ನವದೆಹಲಿ(ಅ.17): ಕಳೆದ 30 ವರ್ಷಗಳ ಅವಧಿಯಲ್ಲಿ ಭಾರತೀಯರ ಸರಾಸರಿ ಜೀವಿತಾವಧಿ ಸುಮಾರು 11 ವರ್ಷಗಳಷ್ಟುಜಾಸ್ತಿಯಾಗಿದೆ. 1990ರಲ್ಲಿ ಸರಾಸರಿ 59.6 ವರ್ಷ ಬದುಕುತ್ತಿದ್ದ ಭಾರತೀಯರು 2019ರಲ್ಲಿ ಸರಾಸರಿ 70.8 ವರ್ಷ ಬದುಕುತ್ತಿದ್ದಾರೆ. ಆದರೆ, ಈ ಜೀವಿತಾವಧಿ ಎಲ್ಲಾ ರಾಜ್ಯಗಳಲ್ಲೂ ಒಂದೇ ರೀತಿ ಇಲ್ಲ. ದೇಶದಲ್ಲಿ ಅತಿಹೆಚ್ಚು ವರ್ಷ ಜನರು ಬದುಕುವ ರಾಜ್ಯ ಕೇರಳವಾಗಿದ್ದು, ಅಲ್ಲಿ ಸರಾಸರಿ ಜೀವಿತಾವಧಿ 77.3 ವರ್ಷವಿದೆ. ಅತಿ ಕಡಿಮೆ ವರ್ಷ ಜನರು ಬದುಕುವ ರಾಜ್ಯ ಉತ್ತರ ಪ್ರದೇಶವಾಗಿದ್ದು, ಅಲ್ಲಿ ಸರಾಸರಿ 66.9 ವರ್ಷ ಬದುಕುತ್ತಾರೆ.

ಅಂತಾರಾಷ್ಟ್ರೀಯ ಆರೋಗ್ಯ ಜರ್ನಲ್‌ ‘ಲ್ಯಾನ್ಸೆಟ್‌’ ನಡೆಸಿದ ಅಧ್ಯಯನದಲ್ಲಿ ಈ ಸಂಗತಿಗಳು ಕಂಡುಬಂದಿವೆ. ಲ್ಯಾನ್ಸೆಟ್‌ ಸಂಸ್ಥೆ ಇದೇ ಅಧ್ಯಯನದಲ್ಲಿ ಜಗತ್ತಿನಾದ್ಯಂತ 200ಕ್ಕೂ ಹೆಚ್ಚು ದೇಶಗಳಲ್ಲಿ ಜನರ ಸಾವಿಗೆ 286 ವಿಧದ ಕಾರಣಗಳನ್ನೂ, 369 ರೋಗಗಳನ್ನೂ ಪಟ್ಟಿಮಾಡಿದೆ. ಗುಜರಾತ್‌ನ ಗಾಂಧಿನಗರದಲ್ಲಿರುವ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಹೆಲ್ತ್‌ನ ಶ್ರೀನಿವಾಸ್‌ ಗೋಲಿ ಎಂಬುವರು ಈ ಅಧ್ಯಯನ ನಡೆಸಿದವರಲ್ಲಿ ಒಬ್ಬ ವಿಜ್ಞಾನಿಯಾಗಿದ್ದು, ಅವರ ಪ್ರಕಾರ, ಭಾರತದಲ್ಲಿ ಜನರ ಜೀವಿತಾವಧಿ ಹೆಚ್ಚಾಗಿದ್ದರೂ ಆರೋಗ್ಯಕರ ಜೀವಿತಾವಧಿ ನಿರೀಕ್ಷಿತ ಪ್ರಮಾಣದಲ್ಲಿ ಹೆಚ್ಚಾಗಿಲ್ಲ. ಜನರು ಹೆಚ್ಚುವರಿಯಾಗಿ ಬದುಕುವ ವರ್ಷಗಳನ್ನು ಅನಾರೋಗ್ಯ ಹಾಗೂ ಅಂಗವೈಕಲ್ಯದಲ್ಲಿ ಕಳೆಯುತ್ತಿದ್ದಾರೆ.

