ಚಂಡೀಗಢ(ನ.08): ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಕಳೆದ ಅಕ್ಟೋಬರ್‌ನಲ್ಲಿ ಹರಾರ‍ಯಣ ಸರ್ಕಾರದಿಂದ ಒಂದು ದಿನದ ಮಟ್ಟಿಗೆ ಗೌಪ್ಯವಾಗಿ ಪರೋಲ್‌ ಪಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಅನಾರೋಗ್ಯ ಪೀಡಿತರಾಗಿ ಗುರುಗ್ರಾಮದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 85 ವರ್ಷದ ತಾಯಿ ನಸೀಬ್‌ ಕೌರ್‌ ನೋಡುವ ಸಲುವಾಗಿ ವಿವಾದಿತ ಬಾಬಾ ಹರಾರ‍ಯಣ ಸರ್ಕಾರದಿಂದ ಅ.24ರಂದು ಗೌಪ್ಯವಾಗಿ ಪರೋಲ್‌ ಪಡೆದಿದ್ದ. ಸುನಾರಿಯಾ ಕಾರಾಗೃಹದಿಂದ ಭಾರೀ ಭದ್ರತೆಯಲ್ಲಿ ಆಸ್ಪತ್ರೆಗೆ ಬಂದು ಸಂಜೆವರೆಗೂ ತಾಯಿಯೊಂದಿಗಿದ್ದು ಬಳಿಕ ಪೊಲೀಸ್‌ ವಾಹನದಲ್ಲಿಯೇ ಜೈಲಿಗೆ ವಾಪಸ್ಸಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಭದ್ರತಾ ದೃಷ್ಟಿಯಿಂದ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಮತ್ತಿತರ ಅಧಿಕಾರಿಗಳ ಹೊರತಾಗಿ ಬೇರೆ ಯಾರಿಗೂ ಈ ಮಾಹಿತಿ ಲಭಿಸದಂತೆ ಗೌಪ್ಯತೆ ಕಾಪಾಡಲಾಗಿತ್ತು. ಈ ಹಿಂದೆ ಗುರ್ಮೀತ್‌ ಜುಲೈನಲ್ಲಿ 42 ದಿನ ಪರೋಲ್‌ ಕೇಳಿ ಬಳಿಕ ವಾಪಸ್‌ ಪಡೆದಿದ್ದ.