ಗ್ಯಾಂಗ್‌ಸ್ಟರ್ ಪುತ್ರನ ಎನ್‌ಕೌಂಟರ್ ಬಳಿಕ ಮತ್ತೆ ವೈರಲ್ ಆಗ್ತಿದೆ ಯೋಗಿ ಅಂದು ಸದನದಲ್ಲಿ ನೀಡಿದ ಹೇಳಿಕೆ
'ಮಾಫಿಯಾವನ್ನು ಮಣ್ಣಲ್ಲಿ ಹೂತು ಬಿಡುವೆ' ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ನೀಡಿದ ಈ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ರೆಂಡಿಂಗ್‌ನಲ್ಲಿದೆ.
ಲಕ್ನೋ: ಉತ್ತರ ಪ್ರದೇಶ ಪೊಲೀಸರು ಇಂದು ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ, ಉಮೇಶ್ ಪಾಲ್ ಕೊಲೆ ಪ್ರಕರಣದ ಆರೋಪಿ ಗ್ಯಾಂಗ್‌ಸ್ಟಾರ್ ಅತೀಕ್ ಅಹಮ್ಮದ್ ಪುತ್ರ ಅಸಾದ್‌ನನ್ನು ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ್ದಾರೆ. ಇದಾದ ಬಳಿಕ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಉತ್ತರ ಪ್ರದೇಶ ವಿಧಾನಸಭೆಯಲ್ಲಿ ನೀಡಿದ ಹೇಳಿಕೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಟ್ರೆಂಡಿಂಗ್‌ನಲ್ಲಿದೆ.
ಶಾಸಕ ರಾಜು ಪಾಲ್ ಹತ್ಯೆ ಪ್ರಮುಖ ಸಾಕ್ಷಿ, ಉಮೇಶ್ ಪಾಲ್ ಕೊಲೆ ಪ್ರಕರಣ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆಯನ್ನು ಇಡೀ ದೇಶವೇ ಪ್ರಶ್ನಿಸುವಂತೆ ಮಾಡಿತ್ತು. ಇದರ ಬೆನ್ನಲ್ಲೇ ಉತ್ತರ ಪ್ರದೇಶದ ಮಾಫಿಯಾ ಗ್ಯಾಂಗ್‌ನ್ನು ಮಣ್ಣಲ್ಲಿ ಹೂತು ಹಾಕುತ್ತೇನೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸದನದಲ್ಲಿ ಹೇಳಿಕೆ ನೀಡಿದ್ದರು. ಈ ಹೇಳಿಕೆ ಈಗ ವೈರಲ್ ಆಗುತ್ತಿದ್ದು, ನೀವು ಹೇಳಿದ ಪ್ರತಿ ಮಾತು ನಿಜವಾಗುತ್ತಿದೆ ಯೋಗೀಜಿ ಎಂದು ಬರೆದುಕೊಂಡು ಯೋಗಿ ಆದಿತ್ಯನಾಥ್ ವಿಡಿಯೋ ವೈರಲ್ ಮಾಡಲಾಗಿದೆ. ಇಂದು ಉಮೇಶ್ ಪಾಲ್ ಕೊಲೆ ಆರೋಪಿ, ಅತೀಕ್ ಅಹಮ್ಮದ್ ಪುತ್ರ ಅಸಾದ್ ಹಾಗೂ ಮತ್ತೊರ್ವ ಆರೋಪಿ ಮಕ್ಸೂಸದನ್ ಪುತ್ರ ಗುಲಾಂ ಇಬ್ಬರನ್ನು ಉತ್ತರ ಪ್ರದೇಶ ಸ್ಪೆಷಲ್ ಟಾಸ್ಕ್ ಫೋರ್ಸ್(STF) ಎನ್‌ಕೌಂಟರ್ ಮಾಡಿದ್ದಾರೆ.
ಮಾಫಿಯಾ ವಿರುದ್ಧ ಯೋಗಿ ಯುದ್ಧ..30 ದಿನದಲ್ಲಿ ಬದಲಾಗಿದ್ದೆಷ್ಟು..?
ಒಂದು ತಿಂಗಳ ಹಿಂದಷ್ಟೇ ಯೋಗಿ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದರು. ಮಾಫಿಯಾಗಳನ್ನು ಮಣ್ಣಿನಡಿ ಹೂತು ಹಾಕುವುದಾಗಿ ಹೇಳಿದ್ದರು. ಇಂದು ಉತ್ತರಪ್ರದೇಶದ ಝಾನ್ಸಿಯಲ್ಲಿ ಎನ್‌ಕೌಂಟರ್‌ನಲ್ಲಿ ಇಬ್ಬರು ಮಾಫಿಯಾಕೋರರ ಪುತ್ರರು ಎನ್‌ಕೌಂಟರ್‌ನಲ್ಲಿ ಹತ್ಯೆಯಾಗುತ್ತಿದ್ದಂತೆ ಯೋಗಿ ಹೇಳಿಕೆಯ ಈ ವಿಡಿಯೋ ವೈರಲ್ ಆಗುತ್ತಿದೆ.
