ಮೋದಿ ಕಾಲದಲ್ಲಿ ಭಾರತ ಬದಲಾಗಿದೆ, ಜಗತ್ತೂ ಬದಲಾಗಿದೆ
ಮೇ 30. ಮೋದಿ ಅವರು 2ನೇ ಅವಧಿಗೆ ಪ್ರಧಾನಿಯಾಗಿ ವರ್ಷ ಪೂರೈಸಿದ್ದಾರೆ. ಈ ಅವಧಿಯಲ್ಲಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳು, ದೇಶದ ಪ್ರಗತಿಯಲ್ಲಿ ಮೋದಿ ವಹಿಸಿದ ಪಾತ್ರ, ಕೊರೋನಾ ಹೋರಾಟದ ಬಗ್ಗೆ ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ದೇಶದ ಮೊದಲ ಸೇವಕನ ಬಗ್ಗೆ ಇಲ್ಲಿ ವಿಭಿನ್ನವಾಗಿ ಚರ್ಚೆ ಮಾಡಿದ್ದಾರೆ.
ಬೆಂಗಳೂರು(ಜೂ.01): ನರೇಂದ್ರ ದಾಮೋದರ ದಾಸ್ ಮೋದಿ. ಭಾರತದ 14ನೇ ಪ್ರಧಾನಮಂತ್ರಿ, ಅದಕ್ಕೂ ಮೊದಲು ಗುಜರಾತ್ ರಾಜ್ಯವನ್ನು 14 ವರ್ಷ ಕಾಲ ಆಳಿದ್ದವರು. ಅದಕ್ಕೂ ಹಿಂದೆ ಬಿಜೆಪಿಯಲ್ಲಿ ನಾಯಕರಾಗಿದ್ದರು, ಇಷ್ಟನ್ನು ಬರೆದು ಮುಗಿಸಿದರೆ ಮೋದಿ ಅವರಿಗೆ ಮಾಡಿದ ದೊಡ್ಡ ಅಪಚಾರವಾಗುತ್ತದೆ. ಅವರು, ನನ್ನ ದೃಷ್ಟಿಕೋನದಲ್ಲಿ ಭಾರತದ ಮಟ್ಟಿಗಷ್ಟೇ ಅಲ್ಲದೆ ಜಾಗತಿಕವಾಗಿಯೂ ಈ ಶತಮಾನದ ಓರ್ವ ಬಹುಮುಖ್ಯ ರಾಜಕೀಯ ಸುಧಾರಣಾವಾದಿ.
ಈ ಮೊದಲು ಭಾರತವನ್ನು ಅಧ್ಯಯನ ಮಾಡಬೇಕಾದರೆ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರಿಗೂ ಮೊದಲು ಹಾಗೂ ಅವರ ನಂತರ ಎಂದು ವಿಭಾಗಿಸಿ ಅಧ್ಯಯನ ಮಾಡಲಾಗುತ್ತಿದ್ದ ಪರಿಪಾಠವಿತ್ತು. ದೇಶ ವಿದೇಶಗಳಲ್ಲಿ ಬಹುತೇಕವಾಗಿ ಈ ಮಾನದಂಡದ ತಳಹದಿಯ ಮೇಲೆಯೇ ಭಾರತವನ್ನು ನೋಡಲಾಗುತ್ತಿದೆ. ಈಗ, ಅಂದರೆ ಹೊಸ ಶತಮಾನದ ಹೊಸ್ತಿಲಲ್ಲಿ ಆಗತ್ಯ ಇರುವ ಈ ಅಧ್ಯಯನಶೀಲತೆಯಲ್ಲಿ ಒಂದು ಗಂಭೀರ ಸ್ವರೂಪದ ಬದಲಾವಣೆಯನ್ನು ನಾವು ಗುರುತಿಸಬೇಕಾಗಿದೆ. ಅದೇನೆಂದರೆ ಭಾರತವನ್ನು ಈಗ, ಅದರಲ್ಲೂ ಮುಖ್ಯವಾಗಿ ದೇಶಕಾಲದ ರಾಜಕೀಯ, ಆರ್ಥಿಕತೆ, ಸಾಮಾಜಿಕ ಪರಿವರ್ತನೆ, ಅಭಿವೃದ್ಧಿಯನ್ನು ನರೇಂದ್ರ ಮೋದಿ ಅವರು ಭಾರತದ ಪ್ರಧಾನಿ ಆಗುವುದಕ್ಕೆ ಮೊದಲು ಹಾಗೂ ಅವರು ಪ್ರಧಾನಿಯಾದ ಮೇಲೆ ಎಂದು ಗುರುತಿಸಿ ಅಧ್ಯಯನ ಮಾಡಲೇಬೇಕಾಗಿದೆ. ನನ್ನ ಈ ಅಭಿಮತವನ್ನು ನಮ್ಮ ದೇಶದ ಪ್ರಾಜ್ಞರು ಗೌರವಿಸುತ್ತಾರೆಂಬ ಅಚಲವಾದ ನಂಬಿಕೆ ನನಗಿದೆ. ರಾಷ್ಟ್ರಪಿತರು ಸ್ವಾತಂತ್ರ್ಯ ತಂದುಕೊಟ್ಟು 73 ವರ್ಷಗಳೇ ಸಂದಿವೆ. ಅ ಮಹಾಪುರುಷ ಕಂಡ ಅದೆಷ್ಟೋ ಕನಸುಗಳನ್ನು ಮೋದಿ ಅವರು ನನಸು ಮಾಡಿದ್ದಾರೆ. ಇನ್ನೆರಡು ವರ್ಷಗಳಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯದ ಮುಕ್ಕಾಲು ಶತಮಾನದ ಸಂಭ್ರಮ ಎದುರಾಗಲಿದೆ.
ಹೀಗೆ ಮೋದಿಯವರನ್ನು ಒಂದು ಸೀಮಿತ ಚೌಕಟ್ಟಿನಲ್ಲಿ ಕೂಡಿಟ್ಟು ವಿಚಾರ ಮಾಡಲು ಸಾಧ್ಯವಿಲ್ಲ. ಅವರ ಅಗಾಧತೆಯನ್ನು ವಿಶಾಲ ದೃಷ್ಟಿಕೋನದಲ್ಲಿ ನೋಡಬೇಕು. ಯಾಕೆಂದರೆ, ನಮ್ಮ ಭವ್ಯ ಪರಂಪರೆಗೆ ಮುಕ್ಕಾಗದಂತೆ ವಿವಿಧತೆಯಲ್ಲಿ ಏಕತೆಯನ್ನು ಒಪ್ಪಿಕೊಂಡು ಜಗತ್ತಿನ ಪಾಲಿಗೆ ನಮ್ಮ ದೇಶದ ಕೀರ್ತಿ ಶಿಖರವನ್ನು ಶಿರವೆತ್ತಿ ನೋಡುವಂತೆ ಮಾಡಿದ ಹೆಗ್ಗಳಿಕೆ ನಿಸ್ಸಂಶಯವಾಗಿ ಮೋದಿ ಅವರಿಗೇ ಸಲ್ಲಬೇಕು. ಅದಕ್ಕೊಂದು ಉದಾಹರಣೆಯನ್ನೇ ನೀಡಬಹುದು. 2014ರ ಮೇ 26ರಂದು ಸಂಜೆ ರಾಷ್ಟ್ರಪತಿ ಭವನದ ಮುಂದೆ ಪ್ರಮಾಣ ವಚನ ಸ್ವೀಕರಿಸಿದ ಕ್ಷಣದಲ್ಲಿ ಅವರು ನಮ್ಮ ದೇಶದ ಎಲ್ಲ ಮಗ್ಗುಲುಗಳಲ್ಲಿ ವಜ್ರಗಳಂತೆ ಹೊಳೆಯುತ್ತಿದ್ದ ಸಾಧಕರನ್ನು ಸಾಕ್ಷೀಭೂತರನ್ನಾಗಿ ಮಾಡಿಕೊಂಡಿದ್ದರು. ಆ ಮೂಲಕ ಅವರು ಭರತಮಾತೆಯ ಉದರದಲ್ಲಿ ಜನ್ಮತಳೆದ ನೂರೂಚಿಲ್ಲರೆ ಕೋಟಿ ಪ್ರಜೆಗಳ ಆಶಯಗಳಿಗೆ ಬದ್ಧನಾಗಿ ಆ ಹೊಣೆಗಾರಿಕೆಯನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಪ್ರಮಾಣೀಕರಿಸಿದ್ದರು. ಜತೆಗೆ, ನಮ್ಮ ನೆರೆಹೊರೆಯವರು ಗಡಿಗೆ ಹೊಂದಿಕೊಂಡ ಗೆಳೆಯರನ್ನು, ಅಂದರೆ ಸಾರ್ಕ್ ನಾಯಕರನ್ನು ಮುಂಚೂಣಿಯ ಸಾಲಿನಲ್ಲಿ ಕೂರಿಸಿ ಅವರ ಸಮಕ್ಷಮದಲ್ಲಿಯೇ ಗೌಪ್ಯತೆಯ ವಿಧಿ ಸ್ವೀಕರಿಸಿ ಇಡೀ ಜಗತ್ತಿಗೇ ನವ ಸಂದೇಶವನ್ನು ಕೊಟ್ಟಿದ್ದರು ಮೋದಿ.
