ಚೀನಾ, ಪಾಕ್ ಮೇಲೆರಗಬಲ್ಲ ಅಗ್ನಿ-5 ಕ್ಷಿಪಣಿ ಪರೀಕ್ಷೆ ಯಶಸ್ವಿ!
ಇಡಿ ಚೀನಾ ಹಾಗೂ ಪಾಕಿಸ್ತಾನ ತಲುಪಬಲ್ಲ, ರಷ್ಯಾ, ಯುರೋಪ್ ಮತ್ತು ಆಫ್ರಿಖಾ ಖಂಡವನ್ನೂ ತಲುಪಬಲ್ಲ 5400 ಕಿಲೋಮೀಟರ್‌ಗಿಂತ ದೂರ ಹಾರುವ ಗುರಿಯ ಅಣ್ವಸ್ತ್ರ ಸಾಮರ್ಥ್ಯದ ಅಗ್ನಿ5 ಖಂಡಾಂತರ ಕ್ಷಿಪಣಿಯ ಪರೀಕ್ಷೆಯನ್ನು ಭಾರತ ಯಶಸ್ವಿಯಾಗಿ ಮಾಡಿದೆ.
ನವದೆಹಲಿ (ಡಿ.16): ಗಡಿಯಲ್ಲಿ ಪದೇ ಪದೇ ಚೀನಾ ತಗಾದೆ ತೆಗೆಯುತ್ತಿರುವಾಗಲೇ ಇಡೀ ಚೀನಾ, ಪಾಕಿಸ್ತಾನ ತಲುಪಬಲ್ಲ, ರಷ್ಯಾ, ಯುರೋಪ್, ಆಫ್ರಿಕಾ ಖಂಡವನ್ನೂ ಮುಟ್ಟಬಲ್ಲ 5000 ಕಿ.ಮೀ.ಗಿಂತ ದೂರ ಹಾರುವ ಗುರಿಯ ಅಣ್ವಸ್ತ್ರ ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-5 ಅನ್ನು ಭಾರತ ಗುರುವಾರ ಯಶಸ್ವಿಯಾಗಿ ಪರೀಕ್ಷೆಗೆ ಒಳಪಡಿಸಿದೆ. ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪ ಪ್ರದೇಶದಿಂದ ಚಿಮ್ಮಿದ ಈ ಕ್ಷಿಪಣಿ ತನ್ನ ನಿಗದಿತ ಗುರಿಯನ್ನು ಯಶಸ್ವಿಯಾಗಿ ಮುಟ್ಟಿದೆ. ಈ ಕ್ಷಿಪಣಿ ಪರೀಕ್ಷೆ ಸಲುವಾಗಿ ‘ಅಗ್ನಿ-5’ ಉಡಾವಣೆಯಾಗುವ ಸುತ್ತಲಿನ 5400 ಕಿ.ಮೀ. ಸರಹದ್ದಿನಲ್ಲಿ ವಿಮಾನ ಹಾರಾಟ ನಿರ್ಬಂಧಿಸುವಂತೆ ವಿಮಾನ ಕಂಪನಿಗಳಿಗೆ ಸೂಚನೆ ನೀಡಲಾಗಿತ್ತು. ಈ ಹಿಂದೆ ನಡೆದ 6 ಪರೀಕ್ಷೆ ವೇಳೆ ಅಗ್ನಿ-5 ಕ್ಷಿಪಣಿ 5000 ಕಿ.ಮೀ. ಸಾಗಬಲ್ಲ ಸಾಮರ್ಥ್ಯದ ಪ್ರದರ್ಶನ ಮಾಡಿತ್ತು. ಆದರೆ ಈ ಸಲ ಕ್ಷಿಪಣಿಯಲ್ಲಿನ ತಂತ್ರಜ್ಞಾನ ಹಾಗೂ ಸಲಕರಣೆ ಬದಲಿಸಲಾಗಿದ್ದು, ಕ್ಷಿಪಣಿ ಇನ್ನಷ್ಟುಹಗುರಗೊಂಡಿದೆ. ಹೀಗಾಗಿ ಅಗತ್ಯ ಬಿದ್ದರೆ 5 ಸಾವಿರ ಕಿ.ಮೀ.ಗಿಂತ ಹೆಚ್ಚು ದೂರ ಹಾರಬಲ್ಲ ಸಾಮರ್ಥ್ಯ ಅಗ್ನಿ-5 ಕ್ಷಿಪಣಿಗೆ ಇದ್ದು, ಅದರಲ್ಲಿ ಯಶ ಕಂಡಿದೆ ಎಂದು ರಕ್ಷಣಾ ಇಲಾಖೆ ಮೂಲಗಳು ಹೇಳಿವೆ.
