ರಾಯ್‌ಪುರ[ಡಿ.05]: ಇಂಡೋ- ಟಿಬೆಟಿಯನ್‌ ಗಡಿ ಪೊಲೀಸ್‌ (ಐಟಿಬಿಪಿ)ಗೆ ಸೇರಿದ ಯೋಧನೊಬ್ಬ ಕ್ಷುಲ್ಲಕ ಕಾರಣಕ್ಕೆ ತನ್ನ 5 ಸಹದ್ಯೋಗಿಗಳನ್ನು ಹತ್ಯೆಗೈದು ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯ ಕಡೆನರ್‌ ಗ್ರಾಮದಲ್ಲಿ ಬುಧವಾರ ನಡೆದಿದೆ. ದಾಳಿ ನಡೆಸಿದ ಯೋಧನನ್ನು ಪಶ್ಚಿಮ ಬಂಗಾಳ ಮೂಲದ ಮಸದುಲ್‌ ರೆಹಮಾನ್‌ ಎಂದು ಗುರುತಿಸಲಾಗಿದೆ.

ಐಟಿಬಿಪಿಯ 45ನೇ ಬೆಟಾಲಿಯನ್‌ಗೆ ಸೇರಿದ ರೆಹಮಾನ್‌ ಮತ್ತು ಇತರೆ ಕೆಲ ಯೋಧರ ನಡುವೆ ಬುಧವಾರ ಬೆಳಗ್ಗೆ 8.30ರ ವೇಳೆಗೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಆಕ್ರೋಶಗೊಂಡ ರೆಹಮಾನ್‌ ಏಕಾಏಕಿ ತನ್ನ ಸಹದ್ಯೋಗಿಗಳ ಮೇಲೆ ತನ್ನ ರೈಫಲ್‌ನಿಂದ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಗುಂಡೇಟು ತಿಂದ ಹಿಮಾಚಲಪ್ರದೇಶದ ಮಹೇಂದ್ರ ಸಿಂಗ್‌, ಪಂಜಾಬ್‌ನ ದಲ್ಜಿತ್‌ಸಿಂಗ್‌, ಪಶ್ಚಿಮ ಬಂಗಾಳದ ಸುರ್ಜಿತ್‌ ಸರ್ಕಾರ್‌, ಬಿಸ್ವರೂಪ್‌ ಮಹತೋ ಮತ್ತು ಕೇರಳದ ಬಿಜೇಶ್‌ ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಯಲ್ಲಿ ಕೇರಳದ ಎಸ್‌.ಬಿ.ಉಲ್ಲಾಸ್‌ ಮತ್ತು ರಾಜಸ್ಥಾನದ ಸೀತಾರಾಮ್‌ ಡೂನ್‌ ಎಂಬಿಬ್ಬರು ತೀವ್ರವಾಗಿ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದಾಳಿಯ ಬಳಿಕ ರೆಹಮಾನ್‌ ತಾನೂ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಆಘಾತಕಾರಿ ಘಟನೆಗೆ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ಈ ಕುರಿತು ಈಗಾಗಲೇ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದಾಳಿಯಲ್ಲಿ ಗಾಯಗೊಂಡಿರುವ ಯೋಧರ ಹೇಳಿಕೆಗಳು ಪ್ರಕರಣದ ಮೇಲೆ ಇನ್ನಷ್ಟುಬೆಳಕು ಚೆಲ್ಲಬಹುದು ಎಂದು ಪೊಲೀಸರು ತಿಳಿಸಿದ್ದಾರೆ.