Asianet Suvarna News Asianet Suvarna News

India Gate: ಕರ್ನಾಟಕ ಎಫೆಕ್ಟ್ ದಿಲ್ಲಿ ಮೇಲೂ ಆಗುತ್ತಾ?

ಚುನಾವಣೆಯ ಹೀನಾಯ ಸೋಲಿನ ನಂತರ ರಾಜ್ಯ ಬಿಜೆಪಿಗೆ ಅಧ್ಯಕ್ಷರಾಗಲು ಕೂಡ ಯಾರೂ ತಯಾರಿಲ್ಲ. ರಾಜಕಾರಣದ ಒಂದು ಸತ್ಯ ಏನಪ್ಪಾ ಅಂದರೆ, ಇನ್‌ ಕಮಿಂಗ್‌ಗೆ ಎಲ್ಲರೂ ದುಂಬಾಲು ಬೀಳುತ್ತಾರೆ. ಅದೇ ಔಟ್‌ ಗೊಯಿಂಗ್‌ ಅಂದರೆ ಸಹವಾಸ ಬೇಡ ಅನ್ನುತ್ತಾರೆ.

India Gate Article by Prashanth Natu Talks Over Next Karnataka BJP State President grg
Author
First Published Jun 17, 2023, 10:43 AM IST

ಪ್ರಶಾಂತ್‌ ನಾತು

ಬೆಂಗಳೂರು(ಜೂ.17):  ಸ್ಥಳೀಯ ಆರ್‌ಎಸ್‌ಎಸ್‌ ನಾಯಕರು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ 4 ಹೆಸರು ಪರಿಗಣಿಸುವಂತೆ ಹೇಳಿದ್ದು, ಬೊಮ್ಮಾಯಿ, ಬಸನಗೌಡ ಯತ್ನಾಳ, ಆರ್‌.ಅಶೋಕ್‌ ಮತ್ತು ಸುನೀಲ್‌ ಕುಮಾರ್‌ ಹೆಸರುಗಳು ಪರಿಗಣನೆಯಲ್ಲಿವೆ. ರಾಜ್ಯ ಅಧ್ಯಕ್ಷರು ಯಾರು ಎಂಬ ಬಗ್ಗೆ ಕೂಡ ಬಿಜೆಪಿ ಹೈಕಮಾಂಡ್‌ ನಿರ್ಣಯ ತೆಗೆದುಕೊಳ್ಳಬೇಕಿದ್ದು, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಅಶ್ವತ್ಥನಾರಾಯಣ ಮತ್ತು ಸುನೀಲ್‌ ಕುಮಾರ್‌ ಹೆಸರುಗಳ ಬಗ್ಗೆ ಚರ್ಚೆ ಆಗುತ್ತಿದೆ.