ಚೀನಾಗೆ ಆತಂಕ: ಕ್ಷಿಪಣಿ ಪರೀಕ್ಷೆ ಯಶಸ್ವಿಯಾಗುವುದರೊಂದಿಗೆ ಭಾರತದ ಮೇಲೆ ಮುಗಿಬೀಳಲು ಯತ್ನಿಸುತ್ತಿರುವ ಚೀನಾಕ್ಕೆ ಒಂದಷ್ಟುಆತಂಕವಂತೂ ಎದುರಾದಂತಾಗಿದೆ. ಚೀನಾ ಬಳಿ ಡಾಂಗ್‌ಫೆಂಗ್-41 ಎಂಬ ಬಲಿಷ್ಠ ಕ್ಷಿಪಣಿ ಇದೆ. 12ರಿಂದ 15 ಸಾವಿರ ಕಿ.ಮೀ. ದೂರವನ್ನು ಆ ಕ್ಷಿಪಣಿ ಕ್ರಮಿಸಬಹುದಾಗಿದೆಯಾದರೂ, ಭಾರತ ಕೂಡ ಇಡೀ ಚೀನಾ ಮೇಲೆ ಲಗ್ಗೆ ಇಡಬಲ್ಲ ಕ್ಷಿಪಣಿ ಅಭಿವೃದ್ಧಿಪಡಿಸಿರುವುದು ಚಿಂತೆಯ ವಿಷಯವಾಗಿರುವುದಂತೂ ಸತ್ಯ ಎಂಬ ವಿಶ್ಲೇಷಣೆಗಳು ಇವೆ.
ಇಂದು ಅಗ್ನಿ-5 ಕ್ಷಿಪಣಿ ಪರೀಕ್ಷೆ ಮಾಡಲಿರುವ ಭಾರತ? ತವಾಂಗ್ ಚಕಮಕಿ ನಡುವೆ ರಕ್ಷಣಾ ಪಡೆಗಳಿಗೆ ಮತ್ತಷ್ಟು ಬಲ!
ಇದು 7ನೇ ಪರೀಕ್ಷೆ: ಗುರುವಾರ ನಡೆದಿರುವುದು ಅಗ್ನಿ-5 ಕ್ಷಿಪಣಿಯ 7ನೇ ಪರೀಕ್ಷೆ. ಈ ಕ್ಷಿಪಣಿಯನ್ನು 2012ರಲ್ಲಿ ಮೊದಲ ಬಾರಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಅದಾದ ತರುವಾಯ 2013, 2015, 2016, 2018 ಹಾಗೂ 2021ರಲ್ಲೂ ಕ್ಷಿಪಣಿ ಪರೀಕ್ಷೆಗೆ ಒಳಪಟ್ಟಿತ್ತು. ಈ ಕ್ಷಿಪಣಿಯನ್ನು ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದೆ. ಸಬ್‌ಮರೀನ್ ಮೂಲಕವೂ ಈ ಕ್ಷಿಪಣಿಯನ್ನು ಉಡಾವಣೆ ಮಾಡಬಹುದಾಗಿದೆ. 2018ರಲ್ಲೇ ಇದು ರಕ್ಷಣಾಪಡೆ ಸೇರಿಕೊಂಡಿದೆ.
