ಎನ್ಕೌಂಟರ್ ಬೆದರಿಕೆ, 2 ದಿನದ ಬಳಿಕ ರೈಲು ಹಳಿಯಲ್ಲಿ ಅತ್ಯಾಚಾರ, ಕೊಲೆ ಆರೋಪಿಯ ಶವ ಪತ್ತೆ!
* ತೆಲಂಗಾಣ ಆರು ವರ್ಷದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣ
* ರೈಲು ಹಳಿಯಲ್ಲಿ ಶವವಾಗಿ ಪತ್ತೆಯಾದ ಆರೋಪಿ
* ಸಚಿವರು ಎನ್ಕೌಂಟರ್ ಬೆದರಿಕೆ ಹಾಕಿದ್ದ ಎರಡು ದಿನದಲ್ಲಿ ಆರೋಪಿ ಸಾವು
ಹೈದರಾಬಾದ್(ಸೆ.16): ದೇಶಾದ್ಯಂತ ಸದ್ದು ಮಾಡಿದ್ದ ತೆಲಂಗಾಣದ ಆರು ವರ್ಷದ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿ ಸದ್ಯ ಶವವಾಗಿ ಪತ್ತೆಯಾಗಿದ್ದಾನೆ. ಹೌದು ಸಚಿವರೊಬ್ಬರು ಆರೋಪಿಯನ್ನು ಎನ್ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಎರಡು ದಿನಗಳ ಬಳಿಕ ಆರೋಪಿಯ ಮೃತದೇಹ ರೈಲು ಹಳೆಯಲ್ಲಿ ಪತ್ತೆಯಾಗಿದೆ.
ಆರೋಪಿ ತಲೆಮರೆಸಿಕೊಳ್ಳಲು ಓಡುತ್ತಿದ್ದ ವೇಳೆ ರೈಲು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೆಲಂಗಾಣದ ಹಿರಿಯ ಪೊಲೀಸ್ ಅಧಿಕಾರಿ ಆರೋಪಿಯ ಮೃತದೇಹದ ಫೋಟೋಗಳನ್ನು ಟ್ವೀಟ್ ಮಾಡಿ ಈ ಮಾಹಿತಿ ಖಚಿತಪಡಿಸಿದ್ದಾರೆ.ಇನ್ನು ಮಂಗಳವಾರವಷ್ಟೇ ತೆಲಂಗಾಣದ ಸಚಿವ ಮುಲ್ಲಾ ರೆಡ್ಡಿ ಪ್ರಕರಣ ಸಂಬಂಧ ಮಾತನಾಡುತ್ತಾ ಆರೋಪಿ ಎನ್ಕೌಂಟರ್‌ಗೆ ಬಲಿಯಾಗುತ್ತಾನೆ. ಆತನನ್ನು ಹಿಡಿದ ಬಳಿಕ ಇದು ನಡೆಯಲಿದೆ ಎಂದಿದ್ದರು.
ಇನ್ನು ಆರು ವರ್ಷದ ಬಾಲಕಿಯನ್ನು ಅತ್ಯಾಚಾರಗೈದು ಕೊಲೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಆರೋಪಿ 30 ವರ್ಷದ ಪಲ್ಲಕೋಂಡ ರಾಜು ಫೋಟೋ ಜಾರಿಗೊಳಿಸಿದ್ದ ಪೊಲೀಸರು, ಹುಡುಕಿಕೊಟ್ಟವರಿಗೆ 10 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದರು. ಇನ್ನು ಆರೋಪಿ ಬಾಲಕಿಯ ನೆರೆಮನೆಯವನಾಗಿದ್ದು, ಆತನ ಮನೆಯಲ್ಲೇ ಪುಟ್ಟ ಕಂದನ ಶವ ಪತ್ತೆಯಾಗಿತ್ತು. ಅಲ್ಲದೇ ಈ ಘಟನೆಯ ಬಳಿಕ ಆರೋಪಿಯೂ ನಾಪತ್ತೆಯಾಗಿದ್ದ.
ಸೆಪ್ಟೆಂಬರ್ 9 ರಂದು ಹೈದರಾಬಾದ್‌ನ ಸಿಂಗರೇಣಿ ಕಾಲೋನಿಯಲ್ಲಿರುವ ಮನೆಯಿಂದ ಆರು ವರ್ಷದ ಬಾಲಕಿ ನಾಪತ್ತೆಯಾಗಿದ್ದಳು. ಮರುದಿನ ಆಕೆಯ ಶವ ಪಕ್ಕದ ಮನೆಯಲ್ಲಿ ಬೆಡ್‌ಶೀಟ್‌ನಲ್ಲಿ ಮುಚ್ಚಿಟ್ಟಿರುವುದು ಪತ್ತೆಯಾಗಿತ್ತು. ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಮರಣೋತ್ತರ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಪ್ರಾಥಮಿಕ ವರದಿಗಳು ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿತ್ತಾದರೂ ಬಳಿಕ ಆ ಮಾಹಿತಿ ಸುಳ್ಳು ಎಂದು ತಿಳಿದುಬಂದಿತ್ತು. ಬಳಿಕ ಈ ಹೀನಾಯ ಘಟನೆಯನ್ನು ಖಂಡಿಸಿ ಭಾರೀ ಪ್ರತಿಭಟನೆ ನಡೆದಿತ್ತುಭಟನೆ ಮತ್ತು ವಾತಾವರಣ ಉದ್ವಿಗ್ನಗೊಂಡಿತ್ತು. ಬಾಲಕಿ ಮತ್ತು ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಿ ಎಂದು ನೆರೆಹೊರೆಯವರು ಒತ್ತಾಯಿಸಿದರು. ಕೆಲವರಂತೂ ಈ ಹಿಂದೆ ಪೊಲೀಸರ ಗುಂಡಿಗೆ ಬಲಿಯಾದ ಅಪರಾಧಿಗಳನ್ನು ಉಲ್ಲೇಖಿಸಿ, ಈ ಪ್ರಕರಣದ ಆರೋಪಿಯನ್ನೂ ಎನ್ಕೌಂಟರ್ ಮಾಡಲು ಒತ್ತಾಯಿಸಿದ್ದರು.