ಮೊದಲ ಅವಧಿಯ ಹೆಜ್ಜೆಗಳು
ಸವಾಲುಗಳನ್ನು ಮೆಟ್ಟಿಹೊಸ ಫಲಿತಾಂಶಗಳತ್ತ ಮುಖ ಮಾಡಿದ ಸಂದರ್ಭವೆಂದರೆ, ಅದು 2014 ಮೇ ತಿಂಗಳಿಂದ 2019. ಮೋದಿ, ತಾವು ಅಧಿಕಾರಕ್ಕೇರಿದ ಕ್ಷಣದಿಂದಲೇ ಬೆಳಗಿನ ಜಾವದಿಂದ ನಡುರಾತ್ರಿವರೆಗೂ ಜನರ ಕೆಲಸ ಮಾಡಲು ಆರಂಭಿಸಿದರು. ಕನಸು ಕಾಣುವುದು ಎಷ್ಟುಮಹತ್ವದ್ದೋ ಅದನ್ನು ಕಾರ್ಯರೂಪಕ್ಕೆ ತರುವುದು ಕೂಡ ಅಷ್ಟೇ ಮುಖ್ಯ ವಿಚಾರ. ಫಲಿತಾಂಶ ಕೊಡದ ಕನಸುಗಳು ಕೇವಲ ಸುಂದರ ಸ್ವಪ್ನಗಳಾಗಿ ಮಾತ್ರ ಉಳಿಯುತ್ತವೆ. ಅವುಗಳಿಂದ ಯಾರಿಗೇನು ಪ್ರಯೋಜನ ಎಂದು ಪ್ರಶ್ನಿಸಿದ್ದರು ಮೋದಿ ಅವರು. ಅವರ ಮಾತು ಆ ಸಂದರ್ಭದಲ್ಲಿ ಅಕ್ಷರಶಃ ಸತ್ಯವಾಗಿತ್ತು. ಕನಸುಗಳೆಲ್ಲ ಕಾಗದದ ಮೇಲೆ ಅಕ್ಷರರೂಪದಲ್ಲಿ ಇದ್ದವೇ ವಿನಾ ಜನರನ್ನು ಮುಟ್ಟಿರಲಿಲ್ಲ. ಎಲ್ಲ ಹಂತಗಳಲ್ಲೂ ಎಡವಿದ್ದ ಆಡಳಿತದ ದುಃಸ್ಥಿತಿ ಅವರಿಗೆ ಬರಲು ಕೆಲಕ್ಷಣಗಳೇ ಸಾಕಾಗಿದ್ದವು. ಅದರ ಪರಿಣಾಮವೇ ನುಂಗಣ್ಣರ ಪಾಲಿಗೆ ಕಾಮಧೇನುವಾಗಿದ್ದ ಯೋಜನಾ ಆಯೋಗವೆಂಬ ಐರಾವತ, ನೀತಿ ಆಯೋಗವಾಯಿತು.
