Asianet Suvarna News Asianet Suvarna News

ಐಎನ್ ಎಕ್ಸ್ ಕೇಸ್: ಚಿದುಗೆ ಇ.ಡಿ ಬಂಧನ ಭೀತಿ ಶುರು

ಚಿದುಗೆ ಈಗ ಇ.ಡಿ. ಬಂಧನ ಭೀತಿ | ಇಂದು ತಿಹಾರ್‌ ಜೈಲಲ್ಲಿ ವಿಚಾರಣೆಗೆ ಕೋರ್ಟ್‌ ಸಮ್ಮತಿ | ಅಗತ್ಯಬಿದ್ದರೆ ಬಂಧಿಸಲೂ ಫರ್ಮಾನು |  ನ್ಯಾಯಾಲಯದಲ್ಲೇ ವಿಚಾರಣೆಗೆ ಒಪ್ಪಿಗೆ ಕೇಳಿದ ಇ.ಡಿ. | ಚಿದು ಗೌರವಕ್ಕೆ ತಕ್ಕುದಲ್ಲ: ಕೋರ್ಟ್‌

INX media Case ED team reaches tihar to Grill P chidambaram
Author
Bengaluru, First Published Oct 16, 2019, 11:57 AM IST

ನವದೆಹಲಿ (ಅ. 16): ಐಎನ್‌ಎಕ್ಸ್‌ ಮೀಡಿಯಾ ಹಗರಣ ಸಂಬಂಧ ಸುಮಾರು ಎರಡು ತಿಂಗಳಿನಿಂದ ಬಂಧನದಲ್ಲಿರುವ ಕಾಂಗ್ರೆಸ್ಸಿನ ಪ್ರಭಾವಿ ನಾಯಕ ಹಾಗೂ ಕೇಂದ್ರದ ಮಾಜಿ ಸಚಿವ ಪಿ. ಚಿದಂಬರಂ ಅವರಿಗೆ ಅದೇ ಪ್ರಕರಣದಲ್ಲಿ ಇದೀಗ ಜಾರಿ ನಿರ್ದೇಶನಾಲಯ (ಇ.ಡಿ.)ದಿಂದಲೂ ಬಂಧನ ಭೀತಿ ಎದುರಾಗಿದೆ.

ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣ ಸಂಬಂಧ ಅ.17ರವರೆಗೆ ನ್ಯಾಯಾಂಗ ಬಂಧನಕ್ಕೆ ಗುರಿಯಾಗಿರುವ ಚಿದಂಬರಂ ಅವರನ್ನು ಬುಧವಾರ ಜೈಲಿಗೆ ತೆರಳಿ ವಿಚಾರಣೆ ನಡೆಸಲು ಹಾಗೂ ಅಗತ್ಯ ಬಿದ್ದರೆ ಬಂಧಿಸಲು ಇ.ಡಿ. ಅಧಿಕಾರಿಗಳಿಗೆ ದೆಹಲಿಯ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.

ಜೈಲೂಟ ಎಫೆಕ್ಟ್: ಚಿದು ತೂಕ 4 ಕೆಜಿ ಇಳಿಕೆ

ನ್ಯಾಯಾಲಯದಲ್ಲೇ ಒಂದಷ್ಟುಸ್ಥಳಾವಕಾಶ ಕೊಟ್ಟರೆ ಚಿದಂಬರಂ ಅವರನ್ನು ವಿಚಾರಣೆಗೆ ಒಳಪಡಿಸುತ್ತೇವೆ ಎಂದು ಇ.ಡಿ. ಅಧಿಕಾರಿಗಳು ನ್ಯಾಯಾಲಯವನ್ನು ಮನವಿ ಮಾಡಿಕೊಂಡರು. ಆದರೆ ಕೋರ್ಟ್‌ ಅದಕ್ಕೆ ಒಪ್ಪಲಿಲ್ಲ. ಸಾರ್ವಜನಿಕವಾಗಿ ವಿಚಾರಣೆ ನಡೆಸುವುದು ಹಾಗೂ ಬಂಧಿಸುವುದು ಈ ವ್ಯಕ್ತಿಯ (ಚಿದು) ಗೌರವಕ್ಕೆ ತಕ್ಕುದಲ್ಲ. ಹೀಗಾಗಿ ತಿಹಾರ್‌ ಜೈಲಿಗೆ ಹೋಗಿ ವಿಚಾರಣೆ ನಡೆಸಿ, ಅಗತ್ಯ ಬಿದ್ದರೆ ಬಂಧಿಸಿ ಎಂದು ವಿಶೇಷ ನ್ಯಾಯಾಧೀಶ ಅಜಯ್‌ ಕುಮಾರ್‌ ಕುಹರ್‌ ಅವರು ತಿಳಿಸಿದರು.

