Asianet Suvarna News Asianet Suvarna News

ಎಷ್ಟೊಳ್ಳೆ ಎಂಪಿ ಗೆಲ್ಲಿಸಿದ್ದೀರಿ ಎಂದು ಮೋದಿ ಹೇಳಿದ್ದೇ ನನಗೆ ಸ್ಫೂರ್ತಿ ಎಂದ ಸಿಂಹ

ಪತ್ರಕರ್ತ, ಅಂಕಣಕಾರರಾಗಿದ್ದ ಪ್ರತಾಪ್‌ ಸಿಂಹ ಅವರು 2014ರಲ್ಲಿ ರಾಜಕೀಯ ಪ್ರವೇಶಿಸಿ, ನೇರವಾಗಿಯೇ ಸಂಸತ್‌ಗೆ ಆಯ್ಕೆಯಾದವರು. ಅವರು ಮೊದಲ ಬಾರಿ ಕಾಂಗ್ರೆಸ್‌ನ ಘಟಾನುಘಟಿ ನಾಯಕ, ಮಾಜಿ ಸಚಿವ ಎಚ್‌. ವಿಶ್ವನಾಥ್‌ ಅವರನ್ನು ಸೋಲಿಸಿದ್ದರು. ಮೋದಿ ಜೊತೆ ಅವರ ಒಡನಾಟ ಹೇಗಿದೆ..? ರಾಜಕೀಯ ಅನುಭವವನ್ನು ಹಂಚಿಕೊಂಡಿದ್ದಾರೆ. ಇಲ್ಲಿ ಓದಿ.

Interview with Mysore kodagu MP Pratap simha on PM Narendra Modi govt 2 completing year
Author
Bangalore, First Published May 30, 2020, 3:18 PM IST

ಮೈಸೂರು(ಮೇ 30): ಪತ್ರಕರ್ತ, ಅಂಕಣಕಾರರಾಗಿದ್ದ ಪ್ರತಾಪ್‌ ಸಿಂಹ ಅವರು 2014ರಲ್ಲಿ ರಾಜಕೀಯ ಪ್ರವೇಶಿಸಿ, ನೇರವಾಗಿಯೇ ಸಂಸತ್‌ಗೆ ಆಯ್ಕೆಯಾದವರು. ಅವರು ಮೊದಲ ಬಾರಿ ಕಾಂಗ್ರೆಸ್‌ನ ಘಟಾನುಘಟಿ ನಾಯಕ, ಮಾಜಿ ಸಚಿವ ಎಚ್‌. ವಿಶ್ವನಾಥ್‌ ಅವರನ್ನು ಸೋಲಿಸಿದ್ದರು. 2019 ರಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಅಭ್ಯರ್ಥಿಯಾಗಿದ್ದ ಮಾಜಿ ಸಂಸದ ಹಾಗೂ ಮಾಜಿ ಸಚಿವ ಸಿ.ಎಚ್‌. ವಿಜಯಶಂಕರ್‌ ಅವರನ್ನು ಸುಮಾರು 1.30 ಲಕ್ಷ ಮತಗಳ ಅಂತರದಿಂದ ಪರಾಭವಗೊಳಿಸಿದವರು.

ಪ್ರತಾಪ್‌ ಸಿಂಹ ಗೆದ್ದಾಗ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಿದ್ದರಿಂದ ಸಾಕಷ್ಟುಕೆಲಸ ಮಾಡಲು ಅನುಕೂಲವಾಯಿತು. ಎರಡನೇ ಅವಧಿಯಲ್ಲಿ ಕೂಡ ಮೋದಿ ಅವರ ಸರ್ಕಾರವೇ ಮುಂದುವರೆದಿದೆ. ಹೀಗಾಗಿ ಪ್ರತಾಪ್‌ ಸಿಂಹ ಮೊದಲ ಅವಧಿಯ ಅನುಭವದೊಂದಿಗೆ ಅಭಿವೃದ್ಧಿಯ ವಿಚಾರದಲ್ಲಿ ಶರವೇಗದಲ್ಲಿ ಮುನ್ನುಗ್ಗುತ್ತಿದ್ದಾರೆ. ಎನ್‌ಡಿಎ ಸರ್ಕಾರ 2.0 ‘ಕನ್ನಡಪ್ರಭ’ಕ್ಕೆ ಸಂದರ್ಶನ ನೀಡಿದರು. ಆಯ್ದ ಭಾಗ ಇಲ್ಲಿದೆ.