ಈಗಿನ ದಿನಗಳಲ್ಲಿ ಒಂದು ರಾಜ್ಯದ ಚುನಾವಣೆ ಫಲಿತಾಂಶ ಪಕ್ಕದ ರಾಜ್ಯಗಳಲ್ಲಿ ಜನರ ಮೇಲೆ ಕೂಡ ಪರಿಣಾಮ ಬೀರುವುದಿಲ್ಲ. ಹೌದು, ಆದರೆ ರಾಜಕೀಯ ಗೆಲುವು ಇರಲಿ ಅಥವಾ ಸೋಲು ಬರಲಿ ಅದಕ್ಕೊಂದು ಸಾಂಕ್ರಾಮಿಕತೆಯ ಸ್ವರೂಪ ಇರುತ್ತದೆ. ಬಹುತೇಕ ಕರ್ನಾಟಕದ ಒಂದು ಸೋಲು ಯಾವಾಗಲೂ ಗೆದ್ದೇ ಗೆಲ್ಲುತ್ತೇವೆ ಎಂಬ ಅಹಮಿಕೆಯಲ್ಲಿದ್ದ ಬಿಜೆಪಿಯ ಪ್ರತಿಷ್ಠೆಗೆ ಪೆಟ್ಟು ನೀಡಿದ್ದರೆ, ಸತತವಾಗಿ ಸೋಲು ಸೋಲು ಎಂದು ಮೂದಲಿಸಿಕೊಳ್ಳುತ್ತಿದ್ದ ಕಾಂಗ್ರೆಸ್‌ ಪಾರ್ಟಿಗೆ ಸರಿಯಾಗಿ ಯುದ್ಧ ಮಾಡಿದರೆ ನಾವು ಕೂಡ ಗೆಲ್ಲಬಹುದು ಎಂಬ ಅರಿವು ಮೂಡಿಸಿದೆ. ಕರ್ನಾಟಕದ ಚುನಾವಣಾ ಫಲಿತಾಂಶ ಎರಡು ರಾಷ್ಟ್ರೀಯ ಪಾರ್ಟಿಗಳ ಕಾರ್ಯಕರ್ತರ ಮತ್ತು ನಾಯಕರ ಮನಸ್ಸಿನ ಮೇಲೆ ಪರಿಣಾಮ ಬೀರುವುದು ಹೌದಾದರೂ ಕೂಡ ಉಳಿದ ರಾಜ್ಯಗಳ ಮತದಾರರ ಮೇಲೇನೂ ಪರಿಣಾಮ ಬೀರುತ್ತದೆ ಎಂದು ಅನ್ನಿಸುತ್ತಿಲ್ಲ. ಇಲ್ಲಿನಂತೆ ಉಳಿದ ಕಡೆಗಳಲ್ಲೂ ಸ್ಥಳೀಯ ವಿಷಯಗಳು, ಅಲ್ಲಿನ ಸರ್ಕಾರಗಳು ಕೆಲಸ ಮಾಡಿರುವ ರೀತಿ ನೀತಿಗಳ ಮೇಲೆಯೇ ವಿಧಾನಸಭಾ ಚುನಾವಣೆಗಳು ನಡೆಯುವ ಸಾಧ್ಯತೆ ಹೆಚ್ಚು. ಇವತ್ತಿನ ವರ್ತಮಾನದ ಪ್ರಕಾರ ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಆಡಳಿತ ವಿರೋಧಿ ಅಲೆಯ ಚಿಂತೆ ಇದ್ದರೆ, ರಾಜಸ್ಥಾನದಲ್ಲಿ ಕಾಂಗ್ರೆಸ್‌ ವಿರುದ್ಧ ಜನಾಭಿಪ್ರಾಯ ಇದೆ. ಆದರೆ ಛತ್ತೀಸ್‌ಗಢದ ಕಾಂಗ್ರೆಸ್‌ ಸರ್ಕಾರದ ಬಗ್ಗೆ ಹೇಳಿಕೊಳ್ಳುವಂಥ ಅಸಮಾಧಾನವೂ ಇಲ್ಲ, ಅಲ್ಲಿ ಬಿಜೆಪಿ ಬಳಿ ಕೂಡ ನಾಯಕತ್ವ ಇಲ್ಲ. ಇನ್ನು ಕರ್ನಾಟಕ ಗೆದ್ದಿದ್ದರೆ ತೆಲಂಗಾಣದಲ್ಲಿ ಬಿಜೆಪಿಗೆ ಸ್ವಲ್ಪ ಲಾಭ ಆಗುತ್ತಿತ್ತು. ಈಗ ಆ ಸಾಧ್ಯತೆ ಕಡಿಮೆ. ಆದರೆ ಬಿಜೆಪಿಯ ಚಿಂತೆ ವಿಧಾನಸಭಾ ಚುನಾವಣೆಗಳು ಅಲ್ಲ, 2024ರ ಲೋಕಸಭಾ ಚುನಾವಣೆ. ಒಂದು ವೇಳೆ ರಾಷ್ಟ್ರೀಯ ವಿಚಾರಗಳ ಮೇಲೆ ಹಾಗೂ ಮೋದಿ ಹೆಸರಿನ ಮೇಲೆ ಚುನಾವಣೆ ನಡೆದರೆ ಬಿಜೆಪಿಗೆ ಲಾಭ. ಬದಲಾಗಿ, ಲೋಕಸಭೆ ಕೂಡ ಸ್ಥಳೀಯವಾಗಿ ರಾಜ್ಯಗಳಲ್ಲಿನ ಸ್ಥಿತಿಗತಿ ಮೇಲೆ ನಡೆದರೆ ವಿಪಕ್ಷಗಳಿಗೆ ಲಾಭ. ಹೀಗಾಗಿ ಬಿಜೆಪಿ ಕಾಂಗ್ರೆಸ್‌ ಅನ್ನು 100ರ ಗಡಿ ದಾಟದಂತೆ ನೋಡಿಕೊಳ್ಳಲು ತಂತ್ರ ರೂಪಿಸುತ್ತಿದ್ದರೆ, ಕಾಂಗ್ರೆಸ್‌ ಬಿಜೆಪಿಯನ್ನು ಹೇಗಾದರೂ ಮಾಡಿ ಮ್ಯಾಜಿಕ್‌ ನಂಬರ್‌ ದಾಟದಂತೆ ಕಟ್ಟಿಹಾಕಲು ಪ್ರತಿತಂತ್ರ ರೂಪಿಸುತ್ತಿದೆ. ಇವತ್ತಿನ ಸ್ಥಿತಿ ನೋಡಿದರೆ 2024ರಲ್ಲಿ ಹೀಗೆ ಆಗುತ್ತದೆ ಎಂದು ಹೇಳುವುದು ಅವಸರವಾದೀತು.