ಗಂಟೆಗೆ 29,401 ಕಿಲೋಮೀಟರ್ ವೇಗ: ಅಗ್ನಿ-5 ಭಾರತದ ಮೊದಲ ಮತ್ತು ಏಕೈಕ ಇಂಟರ್ ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಕ್ಷಿಪಣಿಯಾಗಿದ್ದು, ಇದನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ತಯಾರಿಸಿದೆ. ಇದು ಭಾರತದ ಬಳಿ ಲಭ್ಯವಿರುವ ದೀರ್ಘ ವ್ಯಾಪ್ತಿಯ ಕ್ಷಿಪಣಿಗಳಲ್ಲಿ ಒಂದಾಗಿದೆ. 5 ಸಾವಿರ ಕಿಲೋಮೀಟರ್ ವ್ಯಾಪ್ತಿಯ ಅಗ್ನಿ-5 ಬ್ಯಾಲಿಸ್ಟಿಕ್ ಕ್ಷಿಪಣಿ ಏಕಕಾಲದಲ್ಲಿ ಬಹು ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದು ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀಎಂಟ್ರಿ ವೆಹಿಕಲ್ (ಎಂಐಆರ್‌ವಿ) ಯನ್ನು ಹೊಂದಿದೆ. ಅಂದರೆ, ಇದನ್ನು ಏಕಕಾಲದಲ್ಲಿ ಅನೇಕ ಗುರಿಗಳನ್ನು ಟಾರ್ಗೆಟ್ ಮಾಡಬಹುದು. ಈ ಕ್ಷಿಪಣಿ ಒಂದೂವರೆ ಟನ್‌ಗಳಷ್ಟು ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲದು. ಇದರ ವೇಗ ಮ್ಯಾಕ್ 24, ಅಂದರೆ ಶಬ್ದದ ವೇಗಕ್ಕಿಂತ 24 ಪಟ್ಟು ಹೆಚ್ಚು. ಅಗ್ನಿ-5 ಉಡಾವಣಾ ವ್ಯವಸ್ಥೆಯಲ್ಲಿ ಕ್ಯಾನಿಸ್ಟರ್ ತಂತ್ರಜ್ಞಾನವನ್ನು ಬಳಸಲಾಗಿದೆ. ಈ ಕಾರಣದಿಂದಾಗಿ, ಈ ಕ್ಷಿಪಣಿಯನ್ನು ಎಲ್ಲಿ ಬೇಕಾದರೂ ಸುಲಭವಾಗಿ ಸಾಗಿಸಬಹುದು. ಅಗ್ನಿ-5 ಕ್ಷಿಪಣಿಯ ಬಳಕೆ ಕೂಡ ತುಂಬಾ ಸುಲಭ, ಈ ಕಾರಣದಿಂದಾಗಿ ಅದನ್ನು ದೇಶದ ಯಾವುದೇ ಸ್ಥಳದಲ್ಲಿ ನಿಯೋಜಿಸಬಹುದು.
5,000 ಕಿ.ಮೀ ಗುರಿ ಸಾಮರ್ಥ್ಯದ ಭಾರತದ ಅಗ್ನಿ V ಕ್ಷಿಪಣಿ ಪರೀಕ್ಷೆ ಯಶಸ್ವಿ!
- ರಷ್ಯಾ, ಯುರೋಪ್‌ವರೆಗೂ ತಲುಪುವ ಅಣ್ವಸ್ತ್ರ ಕ್ಷಿಪಣಿ
- 5000 ಕಿ.ಮೀ.ಗಿಂತ ದೂರ ಹಾರುವ ಕ್ಷಿಪಣಿಯಿಂದ ಭಾರತಕ್ಕೆ ಆನೆಬಲ
- ಹಿಂದಿನ ಅಗ್ನಿ-5ಗಿಂತ ಈ ಸಲದ ಕ್ಷಿಪಣಿ ಹಗುರ, ಸುಧಾರಿತ
- ಹೀಗಾಗಿ 5000 ಕಿ.ಮೀ.ಗಿಂತ ದೂರ ಹಾರಬಲ್ಲದು