ಶ್ರೀನಗರ (ಅ.30): ಅನ್ಯರಾಜ್ಯದ ಕಾರ್ಮಿಕರ ಹುಡುಕಿ ಹುಡುಕಿ ಹತ್ಯೆ ಮಾಡುವ ಪಾಪದ ಕೆಲಸವನ್ನು ಮುಂದುವರೆಸಿರುವ ಉಗ್ರರು, ಮಂಗಳವಾರ ಪಶ್ಚಿಮ ಬಂಗಾಳದ 5 ಕಾರ್ಮಿಕರನ್ನು ಹತ್ಯೆಗೈದಿದ್ದಾರೆ. ದಕ್ಷಿಣ ಕಾಶ್ಮೀರದ ಕುಲ್ಗಾಂ ಜಿಲ್ಲೆಯಲ್ಲಿ ಉಗ್ರರು ಈ ಹೀನ ಕೃತ್ಯ ಎಸಗಿದ್ದಾರೆ. ಘಟನೆಯಲ್ಲಿ ಓರ್ವ ಕಾರ್ಮಿಕ ತೀವ್ರವಾಗಿ ಗಾಯಗೊಂಡಿದ್ದಾನೆ.

ರಾಜ್ಯದಲ್ಲಿ 370ನೇ ವಿಧಿ ರದ್ದುಪಡಿಸಿದ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಉಗ್ರರು ಸಿಡಿದೆದಿದ್ದು, ಕಳೆದ ಕೆಲ ದಿನಗಳಿಂದ ಅನ್ಯ ರಾಜ್ಯಗಳಿಗೆ ಸೇರಿದ ಲಾರಿ ಚಾಲಕರು, ಕಾರ್ಮಿಕರನ್ನು ಹುಡುಕಿ ಹುಡುಕಿ ಹತ್ಯೆ ಮಾಡುತ್ತಿದ್ದಾರೆ. ಅ.14ರಂದು ರಾಜಸ್ಥಾನ ಮೂಲದ ಟ್ರಕ್‌ ಚಾಲಕ, ಅ.16ರಂದು ಪಂಜಾಬ್‌ ಮೂಲದ ಸೇಬು ವ್ಯಾಪಾರಿ, ಅ.16ರಂದೇ ಛತ್ತೀಸ್‌ಗಢ ಮೂಲದ ಕಟ್ಟಡ ಕಾರ್ಮಿಕ ಮತ್ತು ಅ.24ರಂದು ಇಬ್ಬರು ಕಾಶ್ಮೀರಿಯೇತರ ಟ್ರಕ್‌ ಚಾಲಕರನ್ನು ಉಗ್ರರು ಹತ್ಯೆ ಮಾಡಿದ್ದರು.

ನಾಜಿ ಲವರ್ಸ್ ಗಳಿಂದ ಕಣಿವೆ ಭೇಟಿ: ಮೋದಿ ವಿರುದ್ಧ ಓವೈಸಿ ಕಿಡಿ!

ಈ ನಡುವೆ ಮಂಗಳವಾರ ಉಗ್ರರು, ಶಾಲಾ ಮಕ್ಕಳನ್ನು ಗುರಿಯಾಗಿಸಿ ದಾಳಿ ನಡೆಸಲು ಯತ್ನಿಸಿದ ಘಟನೆ ಪುಲ್ವಾಮಾ ಜಿಲ್ಲೆಯಲ್ಲಿ ನಡೆದಿದೆ. ಮಂಗಳವಾರ ಮಧ್ಯಾಹ್ನ Üುಲ್ವಾಮಾದ ರಜ್‌ಪೋರಾದಲ್ಲಿರುವ ಬುಲೆಟ್‌ ನಿರೋಧಕ ಸಿಆರ್‌ಪಿಎಫ್‌ನ ಬಂಕರ್‌ ಮತ್ತು ಇದೇ ಜಿಲ್ಲೆಯ ಶಾಲಾ ಕಟ್ಟಡವೊಂದನ್ನು ಗುರಿಯಾಗಿಸಿ ಉಗ್ರರು ಒಮ್ಮೆಲೇ ದಾಳಿ ನಡೆಸಿದರು. ಈ ವೇಳೆ ಕಾರ್ಯಪ್ರವೃತ್ತರಾದ ಯೋಧರು, ಉಗ್ರರ ದಾಳಿಗೆ ಪ್ರತಿದಾಳಿ ನಡೆಸಿದರು. ಈ ಸಂದರ್ಭದಲ್ಲಿ ಉಗ್ರರು ಪ್ರಾಣಾಪಾಯದಿಂದ ಪರಾರಿಯಾಗಿದ್ದು, ಯಾವುದೇ ಸಾವು-ನೋವುಗಳಾಗಿಲ್ಲ.