ಬ್ರಸೆಲ್ಸ್(ಮಾ.13)‌: 2020ರಲ್ಲಿ ಭಾರತದಲ್ಲಿ 8 ಸೇರಿದಂತೆ ವಿವಿಧ ದೇಶಗಳಲ್ಲಿ ಕರ್ತವ್ಯನಿರತ 65 ಪತ್ರಕರ್ತರು ಮತ್ತು ಮಾಧ್ಯಮ ಉದ್ಯೋಗಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ(ಐಎಫ್‌ಜೆ) ಆತಂಕಕಾರಿ ವರದಿ ನೀಡಿದೆ. 2019ರಲ್ಲಿ 48 ಪತ್ರಕರ್ತರು ಹತ್ಯೆಯಾಗಿದ್ದರು.

ಇನ್ನು ಕಳೆದ 30 ವರ್ಷದಲ್ಲಿ ಒಟ್ಟು 2680 ಪತ್ರಕರ್ತರನ್ನು ಕೊಲ್ಲಲಾಗಿದೆ ಎಂದು ಒಕ್ಕೂಟ ವಾರ್ಷಿಕ ವರದಿಯಲ್ಲಿ ತಿಳಿಸಿದೆ. ಮೆಕ್ಸಿಕೋದಲ್ಲಿ ಅತಿ ಹೆಚ್ಚು (14) ಪತ್ರಕರ್ತರನ್ನು ಕೊಲ್ಲಲಾಗಿದೆ. ಅಷ್ಘಾನಿಸ್ತಾನದಲ್ಲಿ 10, ಪಾಕಿಸ್ತಾನದಲ್ಲಿ 9, ಭಾರತ 8, ಫಿಲಿಪೈನ್ಸ್‌ ಮತ್ತು ಸಿರಿಯಾದಲ್ಲಿ ತಲಾ 4 ಮತ್ತು ನೈಜೀರಿಯಾ ಮತ್ತು ಯೆಮನ್‌ನಲ್ಲಿ ತಲಾ 3 ಪತ್ರಕರ್ತರ ಹತ್ಯೆಯಾಗಿದೆ.

ಅಲ್ಲದೆ 2020ರಲ್ಲಿ ಜಗತ್ತಿನಾದ್ಯಂತ ಸುಮಾರು 229 ಪತ್ರಕರ್ತರನ್ನು ಜೈಲಿಗೆ ಅಟ್ಟಲಾಗಿದೆ. ಈ ಪೈಕಿ ಟರ್ಕಿ ದೇಶ ನಂ.1 ಸ್ಥಾನ ಪಡೆದಿದ್ದು, 67 ಪತ್ರಕರ್ತರನ್ನು ಕಾರಾಗೃಹದಲ್ಲಿ ಇಟ್ಟಿದೆ. ಉಳಿದಂತೆ ಚೀನಾ 23 ಮಂದಿಯನ್ನು, ಈಜಿಪ್ಟ್‌ 20, ಎರಿಟ್ರಿಯಾ 16 ಮತ್ತು ಸೌದಿ ಅರೇಬಿಯಾ 14 ಮಂದಿಯನ್ನು ಜೈಲಿನಲ್ಲಿ ಇಟ್ಟಿದೆ ಎಂದು ವರದಿ ಹೇಳಿದೆ.