ಕಳೆದೊಂದು ವರ್ಷದಲ್ಲಿ ಯಾವ ರೀತಿ ಕೆಲಸಗಳಾಗಿವೆ?

ಮೈಸೂರಿನಲ್ಲಿ ಕಳೆದ 30 ವರ್ಷಗಳಿಂದ ಸತತ 2 ಬಾರಿ ಯಾರೂ ಗೆದ್ದಿರಲಿಲ್ಲ. ಮೈಸೂರು- ಕೊಡಗಿನ ಜನ ಭಾರಿ ಬಹುಮತದಿಂದ ಪುನಾರಾಯ್ಕೆ ಮಾಡಿದರು. ಹೀಗಾಗಿ ಕಳೆದ ಅವಧಿಯ ಅನುಭವದ ಆಧಾರದ ಮೇಲೆ ಸಾಕಷ್ಟುಕೆಲಸ ಮಾಡಲು ಅವಕಾಶವಾಗಿದೆ. ಮೈಸೂರು- ಬೆಂಗಳೂರು ಹತ್ತು ಪಥದ ರಸ್ತೆ ಕಾಮಗಾರಿ ನಿಡಘಟ್ಟದ ಬಳಿ ನಿಂತಿತ್ತು. ಈಗ ನಿಡಘಟ್ಟದಿಂದ ಮೈಸೂರುವರೆಗಿನ ಕಾಮಗಾರಿಗೆ 3,300 ಕೋಟಿ ರು. ಬಿಡುಗಡೆ ಮಾಡಿಸಿದ್ದೇನೆ. ಶ್ರೀರಂಗಪಟ್ಟಣ ಬಳಿ ಡಿವಿಯೇಷನ್‌ ತೆಗೆದುಕೊಂಡು ಕುಶಾಲನಗರಕ್ಕೆ ಹೋಗುವ ಚತುಷ್ಪಥ ಹೆದ್ದಾರಿಗೆ 3,120 ಕೋಟಿ ರು. ಭೂಸ್ವಾಧೀನ ಪ್ರಕ್ರಿಯೆ ನಡೆದಿದೆ.

Interview with Mysore kodagu MP Pratap simha on PM Narendra Modi govt 2 completing year

ಮೈಸೂರು ವಿಮಾನ ನಿಲ್ದಾಣ ವಿಸ್ತರಣೆಗೆ 114 ಎಕರೆ ಭೂಸ್ವಾಧೀನಕ್ಕೆ 170 ಕೋಟಿ ರು. ವಿಶೇಷ ಅನುದಾನಕ್ಕೆ ಮುಖ್ಯಮಂತ್ರಿಗಳಾದ ಬಿ.ಎಸ್‌.ಯಡಿಯೂರಪ್ಪ ಅವರು ಒಪ್ಪಿಗೆ ನೀಡಿದ್ದಾರೆ. ಮೈಸೂರು 42 ಕಿ.ಮೀ. ವರ್ತುಲ ರಸ್ತೆಯನ್ನುರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತಿಸಿ, 156 ಕೋಟಿ ರು. ವೆಚ್ಚದಲ್ಲಿ ಡಾಂಬರೀಕರಣ ಮಾಡಲಾಗುತ್ತಿದೆ. ಕಳೆದ 25 ವರ್ಷಗಳಿಂದ ಇದ್ದ ಸೂಯಜ್‌ಫಾರಂ ಕಸದ ಸಮಸ್ಯೆಯನ್ನು 24 ಕೋಟಿ ರು. ವೆಚ್ಚದಲ್ಲಿ ಬಗೆಹರಿಸಲು ಟೆಂಡರ್‌ ಕರೆಯಲಾಗಿದೆ.

ಚನ್ನರಾಯಪಟ್ಟಣದಿಂದ ಸೋಮವಾರಪೇಟೆಗೆ ಮಡಿಕೇರಿ, ವೀರಾಜಪೇಟೆ, ಮಾಕುಟ್ಟಮಾರ್ಗ ರಾಷ್ಟ್ರೀಯ ಹೆದ್ದಾರಿಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ತಯಾರಾಗುತ್ತಿದೆ. ಕೇರಳದ ಕಾಂಞಗಾಡದಿಂದ ಭಾಗಮಂಡಲ, ಮಡಿಕೇರಿಗೆ 53 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಮಾಡಲಾಗುವುದು.

ತಂಬಾಕು, ಕಾಫಿ ಬೆಳೆಗಾರರ ಸಮಸ್ಯೆ ಕಥೆ ಏನು?

ಹುಣಸೂರು, ಪಿರಿಯಾಪಟ್ಚಣ ಸೇರಿದಂತೆ ಮೈಸೂರು ಭಾಗದ ತಂಬಾಕು ಬೆಳೆಗಾರರ ಸಮಸ್ಯೆಗಳ ಪರಿಹಾರಕ್ಕೆ ಸದಾ ಸ್ಪಂದಿಸುತ್ತಿದ್ದೇನೆ. ಅದೇ ರೀತಿ ಕೊಡಗಿನ ಕಾಫಿ ಸೇರಿದಂತೆ ಎಲ್ಲಾ ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ.

ಈ ಅವಧಿಯಲ್ಲಿ ಅತ್ಯಂತ ತೃಪ್ತಿಕೊಟ್ಟಕೆಲಸ ಯಾವುದು?

- ನಾಯಕ ಜನಾಂಗವನ್ನು ಪರಿಶಿಷ್ಟಪಂಗಡ ಪಟ್ಟಿಗೆ ಸೇರಿಸಲಾಗಿದೆ. ಆದರೆ ನಾಯಕ ಜನಾಂಗದ ಪರ್ಯಾಯ ಪದಗಳಾದ ತಳವಾರ, ಪರಿಹಾರವನ್ನು ಆ ಪಟ್ಟಿಗೆ ಸೇರಿಸುವಾಗ ಬಿಟ್ಟು ಹೋಗಿದ್ದವು. ಈ ಸಮಸ್ಯೆ ಕಳೆದ 38 ವರ್ಷಗಳಿಂದ ಅಂದರೆ 1982 ರಿಂದಲೂ ಹಾಗೆಯೇ ಉಳಿದುಕೊಂಡು ಬಂದಿತ್ತು. ಇದರಿಂದ ನಮ್ಮ ರಾಜ್ಯದಲ್ಲಿ ತಳವಾರ, ಪರಿವಾರ ಸಮುದಾಯದವರು ಪ.ಪಂಗಡ ಪ್ರಮಾಣಪತ್ರ ಪಡೆಯಲು ತೊಂದರೆಯಾಗಿತ್ತು. ಹಿಂದೆ ಸಚಿವರಾಗಿದ್ದ ಅನಂತಕುಮಾರ್‌ ಸಾಕಷ್ಟುಪ್ರಯತ್ನ ಮಾಡಿದ್ದರು. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೆ ತಂದು, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವರಾದ ಅಮಿತ್‌ ಶಾ, ಕೇಂದ್ರದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಚಿವರಾದ ಡಿ.ವಿ. ಸದಾನಂದಗೌಡ, ಪ್ರಹ್ಲಾದ್‌ ಜೋಷಿ. ಸುರೇಶ್‌ ಅಂಗಡಿ, ಬುಡಕಟ್ಟು ಕಲ್ಯಾಣ ಸಚಿವರು, ಮುಖ್ಯಮಂತ್ರಿಗಳಾದ ಬಿ.ಎಸ್‌, ಯಡಿಯೂರಪ್ಪ, ಸಟಿವರಾದ ಬಿ. ಶ್ರೀರಾಮುಲು ಸೇರಿದಂತೆ ಎಲ್ಲಾ ಶಾಸಕರು, ಸಂಸದರ ಸಹಕಾರ ಪಡೆದು, ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಮಂಡಿಸಿ, ಪಾಸ್‌ ಮಾಡಿಸಿ, ಗೆಜೆಟ್‌ನಲ್ಲಿ ಪ್ರಕಟವಾಗುವಂತೆ ನೋಡಿಕೊಂಡಿದ್ದು ತೃಪ್ತಿ ನೀಡಿದೆ.

ರಾಜ್ಯ ಸರ್ಕಾರದ ಮೂಲಕ ಏನು ಮಾಡಿದ್ದೀರಿ?

ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿ. ಸೋಮಣ್ಣ ಅವರ ಸಹಕಾರದಿಂದ ಚಾಮುಂಡಿಬೆಟ್ಟಅಭಿವೃದ್ಧಿಗೆ ಸಾಕಷ್ಟುಕ್ರಮ ಕೈಗೊಂಡಿದ್ದೇವೆ. ದಸರಾ ಮಹೋತ್ಸವವನ್ನು ಎಲ್ಲರ ಮೆಚ್ಚುವ ರೀತಿ ಮಾಡಿದ್ದೇವೆ.

ಪತ್ರಕರ್ತರಾಗಿದ್ದಾಗಿನ ಕನಸುಗಳಿಗೆ ಈಗ ಜೀವ ಸಿಕ್ಕಿದೆಯೇ?

2014 ರಲ್ಲಿ ನಾನು ಮೈಸೂರು- ಕೊಡಗು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾದಾಗ ಭೌಗೋಳಿಕ ಹಿನ್ನೆಲೆ, ಊರು- ಕೇರಿ ಏನೂ ಗೊತ್ತಿರಲಿಲ್ಲ. ಆದರೂ ಜನತೆ ಹೊಸಬನಾದ ನನ್ನನ್ನು ಕಾಂಗ್ರೆಸ್‌ನ ಎಚ್‌. ವಿಶ್ವನಾಥ್‌ ಅವರ ವಿರುದ್ಧ ಗೆಲ್ಲಿಸಿದರು. ಆಗಲೇ ನಾನು ಹೇಗಾದರೂ ಮಾಡಿ ಜನರ ಋುಣ ತೀರಿಸಬೇಕು ಎಂಬ ಸಂಕಲ್ಪ ಮಾಡಿದೆ.

ಜಗತ್ತೇ ಮೆಚ್ಚುವಂತೆ ದೇಶ ಮುನ್ನಡೆಸುತ್ತಿರುವ ಮೋದಿ: ಪ್ರಧಾನಿ ಬಗ್ಗೆ ಮುನಿಸ್ವಾಮಿ ಮಾತು

ಮೈಸೂರಿನಲ್ಲಿ 12 ಎಂಜಿನಿಯರಿಂಗ್‌ ಕಾಲೇಜುಗಳಿವೆ. 83 ಡಿಗ್ರಿ ಕಾಲೇಜುಗಳಿವೆ. ಇದಲ್ಲದಲ್ಲದೆ ಐಟಿಐ, ಪಾಲಿಟೆಕ್ನಿಕ್‌ಗಳು ಇವೆ. ಸಾವಿರಾರು ಮಂದಿ ಬೆಂಗಳೂರು, ಹೈದ್ರಾಬಾದ್‌, ಚೆನ್ನೈ, ಪೂನಾ ಮೊದಲಾದ ಕಡೆಗೆ ಉದ್ಯೋಗಕ್ಕಾಗಿ ಹೋಗುತ್ತಿದ್ದರು. ಮೈಸೂರಿನ ಅಕ್ಕಪಕ್ಕ ಕಾವೇರಿ, ಕಪಿಲಾ ನದಿಗಳಿವೆ. ಚೆಂದದ ಅರಮನೆ ಇದೆ. ಭಕ್ತಿಗೆ ಶ್ರೀ ಚಾಮುಂಡೇಶ್ವರಿ ದೇವಿ ಇದ್ದಾಳೆ. ಕುತೂಹಲ ತಣಿಸಲು ಶ್ರೀ ಚಾಮರಾಜೇಂದ್ರ ಮೃಗಾಲಯ ಇದೆ. ಪ್ರವಾಸಕ್ಕೆ ನಾಗರಹೊಳೆ, ಬಂಡೀಪುರ ಅಭಯಾರಣ್ಯಗಳಿವೆ. ಹೀಗಿರುವಾಗ ಇಲ್ಲಿಯೇ ಕೈಗಾರಿಕೆಗಳು ಅಭಿವೃದ್ಧಿಯಾದರೆ ಉದ್ಯೋಗ ಸೃಷ್ಟಿಯಾಗುತ್ತದೆ ಎನಿಸಿತು.

