ಸೋಶಿಯಲ್ ಮೀಡಿಯಾಗೆ ಮೂಗುದಾರ, ಅವಹೇಳನಕಾರಿ ಪೋಸ್ಟ್ ಹಾಕಿದ್ರೆ ಎಚ್ಚರ!
ಸೋಶಿಯಲ್ ಮೀಡಿಯಾಗಳಿಗೆ ಮೂಗುದಾರ ಹಾಕಿದ ಸರ್ಕಾರ| ಅವಹೇಳನಕಾರಿ ಪೋಸ್ಟ್ ಹಾಕಿದ್ರೆ ಎಚ್ಚರ| ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ
ನವದೆಹಲಿ(ಫೆ.25): ಸೋಶಿಯಲ್ ಮೀಡಿಯಾ, ಡಿಜಿಟಲ್ ನ್ಯೂಸ್ ಹಾಗೂ OTT ಪ್ಲಾಟ್‌ಫಾರಂಗೆ ಸಂಬಂಧಿಸಿದಂತೆ ಗುರುವಾರದಂದು ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ.
"
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಭಾರತದಲ್ಲಿ ಉದ್ಯಮಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ನಾವು ಸ್ವಾಗತಿಸುತ್ತೇವೆ. ಅವರಿಗೆ ಬಳಕರೆದಾರರು ಸಿಕ್ಕಿದ್ದಾರೆ, ಉದ್ಯಮವೂ ಮುಂದುವರೆಯುತ್ತಿದೆ. ಈ ಮೂಲಕ ಭಾರತೀಯರನ್ನು ಮತ್ತಷ್ಟು ಸಧೃಡಗೊಳಿಸಿದ್ದಾರೆ. ಇದೆಲ್ಲವನ್ನೂ ನಾವು ಒಪ್ಪಿಕೊಳ್ಳುತ್ತೇವೆ ಹಾಗೂ ಸ್ವಾಗತಿಸುತ್ತೇವೆ. ಆದರೀಗ ಇವುಗಳ ದುರುಪಯೋಗ ತಡೆಯಬೇಕಿದೆ ಎಂದಿದ್ದಾರೆ. ಇದೇ ವೇಳೆ ಸೋಶಿಯಲ್ ಮೀಡಿಯಾಗಳಿಗೆ ಮೂಗುದಾರ ಹಾಕುವ ನಿಟ್ಟಿನಲ್ಲಿ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದಾರೆ.
ಇಷ್ಟೇ ಅಲ್ಲದೇ ನಾವು ಟೀಕೆ, ಟಿಪ್ಪಣಿಯನ್ನು ಸ್ವಾಗತಿಸುತ್ತೇವೆ. ಇದು ಬಹಳ ಅಗತ್ಯವಾಗಿದೆ. ಸೋಶಿಯಲ್ ಮೀಡಿಯಾ ಬಳಕೆದಾರರು ಕೋಟಿಗಟ್ಟಲೇ ಇರುವಾಗ ಇದು ನಡೆಯಲೇಬೇಕು. ಹೀಗಿರುವಾಗ ಸೋಶಿಯಲ್ ಮೀಡಿಯಾದಲ್ಲಿ ಅವಹೇಳನವಾದಾಗ ಅಥವಾ ದುರುಪಯೋಗವಾದಾಗ ಬಳಕೆದಾರರ ದೂರುಗಳನ್ನು ಆಲಿಸಿ ಇವುಗಳಿಗೆ ಪರಿಹಾರ ಒದಗಿಸಲು ಒಂದು ನಿಗದಿತ ವೇದಿಕೆ ಬೇಕಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾ ದುರುಪಯೋಗ
ಮಾರ್ಗಸೂಚಿ ತಯಾರಿಸಿರುವ ಬಗ್ಗೆ ಉಲ್ಲೇಖಿಸಿದ ಸಚಿವ ರವಿ ಶಂಕರ್ ಪ್ರಸಾದ್ 'ಸೋಶಿಯಲ್ ಮೀಡಿಯಾಗಳು ಅಪರಾಧ, ಭಯೋತ್ಪಾದನೆ ಹಾಗೂ ಹಿಂಸಾತ್ಮಕ ಕೃತ್ಯಗಳನ್ನು ಪ್ರಚೋದಿಸುತ್ತಿವೆ ಎಂದು ನಮಗೆ ಹಲವಾರು ದೂರುಗಳು ಬಂದಿವೆ. ಅಲ್ಲದೇ ಭಾರತದಲ್ಲಿ ಸೋಶಿಯಲ್ ಮೀಡಿಯಾ ದುರುಪಯೋಗವಾಗುತ್ತದೆ, ಫೇಕ್ ನ್ಯೂಸ್ ಹರಡಲಾಗುತ್ತಿದೆ ಎಂಬ ದೂರುಗಳೂ ಬಂದಿವೆ. ಇದು ಬಹಳ ಚಿಂತಾಜನಕ ವಿಚಾರವಾಗಿದೆ. ಹೀಗಾಗಿ ನಮ್ಮ ಸರ್ಕಾರ ಇಂತಹ ಪ್ಲಾಟ್‌ಫಾರಂಗಳಿಗೆ ಮಾರ್ಗಸೂಚಿಯನ್ನು ಸಿದ್ಧಪಡಿಸಲು ನಿರ್ಧರಿಸಿದೆ ಎಂದಿದ್ದಾರೆ.
