ಹಿಜ್ಬುಲ್‌ನ ಕಾಶ್ಮೀರ ಬಾಸ್‌ ಹತ್ಯೆ: ಭದ್ರತಾ ಪಡೆಗಳಿಗೆ ಭರ್ಜರಿ ಯಶಸ್ಸು!

ಹಿಜ್ಬುಲ್‌ನ ಕಾಶ್ಮೀರ ಬಾಸ್‌ ಹತ್ಯೆ| ಕಾಶ್ಮೀರದಲ್ಲಿ ಸೇನಾಪಡೆಗಳ ಎನ್‌ಕೌಂಟರ್‌ಗೆ ಉಗ್ರ ಸೈಫುಲ್ಲಾ ಬಲಿ| ಹಲವು ದಾಳಿ ನಡೆಸಿದ್ದ ಸೈಫುಲ್ಲಾ| ಭದ್ರತಾ ಪಡೆಗಳಿಗೆ ಭರ್ಜರಿ ಯಶಸ್ಸು

Hizbul Muhajideen top terrorist Saifullah killed in encounter in Kashmir Rangreth pod

ಶ್ರೀನಗರ(ನ.02): ಕಾಶ್ಮೀರದಲ್ಲಿ ಭಯೋತ್ಪಾದಕರ ಬೇಟೆ ಮುಂದುವರಿಸಿರುವ ಭದ್ರತಾ ಪಡೆಗಳಿಗೆ ಭಾನುವಾರ ಭರ್ಜರಿ ಯಶಸ್ಸು ಸಿಕ್ಕಿದ್ದು, ಕುಖ್ಯಾತ ಉಗ್ರಗಾಮಿ ಸಂಘಟನೆ ಹಿಜ್ಬುಲ್‌ ಮುಜಾಹಿದೀನ್‌ನ ಕಾಶ್ಮೀರ ಘಟಕದ ಮುಖ್ಯಸ್ಥ ಡಾ| ಸೈಫುಲ್ಲಾನನ್ನು ಹತ್ಯೆ ಮಾಡಿವೆ.

ಹಿಜ್ಬುಲ್‌ ಮುಜಾಹಿದೀನ್‌ ಮುಖ್ಯಸ್ಥನಾಗಿದ್ದ ರಿಯಾಜ್‌ ನಾಯ್ಕೂನನ್ನು ಇದೇ ವರ್ಷದ ಮೇ ತಿಂಗಳಿನಲ್ಲಿ ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಆನಂತರ ಸಂಘಟನೆಯ ನೇತೃತ್ವ ಹೊತ್ತುಕೊಂಡಿದ್ದ ಡಾ

ಸೈಫುಲ್ಲಾ, ಭದ್ರತಾ ಪಡೆಗಳ ಮೇಲೆ ಕಾಶ್ಮೀರ ಕಣಿವೆಯಲ್ಲಿ ನಡೆದ ಹಲವಾರು ದಾಳಿಗಳಲ್ಲಿ ಭಾಗಿಯಾಗಿದ್ದ. ಹೀಗಾಗಿ ಈತನ ಹತ್ಯೆ ಸಣ್ಣ ಸಾಧನೆಯಲ್ಲ, ಭದ್ರತಾ ಪಡೆಗಳಿಗೆ ಸಿಕ್ಕ ದೊಡ್ಡ ಯಶಸ್ಸು ಎಂದು ಕಾಶ್ಮೀರ ಐಜಿಪಿ ವಿಜಯ ಕುಮಾರ್‌ ಅವರು ತಿಳಿಸಿದ್ದಾರೆ.

ಹಳೇ ಏರ್‌ಫೀಲ್ಡ್‌ ಪ್ರದೇಶದ ರಂಗರೆಥ್‌ ಬಡಾವಣೆಯಲ್ಲಿ ಉಗ್ರರು ಅಡಗಿರುವ ವರ್ತಮಾನ ಲಭಿಸಿದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಆ ಪ್ರದೇಶವನ್ನು ಸುತ್ತುವರೆದು ಭಾನುವಾರ ಬೆಳಗ್ಗೆಯಿಂದ ಶೋಧ ಕಾರ್ಯಾಚರಣೆ ನಡೆಸಿದವು. ಉಗ್ರರಿಗಾಗಿ ಹುಡುಕಾಟ ತೀವ್ರಗೊಳ್ಳುತ್ತಿದ್ದಂತೆ ಭಯೋತ್ಪಾದಕರು ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ನಡೆಸಿದರು. ಈ ವೇಳೆ ಯೋಧರು ಪ್ರತಿ ದಾಳಿ ನಡೆಸಿದಾಗ ಒಬ್ಬ ಉಗ್ರ ಹತನಾದ. ಬಳಿಕ ಆತ ಸೈಫುಲ್ಲಾ ಎಂಬುದು ತಿಳಿಯಿತು. ಸ್ಥಳದಲ್ಲಿ ಸ್ಪೋಟಕ, ಶಸ್ತಾ್ರಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉತ್ತರಾಧಿಕಾರಿ ಯಾರು?:

ಡಾ| ಸೈಫುಲ್ಲಾ ಹತ್ಯೆಯೊಂದಿಗೆ ಹಿಜ್ಬುಲ್‌ ಸಂಘಟನೆಯನ್ನು ಮುನ್ನಡೆಸುವವರು ಯಾರು ಎಂಬ ಪ್ರಶ್ನೆ ಎದುರಾಗಿದೆ. ಇದಕ್ಕೆ ಹಲವು ಹೆಸರುಗಳು ಕೇಳಿಬರುತ್ತಿವೆ. ಕಾಶ್ಮೀರ ಹಾಗೂ ಹಿಜ್ಬುಲ್‌ ಸಂಘಟನೆಯಲ್ಲಿ ಅತ್ಯಂತ ಹಿರಿಯ ಉಗ್ರ ಕಮಾಂಡರ್‌ ಆಗಿರುವ ಮೊಹಮ್ಮದ್‌ ಅಶ್ರಫ್‌ ಖಾನ್‌ ಅಲಿಯಾಸ್‌ ಅಶ್ರಫ್‌ ಮೊಲ್ವಿ ಮುಂದಿನ ದಿನಗಳಲ್ಲಿ ಡಾ| ಸೈಫುಲ್ಲಾ ಸ್ಥಾನವನ್ನು ನಿರ್ವಹಿಸಬಹುದು ಎನ್ನಲಾಗುತ್ತಿದೆ.

ಇದೇ ವೇಳೆ, 2018ರ ಏಪ್ರಿಲ್‌ನಲ್ಲಿ ಉಗ್ರಗಾಮಿಯಾದ ಜುಬೇರ್‌ ವಾನಿ (31) ಎಂಬಾತ ಕೂಡ ಹೊಣೆ ಹೊರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ರಾಜಕೀಯ ಪಕ್ಷಗಳ ಕಾರ್ಯಕರ್ತರು ಅಥವಾ ಪೊಲೀಸ್‌ ಅಧಿಕಾರಿಗಳ ಮೇಲೆ ದಾಳಿ ವಿಚಾರದಲ್ಲಿ ರಿಯಾಜ್‌ ನಾಯ್ಕೂ ರೀತಿಯೇ ಈತ ದಾಳಿಗಳನ್ನು ನಡೆಸುತ್ತಾನೆ. ಭೋಪಾಲದಲ್ಲಿ ರಾಜ್ಯಶಾಸ್ತ್ರದಲ್ಲಿ ಸ್ನಾತಕ ಪದವಿ, ರಾಜಸ್ಥಾನದಲ್ಲಿ ಎಂಫಿಲ್‌ ವ್ಯಾಸಂಗ ಮಾಡಿದ್ದಾನೆ ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios