ನವದೆಹಲಿ[ಫೆ.16]: ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯ ಆವರಣದಲ್ಲಿ 2019ರ ಡಿಸೆಂಬರ್‌ನಲ್ಲಿ ನಡೆದಿದ್ದ ಹಿಂಸಾಚಾರಕ್ಕೆ ದೇಶದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಡಿಸೆಂಬರ್ 15ರಂದು ಕಾಲೇಜಿನ ಗ್ರಂಥಾಲಯಕ್ಕೆ ನುಗ್ಗಿದ್ದ ಪೊಲೀಸರು ಅಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿದ್ದರು. ಆದರೀಗ ಪ್ರಕರಣ ನಡೆದ 2 ತಿಂಗಳ ಬಳಿಕ ಆ ಘಟನೆಯ ಸಿಸಿಟಿವಿ ದೃಶ್ಯ ವೈರಲ್ ಆಗಿದೆ.

ಇವು ಜಾಮಿಯಾ ಆವರಣದಲ್ಲಿರುವ ಹಳೆ ಲೈಬ್ರರಿಯಲ್ಲಿ ನಡೆದ ಘಟನೆಯ ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯಗಳಾಗಿವೆ. ಈ ದೃಶ್ಯಗಳಲ್ಲಿ ಗ್ರಂಥಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳ ಮೇಲೆ, ಪೊಲೀಸರು ಏಕಾಏಕಿ ನುಗ್ಗಿ ಲಾಠಿ ಪ್ರಹಾರ ನಡೆಸುತ್ತಿರುವುದು ಸ್ಪಷ್ಟವಾಗಿ ಗಮನಿಸಬಹುದಾಗಿದೆ. ಈ ವೇಳೆ ಅನೇಕ ವಿದ್ಯಾರ್ಥಿಗಳಿಗೆ ಗಾಯಗಳಾಗಿದ್ದವೆಂ.ಬುವುದು ಉಲ್ಲೇಖನೀಯ. ಇನ್ನು ಘಟನೆ ಬಳಿಕ ಗ್ರಂಥಾಲಯ ಈವರೆಗೂ ಮುಚ್ಚಲಾಗಿದೆ. ಸದ್ಯ ವೈರಲ್ ಆದ ವಿಡಿಯೋವನ್ನು ಜಾಮಿಯಾ ಕಾರ್ಟಿನೇಷನ್ ಕಮಿಟಿಯೇ ಬಹಿರಂಗಪಡಿಸಿದೆ.

JCC ಬಿಡುಗಡೆಗೊಳಿಸಿರುವ ಈ ವಿಡಿಯೋ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಲೈಬ್ರರಿಯದ್ದಾಗಿದೆ. ಇನ್ನು ಪೊಲೀಸರು ನಡೆಸಿದ್ದ ಈ ಹಿಂಸಾಚಾರದಲ್ಲಿ ಓರ್ವ ವಿದ್ಯಾರ್ಥಿ ಕಣ್ಣು ಕಳೆದುಕೊಂಡಿದ್ದ ಎಂದು ವಿಡಿಯೋ ಶೇರ್ ಮಾಡಿಕೊಂಡಿರುವ ವ್ಯಕ್ತಿ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

2019ರ ಡಿಸೆಂಬರ್ 15 ರಂದು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ವಿದ್ಯಾರ್ಥಿಗಳ ಶಾಂತಿಯುತ ಪ್ರತಿಭಟನೆ ನಡೆಸಿದ್ದರು. ಆದರೆ ಅದೇ ದಿನ ರಾತ್ರಿ ವಿಶ್ವವಿದ್ಯಾನಿಲಯ ಆವರಣಕ್ಕೆ ಏಕಾಏಕಿ ನುಗ್ಗಿದ್ದ ಪೊಲೀಸರು, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಕಾಲೇಜು ಆಡಳಿತ ಮಂಡಳಿ ಪೊಲೀಸರ ವಿರುದ್ಧ ದೂರು ದಾಖಲಿಸಿತ್ತು. ಆದರೂ ಈವರೆಗೆ ತನಿಖೆ ಮುಂದುವರೆದಿದ್ದು, ವಿದ್ಯಾರ್ಥಿಗಳು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.