ನವದೆಹಲಿ(ಅ.17): ಮಹಿಳೆಯರ ವಿವಾಹಕ್ಕೆ ಇರುವ ಕನಿಷ್ಠ ವಯೋಮಿತಿ ಪರಿಷ್ಕರಣೆ ಕುರಿತು ಶೀಘ್ರವೇ ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಈ ಮೂಲಕ ಹಾಲಿ ಇರುವ ವಯೋಮಿತಿಯನ್ನು 18ರಿಂದ ಹೆಚ್ಚಳ ಮಾಡುವ ಸುಳಿವು ನೀಡಿದ್ದಾರೆ.

ಆಹಾರ ಮತ್ತು ಕೃಷಿ ಸಂಘಟನೆ (ಎಫ್‌ಎಒ)ಗೆ 75 ವರ್ಷ ತುಂಬಿದ ಹಿನ್ನೆಲೆಯಲ್ಲಿ 75 ರು.ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ ‘ದೇಶದ ಹಲವು ಭಾಗಗಳ ಮಹಿಳೆಯರು ನನಗೆ ಪತ್ರ ಬರೆದು, ಮಹಿಳೆಯರ ವಿವಾಹದ ಕನಿಷ್ಠ ಮಿತಿ ಕುರಿತು ವರದಿಗೆ ನೀಡಿರುವ ಸಮಿತಿಯ ವರದಿ ಮತ್ತು ಆ ಬಗ್ಗೆ ಕೇಂದ್ರ ಸರ್ಕಾರ ಯಾವಾಗ ತನ್ನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೇಶದ ಮಹಿಳೆಯರಿಗೆ ಒಂದು ಭರವಸೆ ನೀಡಲು ಬಯಸುತ್ತೇನೆ. ಹೆಣ್ಣು ಮಕ್ಕಳ ವಿವಾಹಕ್ಕೆ ಸೂಕ್ತ ವಯೋಮಿತಿ ಯಾವುದು ಎಂಬುದರ ಬಗ್ಗೆ ಅತ್ಯಂತ ಮಹತ್ವದ ಚರ್ಚೆ ನಡೆಯುತ್ತಿದೆ. ಆದರೆ ಶಿಫಾರಸು ಮಾಡಲು ರಚಿಸಿರುವ ಸಮಿತಿ ಇನ್ನೂ ತನ್ನ ವರದಿಯನ್ನು ಸಲ್ಲಿಸಿಲ್ಲ. ಆ ವರದಿ ಕೈಸೇರಿದ ಕೂಡಲೇ ಸರ್ಕಾರ ತನ್ನ ನಿರ್ಧಾರ ಕೈಗೊಳ್ಳಲಿದೆ’ ಎಂದು ಭರವಸೆ ನೀಡಿದ್ದಾರೆ.

ಇದೇ ವೇಳೆ ಕಳೆದ 6 ವರ್ಷಗಳಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ವಿವಿಧ ಯೋಜನೆಗಳ ಫಲವಾಗಿ ಇದೇ ಮೊದಲ ಬಾರಿಗೆ ಶಾಲೆಗೆ ಸೇರ್ಪಡೆಗೊಳ್ಳುವ ಬಾಲಕಿಯರ ಅನುಪಾತ ಬಾಲಕರಿಗಿಂತ ಹೆಚ್ಚಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಕಳೆದ ಸ್ವಾತಂತ್ರ್ಯೋತ್ಸವದ ಭಾಷಣದ ವೇಳೆ ಮೋದಿ ಅವರು ಮಹಿಳೆಯರ ವಿವಾಹದ ಕನಿಷ್ಠ ಮಿತಿ ಪರಿಷ್ಕರಣೆ ಕುರಿತು ಸುಳಿವು ನೀಡಿದ್ದರು. ಹಾಲಿ ಭಾರತದಲ್ಲಿ ಪುರುಷರಿಗೆ ವಿವಾಹಕ್ಕೆ 21, ಮಹಿಳೆಯರಿಗೆ 18 ವರ್ಷಗಳ ಕನಿಷ್ಠ ವಯೋಮಿತಿ ಜಾರಿಯಲ್ಲಿದೆ. ಹೀಗಾಗಿ ಮಹಿಳೆಯರ ವಯೋಮಿತಿಯನ್ನೂ 21ಕ್ಕೆ ಏರಿಸಬೇಕೆಂಬ ಬೇಡಿಕೆ ಇದೆ.