ಹೈದರಾಬಾದ್‌ [ಡಿ.19]:  ನ.27ರಂದು ಇಲ್ಲಿ ಸಂಭವಿಸಿದ ಪಶುವೈದ್ಯೆಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಆರೋಪಿಗಳ ಪೈಕಿ ಇಬ್ಬರು ಇನ್ನೂ 9 ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನ್ನು ಪೊಲೀಸ್‌ ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದರು. ಈ 9 ಪ್ರಕರಣಗಳಲ್ಲಿ 6 ಪ್ರಕರಣಗಳು ತೆಲಂಗಾಣ ಗಡಿಗೆ ಹೊಂದಿಕೊಂಡ ಕರ್ನಾಟಕದ ಜಿಲ್ಲೆಗಳಲ್ಲಿ ನಡೆದಿತ್ತು ಎಂಬ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

ನಾಲ್ವರೂ ದುರುಳರನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಘಟನೆ ನಡೆದ ಕೆಲವೇ ದಿನಗಳ ಬಳಿಕ ಸಾಯಿಸಿದ್ದರು. ಅದಕ್ಕೂ ಮುನ್ನ ಅವರನ್ನು ವಿಚಾರಣೆಗೆ ಒಳಪಡಿಸಿದ ವೇಳೆ, ಆರೋಪಿಗಳಾದ ಲಾರಿ ಚಾಲಕರಾದ ಮೊಹಮ್ಮದ್‌ ಆರಿಫ್‌ (26) ಹಾಗೂ ಚಿಂತಕುಂಟ್ಲ ಚೆನ್ನಕೇಶವುಲು (20) ತಾವು ಇನ್ನೂ 9 ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾಗಿ ಒಪ್ಪಿದ್ದರು ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಇನ್ನೂ ಬೆಚ್ಚಿಬೀಳಿಸುವ ಅಂಶವೆಂದರೆ ಕರ್ನಾಟಕ-ತೆಲಂಗಾಣ ಗಡಿಯಲ್ಲಿ ಇವರು ಈ ಕೃತ್ಯ ಎಸಗಿದ್ದರು. ಮೂರು ಕೃತ್ಯಗಳನ್ನು ತೆಲಂಗಾಣದ ರಂಗಾರೆಡ್ಡಿ, ಸಂಗಾರೆಡ್ಡಿ ಹಾಗೂ ಮೆಹಬೂಬನಗರ ಜಿಲ್ಲೆಗಳ ಹೆದ್ದಾರಿಗಳಲ್ಲಿ ಎಸಗಿದ್ದರೆ, ಇನ್ನಾರು ಕೃತ್ಯಗಳನ್ನು ತೆಲಂಗಾಣದ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ಜಿಲ್ಲೆಗಳಲ್ಲಿ ಎಸಗಿದ್ದರು ಎಂದು ವಿಚಾರಣೆ ವೇಳೆ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕೃತ್ಯಗಳ ಮಾಹಿತಿ ಸಂಗ್ರಹಿಸಲು ಹೈದರಾಬಾದ್‌ ಬಳಿಯ ಸೈಬರಾಬಾದ್‌ ಪೊಲೀಸರು ಈಗ ಕರ್ನಾಟಕಕ್ಕೆ ಆಗಮಿಸಿದ್ದು, ರಾಯಚೂರು, ಕಲಬುರಗಿ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.

ಅತ್ಯಾಚಾರ ಮಾಡುವವರ ಮನಸ್ಸಲ್ಲಿ ಏನಿರುತ್ತದೆ?...