ಮೈಸೂರಿನಲ್ಲಿ ಹಳೆಯವುಗಳ ಜತೆ ಹೊಸದಾಗಿ ಕೂರ್ಗಳ್ಳಿ, ಕಡಕೊಳ, ತಾಂಡವಪುರ ಕೈಗಾರಿಕಾ ಪ್ರದೇಶಗಳಿದ್ದರೂ ಕೈಗಾರಿಕೆಗಳು ಯಾಕೆ ಬರುತ್ತಿಲ್ಲ? ಉದ್ಯೋಗ ಯಾಕೆ ಸೃಷ್ಟಿಯಾಗುತ್ತಿಲ್ಲ? ಎಂದು ವಿಮರ್ಶಿಸಿದಾಗ ಮೈಸೂರಿಗೆ ಕನೆಕ್ಟಿವಿಟಿ (ರಸ್ತೆ, ರೈಲು, ವಿಮಾನ ಸಂಪರ್ಕ) ಸಮಸ್ಯೆ ಇರುವುದು ಗಮನಕ್ಕೆ ಬಂದಿತು. ಆಗ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಅವರ ಗಮನಕ್ಕೆ ತಂದೆ. ಮೈಸೂರು- ಬೆಂಗಳೂರು ನಡುವೆ 2,500 ಕೋಟಿ ರು.ಗಳ ಹತ್ತು ಪಥದ ಹೆದ್ದಾರಿ ನಿರ್ಮಾಣಕ್ಕೆ ಅನುಮೋದನೆ ದೊರೆಯಿತು. 2018ರ ಫೆ.19 ರಂದು ಮೋದಿ ಅವರೇ ಈ ಕಾರ್ಯಕ್ಕೆ ಚಾಲನೆ ನೀಡಿದರು.

ಸಂಸದರ ಜತೆಗೆ ಮೋದಿ ಒಡನಾಟ ಬೆಸ್ಟ್‌, ಖುದ್ದು ಭೇಟಿ ಮಾಡ್ಬೇಕಂದ್ರೆ ಮನೆಗೇ ಕರೀತಾರೆ ಪ್ರಧಾನಿ

ಒಂದು ಕಾಲಕ್ಕೆ ರಾಜ್ಯದ ಕೇಂದ್ರ ಸ್ಥಾನವಾಗಿದ್ದ ಮೈಸೂರಿನಲ್ಲಿ ಪಾಸ್‌ ಪೋರ್ಟ್‌ ಸೇವಾ ಕೇಂದ್ರ ಇಲ್ಲದಿದ್ದನ್ನು ಗಮನಿಸಿ, ಇಡೀ ದೇಶದಲ್ಲಿಯೇ ದೇಶದ ಮೊದಲ ಅಂಚೆ ಕಚೇರಿ ಪಾಸ್‌ಪೋರ್ಟ್‌ ಸೇವಾ ಕೇಂದ್ರ ಆರಂಭಿಸಿದೆ.

Interview with Mysore kodagu MP Pratap simha on PM Narendra Modi govt 2 completing year