ನೋಟು ಅಮಾನ್ಯವೆಂಬ ಅತಿದೊಡ್ಡ ಸಾಹಸ ಕೈಗೆತ್ತಿಕೊಂಡರು. ಕಡುಕಗ್ಗಂಟಾಗಿದ್ದ ಜಿಎಸ್‌ಟಿಯನ್ನು ಅನಾಯಾಸವಾಗಿ, ಅಷ್ಟೇ ಪರಿಣಾಮಕಾರಿಯಾಗಿ ಜಾರಿ ಮಾಡಿದ ಹೆಗ್ಗಳಿಕೆ ಮೋದಿ ಅವರ ಸರಕಾರದ್ದು. ಮೋದಿಯವರನ್ನು ಅತಿ ಸಮೀಪದಿಂದ ಬಲ್ಲ ಪ್ರತಿಯೊಬ್ಬರಿಗೂ ಅವರ ದೂರದೃಷ್ಟಿ, ಚೈತನ್ಯಶೀಲ ಪ್ರಗತಿ, ಸಮಗ್ರ ಕಲ್ಯಾಣದ ಪರಿಕಲ್ಪನೆ ಗೊತ್ತೇ ಇರುತ್ತದೆ. ಮೇಲಾಗಿ ಅವರ ಯೋಚನಾ ವಿಧಾನ, ಅದನ್ನು ಕಾರ್ಯರೂಪಕ್ಕೆ ತರುವ ನಿಪುಣತೆಯನ್ನು ಅವರ ರಾಜಕೀಯ ವಿರೋಧಿಗಳು ಕೂಡ ಚಕಾರವಿಲ್ಲದೆ ಒಪ್ಪುತ್ತಾರೆ. ಮೇಕ್ ಇನ್ ಇಂಡಿಯಾ ಎಂಬ ದೊಡ್ಡ ಸ್ವದೇಶಿ ಯಜ್ಞದಲ್ಲಿ ಇದನ್ನು ಗಾಢವಾಗಿ ಗುರುತಿಸಬಹುದು. ಕೊರೊನೋತ್ತರ ಕಾಲದಲ್ಲಿ ಈ ಮೂಲಕ ಭಾರತಕ್ಕೆ ಭಾರೀ ಪ್ರಮಾಣದ ಕೈಗಾರಿಕೆಗಳು ಬರುತ್ತಿವೆ, ಇನ್ನೂ ಬರಲಿವೆ. ಕರ್ನಾಟಕಕ್ಕೆ ಇದರ ಲಾಭ ಹೆಚ್ಚೇ ಸಿಗಲಿದೆ.
ಮೋದಿ ಪರಿಕಲ್ಪನೆಯಲ್ಲಿ ಮೂಡಿದ ಅಸಾಮಾನ್ಯ ಐಡಿಯಾಗಳಲ್ಲಿ ಡಿಜಿಟಲ… ಇಂಡಿಯಾ ಕೂಡ ಒಂದು. ಈ ಮೂಲಕ ಸರಕಾರವು ಬಹು ಮುಖ್ಯವಾಗಿ ಮೊಬೈಲ…, ಇಂಟರ್ನೆಟ್ ಆಧಾರಿತ ಹಣಕಾಸು ವಹಿವಾಟಿಗೆ ಪ್ರೋತ್ಸಾಹ ನೀಡಿದೆ.
ಜನಧನ ಯೋಜನೆಯೂ ಮೋದಿ ಅವರ ಇನ್ನೊಂದು ಬಹುಮುಖ್ಯವಾದ ಕನಸು. ಅದು ನನಸಾಗಿ ಹಳ್ಳಿಹಳ್ಳಿಗೂ ವ್ಯಾಪಿಸಿದೆ. ಎಲ್ಲಾ ವರ್ಗದ ಜನರನ್ನು ಅರ್ಥ ವ್ಯವಸ್ಥೆಗೆ ಅನುಸಂಧಾನಗೊಳಿಸಿದೆ. ರಾಷ್ಟ್ರೀಯ ಆರೋಗ್ಯ ಯೋಜನೆ ಅಥವಾ ಆಯುಷ್ಮಾನ್ ಭಾರತ ಯೋಜನೆಯಡಿ ಕಡು ಬಡವರಿಗೆ ಉತ್ತಮ ಆರೋಗ್ಯ ಸೌಲಭ್ಯ ನೀಡುವ ಪ್ರಯತ್ನವನ್ನೂ ಮೋದಿ ಅವರು ಮಾಡಿದ್ದಾರೆ.