‘ಒಮ್ಮೆ ಈ ನಾಲ್ವರೂ ಆಪಾದಿತರನ್ನು ಕಸ್ಟಡಿಗೆ ತೆಗೆದುಕೊಂಡ ನಂತರ ಪಶುವೈದ್ಯೆಯ ಮೇಲೆ ನಡೆದ ಅತ್ಯಾಚಾರ-ಕೊಲೆ ರೀತಿಯಲ್ಲೇ ನಡೆದ 15 ಕೃತ್ಯಗಳ ಬಗ್ಗೆ ವಿಚಾರಣೆ ನಡೆಸಿದೆವು. ಆಗ ಆರಿಫ್‌ ಹಾಗೂ ಚೆನ್ನಕೇಶವುಲು, ತಾವು 9 ಪ್ರಕರಣಗಳಲ್ಲಿ ಭಾಗಿಯಾಗಿದ್ದಾಗಿ ಒಪ್ಪಿಕೊಂಡರು. ತಾವು ಮಹಿಳೆಯರು, ವೇಶ್ಯೆಯರು ಹಾಗೂ ತೃತೀಯ ಲಿಂಗಿಗಳ ಮೇಲೆ ಹೆದ್ದಾರಿಗಳಲ್ಲಿ ಅತ್ಯಾಚಾರ ಎಸಗಿದ್ದಾಗಿ ಹೇಳಿದರು. ಎಲ್ಲ ಕೃತ್ಯಗಳಲ್ಲೂ ಪಶುವೈದ್ಯೆ ರೀತಿಯಲ್ಲೇ ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಅವರನ್ನು ಸಜೀವ ದಹನ ಮಾಡಿದ್ದಾಗಿ ಅವರು ತಿಳಿಸಿದರು’ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸ್‌ ಮೂಲಗಳ ಪ್ರಕಾರ ಈ 9 ಕೃತ್ಯಗಳಲ್ಲಿ 6 ಕೃತ್ಯಗಳನ್ನು ಆರಿಫ್‌ ಎಸಗಿದ್ದರೆ, ಚೆನ್ನಕೇಶವುಲು 3 ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ಕೊಂದು ಹಾಕಿದ್ದ.

‘ಈಗ ಆರೋಪಿಗಳ ಹೇಳಿಕೆಯನ್ನು ತಾಳೆ ಹಾಕುವ ಉದ್ದೇಶದಿಂದ 9 ಕೃತ್ಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ವಿವಿಧ ಘಟನಾ ಸ್ಥಳಗಳಿಗೆ ನಮ್ಮ ಪೊಲೀಸ್‌ ತಂಡಗಳು ತೆರಳಿವೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆರೋಪಿಗಳ ತಪ್ಪೊಪ್ಪಿಗೆ, ಅವರು ತೆರಳಿದ್ದ ಮೊಬೈಲ್‌ ಫೋನ್‌ ಲೊಕೇಶನ್‌ಗಳು- ಇತ್ಯಾದಿಗಳನ್ನು ಪರಾಂಬರಿಸಿ ಘಟನೆಗಳ ಸಾಕ್ಷ್ಯಗಳನ್ನು ಪೊಲೀಸರು ಕ್ರೋಡೀಕರಿಸುತ್ತಿದ್ದಾರೆ.

ಪಶುವೈದ್ಯೆ ಅತ್ಯಾಚಾರ ಮಾಡುವಾಗ ಗಂಗಾವತಿಗೆ ಹೊರಟಿದ್ದರು!

ಪಶುವೈದ್ಯೆ ಮೆಲೆ ನವೆಂಬರ್‌ 27ರಂದು ಅತ್ಯಾಚಾರ ಎಸಗಿ ಕೊಲೆ ಮಾಡುವ ವೇಳೆ ನಾಲ್ವರೂ ಆರೋಪಿಗಳು ತಮ್ಮ ಲಾರಿಯಲ್ಲಿ ಇಟ್ಟಿಗೆಯನ್ನು ಹೇರಿಕೊಂಡು ಹೈದರಾಬಾದ್‌ನಿಂದ ಕರ್ನಾಟಕದ ಕೊಪ್ಪಳ ಜಿಲ್ಲೆ ಗಂಗಾವತಿಗೆ ಹೊರಟಿದ್ದರು ಎಂಬ ಅಂಶ ಈಗ ಬಹಿರಂಗವಾಗಿದೆ. ಈ ಎಲ್ಲರೂ ನಿತ್ಯ ತಮ್ಮ ಲಾರಿಗಳಲ್ಲಿ ಸರಕು ಹೇರಿಕೊಂಡು ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದರು.