ಭಾರತದಲ್ಲಿ ಜನರು ಸಂಸದರನ್ನುಆಯ್ಕೆ ಮಾಡುತ್ತಾರೆ, ಪ್ರಧಾನಿಯನ್ನಲ್ಲ: ಅಶ್ನೀರ್ ಗ್ರೋವರ್ 'ಎಕ್ಸ್' ಪೋಸ್ಟ್ ವೈರಲ್
ಭಾರತ್ ಪೇ ಸಹಸಂಸ್ಥಾಪಕ ಅಶ್ನೀರ್ ಗ್ರೋವರ್ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿ 'ಎಕ್ಸ್'ನಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗಿದೆ. ಇದಕ್ಕೆ ಸಾಕಷ್ಟು ಜನರು ನಾನಾ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ ಕೂಡ.
ನವದೆಹಲಿ (ಜೂ.5): ಲೋಕಸಭಾ ಚುನಾವಣೆಯ ಫಲಿತಾಂಶ ನಿನ್ನೆಯಷ್ಟೇ ಹೊರಬಿದ್ದಿದೆ. ಈ ನಡುವೆ ಬಿಜೆಪಿ ಈ ಬಾರಿ ಕೂಡ ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಂಡವರಿಗೆ ತುಸು ನಿರಾಸೆಯಾಗಿದೆ. ಆದರೆ, ಬಿಜೆಪಿ ನೇತೃತ್ವದ ಮಿತ್ರಪಕ್ಷಗಳ ಒಕ್ಕೂಟ ಎನ್ ಡಿಎಗೆ ಬಹುಮತವಿರುವ ಕಾರಣ ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆ ಎಂಬ ನಂಬಿಕೆಯಿದೆ. ಈ ನಡುವೆ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಹೀಗಿರುವಾಗ ಉದ್ಯಮಿ, ಭಾರತ್ ಪೇ ಸಹಸಂಸ್ಥಾಪಕ ಅಶ್ನೀರ್ ಗ್ರೋವರ್ 'ಎಕ್ಸ್' ನಲ್ಲಿ ಹಾಕಿರುವ ಪೋಸ್ಟ್ ಸಾಕಷ್ಟು ಗಮನ ಸೆಳೆದಿದ್ದು, ವೈರಲ್ ಆಗಿದೆ. ಇದರಲ್ಲಿ ಗ್ರೋವರ್, ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವವಿದೆ. ಇಲ್ಲಿ ಜನರು ಸಂಸದರನ್ನು (ಎಂಪಿ) ಆಯ್ಕೆ ಮಾಡುತ್ತಾರೆಯೇ ಹೊರತು ಪ್ರಧಾನಿಯನ್ನಲ್ಲ ಎಂದು ಬರೆದಿದ್ದಾರೆ. ಗ್ರೋವರ್ ಈ ಎಕ್ಸ್ ಪೋಸ್ಟ್ ಗೆ ಸಾಕಷ್ಟು ಜನರು ಪ್ರತಿಕ್ರಿಯಿಸಿದ್ದಾರೆ. ಅಲ್ಲದೆ, ಕೆಲವರು ಅವರ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ ಕೂಡ.
ಅಶ್ನೀರ್ ಗ್ರೋವರ್ ಪ್ರಸ್ತುತ ಅಮೆರಿಕದಲ್ಲಿದ್ದಾರೆ. ಮಂಗಳವಾರ ನ್ಯೂಯಾರ್ಕ್ ನಲ್ಲಿರುವ 'ದಿ ಸ್ಟ್ಯಾಚು ಆಫ್ ಲಿಬರ್ಟಿ'ಗೆ ಭೇಟಿ ನೀಡಿದ ಬಳಿಕ 2024ನೇ ಸಾಲಿನ ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಭಾರತದ ನಾಗರಿಕರು ನಾವು ಎಲ್ಲ ರಾಜಕರಣಿಗಳಿಗಿಂತ ಜಾಣರು ಎಂಬುದನ್ನು ಹೇಗೆ ತೋರಿಸಿದ್ದಾರೆ ಎಂಬ ವಿಚಾರವನ್ನು ಗ್ರೋವರ್ ತಮ್ಮ 'ಎಕ್ಸ್' ಪೋಸ್ಟ್ ನಲ್ಲಿ ಒತ್ತಿ ಹೇಳಿದ್ದಾರೆ. ಭಾರತದ ಚುನಾವಣೆ ಮುಗಿದಿದೆ. ಜನರು ತಾವು ಪ್ರತಿಯೊಬ್ಬರೂ ಹೇಗೆ ರಾಜಕಾರಣಿಗಳಿಗಿಂತ ಜಾಣರು ಎಂಬುದನ್ನು ತೋರಿಸಿದ್ದಾರೆ ಎಂದು ಹೇಳಿದ್ದಾರೆ.