ಮುಂಚೂಣಿಯಲ್ಲಿ ವಿದೇಶಾಂಗ ನೀತಿ
ಮೋದಿ ಅವರ ಈವರೆಗಿನ ಆಡಳಿತದಲ್ಲಿ ಬಹಳಷ್ಟುಎದ್ದು ಕಾಣುವ ಅಂಶಗಳಲ್ಲಿ ಅವರ ವಿದೇಶಾಂಗ ನೀತಿ ಮಕುಟಮಣಿಯಂತಿದೆ. ಆ ಮಟ್ಟಿಗೆ ಭಾರತ ಬದಲಾಗಿದೆ. ಪ್ರಧಾನಿ ದೂರದೃಷ್ಟಿಫಲವಾಗಿ ಭಾರತ ಇಂದು ಜಗತ್ತಿನ ಅಗ್ರದೇಶಗಳ ಸಾಲಿನಲ್ಲಿ ವಿರಾಜಮಾನವಾಗಿ ನಿಂತಿದೆ. ದೇಶದ ಸಾರಥ್ಯ ವಹಿಸಿಕೊಂಡ ಮೇಲೆ ಅವರು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಜಗತ್ತನ್ನು ಸುತ್ತುಹಾಕಿದ್ದಾರೆ. ಅವರ ಮೊದಲ ವಿದೇಶಿ ಪ್ರವಾಸ ಭೂತಾನ್ ದೇಶಕ್ಕೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ನೆರೆಹೊರೆಯವರು ಮೊದಲು, ನಂತರ ಉಳಿದವರು ಎಂಬ ಅವರ ಫಿಲಾಸಫಿ ದೊಡ್ಡ ಫಲಶ್ರುತಿಯನ್ನೇ ನೀಡಿದೆ. ಮಧ್ಯಪ್ರಾಚ್ಯ ಅದರಲ್ಲೂ ಇಸ್ರೇಲ್ ಬಗ್ಗೆ ಭಾರತದ ನಿಲವು ಬಲಿಷ್ಠವಾಗಿದೆ. ಆ ದೇಶ ನಮ್ಮ ಪರಮಾಪ್ತ ದೇಶವಾಗಿದೆ.
ಇನ್ನು ಅವರು 2014ರಿಂದ ಕೊರೋನಾ ಬರುವ ತವಕ 60 ದೇಶಗಳಿಗೆ ಭೇಟಿ ನೀಡಿದ್ದಾರೆಂದರೆ ನಂಬಲೇಬೇಕು. ಇದರಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ರಾಜತಾಂತ್ರಿಕವಾಗಿ ಭಾರತದ ವರ್ಚಸ್ಸು ಹಿಂದೆಂದಿಗಿಂತಲೂ ಬಲವಾಗಿದೆ. ದ್ವಿಪಕ್ಷೀಯ ಸಂಬಂಧಗಳಲ್ಲಿ ಭಾರತ ನೆರೆಯ ಚೀನಾಗಿಂತಲೂ ಗಟ್ಟಿಯಾಗಿದೆ. ಚೀನಾ ಜತೆಗಿನ ವಿವಾದಗಳು ಬಗೆಹರಿಸಲು ಮೋದಿ ಇಟ್ಟವಿಶ್ವಾಸಪೂರ್ವಕ ಹೆಜ್ಜೆಗಳು ಬಹಳ ಮಹತ್ವದವು. ಜತೆಗೆ, ವಿದೇಶಿ ನೆಲದಲ್ಲಿಯೂ ನಮ್ಮ ಪ್ರಧಾನಿಯ ಮಾತುಗಳು ಅದೆಷ್ಟುಪ್ರಖರ ಪರಿಣಾಮ ಬೀರಿವೆ ಎಂಬುದಕ್ಕೆ ನ್ಯೂಯಾರ್ಕಿನ ಟೈಮ್ಸ… ಸ್ಕೆ$್ವೕರ್ ನಲ್ಲಿ ಮಾಡಿದ ಐತಿಹಾಸಿಕ ಭಾಷಣದಿಂದ ಮೊದಲಾಗಿ ಇತ್ತೀಚೆಗೆ ಅದೇ ಅಮೆರಿಕದ ಹ್ಯೂಸ್ಟನ್ ನಗರದಲ್ಲಿ ನಡೆದ ‘ಹೌಡಿ ಮೋದಿ’ ಕಾರ್ಯಕ್ರಮದವರೆಗೂ ಅವರು ತಮ್ಮ ಛಾಪನ್ನಲ್ಲಷ್ಟೇ ಅಲ್ಲ, ಪ್ರಬಲ ಭಾರತದ ಹೆಜ್ಜೆಗಳನ್ನು ಎಂದೆಂದಿಗೂ ಅಳಿಸಲಾರದ ಹಾಗೆ ಛಾಪಿಸಿದ್ದಾರೆ!!