ಸೆ.21ರಂದು ಐಎನ್‌ಎಕ್ಸ್‌ ಮೀಡಿಯಾ ಪ್ರಕರಣ ಸಂಬಂಧ ಸಿಬಿಐ ಅಧಿಕಾರಿಗಳು ಚಿದಂಬರಂ ಅವರನ್ನು ಬಂಧಿಸಿದ್ದರು. ಅದೇ ಪ್ರಕರಣ ಸಂಬಂಧ ಇ.ಡಿ. ಕೂಡ ತನಿಖೆ ನಡೆಸುತ್ತಿದೆ. ಇದೀಗ ಚಿದಂಬರಂ ಅವರನ್ನು ವಿಚಾರಣೆ ನಡೆಸಬೇಕಾಗಿದೆ ಎಂದು ವಿಶೇಷ ನ್ಯಾಯಾಲಯದ ಮೊರೆ ಹೋಗಿತ್ತು. ತಿಹಾರ್‌ ಜೈಲಿಗೆ ಹೋಗುವ ಮುನ್ನ ಚಿದಂಬರಂ ಅವರು ತಮ್ಮನ್ನು ಕಾರಾಗೃಹಕ್ಕೆ ಕಳುಹಿಸುವ ಬದಲು ಇ.ಡಿ. ವಶಕ್ಕೆ ಕೊಟ್ಟುಬಿಡಿ, ಅವರ ವಿಚಾರಣೆ ಎದುರಿಸುತ್ತೇನೆ ಎಂದು ಮನವಿ ಮಾಡಿಕೊಂಡಿದ್ದರು. ಅದಕ್ಕೆ ಇ.ಡಿ. ಸಮ್ಮತಿಸಿರಲಿಲ್ಲ.

ಆರ್ಥಿಕತೆ ಚಿಂತೆ: ಜೈಲಿಗೆ ಹೊರಡುವ ಮುನ್ನ ಚಿದಂಬರಂ ಹೀಗಂದ್ರಂತೆ!

ಅವಮಾನ ಮಾಡಲೆಂದೇ ನನ್ನನ್ನು ಜೈಲಿನಲ್ಲಿಟ್ಟಿದ್ದಾರೆ: ಸುಪ್ರೀಂಗೆ ಚಿದು

ನವದೆಹಲಿ: ಐಎನ್‌ಎಕ್ಸ್‌ ಮಿಡಿಯಾ ಪ್ರಕರಣ ಸಂಬಂಧ ತಮ್ಮನ್ನು ಬಂಧಿಸಿರುವ ಸಿಬಿಐ ಅಧಿಕಾರಿಗಳು ತಮಗೆ ಅವಮಾನ ಮಾಡಲೆಂದೇ ತಮ್ಮನ್ನು ನ್ಯಾಯಾಂಗ ವಶದಲ್ಲಿ ಮುಂದುವರಿಸುತ್ತಿದ್ದಾರೆ ಎಂದು ಸುಪ್ರೀಂಕೋರ್ಟಿನಲ್ಲಿ ಆರೋಪಿಸಿದ್ದಾರೆ. ತಮ್ಮ ಅಥವಾ ತಮ್ಮ ಕುಟುಂಬ ಸದಸ್ಯರ ವಿರುದ್ಧ ಸಾಕ್ಷ್ಯಗಳನ್ನು ಸಂಪರ್ಕಿಸುವ ಅಥವಾ ಅವರ ಮೇಲೆ ಪ್ರಭಾವ ಬೀರುವ ಯತ್ನ ನಡೆದಿಲ್ಲ ಎಂದೂ ಹೇಳಿದ್ದಾರೆ. ಚಿದಂಬರಂ ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ಸಂದರ್ಭದಲ್ಲಿ ವಿಚಾರಣೆಗೆ ಹಾಜರಾದ ಹಿರಿಯ ವಕೀಲರಾದ ಕಪಿಲ್‌ ಸಿಬಲ್‌ ಹಾಗೂ ಅಭಿಷೇಕ್‌ ಮನು ಸಿಂಘ್ವಿ ಅವರು ಈ ವಾದ ಮಂಡಿಸಿದರು. ಸುಪ್ರೀಂ ಕೋರ್ಟ್‌ನಲ್ಲಿ ಬುಧವಾರವೂ ವಿಚಾರಣೆ ಮುಂದುವರಿಯಲಿದ್ದು, ಸಿಬಿಐ ಪರ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಾದಿಸಲಿದ್ದಾರೆ.

Follow Us:
Download App:
  • android
  • ios