ಶ್ರೀನಗರ(ಮೇ.20): ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ಭದ್ರತಾ ಪಡೆಗಳು 15 ತಾಸು ಗುಂಡಿನ ಚಕಮಕಿ ನಡೆಸಿ, ಹಿಜ್ಬುಲ್‌ ಮುಜಾಹಿದೀನ್‌ ಉಗ್ರಗಾಮಿ ಸಂಘಟನೆಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಮಂಗಳವಾರ ಹೊಡೆದುರುಳಿಸಿವೆ. ಮೃತರಲ್ಲಿ ಒಬ್ಬ ಉಗ್ರನನ್ನು ಜುನೈದ್‌ ಅಶ್ರಫ್‌ ಖಾನ್‌ ಎಂದು ಗುರುತಿಸಲಾಗಿದೆ. ಈತ ಕಾಶ್ಮೀರದ ಪ್ರತ್ಯೇಕತಾವಾದಿ ಸಂಘಟನೆಗಳ ಒಕ್ಕೂಟವಾಗಿರುವ ತೆಹ್ರೀಕ್‌ ಎ ಹುರಿಯತ್‌ ಸಂಘಟನೆಯ ಮುಖ್ಯಸ್ಥ ಅಶ್ರಫ್‌ ಸೆಹರಾಯಿ ಪುತ್ರ ಎಂಬುದು ಸಂಚಲನಕ್ಕೆ ಕಾರಣವಾಗಿದೆ.

ಸಾಮಾನ್ಯವಾಗಿ ಹುರಿಯತ್‌ ನಾಯಕರು ಭಯೋತ್ಪಾದಕರ ಜತೆ ನಂಟು ಹೊಂದಿದ್ದರೂ, ಉಗ್ರವಾದಕ್ಕೆ ಕುಮ್ಮಕ್ಕು ನೀಡಿದರೂ ಅವರ ಮಕ್ಕಳು ಹಾಗೂ ಬಂಧುಗಳು ಭಯೋತ್ಪಾದಕರಾಗಿರುವುದಿಲ್ಲ. ಸರ್ಕಾರಿ ಹುದ್ದೆಗಳಲ್ಲಿ ಅಥವಾ ವಿದೇಶಗಳಲ್ಲಿ ನೆಲೆಯೂರಿರುತ್ತಾರೆ. ಪ್ರತ್ಯೇಕತಾವಾದಿ ಸಂಘಟನೆಯ ನಾಯಕನೊಬ್ಬನ ಮಗ ಉಗ್ರನಾಗಿರುವ ಮೊದಲ ಪ್ರಕರಣ ಇದಾಗಿದ್ದು, ಆತನನ್ನು ಹೊಡೆದುರುಳಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ.

ಶ್ರೀನಗರ ಎನ್‌ಕೌಂಟರ್; ಇಬ್ಬರು ಹಿಜ್ಬುಲ್ ಮುಜಾಹೀದ್ದೀನ್ ಉಗ್ರರ ಹತ್ಯೆ!

2014ರಿಂದ ಉಗ್ರಗಾಮಿಗಳಿಂದ ಮುಕ್ತವಾಗಿರುವ ಶ್ರೀನಗರದಲ್ಲಿ ಉಗ್ರರು ನೆಲೆಯೂರಿದ್ದಾರೆ ಎಂಬ ವಾದಕ್ಕೆ ಈ ಎನ್‌ಕೌಂಟರ್‌ ಇಂಬು ನೀಡುವಂತಿದೆ. ಏಕೆಂದರೆ, ಮಂಗಳವಾರ ಎನ್‌ಕೌಂಟರ್‌ ನಡೆದಿರುವುದು ಶ್ರೀನಗರದ ಜನನಿಬಿಡ ಬಡಾವಣೆಯಲ್ಲಿ. 2018ರ ನಂತರ ಶ್ರೀನಗರದಲ್ಲಿ ನಡೆದ ಮೊದಲ ಎನ್‌ಕೌಂಟರ್‌ ಇದಾಗಿದೆ.