ಮೋದಿ 2.0 ಅಂದರೆ 2019ರಿಂದ
ಈಗಿನ ಅವಧಿಗೆ ಬಂದರೆ, ಮೋದಿ ಅವರದ್ದು ಅದೇ ವೇಗ, ಅದೇ ಉತ್ಸಾಹ. ಜತೆಯಲ್ಲಿ ಕೆಲಸ ಮಾಡುವವರು ಅವರೊಟ್ಟಿಗೆ ನಡೆಯುವುದು ಹಾಗಿರಲಿ, ಟ್ರ್ಯಾಕಿನಲ್ಲಿ ರನ್ ಮಾಡಬೇಕು. ಅದನ್ನೇ ಕಾಣುತ್ತಿದ್ದೇವೆ. ಅವರ ವೇಗ ಪ್ರಗತಿಯಲ್ಲಿ ಕಾಣುತ್ತಿದೆ. ಅದಕ್ಕೆ ಮೋದಿಯವರು ಸಮಯಕ್ಕೆ, ಕೆಲಸಕ್ಕೆ ಅತಿಹೆಚ್ಚು ಮಹತ್ವ ಕೊಡುತ್ತಾರೆ ಎಂಬುದಕ್ಕೆ ನಾನು ಅನೇಕ ಉದಾಹರಣೆಗಳನ್ನು ನೀಡಬಲ್ಲೆ. ಕೆಲವರಿಗಷ್ಟೇ ಕಲ್ಪವೃಕ್ಷವಾಗಿ, ಭಾರತದ ಪಾಲಿಗೆ ಮರಣಶಾಸನವಾಗಿದ್ದ ಜಮ್ಮು-ಕಾಶ್ಮೀರದ 370ನೇ ವಿಧಿ ಶಾಶ್ವತವಾಗಿ ವಿಧಿವಶವಾಗುವಂತೆ ಮಾಡಿದ್ದು ಸ್ವಾತಂತ್ರ್ಯೋತ್ತರ ಭಾರತದ ಅತಿದೊಡ್ಡ ದಿಟ್ಟ, ಕ್ರಾಂತಿಕಾರಕ ನಿರ್ಧಾರ. ಅದಕ್ಕೂ ಮೊದಲು ಪಾಕಿಸ್ತಾನದ ಭೂಭಾಗಗಳ ಮೇಲೆ ಸರ್ಜಿಕಲ… ದಾಳಿ ನಡೆಸಿ ಭಯೋತ್ಪದಕರ ಶಿಬಿರಗಳನ್ನು ಧ್ವಂಸ ಮಾಡಿದ್ದು ಓರ್ವ ಪ್ರಬಲ ನಾಯತ್ವದಿಂದ ಮಾತ್ರ ಸಾಧ್ಯ ಎಂದು ಮೋದಿ ತೋರಿಸಿಕೊಟ್ಟಿದ್ದಾರೆ.