ಅಧ್ಯಯನ ನಡೆಸಿದ ತಜ್ಞರ ಪ್ರಕಾರ ಜಗತ್ತಿನಾದ್ಯಂತ ಅಧಿಕ ರಕ್ತದೊತ್ತಡ, ತಂಬಾಕು ಬಳಕೆ ಹಾಗೂ ವಾಯುಮಾಲಿನ್ಯ ಇವು ನಾನಾ ಅನಾರೋಗ್ಯಗಳನ್ನು ಉಂಟುಮಾಡುತ್ತಿವೆ. ಕೊರೋನಾದಿಂದ ಹೆಚ್ಚು ಜನರು ಸಾವನ್ನಪ್ಪುವುದಕ್ಕೂ ಈ ಸಮಸ್ಯೆಗಳೇ ಕಾರಣ. ಇನ್ನು, ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಸಾಂಕ್ರಾಮಿಕ ರೋಗಗಳ ಪ್ರಮಾಣ ಕಡಿಮೆಯಾಗಿದೆ. ಆದರೆ, ಇತರ ಗಂಭೀರ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ. ಭಾರತದಲ್ಲಿ ಮಗುವಿನ ಜನನದ ವೇಳೆ ತಾಯಿಯ ಮರಣ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಆದರೆ, ಸಾವಿಗೆ ಕಾರಣದಲ್ಲಿ 5ನೇ ಸ್ಥಾನದಲ್ಲಿದ್ದ ಹೃದ್ರೋಗವು ವಾಯುಮಾಲಿನ್ಯ ಹೆಚ್ಚಳದಿಂದಾಗಿ ಈಗ ನಂ.1 ಸ್ಥಾನಕ್ಕೆ ಬಂದಿದೆ. ಕ್ಯಾನ್ಸರ್‌ನಿಂದ ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಭಾರತದಲ್ಲಿ ಜನರಿಗೆ ಅತಿಹೆಚ್ಚು ಅನಾರೋಗ್ಯ ಉಂಟುಮಾಡುತ್ತಿರುವ ಸಮಸ್ಯೆಗಳೆಂದರೆ ಹೃದ್ರೋಗ, ಸಿಒಪಿಡಿ, ಮಧುಮೇಹ, ಪಾಶ್ರ್ವವಾಯು ಹಾಗೂ ಸ್ನಾಯು ಸಂಬಂಧಿ ರೋಗಗಳು ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

1990ರ ನಂತರ ಭಾರತದಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಸಾಕಷ್ಟುಸುಧಾರಣೆಯಾಗಿದೆ. ಆದರೆ, ಇವತ್ತಿಗೂ ಮಕ್ಕಳಲ್ಲಿ ಹಾಗೂ ತಾಯಂದಿರಲ್ಲಿ ಅಪೌಷ್ಟಿಕತೆಯು ದೇಶದಲ್ಲಿ ಹೆಚ್ಚುತ್ತಿರುವ ಅನಾರೋಗ್ಯ ಮತ್ತು ಸಾವಿಗೆ ನಂ.1 ಕಾರಣವಾಗಿದೆ. ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ ಈ ಸಮಸ್ಯೆ ಅತಿಹೆಚ್ಚಿದೆ. ದಕ್ಷಿಣ ಭಾರತದಲ್ಲಿ ಅಧಿಕ ರಕ್ತದೊತ್ತಡ ಹಾಗೂ ವಾಯುಮಾಲಿನ್ಯದಿಂದ ಹೆಚ್ಚು ಸಮಸ್ಯೆಯಾಗುತ್ತಿದೆ ಎಂದು ಅಧ್ಯಯನದಲ್ಲಿ ಹೇಳಲಾಗಿದೆ.

ಭಾರತದಲ್ಲಿ ಸಾವಿಗೆ ಟಾಪ್‌ 5 ಕಾರಣಗಳು

ವಾಯುಮಾಲಿನ್ಯ - 16.7 ಲಕ್ಷ ಸಾವು

ಅಧಿಕ ರಕ್ತದೊತ್ತಡ - 14.7 ಲಕ್ಷ ಸಾವು

ತಂಬಾಕು ಬಳಕೆ - 12.3 ಲಕ್ಷ ಸಾವು

ಅಸಮರ್ಪಕ ಆಹಾರ - 11.8 ಲಕ್ಷ ಸಾವು

ಮಧುಮೇಹ - 11.2 ಲಕ್ಷ ಸಾವು