ಮಧ್ಯಾಹ್ನದ ನಂತರ ಬೆಂಗಳೂರಿಗೆ ಸಂಜೆ 6.30ಕ್ಕೆ ಚಾಮುಂಡಿ ಎಕ್ಸ್‌ಪ್ರೆಸ್‌ ಮಾತ್ರ ಇತ್ತು. ಮಧ್ಯಾಹ್ನ 3.30ಕ್ಕೆ ಟಿಪ್ಪು ಎಕ್ಸ್‌ಪ್ರೆಸ್‌ ಹಾಕಿಸಿದೆ. ಸಂಜೆ 5.45ಕ್ಕೆ ವಿಶ್ವಮಾನವ ಎಕ್ಸ್‌ಪ್ರೆಸ್‌, ಸಂಜೆ 5.15 ಹಾಗೂ 6.50ಕ್ಕೆ ಮೆಮು ರೈಲು ಸೌಲಭ್ಯ ಕಲ್ಪಿಸಿದೆ. ಮೈಸೂರಿನಿಂದ ದಕ್ಷಿಣ ಭಾರತದ ಮೂರು ಪ್ರಮುಖ ನಗರಗಳಾದ ಹೈದ್ರಾಬಾದ್‌, ಚೆನ್ನೈ, ತ್ರಿವೇಡ್ರಂಗೆ ರೈಲು ಸಂಪರ್ಕ ಆರಂಭವಾಯಿತು. 9 ಹೊಸ ರೈಲುಗಳ ಓಡಾಟ ಆರಂಭವಾಯಿತು. ಎ.ಬಿ. ವಾಜಪೇಯಿ ಅವರ ಕಾಲದಲ್ಲಿ ಆರಂಭವಾಗಿದ್ದ ಮೈಸೂರು- ಬೆಂಗಳೂರು ನಡುವೆ ರೈಲ್ವೆ ಜೋಡಿ ಹಳಿ ನಿರ್ಮಾಣ ಕಾರ್ಯ ಮುಕ್ತಾಯವಾಯಿತು. ವಿದ್ಯುದ್ದೀಕರಣ ಮಾರ್ಗವಾಗಿ ಪರಿವರ್ತಿಸಲಾಯಿತು. ಮೈಸೂರು ವಿಮಾನ ನಿಲ್ದಾಣ ಬಳಕೆಯಾಗುತ್ತಿರಲಿಲ್ಲ. ಈಗ ಚೆನ್ನೈ, ಹೈದ್ರಾಬಾದ್‌ಗೆ ತಲಾ 2, ಬೆಂಗಳೂರು, ಬೆಳಗಾವಿ, ಗೋವಾ, ಕೊಚ್ಚಿನ್‌ ಹಾಗೂ ಕಲಬುರಗಿಗೆ ವಿಮಾನ ಸೌಲಭ್ಯ ಇದೆ.

ಮುಂದಿನ ಕನಸಿನ ಯೋಜನೆಗಳೇನು?

ಮೈಸೂರಿನ ಮನೆಮನೆಗಳಿಗೆ ಪೈಪ್‌ಲೈನ್‌ ಮೂಲಕ ಅಡುಗೆ ಅನಿಲ ಪೂರೈಸುವ ಯೋಜನೆಗೆ ಅನುಮೋದನೆ ಸಿಕ್ಕಿದೆ. ಇದನ್ನು ಆದಷ್ಟುಶೀಘ್ರ ಕಾರ್ಯಗತ ಮಾಡುತ್ತೇವೆ.

ಮೋದಿ ಅವರೊಂದಿಗೆ ನಿಮ್ಮ ಸ್ಮರಣೀಯ ಕ್ಷಣ?

2018ರ ಫೆಬ್ರವರಿ 19 ರಂದು ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಯೋಜನೆಗಳನ್ನು ಉದ್ಘಾಟಿಸಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಾರ್ವಜನಿಕ ಸಮಾರಂಭಕ್ಕೆ ಬಂದಾಗ, ‘ನೀವು ಎಷ್ಟೊಳ್ಳೆ ಸಂಸದನನ್ನು ಗೆಲ್ಲಿಸಿದ್ದೀರಿ ಎಂದರೆ ಯಾವಾಗ ನನ್ನ ಬಳಿ ಬಂದರೂ ಯಾವುದಾದರೂ ಕೆಲಸದ ಮನವಿಯನ್ನು ಹಿಡಿದುಕೊಂಡೆ ಬರ್ತಾನೆ. ಕೆಲಸ ಆಗುವ ತನಕ ಆತನೂ ನೆಮ್ಮದಿಯಾಗಿರಲ್ಲ. ನಮ್ಮನ್ನು ನೆಮ್ಮದಿಯಾಗಿ ಇರಲ್ಲ ಬಿಡಲ್ಲ’ ಎಂದಿದ್ದರು. ಯಾವುದೇ ಸಂಸದನಿಗೆ ಇದಕ್ಕೆ ದೊಡ್ಡ ಉಡುಗೊರೆ ಮತ್ತೊಂದಿಲ್ಲ. ಮೋದಿ ಅವರ ಇದೊಂದೇ ಮಾತು ಸಾಕು ನಾನು ಮತ್ತಷ್ಟುಸ್ಫೂರ್ತಿಯಿಂದ ಕೆಲಸ ಮಾಡಲು ಸಹಕಾರಿ.

-ಅಂಶಿ ಪ್ರಸನ್ನಕುಮಾರ್‌

Follow Us:
Download App:
  • android
  • ios