Farmers Call Off Protest: ರೈತರ ಎಲ್ಲಾ ಬೇಡಿಕೆ ಈಡೇರಿಸಲು ಒಪ್ಪಿದ ಸರ್ಕಾರ, ಸುದೀರ್ಘ ಪ್ರತಿಭಟನೆ ಕೊನೆಗೂ ಅಂತ್ಯ!
* ದೆಹಲಿ ಗಡಿಯಲ್ಲಿ ನಡೆಯುತ್ತಿದ್ದ ರೈತರ ಸುದೀರ್ಘ ಪ್ರತಿಭಟನೆ ಅಂತ್ಯ
* ರೈತರ ಎಲ್ಲಾ ಬೇಡಿಕೆ ಈಡೇರಿಸಲು ಒಪ್ಪಿದ ಕೇಂದ್ರ
* ಜನವರಿ 15ರಂದು ಈ ಬಗ್ಗೆ ಪರಿಶೀಲನಾ ಸಭೆ ನಡೆಸುತ್ತೇವೆಂದ ರೈತ ಮುಖಂಡರು
ನವದೆಹಲಿ(ಡಿ.09): ಮೂರು ಕೃಷಿ ಕಾನೂನು ಜಾರಿಗೊಳಿಸಿದ ಬೆನ್ನಲ್ಲೇ ಕಳೆದೊಂದು ವರ್ಷದಿಂದ ದೆಹಲಿಯ ಸಿಂಘು ಗಡಿಯಲ್ಲಿ ರೈತರು ನಡೆಸುತ್ತಿದ್ದ ಸುದೀರ್ಘ ಪ್ರತಿಭಟನೆ ಕೊನೆಗೂ ಅಂತ್ಯಗೊಳ್ಳಲಿದೆ. ವಿವಾದಿತ ಮೂರು ಕೃಷಿ ಕಾನೂನನ್ನು ಕೇಂದ್ರ ಸರ್ಕಾರ ಹಿಂಪಡೆದ ಬಳಿಕವೂ ತಮ್ಮ ಪ್ರತಿಭಟನೆ ಮುಂದುವರೆಸಿದ್ದ ಅನ್ನದಾತ ಕನಿಷ್ಠ ಬೆಂಬಲ ಬೆಲೆ (MSP), ಪ್ರತಿಭಟನೆ ವೇಳೆ ಸಾವನ್ನಪ್ಪಿದ ರೈತರ ಕುಟುಂಬಕ್ಕೆ ಪರಿಹಾರ ಒದಗಿಸುವಂತೆ ಸೇರಿ ಹಲವು ಬೇಡಿಕೆಗಳನ್ನು ಸರ್ಕಾರದೆದುರು ಇರಿಸಿದ್ದರು. ಆದರೀಗ ಬುಧವಾರ ದೆಹಲಿಯಲ್ಲಿ ಸರ್ಕಾರದ ಜೊತೆ ಮಾತುಕತೆ ನಡೆಸಿದ ಬಳಿಕ ರೈತರು ತಮ್ಮ ಈ ವರ್ಷದ ಹೋರಾಟಕ್ಕೆ ಅಂತ್ಯ ಹಾಡಲು ನಿರ್ಧರಿಸಿದ್ದಾರೆ. ಸರ್ಕಾರವು ರೈತರ ಎಲ್ಲಾ ಬೇಡಿಕೆಗಳನ್ನು ಅಂಗೀಕರಿಸಿದ ಹಿನ್ನಲೆ ಅವರು ಈ ತೀರ್ಮಾನ ನಡೆಸಿದ್ದು, ಈ ಬಗ್ಗೆ ಇಂದು ರೈತ ಸಂಘಟನೆ ನಿರ್ಧಾರ ಪ್ರಕಟಿಸಲಿದ್ದು, ಡಿಸೆಂಬರ್ 11ರಂದು ಪ್ರತಿಭಟನಾ ಸ್ಥಳದಿಂದ ಹೊರಡುವುದಾಗಿ ರೈತ ಮುಖಂಡರು ತಿಳಿಸಿದ್ದಾರೆ.
ಪ್ರತಿಭಟನೆ ಹಿಂಪಡೆಯುವ ಕುರಿತು ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ ಸಭೆ ನಡೆಸಿದೆ. ಸಭೆ ಬಳಿಕ ಮಾತನಾಡಿದ ರೈತ ಮುಖಂಡ ಗುರ್ನಾಮ್ ಸಿಂಗ್ ಚರೌನಿ 'ಈ ಸುದೀರ್ಘ ಪ್ರತಿಭಟನೆ ಅಂತ್ಯಗೊಳಿಸಲು ನಾವು ನಿರ್ಧರಿಸಿದ್ದೇವೆ. ಜನವರಿ 15ರಂದು ಈ ಬಗ್ಗೆ ಪರಿಶೀಲನಾ ಸಭೆ ನಡೆಸಲಿದ್ದೇವೆ. ಸರ್ಕಾರ ನೀಡಿರುವ ಭರವಸೆಗಳನ್ನು ಪೂರೈಸದಿದ್ದರೆ, ಮತ್ತೆ ನಮ್ಮ ಪ್ರತಿಭಟನೆ ಆರಂಭಿಸುತ್ತೇವೆ' ಎಂದಿದ್ದಾರೆ.
