ಅಗರ್ತಲಾ [ಡಿ.09] : ಹೈದರಾಬಾದ್‌ ಹಾಗೂ ಉನ್ನಾವ್‌ ಅತ್ಯಾಚಾರ ಹಾಗೂ ಸಂತ್ರಸ್ತೆಯರನ್ನು ಬೆಂಕಿ ಹಚ್ಚಿ ಸಾಯಿಸಿದ ಘಟನೆಗೆ ದೇಶದೆಲ್ಲೆಡೆ ಆಕ್ರೋಶ ಭುಗಿಲೆದ್ದಿರುವಾಗಲೇ, ಅದೇ ರೀತಿಯ ಇನ್ನೊಂದು ಪೈಶಾಚಿಕ ಘಟನೆ ತ್ರಿಪುರಾದಲ್ಲಿ ಪುರಾವರ್ತನೆಗೊಂಡಿದೆ.

ಯುವಕನೊಬ್ಬ 17 ವರ್ಷದ ಯುವತಿಯೊಬ್ಬಳನ್ನು ಅಪಹರಿಸಿ ಆಕೆಯ ಮೇಲೆ ಒಂದೂವರೆ ತಿಂಗಳು ಅತ್ಯಾಚಾರ ಎಸಗಿದ್ದಾನೆ. ಬಳಿಕ ಆಕೆಯನ್ನು ಮದುವೆ ಆಗಲು ವರದಕ್ಷಿಣೆ ಹಣಕ್ಕೆ ಬೇಡಿಕೆ ಇಟ್ಟಿದ್ದು, ಬೇಡಿಕೆ ಈಡೇರದ ಹಿನ್ನೆಲೆಯಲ್ಲಿ ಯುವಕ ಮತ್ತು ಆತನ ತಾಯಿ ಅತ್ಯಾಚಾರ ಸಂತ್ರಸ್ತೆಯನ್ನು ಜೀವಂತವಾಗಿ ದಹಿಸಿ ಸಾಯಿಸಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿ ಅಜಯ್‌ ರುದ್ರಪಾಲ್‌ (25) ಹಾಗೂ ಆತನ ತಾಯಿ ಅನಿಮಾ ರುದ್ರಪಾಲ್‌ (59) ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾರೆ. ಶೇ.90ರಷ್ಟುಸುಟ್ಟಗಾಯಗಳಾಗಿದ್ದ ಸಂತ್ರಸ್ತೆ ಗೋವಿಂದ್‌ ವಲ್ಲಭ್‌ ಪಂತ್‌ ಆಸ್ಪತ್ರೆಯಲ್ಲಿ ಶನಿವಾರ ಸಾವಿಗೀಡಾದ್ದಾಳೆ.

ಘಟನೆ ಹಿನ್ನೆಲೆ: ಅಜಯ್‌ ಪಾಲ್‌ ಅ.28ರಂದು ಪಶ್ಚಿಮ ತ್ರಿಪುರಾದ ಖೋವಾಯಿ ಜಿಲ್ಲೆಯ ಕಲಾಯನ್‌ಪುರದ ಮನೆಯಿಂದ ಯುವತಿಯನ್ನು ಅಪಹರಿಸಿ, ದಕ್ಷಿಣ ತ್ರಿಪುರಾದ ಸಂತಿರ್‌ ಬಜಾರ್‌ನಲ್ಲಿರುವ ತನ್ನ ಮನೆಗೆ ಕರೆದೊಯ್ದಿದ್ದ. ಮನೆಯಲ್ಲಿ ಆಕೆಯ ಮೇಲೆ ಸತತವಾಗಿ ಅತ್ಯಾಚಾರ ನಡೆಸಿದ್ದ ಅಜಯ್‌, ಬಳಿಕ ಆಕೆಯನ್ನು ಮದುವೆಯಾಗಲು 5 ಲಕ್ಷ ರು. ವರದಕ್ಷಿಣಿಗೆ ಬೇಡಿಕೆ ಇಟ್ಟಿದ್ದ. ಇದಕ್ಕೆ ಒಪ್ಪಿದ್ದ ಬಾಲಕಿಯ ಪೋಷಕರ ಮೊದಲ ಕಂತಿನ ಹಣವಾಗಿ ಸ್ವಲ್ಪ ಹಣವನ್ನೂ ಕೊಟ್ಟಿದ್ದರು. ಅದರಂತೆ ಡಿ.11ರಂದು ಮದುವೆ ನಡೆಯಬೇಕಿತ್ತು.

ಅಂತ್ಯಸಂಸ್ಕಾರಕ್ಕೆ ಯೋಗಿ ಬರಲಿಲ್ಲ: ನ್ಯಾಯ ಸಿಗದೇ ಹೊರಟಳು ದೇಶದ ಮಗಳು!...

ಆದರೆ ಬಾಕಿ ಹಣದ ಸಂಬಂಧ ಅಪ್ರಾಪ್ತೆ ಪೊಷಕರ ಜೊತೆ ಅಜಯ್‌ ಮತ್ತು ಆಕೆಯ ತಾಯಿ ನಡುವೆ ಇತ್ತೀಚೆಗೆ ಮಾತಿನ ಚಕಮಕಿ ನಡೆದಿತ್ತು. ಅದರ ಬೆನ್ನಲ್ಲೇ ಶುಕ್ರವಾರ ರಾತ್ರಿ ಅಪ್ರಾಪ್ತೆ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಲಾಗಿದೆ. ತಕ್ಷಣವೇ ನೆರೆಹೊರೆಯವರು ಅಪ್ರಾಪ್ತೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಶನಿವಾರ ಸಾವನ್ನಪ್ಪಿದ್ದಾಳೆ.

ಈ ನಡುವೆ ಸಾಯುವ ಮುನ್ನ ಅಪ್ರಾಪ್ತೆ ನೀಡಿದ ಹೇಳಿಕೆ ಮತ್ತು ಆಕೆಯ ಪೋಷಕರು ನೀಡಿದ ದೂರು ಆಧರಿಸಿ ಪೊಲೀಸರು ಅಜಯ್‌ ಮತ್ತು ಆಕೆಯ ತಾಯಿಯನ್ನು ಬಂಧಿಸಿದ್ದಾರೆ.

ಆರೋಪಿ ಅಜಯ್‌ ಸಂತ್ರಸ್ತ ಯುವತಿಗೆ ಫೇಸ್‌ಬುಕ್‌ ಮೂಲಕ ಪರಿಚಿತನಾಗಿದ್ದ. ಆಕೆಯ ಮನೆಗೆ ಭೇಟಿ ನೀಡಿ ಮದುವೆ ಪ್ರಸ್ತಾವನೆ ಇಟ್ಟಿದ್ದ. ಈ ಸಲುಗೆಯನ್ನು ಬಳಸಿಕೊಂಡು ಆತ ಯವತಿಯನ್ನು ಅಪಹರಿಸಿದ್ದ ಎಂದು ಸಂತ್ರಸ್ತೆಯ ನೆರೆಹೊರೆಯವರು ಹೇಳಿದ್ದಾರೆ.