From the India Gate: ಸೈಲೆಂಟ್‌ ಆದ ಕರ್ನಾಟಕ ಸಿಂಗಂ, ತೆಲಂಗಾಣ ಸಿಎಂ ಕನಸಿನ ಕಾರು ಪಂಕ್ಚರ್‌!

ಬಿಜೆಪಿಗೂ ಮಿತ್ರರು ಬೇಕಂತೆ

ಒಂದು ಕಡೆ ಕಾಂಗ್ರೆಸ್‌ ಪಕ್ಷವು ಒಕ್ಕೂಟದ ನಾಯಕತ್ವವನ್ನು ನಿತೀಶ್‌ಕುಮಾರ್‌ ಕೈಗೆ ಕೊಟ್ಟು ಕಾಂಗ್ರೆಸ್‌ ಎಂದರೆ ದೂರ ಹೋಗುತ್ತಿದ್ದ ಮಮತಾ, ಕೇಜ್ರಿವಾಲ್‌, ಅಖಿಲೇಶ್‌ ಯಾದವ್‌, ಸಿಪಿಎಮ್‌ ಪಾರ್ಟಿಗಳನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡುತ್ತಿದ್ದರೆ, ಏಕಚಕ್ರಾಧಿಪತ್ಯದ ಕನವರಿಕೆಯಲ್ಲಿದ್ದ ಬಿಜೆಪಿಗೆ ಏಕಾಏಕಿ ಮಿತ್ರರು ಬೇಕು ಅನ್ನಿಸತೊಡಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಕಾಂಗ್ರೆಸ್‌ ಜೊತೆ ಹೋಗಲು ಮನಸ್ಸಿಲ್ಲದ ಚಂದ್ರಬಾಬು ನಾಯ್ಡು, ಎಚ್‌.ಡಿ.ಕುಮಾರಸ್ವಾಮಿ, ನವೀನ್‌ ಪಟ್ನಾಯಕ್‌ ಹಾಗೂ ಎಐಎಡಿಎಂಕೆ ಜೊತೆ ಒಂದು ಮಟ್ಟದ ಸಂಪರ್ಕ ಇಟ್ಟುಕೊಳ್ಳಬೇಕು ಎಂದು ಮೋದಿ ಮತ್ತು ಅಮಿತ್‌ ಶಾ ಇಬ್ಬರಿಗೂ ಅನ್ನಿಸತೊಡಗಿದೆ. ಈಗಲೇ ಇದನ್ನು ಚುನಾವಣಾ ಪೂರ್ವ ಮೈತ್ರಿ ಮಟ್ಟಕ್ಕೆ ಮಾತುಕತೆ ಆಗಿದೆ ಎಂದು ಹೇಳಲು ಸಾಧ್ಯವಿಲ್ಲವಾದರೂ ಕೂಡ ಭವಿಷ್ಯದಲ್ಲಿ ಅಗತ್ಯಬಿದ್ದರೆ ಇರಲಿ ಎಂಬ ತಂತ್ರಗಾರಿಕೆ ಇದೆ ಅನ್ನಿಸುತ್ತಿದೆ. ಇವತ್ತಿನ ಮಟ್ಟಕ್ಕೆ ಒಂದು ವಿಷಯ ನಿಸ್ಸಂದೇಹವಾಗಿ ಹೇಳಬಹುದು. ಅದೇನೆಂದರೆ ಕರ್ನಾಟಕದ ಫಲಿತಾಂಶ ರಾಷ್ಟ್ರೀಯ ರಾಜಕಾರಣದ ಸೈಕಾಲಜಿಯನ್ನು ಬದಲಿಸಿದೆ.