ಪ್ರತಿಭಟನೆ ಹಿಂಪಡೆದ ಹಿನ್ನೆಲೆ ದೆಹಲಿ ಹಾಗೂ ಹರಿಯಾಣದ ಸಿಂಘು ಗಡಿಯಲ್ಲಿ ರೈತರು ಟೆಂಟ್‌ಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. 'ನಾವು ನಮ್ಮ ಮನೆಗಳಿಗೆ ತೆರಳಲು ಸಜ್ಜಾಗುತ್ತಿದ್ದೇವೆ, ಆದರೆ ಅಂತಿಮ ನಿರ್ಧಾರವನ್ನು ಸಂಯುಕ್ತ ಕಿಸಾನ್ ಮೋರ್ಚಾ ಕೈಗೊಳ್ಳಲಿದೆ' ಎಂದು ರೈತರೊಬ್ಬರು ತಿಳಿಸಿದ್ದಾರೆ. ಅತ್ತ ಕೇಂದ್ರ ಸರ್ಕಾರ ಕೂಡಾ ರೈತರ ಮೇಲೆ ದಾಖಲಿಸಲಾಗಿರುವ ಪ್ರಕರಣಗಳನ್ನು ಹಿಂಪಡೆಯುವುದರೊಂದಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ ಖಾತರಿಗೆ ಸಂಬಂಧಿಸಿದಂತೆ ಸಮಿತಿ ರಚಿಸುವುದಾಗಿ ಲಿಖಿತವಾಗಿ ಭರವಸೆ ನೀಡಿದೆ/
ಇದಲ್ಲದೆ, ಹರಿಯಾಣ ಮತ್ತು ಉತ್ತರ ಪ್ರದೇಶ ರಾಜ್ಯ ಸರ್ಕಾರ ಹಾಗೂ ಪಂಜಾಬ್ ಮಾದರಿಯಲ್ಲಿ ಮೃತ ರೈತ ಕುಟುಂಬಗಳಿಗೆ 5 ಲಕ್ಷ ರೂ ಪರಿಹಾರ ಮತ್ತು ಮೃತ ರೈತರ ಕುಟುಂಬಕ್ಕೆ ಉದ್ಯೋಗ ನೀಡಲು ಕೇಂದ್ರ ಒಪ್ಪಿಗೆ ನೀಡಿದೆ. ಇನ್ನು ರೈತರ ಪ್ರಮುಖ ಬೇಡಿಕೆಯಾದ ಕನಿಷ್ಠ ಬೆಂಬಲ ಬೆಲೆ ಸಮಿತಿಯಲ್ಲಿ ರಾಜ್ಯಗಳು, ಕೇಂದ್ರದ ಅಧಿಕಾರಿಗಳು ಮತ್ತು ಕೃಷಿ ತಜ್ಞರನ್ನು ಹೊರತುಪಡಿಸಿ ಕೇವಲ ಎಸ್‌ಕೆಎಂ ನಾಯಕರನ್ನು ಮಾತ್ರ ಸೇರಿಸಿಕೊಳ್ಳಬೇಕು ಎಂಬ ಷರತ್ತಿಗೂ ಸರ್ಕಾರ ಒಪ್ಪಿಗೆ ನೀಡಿದೆ.
ರೈತರ ಪ್ರತಿಭಟನೆ ಆರಂಭವಾಗಿದ್ದೇಕೆ?
ರೈತರ ವಿರೋಧದ ನಡುವೆಯೂ ಕಳೆದ ಚಳಿಗಾಲ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ವಿವಾದಿತ ಕೃಷಿ ಕಾನೂನು ಮಸೂದೆ ಮಂಡಿಸಿತ್ತು. ಇದನ್ನು ಪ್ರತಿಭಟಿಸಿ ದೇಶಾದ್ಯಂತ ರೈತರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ ವಿಪಕ್ಷಗಳು ಇವು ರೈತ ವಿರೋಧಿ ಮಸೂದೆಯಾಗಿವೆ ಎಂದು ಟೀಕಿಸಿದ್ದವು. ಈ ಮಸೂದೆಯನ್ನು ರದ್ದುಗೊಳಿಸುವವರೆಗೂ ತಾವು ಪ್ರತಿಭಟನೆ ನಡೆಸುವುದಾಗಿ ವಿವಿಧ ರಾಜ್ಯಗಳ ರೈತರು ದೆಹಲಿ ಹರ್ಯಾಣದ ಗಡಿ ಪ್ರದೇಶ ಸಿಂಘುವಿನಲ್ಲಿ ಕಳೆದೊಂದು ವರ್ಷದಿಂದ ಬೀಡು ಬಿಟ್ಟಿದ್ದರು. ಅದರಲ್ಲೂ ಹರಿಯಾಣ, ಚಂಢೀಗಡ, ಪಂಜಾಬ್ನಲ್ಲಿ ರೈತರು ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ರೈತರ ಒತ್ತಡಕ್ಕೆ ಮಣಿದ ಕೇಂದ್ರ ಸರ್ಕಾರ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಕೃಷಿ ಕಾನೂನುಗಳನ್ನು ಹಿಂಡಪೆದಿದೆ. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಕನಿಷ್ಠ ಬೆಂಬಲ ಬೆಲೆ ಗಾಗಿ ಹೊಸ ಚೌಕಟ್ಟಿನ ಮೇಲೆ ಕೆಲಸ ಮಾಡಲು ಸರ್ಕಾರವು ಸಮಿತಿಯನ್ನು ರಚಿಸಲಿದೆ ಎಂದು ಅವರು ಭರವಸೆ ನೀಡಿದ್ದರು.