌ ಅಬು ಖಾಲಿದ್‌ (30) ಎಂಬ ಸ್ಪೋಟಕ ಮಾಹಿತಿ ಲಭಿಸಿದೆ.

ದಾಳಿಯಲ್ಲಿ 25 ಮಂದಿ ಅಸುನೀಗಿದ್ದರು. ಖಾಲಿದ್‌ ಸೇರಿ ನಾಲ್ವರು ಆತ್ಮಾಹುತಿ ದಾಳಿಕೋರರು ಕೃತ್ಯ ಎಸಗಿದ್ದರು.

ಖಾಲಿದ್‌ ಕಣ್ಣೂರು ಜಿಲ್ಲೆಯ ಚೆಕ್ಕಿಕುಲಂನವ. ಈ ಹಿಂದೆ ಸುಮಾರು 2 ಉಗ್ರಗಾಮಿ ಸಂಚು ಪ್ರಕರಣಗಳಲ್ಲಿ ಈತ ಭಾಗಿ ಆಗಿದ್ದ ಶಂಕೆ ಇದ್ದು, 2017ರಿಂದಲೇ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಬೇಕಾಗಿದ್ದ. ಇಂಟರ್‌ಪೋಲ್‌ ರೆಡ್‌ ಕಾರ್ನರ್‌ ನೋಟಿಸ್‌ ಕೂಡ ಈತನ ವಿರುದ್ಧ ಜಾರಿ ಆಗಿತ್ತು.

ಕಾಬೂಲ್‌ ದಾಳಿ ಬಗ್ಗೆ ವೆಬ್‌ ತಾಣಗಳಲ್ಲಿ ಬರೆದುಕೊಂಡಿರುವ ಐಸಿಸ್‌ ಬೆಂಬಲಿಗರು, ‘ಭಾರತದಲ್ಲಿ ಮುಸ್ಲಿಮರ ವಿರುದ್ಧ ನಡೆದಿರುವ ಹಿಂಸಾಚಾರಗಳಿಗೆ ಪ್ರತೀಕಾರವಾಗಿ ಈತ ಈ ಸೇಡಿನ ದಾಳಿ ನಡೆಸಿದ್ದಾನೆ. ಯಾ ಅಲ್ಲಾ... ಅಬು ಖಾಲಿದ್‌ನನ್ನು ಸ್ವೀಕರಿಸು’ ಎಂದು ಹೇಳಿಕೊಂಡಿದ್ದಾರೆ.

ಆದರೆ ಈ ಬಗ್ಗೆ ಕಣ್ಣೂರಿನಲ್ಲಿರುವ ಆತನ ಬಂಧುಗಳನ್ನು ಸಂಪರ್ಕಿಸಲು ಮಾಧ್ಯಮಗಳು ಯತ್ನಿಸಿದಾಗ ಪ್ರತಿಕ್ರಿಯೆ ನೀಡಲಿಲ್ಲ. ಆದಾಗ್ಯೂ ಎನ್‌ಐಎ ಈತನ ಸಾವಿನ ಮಾಹಿತಿಯನ್ನು ಕುಟುಂಬಕ್ಕೆ ಎನ್‌ಐಎ ತಿಳಿಸಿದೆ ಎಂದು ಮೂಲಗಳು ಹೇಳಿವೆ.

ಕಾಸರಗೋಡಿನಲ್ಲಿ ಅಂಗಡಿ:

ಖಾಲಿದ್‌ ಕರ್ನಾಟಕದ ಗಡಿಗೆ ಹೊಂದಿಕೊಂಡಿರುವ ಕೇರಳದ ಕಾಸರಗೋಡಿನ ಪಡ್ನೆಯಲ್ಲಿ ಅಂಗಡಿಕಾರನಾಗಿದ್ದ. ಅಲ್ಲಿ ಈತನಿಗೆ ಮೊಹಮ್ಮದ್‌ ಖಾಲಿದ್‌ ಕುದಿರುಲಮ್ಮಲ್‌ ಎಂದು ಕರೆಯಲಾಗುತ್ತಿತ್ತು. 4 ವರ್ಷದ ಹಿಂದೆ ಐಸಿಸ್‌ ಸೇರಲು 14 ಯುವಕರು ಕೇರಳದಿಂದ ಓಡಿಹೋಗಿದ್ದರು. ಅವರಲ್ಲಿ ಖಾಲಿದ್‌ ಕೂಡ ಒಬ್ಬ ಎಂದು ಮಾಧ್ಯಮಗಳು ವರದಿ ಮಾಡಿವೆ.