ಬಿಜೆಪಿಗೆ ‘ಕರ್ನಾಟಕ-ಮಹಾ’ ಚಿಂತೆ

2019ರಲ್ಲಿ ಕರ್ನಾಟಕದಲ್ಲಿ 25 ಮತ್ತು ಮಹಾರಾಷ್ಟ್ರದಲ್ಲಿ 23 ಲೋಕಸಭಾ ಸ್ಥಾನ ಗೆದ್ದಿದ್ದ ಬಿಜೆಪಿ ಜೊತೆಗೆ ಆಗಿನ ಮೋದಿ ಮಿತ್ರ ಪಕ್ಷವಾಗಿದ್ದ ಶಿವಸೇನೆ ಕೂಡ 18 ಸೀಟು ಗೆದ್ದಿತ್ತು. ಅಂದರೆ ಒಟ್ಟು 66 ಸೀಟು. ಆದರೆ ಕಾಂಗ್ರೆಸ್‌ ಮಹಾರಾಷ್ಟ್ರದಲ್ಲಿ ಗೆದ್ದಿದ್ದು ಒಂದು ಸೀಟು, ಕರ್ನಾಟಕದಲ್ಲಿ ಒಂದು ಸೀಟು. ಅಂದರೆ ಒಟ್ಟು ಎರಡು ಮಾತ್ರ. ಎನ್‌ಸಿಪಿ ಗೆದ್ದಿದ್ದು 4. ಅಂದರೆ ಒಟ್ಟು 76ರಲ್ಲಿ ಎನ್‌ಡಿಎ 66, ಯುಪಿಎ ಬರೀ 6 ಮಾತ್ರ. ಆದರೆ 4 ವರ್ಷದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ತಳಮಟ್ಟದ ಸ್ಥಿತಿ ತುಂಬಾ ಬದಲಾಗಿದೆ. ಕರ್ನಾಟಕದಲ್ಲಿ 136 ಸೀಟುಗಳೊಡನೆ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೆ, ಮಹಾರಾಷ್ಟ್ರದಲ್ಲಿ ಬಿಜೆಪಿ ಏಕನಾಥ ಶಿಂಧೆಯನ್ನು ಎಳೆದು ತಂದು ಅಧಿಕಾರ ಹಿಡಿದಿದ್ದರೂ ಕೂಡ ವೋಟಿನ ಲೆಕ್ಕಾಚಾರ ತೆಗೆದುಕೊಂಡಾಗ ಎನ್‌ಸಿಪಿ, ಕಾಂಗ್ರೆಸ್‌ ಮತ್ತು ಶಿವಸೇನೆ ಮೈತ್ರಿ ಆದರೆ ಬಿಜೆಪಿ ವಿರುದ್ಧ ಒಂದು ಮಜಬೂತಾದ ವೋಟ್‌ ಬ್ಯಾಂಕ್‌ ಕೆಲಸ ಮಾಡಲಿದ್ದು, ಇದರಿಂದ 2019ರ ಫಲಿತಾಂಶ ರಿಪೀಟ್‌ ಮಾಡುವುದು ಕಷ್ಟ. ಹೀಗಾಗಿ ಅಜಿತ್‌ ಪವಾರರನ್ನು ಸೆಳೆದು ತಂದು ವಿಪಕ್ಷಗಳ ಮೈತ್ರಿಯನ್ನು ಒಡೆಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಆದರೂ ಇದಕ್ಕೆ ಶರದ್‌ ಪವಾರ್‌ ಅಡ್ಡಗಾಲು ಹಾಕುತ್ತಿದ್ದಾರೆ. ಇನ್ನು ಕರ್ನಾಟಕದಲ್ಲಿ ಕೂಡ 2019ರಲ್ಲಿ ಬಿಜೆಪಿಗೆ 25 ಸೀಟು ಸಿಕ್ಕಂತೆ ಈ ಬಾರಿ ಆ ಮಟ್ಟದ ಫಲಿತಾಂಶ ಮರುಕಳಿಸುವುದು ಕಷ್ಟ. ಹೀಗಾಗಿಯೇ ಜೆಡಿಎಸ್‌ ಜೊತೆಗೆ ಚುನಾವಣಾ ಪೂರ್ವ ಮೈತ್ರಿ ಬಗ್ಗೆ ಪ್ರಸ್ತಾಪ ಇದೆಯಾದರೂ ಮುಂದುವರೆಯಬೇಕೋ ಬೇಡವೋ ಎಂಬುದು ಇನ್ನೂ ತೀರ್ಮಾನ ಆಗಿಲ್ಲ.

