Jammu & Kashmir: ಅಧಿಕೃತ ಘೋಷಣೆಗೂ ಮುನ್ನವೇ ಸೋಲೊಪ್ಪಿಕೊಂಡ ಮೆಹಬೂಬಾ ಮುಫ್ತಿ, ಓಮರ್ ಅಬ್ದುಲ್ಲಾ

ಓಮರ್ ಅಬ್ದುಲ್ಲಾ ಅವರಗಿಂತ ಅಬ್ದುಲ್ ರಶೀದ್ 1.29 ಲಕ್ಷ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಎಕ್ಟಿಟ್ ಪೋಲ್‌ಗಳು ಸಹ ಅಬ್ದುಲ್ ರಶೀದ್ ಗೆಲುವನ್ನು ಭವಿಷ್ಯ ನುಡಿದಿದ್ದವು. ಮೊದಲ ಸುತ್ತಿನಿಂದಲೂ ಭಾರೀ ಮತಗಳ ಮುನ್ನಡೆಯನ್ನೇ ಅಬ್ದುಲ್ ರಶೀದ್ ಕಾಯ್ದುಕೊಂಡು ಬಂದಿದ್ದಾರೆ.

Jammu Kashmir leaders Omar Abdullah and Mehbooba Mufti accept their defeat mrq

ಶ್ರೀನಗರ: ಅಧಿಕೃತ ಘೋಷಣೆಗೂ ಮುನ್ನವೇ ಜಮ್ಮು-ಕಾಶ್ಮೀರದ ನಾಯಕರಾದ ಓಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ (Omar Abdullah, Mehbooba Mufti) ಸೋಲು ಒಪ್ಪಿಕೊಂಡಿದ್ದಾರೆ. ಓಮರ್ ಅಬ್ದುಲ್ಲಾ ತಮ್ಮ ಎದುರಾಳಿ ಮಾಜಿ ಶಾಸಕ ಎಂಜಿನೀಯರ್ ಅಬ್ದುಲ್ ರಶೀದ್ ಅವರಿಗೆ ಶುಭಕೋರುವ ಮೂಲಕ ಬಾರಾಮುಲ್ಲಾ ಕ್ಷೇತ್ರದಲ್ಲಿ  ( Baramulla Lok Sabha seat) ಸೋಲನ್ನು ಒಪ್ಪಿದ್ದಾರೆ. ಯುಎಪಿಎ ಪ್ರಕರಣದಲ್ಲಿ (UAPA Case) ಬಂಧನಕ್ಕೊಳಗಾಗಿರುವ ಅಬ್ದುಲ್ ರಶೀದ್ ಸದ್ಯ ತಿಹಾರ್ ಜೈಲಿನಲ್ಲಿದ್ದಾರೆ. ಅಬ್ದುಲ್ ರಶೀದ್ (Engineer Abdul Rashid) ಪರವಾಗಿ ಅವರ ಪುತ್ರ ಅಬ್ರಾರ್ ರಶೀದ್ ಪ್ರಚಾರ ನಡೆಸಿದ್ದರು. ಓಮರ್ ಅಬ್ದುಲ್ಲಾ ಅವರಗಿಂತ ಅಬ್ದುಲ್ ರಶೀದ್ 1.29 ಲಕ್ಷ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ. ಎಕ್ಟಿಟ್ ಪೋಲ್‌ಗಳು ಸಹ ಅಬ್ದುಲ್ ರಶೀದ್ ಗೆಲುವನ್ನು ಭವಿಷ್ಯ ನುಡಿದಿದ್ದವು. ಮೊದಲ ಸುತ್ತಿನಿಂದಲೂ ಭಾರೀ ಮತಗಳ ಮುನ್ನಡೆಯನ್ನೇ ಅಬ್ದುಲ್ ರಶೀದ್ ಕಾಯ್ದುಕೊಂಡು ಬಂದಿದ್ದಾರೆ.

ಈ ಕುರಿತು ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಉಮರ್ ಅಬ್ದುಲ್ಲಾ, ಅನಿವಾರ್ಯತೆಯನ್ನು ಒಪ್ಪಿಕೊಳ್ಳುವ ಸಮಯ ಬಂದಿದೆ ಎಂದು ನಾನು ಭಾವಿಸುತ್ತೇನೆ. ಅಬ್ದುಲ್ ರಶೀದ್ ಅವರಿಗೆ ಅಭಿನಂದನೆಗಳು. ಈ ಗೆಲುವು ಅಬ್ದುಲ್ ರಶೀದ್ ಅವರನ್ನು ಜೈಲಿನಿಂದ ಹೊರಗೆ ತರುತ್ತೆ ಎಂಬ ನಂಬಿಕೆ ನನಗಿಲ್ಲ. ಉತ್ತರ ಕಾಶ್ಮೀರದ ಜನರಿಗೆ ಅವರ ಹಕ್ಕು ಸಿಗುತ್ತೆ ಎಂದು ನಾನು ನಂಬುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಮತದಾರರಿಗೆ ನಿರ್ಧಾರವೇ ಅಂತಿಮ ಎಂದು ಹೇಳಿದ್ದಾರೆ.