ತಡರಾತ್ರಿ ಕಾರ್ಯಾಚರಣೆ:

ಉಗ್ರರು ಅಡಗಿರುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ಮೊಬೈಲ್‌ ನೆಟ್‌ವರ್ಕ್ ಹಾಗೂ ಇಂಟರ್ನೆಟ್‌ ಸ್ಥಗಿತಗೊಳಿಸಿ ಸೋಮವಾರ ಮಧ್ಯರಾತ್ರಿಯಿಂದ ಭದ್ರತಾ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಮಂಗಳವಾರ ಮಧ್ಯಾಹ್ನ ಇದು ಮುಕ್ತಾಯವಾಗಿದೆ. ಹತನಾದ ಮತ್ತೊಬ್ಬ ಉಗ್ರನನ್ನು ಪುಲ್ವಾಮಾ ನಿವಾಸಿ ತಾರೀಖ್‌ ಅಹಮದ್‌ ಶೇಖ್‌ ಎಂದು ಗುರುತಿಸಲಾಗಿದೆ. ಆತ ಮಾಚ್‌ರ್‍ನಲ್ಲಷ್ಟೇ ಉಗ್ರಗಾಮಿ ಸಂಘಟನೆ ಸೇರಿದ್ದ. ಕಾರ್ಯಾಚರಣೆ ವೇಳೆ ಕೆಲವು ಮನೆಗಳಿಗೆ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ನಿವಾಸಿಗಳು ರಸ್ತೆಗೆ ಇಳಿದು ಪ್ರತಿಭಟನೆ ನಡೆಸಿದ್ದಾರೆ. ಉಗ್ರರ ಜತೆಗಿನ ಕಾರ್ಯಾಚರಣೆ ವೇಳೆ ಇಬ್ಬರು ಭದ್ರತಾ ಸಿಬ್ಬಂದಿಗೆ ಸಣ್ಣಪುಟ್ಟಗಾಯಗಳಾಗಿವೆ.

'ಕಾಶ್ಮೀರ ಭಾರತದ ಆಂತರಿಕ ವಿಷಯ: ಪಾಕ್‌ ಜತೆ ಸೇರಿ ಮೇಲೆ ದಾಳಿ ಮಾಡಲ್ಲ'

ಮಲ್ಟಿನ್ಯಾಷನಲ್‌ ನೌಕರ:

ಕಾಶ್ಮೀರ ವಿಶ್ವವಿದ್ಯಾಲಯಯಲ್ಲಿ ಜುನೈದ್‌ ಎಂಬಿಎ ಪದವಿ ಪಡೆದಿದ್ದು, 2018ರಲ್ಲಿ ಹಿಜ್ಬುಲ್‌ ಮುಜಾಹಿದ್ದೀನ್‌ ಉಗ್ರ ಸಂಘಟನೆ ಸೇರುವ ಮುನ್ನ ದೆಹಲಿಯ ಅನೇಕ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡಿದ್ದ. ಪಾಕಿಸ್ತಾನ ಪರವಾಗಿದ್ದ ಸೈಯದ್‌ ಅಲಿ ಶಾ ಗಿಲಾನಿಯನ್ನು ತೆಹ್ರೀಕ್‌ ಎ ಹುರಿಯತ್‌ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿಸಿ ಅಶ್ರಫ್‌ ಸೆಹ್ರಾಯಿ ಪಟ್ಟಕ್ಕೇರಿದ್ದ. ಉಗ್ರವಾದ ತೊರೆದು ಮುಖ್ಯವಾಹಿನಿಗೆ ಬರುವಂತೆ ಪುತ್ರನಿಗೆ ಕರೆ ನೀಡಲು ಈತ ನಿರಾಕರಿಸಿದ್ದ.