ದಾರಿ ಕಾಣದಾಗಿದೆ ಬಿಜೆಪಿಗೆ!

ಗೆಲುವಿಗೆ ನೂರಾರು ಅಪ್ಪಂದಿರು, ಆದರೆ ಸೋಲು ಅನಾಥ ನೋಡಿ. ಫಲಿತಾಂಶ ಬಂದು ಒಂದು ತಿಂಗಳ ಮೇಲಾದರೂ ಕೂಡ ರಾಜ್ಯ ಬಿಜೆಪಿಯನ್ನು ಯಾರ ಕೈಗೆ ಕೊಡಬೇಕು ಎಂಬುದರ ಬಗ್ಗೆ ಯೋಚಿಸಲು ಕೂಡ ಬೇಸರದಲ್ಲಿರುವ ದಿಲ್ಲಿ ವರಿಷ್ಠರಿಗೆ ಮನಸ್ಸು ಇಲ್ಲ. ನಳಿನ್‌ ಕಟೀಲ್‌ ಸೋಲಿನ ಹೊಣೆ ಹೊತ್ತು ರಾಜೀನಾಮೆ ಪ್ರಸ್ತಾವ ಇಟ್ಟು 20 ದಿನಗಳು ಆಗಿವೆ ಎಂದು ದಿಲ್ಲಿ ಮೂಲಗಳು ಹೇಳುತ್ತಿವೆ. ಸಂಪ್ರದಾಯದ ಪ್ರಕಾರ ಲಿಂಗಾಯತ ನಾಯಕರನ್ನು ವಿರೋಧ ಪಕ್ಷದ ನಾಯಕ ಮಾಡಿದರೆ, ಒಕ್ಕಲಿಗ ಒಬ್ಬರಿಗೆ ಪಾರ್ಟಿ ಅಧ್ಯಕ್ಷರ ಜವಾಬ್ದಾರಿ ಕೊಡಬೇಕು. ಸ್ಥಳೀಯ ಆರ್‌ಎಸ್‌ಎಸ್‌ ನಾಯಕರು ವಿರೋಧ ಪಕ್ಷದ ನಾಯಕನ ಸ್ಥಾನಕ್ಕೆ 4 ಹೆಸರು ಪರಿಗಣಿಸುವಂತೆ ಹೇಳಿದ್ದು, ಬೊಮ್ಮಾಯಿ, ಬಸನಗೌಡ ಪಾಟೀಲ್‌ ಯತ್ನಾಳ, ಆರ್‌.ಅಶೋಕ ಮತ್ತು ಸುನೀಲ್‌ ಕುಮಾರ್‌ ಹೆಸರುಗಳು ಪರಿಗಣನೆಯಲ್ಲಿವೆ. ಇನ್ನು ರಾಜ್ಯ ಅಧ್ಯಕ್ಷರು ಯಾರು ಎಂಬ ಬಗ್ಗೆ ಕೂಡ ಬಿಜೆಪಿ ಹೈಕಮಾಂಡ್‌ ನಿರ್ಣಯ ತೆಗೆದುಕೊಳ್ಳಬೇಕಿದ್ದು, ಶೋಭಾ ಕರಂದ್ಲಾಜೆ, ಸಿ.ಟಿ.ರವಿ, ಅಶ್ವತ್ಥನಾರಾಯಣ ಮತ್ತು ಸುನೀಲ್‌ ಕುಮಾರ್‌ ಹೆಸರುಗಳ ಬಗ್ಗೆ ಚರ್ಚೆ ಆಗುತ್ತಿದೆ. ಆದರೆ ವಿಚಿತ್ರ ನೋಡಿ, ಚುನಾವಣೆಯ ಹೀನಾಯ ಸೋಲಿನ ನಂತರ ರಾಜ್ಯ ಬಿಜೆಪಿಗೆ ಅಧ್ಯಕ್ಷರಾಗಲು ಕೂಡ ಯಾರೂ ತಯಾರಿಲ್ಲ. ರಾಜಕಾರಣದ ಒಂದು ಸತ್ಯ ಏನಪ್ಪಾ ಅಂದರೆ, ಇನ್‌ ಕಮಿಂಗ್‌ಗೆ ಎಲ್ಲರೂ ದುಂಬಾಲು ಬೀಳುತ್ತಾರೆ. ಅದೇ ಔಟ್‌ ಗೊಯಿಂಗ್‌ ಅಂದರೆ ಸಹವಾಸ ಬೇಡ ಅನ್ನುತ್ತಾರೆ.