ಜೈಲಿನಲ್ಲಿದ್ರೂ ಮುನ್ನಡೆ ಕಾಯ್ದುಕೊಂಡ ಅಬ್ದುಲ್ ರಶೀದ್

ಜಮ್ಮು ಕಾಶ್ಮೀರ ಮತ್ತು ಲಡಾಖ್‌ನ ಆರು ಸ್ಥಾನಗಳಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಜೆಪಿ ಮತ್ತು ಪಕ್ಷೇತರರು ತಲಾ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಅಬ್ದುಲ್ ರಶೀದ್ 291,610 ಮತಗಳನ್ನು ಪಡೆದಿದ್ದು, 156,905 ಮತಗಳನ್ನು ಪಡೆದ ಅಬ್ದುಲ್ಲಾ ವಿರುದ್ಧ 134,705 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಪೀಪಲ್ಸ್ ಕಾನ್ಫರೆನ್ಸ್ ಅಧ್ಯಕ್ಷ ಸಜ್ಜದ್ ಲೋನ್ 98,603 ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಎದುರಾಳಿಗೆ ಮುಫ್ತಿ ಶುಭಾಶಯ

ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೆ ಮತ್ತು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಹ ಸೋಲನ್ನು ಒಪ್ಪಿಕೊಂಡಿದ್ದಾರೆ. ಮೆಹಬೂಬಾ ಮುಫ್ತಿ ಅನಂತನಾಗ್-ರಜೌರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಮೆಹಬೂಬಾ ಮುಫ್ತಿ 222,831 ಮತ ಪಡೆದುಕೊಂಡಿದ್ರೆ, ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿ ಮಿಯಾನ್ ಅಲ್ತಾಫ್ 432,590 ಮತಗಳನ್ನು ಪಡೆದುಕೊಂಡಿದ್ದಾರೆ. ಸೋಲನ್ನ ಒಪ್ಪಿರುವ ಮೆಹಬೂಬಾ ಮುಫ್ತಿ, ಎಕ್ಸ್ ಖಾತೆಯಲ್ಲಿ ಮಿಯಾನ್ ಅಲ್ತಾಫ್ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ. 

ಜನರ ತೀರ್ಪನ್ನು ಗೌರವಿಸುತ್ತೇನೆ. ಚುನಾವಣೆಯಲ್ಲಿ ಅಭ್ಯರ್ಥಿಗಳ ಪರವಾಗಿ ಹಗಲಿರುಳು ಕೆಲಸ ಮಾಡಿದ ಪಕ್ಷದ ಎಲ್ಲಾ ಮುಖಂಡರು ಮತ್ತು ಕಾರ್ಯಕರ್ತರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ನನಗೆ ಮತ ಹಾಕಿದ ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು. ಸೋಲು ಮತ್ತು ಗೆಲುವು ಚುನಾವಣೆಯ ಒಂದು ಭಾಗ. ಈ ಸೋಲು ನಮ್ಮ ಹೋರಾಟದ ದಿಕ್ಕನ್ನು ಬದಲಿಸಲ್ಲ. ವಿಯಾನ್ ಸಾಹಬ್ ಅವರಿಗೆ ಅಭಿನಂದನೆಗಳು ಎಂದು ಮೆಹಬೂಬಾ ಮುಫ್ತಿ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ನ್ಯಾಷನಲ್ ಕಾನ್ಫರೆನ್ಸ್‌ನ ಅಗಾ ಸೈಯದ್ ರುಹುಲ್ಲಾ ಮೆಹದಿ, ಜಮ್ಮು ಮತ್ತು ಉಧಮ್‌ಪುರದಿಂದ ಬಿಜೆಪಿಯ ಅಭ್ಯರ್ಥಿಗಳಾದ  ಜುಗಲ್ ಕಿಶೋರ್ ಶರ್ಮಾ ಮತ್ತು ಜಿತೇಂದ್ರ ಸಿಂಗ್ ಮುನ್ನಡೆಯಲ್ಲಿದ್ದಾರೆ. ಲಡಾಖ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಪಕ್ಷೇತರ ಅಭ್ಯರ್ಥಿ ಹನೀಫಾ ಜಾನ್ 27,997 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. 2019ರಲ್ಲಿ ಗೆದ್ದಿದ್ದ ಬಿಜೆಪಿ ಮೂರನೇ ಸ್ಥಾನದಲ್ಲಿದೆ.

Latest Videos
Follow Us:
Download App:
  • android
  • ios