ಕೊನೆಯದಾಗಿ ಕೊರೊನ ಕಷ್ಟಕಾಲದಲ್ಲಿ ಅವರು ದೇಶವನ್ನು ಮುನ್ನೆಡೆಸಿದ ರೀತಿ ಇಡೀ ಜಗತ್ತೇ ತಲೆದೂಗಿದೆ. ಓರ್ವ ಪ್ರಧಾನಿಯಾಗಿ ಮಾತ್ರವಲ್ಲ, ಪ್ರಜೆಗಳಲ್ಲಿ ಒಬ್ಬ ಪ್ರಜೆಯಾಗಿ ಅವರು ಕೆಲಸ ಮಾಡಿದ್ದಾರೆ, ಎಲ್ಲರಿಂದ ಮಾಡಿಸಿದ್ದಾರೆ. ಬಲಿಷ್ಠ ಅಮೆರಿಕ, ರಷ್ಯಾ, ಯುರೋಪ್ ದೇಶಗಳೆಲ್ಲ ಕೈಚೆಲ್ಲಿ ಕೂತರೂ 130 ಕೋಟಿಗೂ ಅಧಿಕ ಜನಸಂಖ್ಯೆಯ ಭಾರತದಲ್ಲಿ ಈ ಮಹಾಮಾರಿ ನಿಯಂತ್ರಣಕ್ಕೆ ಬರುತ್ತದೆಯೇ ಎಂದು ಶಂಕಿಸುತ್ತಿದ್ದ ಹೊತ್ತಿನಲ್ಲಿ ಜನರ ಆತ್ಮದಲ್ಲಿ ಅರಿವಿನ, ಹೊಣೆಗಾರಿಕೆಯ ಹಾಗೂ ಸ್ಥೈರ್ಯದ ಜ್ಯೋತಿಯನ್ನು ಮೂಡಿಸಿ ದೇಶವನ್ನು ಮುನ್ನೆಡೆಸಿದ್ದಾರೆ ಮೋದಿ. ಜನತಾ ಕಫä್ರ್ಯದಿಂದ 20 ಲಕ್ಷ ಕೋಟಿ ರು. ಪ್ಯಾಕೇಜ್ ಘೋಷಣೆಯ ತನಕ ಅವರು ಇಟ್ಟಹೆಜ್ಜೆಗಳೆಲ್ಲವೂ ಅತ್ಯಂತ ಸ್ತುತ್ಯಾರ್ಹ, ಅಷ್ಟೇ ಪೂಜನೀಯ.
ಕೊರೊನದಿಂದ ಕೊಡವಿಕೊಂಡು ಮೇಲೇಳುತ್ತಿರುವ ಭಾರತೀಯರಿಗೆ ಅವರು ಕೊಟ್ಟವಚನಗಳು, ಹೇಳಿದ ಕಿವಿಮಾತುಗಳು ಜಗತ್ತನ್ನು ನಮ್ಮತ್ತ ನೋಡುವಂತೆ ಮಾಡಿವೆ. ಆತ್ಮನಿರ್ಭರ ಭಾರತ್ ನಿರ್ಮಾಣದಿಂದ ನಾವು ಸ್ವಾವಲಂಬಿ ಭಾರತವನ್ನುಕಟ್ಟೋಣವೆಂದು ಅವರು ಕೊಟ್ಟಕರೆ ದೇಶದ ಉದ್ದಗಲಕ್ಕೂ ಚೈತನ್ಯಶೀಲತೆಯ ಮಹಾನದಿಯಾಗಿ ಹರಿಯುತ್ತಿದೆ. ಈ ಚೈತನ್ಯಶೀಲತೆಯ ಶಕ್ತಿಯಿಂದ ಭಾರತದ ಪ್ರಗತಿಯ ಗಾಲಿ ಹೊಸ ಮನ್ವಂತರದತ್ತ ಹೊರಳುತ್ತಿದೆ. ಆ ನಿರೀಕ್ಷೆ ನನ್ನಲ್ಲಿ ಇಮ್ಮಿಡಿಯಾಗಿದೆ.
ಕೊನೆಯದಾಗಿ, ಮೋದಿ ಅವರ ಮಾತೊಂದರ ಮೂಲಕ ಈ ಲೇಖನವನ್ನು ಮುಗಿಸುತ್ತೇನೆ..
‘ನಾವು ಒಟ್ಟಾಗಿ ಚಲಿಸೋಣ, ಒಟ್ಟಾಗಿ ಆಲೋಚಿಸೋಣ, ಒಟ್ಟಾಗಿ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸೋಣ ಮತ್ತು, ನಾವು ಈ ದೇಶವನ್ನು ಒಟ್ಟಾಗಿ ಯಶಸ್ಸಿನ ಕಡೆಗೆ ಕೊಂಡೊಯ್ಯೋಣ. ಮೋದಿ ಅವರ ಮಾತುಗಳು ಕೊರೊನ ಕಷ್ಟಕಾಲದಲ್ಲಿ ನಮಗೆ ದೀವಿಯಾಗಲಿ’.