India Gate: ಅಲೆ ಇಲ್ಲದ ಚುನಾವಣೆಯ ಝಳದಲ್ಲಿ

ಮೂರು ಎಮ್‌ಎಲ್‌ಸಿಗಳು ಯಾರು?

ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿದ ನಂತರ ಮುಖ್ಯಮಂತ್ರಿ ಸಿದ್ದು ಇರಲಿ, ಡಿಕೆಶಿ ಇರಲಿ, ಖರ್ಗೆ ಇರಲಿ ಅಥವಾ ಗಾಂಧಿ ಪರಿವಾರ ಇರಲಿ, ಎಲ್ಲರಿಗೂ ಆಸಕ್ತಿ ಇರುವುದು ಲೋಕಸಭೆಯಲ್ಲಿ ಕರ್ನಾಟಕದಲ್ಲಿ ಹೆಚ್ಚು ಸೀಟು ಗೆಲ್ಲುವ ಬಗ್ಗೆ. ಮುಖ್ಯಮಂತ್ರಿ ಸಿದ್ದುಗೆ ಮುಖ್ಯಮಂತ್ರಿ ಆಗಿ ಉಳಿಯಲು, ಡಿ.ಕೆ.ಶಿವಕುಮಾರ್‌ಗೆ ಮುಂದೆ ಮುಖ್ಯಮಂತ್ರಿ ಆಗಲು, ಖರ್ಗೆ ಅವರಿಗೆ ದಿಲ್ಲಿಯಲ್ಲಿ ವರ್ಚಸ್ಸು ಹೆಚ್ಚಿಸಿಕೊಳ್ಳಲು, ಗಾಂಧಿ ಪರಿವಾರಕ್ಕೆ ರಾಷ್ಟ್ರ ರಾಜಕಾರಣದಲ್ಲಿ ಪ್ರಸ್ತುತತೆ ಜಾಸ್ತಿ ಆಗಲು ಕರ್ನಾಟಕದಲ್ಲಿ ಕಾಂಗ್ರೆಸ್‌ ಸೀಟುಗಳು ಜಾಸ್ತಿ ಆಗಬೇಕು, ಬಿಜೆಪಿ ಸೀಟುಗಳು ಕಡಿಮೆ ಆಗಬೇಕು. ಬಹುತೇಕ ವಿಧಾನ ಪರಿಷತ್‌ಗೆ ಶಾಸಕರನ್ನು ಆಯ್ಕೆ ಮಾಡುವಾಗ ಕೂಡ ಎಲ್ಲದಕ್ಕಿಂತ ಹೆಚ್ಚಾಗಿ ಲೋಕಸಭಾ ಚುನಾವಣೆಗೆ ಉಪಯೋಗ ಎಷ್ಟುಎಂಬುದೇ ಮಾನದಂಡ. ಯಾವುದೇ ಸದನದ ಸದಸ್ಯ ಅಲ್ಲದಿದ್ದರೂ ಕೂಡ ಹೈಕಮಾಂಡ್‌ ಆಶೀರ್ವಾದದಿಂದ ಸಚಿವರಾಗಿರುವ ಬೋಸರಾಜು ಅವರು 5 ವರ್ಷದ ಅಂದರೆ ಜೂನ್‌ 2028ರವರೆಗೆ ಅವಧಿ ಇರುವ ಲಕ್ಷ್ಮಣ ಸವದಿ ರಾಜೀನಾಮೆಯಿಂದ ತೆರವಾಗಿರುವ ಸೀಟು ಪಡೆಯುವುದು ಪಕ್ಕಾ. ಅದರ ಜೊತೆಗೆ ಮಲ್ಲಿಕಾರ್ಜುನ್‌ ಖರ್ಗೆ ಅವರು ಮುಂದಿನ ಕಲಬುರ್ಗಿ ಲೋಕಸಭಾ ಚುನಾವಣೆ ದೃಷ್ಟಿಯಿಂದ 2024ರ ಜೂನ್‌ವರೆಗೆ ಅವಧಿ ಇರುವ ಚಿಂಚನಸೂರ ತೆರವು ಮಾಡಿರುವ ಸೀಟನ್ನು ಮರಳಿ ಅವರಿಗೇ ಕೊಡಿ ಎಂದು ಪಟ್ಟು ಹಿಡಿಯುವ ಲಕ್ಷಣಗಳಿವೆ. ಯಾಕೆಂದರೆ ಕಲಬುರ್ಗಿಯಲ್ಲಿ ಕೋಲಿ, ಕಬ್ಬಲಿಗ ಸಮುದಾಯದ ಮತಗಳು ನಿರ್ಣಾಯಕ. ಇನ್ನು 2026ರ ಏಪ್ರಿಲ್‌ವರೆಗೆ ಖಾಲಿ ಇರುವ ಆರ್‌.ಶಂಕರ್‌ ತೆರವು ಮಾಡಿರುವ ಸೀಟು ಬಹುತೇಕ ಜಗದೀಶ ಶೆಟ್ಟರ್‌ಗೆ ಸಿಗಲಿದ್ದು, ಬಿಜೆಪಿಯಿಂದ ಬಂದಿರುವ ಲಿಂಗಾಯತ ನಾಯಕರನ್ನು ನಾವು ಬಳಸಿ ಬಿಸಾಕುವುದಿಲ್ಲ ಎಂದು ಸಂದೇಶ ಕೊಡುವುದು ಕಾಂಗ್ರೆಸ್‌ಗೆ ಲೋಕಸಭಾ ಚುನಾವಣಾ ದೃಷ್ಟಿಯಿಂದ ಬೇಕಾಗಿದೆ. ಆದರೆ ಶೆಟ್ಟರ್‌ ಸಾಹೇಬರಿಗೆ ಬರೀ ವಿಧಾನ ಪರಿಷತ್ತಿಗೆ ಆಯ್ಕೆ ಮಾಡಿ ಲೋಕಸಭೆಗೆ ನಿಲ್ಲಿ ಎಂದು ಹೇಳುವುದೋ ಅಥವಾ ಹೊರಟ್ಟಿಜಾಗೆಯಲ್ಲಿ ಕೂರಿಸುವುದೋ ಎಂಬ ತೀರ್ಮಾನವನ್ನು ಇನ್ನೂ ಕಾಂಗ್ರೆಸ್‌ ಹೈಕಮಾಂಡ್‌ ಮಾಡಿಲ್ಲ. ಇನ್ನು ಮಂತ್ರಿ ಆಗುವ ನಿರೀಕ್ಷೆಯಲ್ಲಿದ್ದ ಲಕ್ಷ್ಮಣ್‌ ಸವದಿಗೆ ಕೂಡ ಡಿ.ಕೆ.ಶಿವಕುಮಾರ್‌ ಅವರು ಬೆಳಗಾವಿ, ಚಿಕ್ಕೋಡಿ, ವಿಜಯಪುರ ಲೋಕಸಭಾ ಸೀಟು ಗೆಲ್ಲಲು ಪರಿಶ್ರಮ ಹಾಕಿ. 2024ರಲ್ಲಿ ಮಂತ್ರಿ ಮಾಡಿ ಒಳ್ಳೆ ಖಾತೆ ಕೊಡುತ್ತೇವೆ ಎಂದು ಮೂಗಿಗೆ ತುಪ್ಪ ಸವರಿ ಬಂದಿದ್ದಾರೆ. ಒಮ್ಮೊಮ್ಮೆ ಬರೀ ಆಘ್ರಾಣಿಸುತ್ತ ಇರಿ ಎಂದು ಶಾಸ್ತ್ರಕ್ಕೆ ತುಪ್ಪ ಸವರೋದು, ಕೆಲವೊಮ್ಮೆ ಬೇಡ ಬೇಡ ಎಂದರೂ ತುಪ್ಪ ತಿನ್ನಿಸೋದು, ಮಗದೊಮ್ಮೆ ಬೇಕು ಬೇಕು ಅಂದವರಿಗೆ ತುಪ್ಪ ಸಿಗದಂತೆ ಮಾಡುವುದು ಇದೆಲ್ಲದರ ಒಟ್ಟು ಹೆಸರೇ ರಾಜಕಾರಣ.

ರವಿ, ಪ್ರತಾಪ್‌ ಟಾರ್ಗೆಟ್‌ ಯಾರು?