ಫೆ.25 ರಂದು ಉತ್ತರಪ್ರದೇಶದ ಬಜೆಟ್ ಸೆಷನ್‌ನಲ್ಲಿ ಸಮಾಜವಾದಿ ನಾಯಕ ಅಖಿಲೇಶ್ ಯಾದವ್ (Akhilesh Yadav) ಮಾತಿಗೆ ಪ್ರತಿಕ್ರಿಯಿಸುತ್ತಾ ಮಾತನಾಡಿದ ಸಿಎಂ ಯೋಗಿ ಆದಿತ್ಯನಾಥ್, ಹಾಡಹಗಲೇ ಉಮೇಶ್ ಪಾಲ್ ಕೊಲೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸುತ್ತಾ, ರೌಡಿಸಂ ಹಾಗೂ ಮಾಫಿಯಾವನ್ನು ರಾಜ್ಯದಿಂದ ಸಂಪೂರ್ಣವಾಗಿ ಹೊರಗಟ್ಟುವುದಾಗಿ ಖಡಕ್ ಆಗಿ ಹೇಳಿದ್ದರು.
ಸಂತ್ರಸ್ತನ ಕುಟುಂಬವೂ ಆರೋಪಿಸುತ್ತಿರುವ ಅತೀಕ್ ಅಹ್ಮದ್ (Atiq Ahmed) ಸಮಾಜವಾದಿ ಪಕ್ಷವು ಪೋಷಿಸಿದ ಮಾಫಿಯಾದ ಭಾಗವಾಗಿದೆ ಮತ್ತು ನಾವು ಅದರ ಬೆನ್ನು ಮುರಿಯಲು ಮಾತ್ರ ಕೆಲಸ ಮಾಡಿದ್ದೇವೆ ಎಂಬುದು ನಿಜವಲ್ಲವೇ? ಎಂದು ಅಖಿಲೇಶ್ ಯಾದವ್‌ರತ್ತ ಕೈ ತೋರಿಸಿ ಯೋಗಿ ಆದಿತ್ಯನಾಥ್ ಮಾತನಾಡಿದ್ದರು. ಸಭಾಧ್ಯಕ್ಷರೇ ಆತ (ಅತೀಕ್ ಅಹ್ಮದ್) ವೃತ್ತಿಪರ ಕೊಲೆಗಾರರಿಗೆ ಹಾಗೂ ಮಾಫಿಯಾ ಮಂದಿಗೆ ಗಾಡ್ ಫಾದರ್ ಆಗಿದ್ದು, ಅವರ ರಕ್ತನಾಳದಲ್ಲೇ ಅಪರಾಧವಿದೆ, ಮತ್ತು ನಾನು ಇಂದು ಈ ಸದನದಲ್ಲಿ ಹೇಳುತ್ತಿದ್ದೇನೆ. ನಾನು ಈ ಮಾಫಿಯಾವನ್ನು ನೆಲದೊಳಗೆ ಹೂತು ಹಾಕುತ್ತೇನೆ ಎಂದು ಅಖಿಲೇಶ್‌ರತ್ತ ಬೆರಳು ತೋರಿಸುತ್ತಾ ಯೋಗಿ ಆದಿತ್ಯನಾಥ್ ಅಂದು ಮಾತನಾಡಿದ್ದರು.
'ಮಾಫಿಯಾದವರನ್ನ ಹೂತುಹಾಕ್ತೇನೆ..' ಯುಪಿ ವಿಧಾನಸಭೆಯಲ್ಲಿ 'ಉಗ್ರಂ ವೀರಂ' ಆದ ಯೋಗಿ ಆದಿತ್ಯನಾಥ್!
ಈ ಮಧ್ಯೆ ಸಮಾಜವಾದಿ ಮುಖ್ಯಸ್ಥ ಅಖಿಲೇಶ್ ಯಾದವ್ (Akhilesh Yadav) ಅವರು ಇಂದು ಬಿಜೆಪಿ ಸರ್ಕಾರದ ವಿರುದ್ಧ ನಕಲಿ ಎನ್‌ಕೌಂಟರ್‌ನ (fake encounter) ಆರೋಪ ಮಾಡಿದ್ದಾರೆ. ಗ್ಯಾಂಗ್‌ಸ್ಟಾರ್ (gangster) ಆಗಿ ರಾಜಕೀಯಕ್ಕೆ ಬಂದ ಅತೀಕ್ ಅಹ್ಮದ್‌ನ ಪುತ್ರ ಹಾಗೂ ಸಹಚರರನ್ನು ಝಾನ್ಸಿಯಲ್ಲಿ ಕೊಲ್ಲುವ ಮೂಲಕ ಸರ್ಕಾರ ರಾಜ್ಯದ ಜನರ ದಿಕ್ಕನ್ನು ಇರುವ ಸಮಸ್ಯೆಗಳಿಂದ ಬೇರೆಡೆಗೆ ತಿರುಗಿಸಲು ಯತ್ನಿಸುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ. ಬಿಜೆಪಿ ಸರ್ಕಾರಕ್ಕೆ ಕಾನೂನು ನ್ಯಾಯಾಲಯದ ಮೇಲೆ ನಂಬಿಕೆ ಇಲ್ಲ ಅವರು ಕಾನೂನನ್ನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ಅಧಿಕಾರದಲ್ಲಿರುವವರು ಯಾರು ಸರಿ ಯಾರು ತಪ್ಪು ಎಂದು ತೀರ್ಪು ನೀಡುವುದು ಯಾರು ಸಾಯಬೇಕು ಯಾರು ಬದುಕಬೇಕು ಎಂದು ತೀರ್ಮಾನಿಸುವುದು ಸರಿಯಲ್ಲ ಎಂದು ರಾಜ್ಯ ಸರ್ಕಾರ ವಿರುದ್ಧ ಅಖಿಲೇಶ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.