ನವದೆಹಲಿ[ಫೆ.27]: ಪೌರತ್ವ ಕಾಯ್ದೆ ಪರ ಹಾಗೂ ವಿರೋಧಿಗಳ ನಡುವೆ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಹಾಗೂ ಹಿಂಸಾಚಾರ ಇಡೀ ದೆಶವನ್ನೇ ಬೆಚ್ಚಿ ಬೀಳಿಸಿದೆ. ಈ ಹಿಂಸಾಚಾರದಲ್ಲಿ ಓರ್ವ ಹೆಡ್‌ ಕಾನ್ಸ್ಟೇಬಲ್, ಗುಪ್ತಚರ ಇಲಾಖೆ ಅಧಿಕಾರಿ ಸೇರಿದಂತೆ ಒಟ್ಟು 27ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಹೀಗಿರುವಾಗ ನಿನ್ನೆ ಬುಧವಾರ ದೆಹಲಿ ಹಿಂಸಾಚಾರ ಪ್ರಕರಣದ ವಿಚಾರಣೆ ನಡೆದಿತ್ತು. ಆದರೀಗ ಹಿಂಸಾಚಾರ ಸಂಬಂಧ ವಿಚಾರಣೆ ನಡೆಸುತ್ತಿದ್ದ ನ್ಯಾಯಮೂರ್ತಿ ರಾತ್ರೋ ರಾತ್ರಿ ವರ್ಗಾವಣೆಯಾಗಿದ್ದಾರೆ.

ಕಳೆದ ವಾರವಷ್ಟೇ ನ್ಯಾಯಮೂರ್ತಿ ಮುರಳೀಧರ್ ಅವರ ವರ್ಗಾವಣೆಗಾಗಿ ಸುಪ್ರೀಂಕೋರ್ಟ್ ಕೊಲಿಜಿಯಂ ಶಿಫಾರಸ್ಸು ಮಾಡಿತ್ತು. ಆದರೆ ಇದಕ್ಕೆ ದೆಹಲಿ ಹೈಕೋರ್ಟ್​ ಬಾರ್ ಅಸೋಸಿಯೇಷನ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ ಫೆಬ್ರವರಿ 20ರಂದು ತನ್ನ ಎಲ್ಲಾ ಸದಸ್ಯರಿಗೆ ಕೆಲಸ ಮಾಡದಿರುವಂತೆ ಸೂಚನೆ ನೀಡಿತ್ತು. ಹೀಗಿರುವಾಗ ದೆಹಲಿ ಹಿಂಸಾಚಾರ ಪ್ರಕರಣ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್. ಮುರಳೀಧರ್ ನಡೆಸುತ್ತಿದ್ದರು. ಈ ವಿಚಾರಣೆ ಬೆಳವಣಿಗೆ ಹಂತದಲ್ಲಿರುವಾಗಲೇ ಈ ಹಿಂದಿನ ವರ್ಗಾವಣೆ ಆದೇಶಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ. ಹೀಗಾಗಿ ಅವರನ್ನು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್​ಗೆ ವರ್ಗಾವಣೆ ಮಾಡಿ ಕೇಂದ್ರ ಸರ್ಕಾರದ ಪರ ಜಂಟಿ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಇನ್ನು ನ್ಯಾಯಮೂರ್ತಿ ಎಸ್. ಮುರಳೀಧರ್ ದೆಹಲಿ ಹಿಂಸಾಚಾರ ಸಂಬಂಧ ವಿಚಾರಣೆ ನಡೆಸುತ್ತಿದ್ದ ಸಾಂವಿಧಾನಿಕ ಪೀಠದ ಸದಸ್ಯರಾಗಿದ್ದರು. ಹೀಗಿರುವಾಗಲೇ ಅವರ ವರ್ಗಾವಣೆಯಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಇನ್ನು ಕಾಂಗ್ರೆಸ್ ಪಕ್ಷದ ವಕ್ತಾರ ರಣದೀಪ್ ಸುರ್ಜೇವಾಲಾ ಕೂಡಾ ಈ ಸಂಬಂಧ ಟ್ವೀಟ್ ಮಾಡಿ ನ್ಯಾಯಮೂರ್ತಿ ಎಸ್. ಮುರಳೀಧರ್ ವರ್ಗಾವಣೆಯನ್ನು ಖಂಡಿಸಿದ್ದಾರೆ.