ಮೇ 13ಕ್ಕೆ ಫಲಿತಾಂಶ ಬಂದ ಮೇಲೆ ಏಕಾಏಕಿ ಸೋಷಿಯಲ್‌ ಮೀಡಿಯಾಗಳಲ್ಲಿ ಮುಕ್ತವಾಗಿ ಮತ್ತು ಮಾಧ್ಯಮಗಳಲ್ಲಿ ಮುಗುಮ್ಮಾಗಿ ಕರ್ನಾಟಕದ ಬಿಜೆಪಿ ಸೋಲಿಗೆ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಕಾರಣ ಎಂಬ ಚರ್ಚೆ ಶುರುವಾಯಿತು. ಪುತ್ತೂರಿನಲ್ಲಿ ಅರುಣ ಪುತ್ತಿಲಗೆ ಟಿಕೆಟ್‌ ಕೊಡದೇ ಇರಲು ಸಂತೋಷ್‌ ಮತ್ತು ನಳಿನ್‌ ಕಟೀಲ್‌ ಕಾರಣ ಎಂಬ ಸಿಟ್ಟಿನ ಜೊತೆಗೆ ಶೆಟ್ಟರ್‌ಗೆ ಟಿಕೆಟ್‌ ಕೊಡದೇ ಇರಲು ಕೂಡ ಸಂತೋಷ್‌ ಕಾರಣ ಎಂಬ ಚರ್ಚೆ ನಡೆಯುತ್ತಿತ್ತು. ಆದರೆ ಎರಡು ದಿನಗಳ ಹಿಂದೆ ಸಂತೋಷ್‌ರಿಗೆ ಆತ್ಮೀಯರಾಗಿರುವ ಸಂಸದ ಪ್ರತಾಪ್‌ ಸಿಂಹ ಸೋಲಿಗೆ ಅತಿರಥರ ಹೊಂದಾಣಿಕೆ ಕಾರಣ ಎಂದು ಹೇಳುವ ಮೂಲಕ ಸೋಲಿನ ಸೂಜಿಯನ್ನು ಬೊಮ್ಮಾಯಿ ಮತ್ತು ಯಡಿಯೂರಪ್ಪರತ್ತ ತಿರುಗಿಸಲು ಪ್ರಯತ್ನ ಪಡುತ್ತಿದ್ದಾರೆ. ಇನ್ನು ಚಿಕ್ಕಮಗಳೂರಿನಲ್ಲಿ ಸೋಲಲು ಕೂಡ ಹೊಂದಾಣಿಕೆ ಕಾರಣ ಎಂದು ಹೇಳುತ್ತಾ ಸಿ.ಟಿ.ರವಿ ಕೂಡ ಸೋಲಿನ ಮುಳ್ಳನ್ನು ಪರೋಕ್ಷವಾಗಿ ಯಡಿಯೂರಪ್ಪರತ್ತ ತಿರುಗಿಸುತ್ತಿದ್ದಾರೆ. 15 ದಿನಗಳ ಹಿಂದೆ ಮಂಗಳೂರಿಗೆ ಹೋಗಿದ್ದ ಬಿ.ಎಲ್‌.ಸಂತೋಷ್‌, ‘ಬದಲಾವಣೆ ಮಾಡಿದ ಎಲ್ಲಾ ಹಿಂದುತ್ವ ಆಧಾರದ ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ. ಆದರೆ ಜಾತಿ ವೋಟು ತರುತ್ತೇವೆ ಎಂದು ಅಧಿಕಾರ ಹಿಡಿದಿದ್ದ ಅನೇಕರು ಸ್ವತಃ ಸೋತಿದ್ದಾರೆ, ಉಳಿದವರನ್ನೂ ಸೋಲಿಸಿದ್ದಾರೆ’ ಎಂದು ವಿಶ್ಲೇಷಣೆ ಮಾಡಿದ್ದಾರೆ. ಈಗ ವಿರೋಧ ಪಕ್ಷದ ನಾಯಕ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷರು ಯಾರು ಎಂದು ಮೋದಿ, ಅಮಿತ್‌ ಶಾ, ನಡ್ಡಾ ತೀರ್ಮಾನಿಸಿದಾಗ ಮಾತ್ರ ವರಿಷ್ಠರಿಗೆ ಸೋಲಿಗೆ ಹೊಣೆ ಯಾರು? ತಪ್ಪು ಯಾರದು ಎಂದು ಅನ್ನಿಸಿದೆ ಎಂಬುದು ಅರ್ಥ ಆಗುತ್ತದೆ.

Follow Us:
Download App:
  • android
  • ios