ಸೋಶಿಯಲ್ ಮೀಡಿಯಾಗಳಿಗೆ ಮೂಗುದಾರ
* ಕಂಪನಿಗಳು ಬಳಕೆದಾರರ ದೂರು ಸ್ವೀಕರಿಸಲು ಅಧಿಕಾರಿಯನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಅವರ ಹೆಸರನ್ನು ಸಾರ್ವಜನಿಕಗೊಳಿಸಬೇಕು.
* ಈ ಅಧಿಕಾರಿ ದೂರು ಸ್ವೀಕರಿಸಿದ ನಂತರ 15 ದಿನಗಳೊಳಗೆ ಸಮಸ್ಯೆ ಪರಿಹರಿಸಬೇಕು. ನ್ಯೂಡಿಟಿ ವಿಚಾರದ ಅಂತಹ ಪೋಸ್ಟ್‌ಗಳನ್ನು 24 ಗಂಟೆಯೊಳಗೆ ತೆಗೆದುಹಾಕಬೇಕಾಗುತ್ತದೆ.
* ಪ್ರತಿ ತಿಂಗಳು ಎಷ್ಟು ದೂರುಗಳು ಬಂದವು ಮತ್ತು ಅವುಗಳ ಮೇಲೆ ಯಾವ ಕ್ರಮ ಕೈಗೊಳ್ಳಲಾಗಿದೆ ಎಂದು ವರದಿ ನೀಡಬೇಕು.
* ವದಂತಿ ಅಥವಾ ತಪ್ಪು ವಿಚಾರ ಹರಡಿದವರ ಮಾಹಿತಿ ಕಲೆ ಹಾಕಬೇಕು.
* ಭಾರತದ ಹೊರಗಿನಿಂದ ಇಂತಹ ಕಂಟೆಂಟ್ ಪೋಸ್ಟ್ ಮಾಡಿದ್ದರೆ, ಈ ವಿಷಯವನ್ನು ಯಾರು ಮೊದಲ ಬಾರಿಗೆ ಪೋಸ್ಟ್ ಮಾಡಿದ್ದಾರೆಂದು ಹೇಳಬೇಕು.
* ಸೋಶಿಯಲ್ ಮೀಡಿಯಾ ಬಳಕೆದಾರರ ಪೋಸ್ಟ್ ತೆಗೆದುಹಾಕುವ ಮೊದಲು, ಇದಕ್ಕೆ ಸೂಕ್ತ ಕಾರಣ ನೀಡಬೇಕು.
ಒಟಿಟಿ ಪ್ಲಾಟ್‌ಫಾರ್ಮ್-ಡಿಜಿಟಲ್ ಮೀಡಿಯಾಗೆ ಮಾರ್ಗಸೂಚಿಗಳು
* ಈ ಬಗ್ಗೆ ಮಾತನಾಡಿದ ಸಚಿವ ಪ್ರಕಾಶ್ ಜಾವ್ಡೇಕರ್ ಎಲೆಕ್ಟ್ರಾನಿಕ್ ಮಾಧ್ಯಮಗಳು ನಿಯಮಗಳನ್ನು ಪಾಲಿಸಬೇಕು, ಆದರೆ ಒಟಿಟಿ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಿಗೆ ಇಂತಹ ನಿಯಮಗಳಿಲ್ಲ. ನಾವು ಒಟಿಟಿ ಪ್ಲಾಟ್‌ಫಾರ್ಮ್ಗಳಿಗೆ ಸ್ವಯಂ ನಿಯಂತ್ರಣ ಹೇರುವ ಬಗ್ಗೆ ನಿರ್ದೇಶಿಸಿದ್ದೆವು, ಆದರೆ ಇದು ಆಗಿಲ್ಲ ಎಂದಿದ್ದಾರೆ.
* ಹೀಗಾಗಿ ಇನ್ಮುಂದೆ ಒಟಿಟಿ ಪ್ಲಾಟ್‌ಫಾರಂಗಳು ತಮ್ಮ ಕೆಲಸದ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ. ತಾವು ಕಂಟೆಂಟ್ ಹೇಗೆ ಆಯ್ಕೆ ಮಾಡುತ್ತೇವೆ ಮೊದಲಾದ ಮಾಹಿತಿ ಒದಗಿಸಬೇಕು. ಇದಾದ ಬಳಿಕ ಎಲ್ಲವೂ ಸ್ವಯಂ ನಿಯಂತ್ರಣ ಕಾರ್ಯಗತಗೊಳಿಸಬೇಕು. ಈ ನಿಟ್ಟಿನಲ್ಲಿ ನಿವೃತ್ತ ನ್ಯಾಯಾಧೀಶರು ಅಥವಾ ಸುಪ್ರೀಂ ಕೋರ್ಟ್ ಸಿಬ್ಬಂದಿ ಇರುವ ಒಂದು ವೇದಿಕೆಯನ್ನೂ ರಚಿಸಲಾಗುತ್ತದೆ ಎಂದೂ ಜಾವ್ಡೇಕರ್ ತಿಳಿಸಿದ್ದಾರೆ.
* ಎಲೆಕ್ಟ್ರಾನಿಕ್ ಮಾಧ್ಯಮದಂತೆ,ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳು ಕೂಡಾ ತಪ್ಪು ಮಾಹಿತಿ ನೀಡಿದಾಗ ಕ್ಷಮೆ ಯಾಚಿಸಬೇಕಾಗುತ್ತದೆ ಎಂದೂ ಹೇಳಿದ್ದಾರೆ.