'ನನಗೆ ಫಲಿತಾಂಶ ಒಂದು ವಿಚಾರವನ್ನು ಬಲಪಡಿಸಿದೆ. ಅದೇನೆಂದ್ರೆ ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವಿದೆ. ಎಲ್ಲರೂ ಎಂಪಿಯನ್ನು ಆಯ್ಕೆ ಮಾಡುತ್ತಾರೆ, ಪಿಎಂ ಅನ್ನು ಅಲ್ಲ. ಹೀಗಾಗಿ ಕ್ಷೇತ್ರದ ವಲಯದಲ್ಲಿ ನಡೆದ ಅತ್ಯುತ್ತಮ ಎಂಪಿ ಆಯ್ಕೆಯು ಗ್ರಹಿಕೆ ಹಾಗೂ ವಾಸ್ತವದ ನಡುವೆ ವ್ಯತ್ಯಾಸಕ್ಕೆ ಕಾರಣವಾಗಿದೆ' ಎಂದು ಗ್ರೋವರ್ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್ ನಲ್ಲಿ ಬರೆದುಕೊಂಡಿದ್ದಾರೆ.
ಗ್ರೋವರ್ ಅವರ ಪೋಸ್ಟ್ ಗೆ ದೊಡ್ಡ ಸಂಖ್ಯೆಯಲ್ಲಿ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ. ಕೆಲವರು ಅವರ ಅಭಿಪ್ರಾಯವನ್ನು ಒಪ್ಪಿಕೊಂಡಿದ್ದಾರೆ ಕೂಡ. ''ಅಶ್ನೀರ್, ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಯಾವುದೇ ಒಬ್ಬ ವ್ಯಕ್ತಿ ಕೂಡ ಆತನ ಸೀಟ್ ಗಿಂತ ಹೆಚ್ಚಿನದ್ದನ್ನು ಪಡೆದಿಲ್ಲ. ಭಾರತ ಭೂಮಿ ಮೇಲಿನ ಅತೀದೊಡ್ಡ ಪ್ರಜಾಪ್ರಭುತ್ವವಾಗಿದೆ' ಎಂದು ಒಬ್ಬ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಳೆದ ಬಾರಿಯಂತೆ ಬಿಜೆಪಿಗೆ ಸ್ಪಷ್ಟ ಬಹುಮತ ಬರುತ್ತದೆ. ನರೇಂದ್ರ ಮೋದಿ ಯಾವುದೇ ಅಡೆತಡೆಯಿಲ್ಲದೆ ಮತ್ತೆ ಮೂರನೇ ಬಾರಿ ಪ್ರಧಾನಿಯಾಗುತ್ತಾರೆ ಎಂಬ ನಿರೀಕ್ಷೆ ಬಲವಾಗಿತ್ತು. ಆದರೆ, ಬಿಜೆಪಿ ನಿರೀಕ್ಷಿತ ಸ್ಥಾನಗಳನ್ನು ಗೆಲ್ಲಿಲ್ಲ. ಆದರೆ, ಬಿಜೆಪಿ ಹಾಗೂ ಅದರ ಮಿತ್ರಪಕ್ಷಗಳ ಎನ್ ಡಿಎಗೆ ಸ್ಪಷ್ಟ ಬಹುಮತ ಬಂದಿದೆ. ಹೀಗಾಗಿ ಕೇಂದ್ರದಲ್ಲಿ ಎನ್ ಡಿಎ ಅಧಿಕಾರ ಹಿಡಿಯುವ ಸಾಧ್ಯತೆಯಿದ್ದು, ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.
ಅಹಂಕಾರ ಪಂಕ್ಚರ್ ಮಾಡಿದ್ದಕ್ಕೆ ಧನ್ಯವಾದಗಳು; ಪ್ರಕಾಶ್ ರೈ ಮೊದಲ ಪ್ರತಿಕ್ರಿಯೆ
ಬಹುತೇಕ ಎಲ್ಲಾ ಎಕ್ಸಿಟ್ ಪೋಲ್‌ಗಳು ಕೂಡ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಅಧಿಕಾರಯುತವಾಗಿ ಮತ್ತೊಮ್ಮೆ ಅಧಿಕಾರಕ್ಕೆ ಏರಲಿದೆ ಎನ್ನುವ ಸಮೀಕ್ಷೆ ನೀಡಿದ್ದವು. ದೈನಿಕ್ ಭಾಸ್ಕರ್ ನೀಡಿದ್ದ 316 ಸೀಟ್‌ಗಳು ಎಕ್ಸಿಟ್ ಪೋಲ್‌ನಲ್ಲಿ ಎನ್‌ಡಿಎಯ ಕನಿಷ್ಠವಾಗಿದ್ದರೆ, ಟುಡೇಸ್ ಚಾಣಕ್ಯದ 400 ಸೀಟ್‌ಗಳು ಗರಿಷ್ಠವಾಗಿದ್ದವು.