Asianet Suvarna News Asianet Suvarna News

ಡ್ರೋನ್ ದಾಳಿ: ಕಾಶ್ಮೀರ ಉಗ್ರವಾದದಲ್ಲಿ ಟರ್ನಿಂಗ್‌ ಪಾಯಿಂಟ್‌!

* ಕಾಶ್ಮೀರ ಉಗ್ರವಾದದಲ್ಲಿ ಟರ್ನಿಂಗ್‌ ಪಾಯಿಂಟ್‌

* ಭಾರತದಲ್ಲಿ ಮೊದಲ ಡ್ರೋನ್‌ ‘ಭಯೋತ್ಪಾದಕ ದಾಳಿ’

* ಬಾಂಗ್ಲಾದ ಸುಜನ್‌ ಆವಿಷ್ಕರಿಸಿದ ಡ್ರೋನ್‌ ದಾಳಿ ವಿಶ್ವಕ್ಕೇ ಅಪಾಯ

Drone Attack On Jammu Air Force station A Turning Point In Kashmir Terrorism pod
Author
Bangalore, First Published Jun 28, 2021, 8:58 AM IST

ನವದೆಹಲಿ(ಜೂ.28): ಪೈಪ್‌ಬಾಂಬ್‌, ಕುಕ್ಕರ್‌ ಬಾಂಬ್‌, ಸುಧಾರಿತ ಸ್ಪೋಟಕಗಳನ್ನು ಬಳಸಿ ಮಾಡುತ್ತಿದ್ದ ಉಗ್ರ ದಾಳಿಗಷ್ಟೇ ಸಾಕ್ಷಿಯಾಗಿದ್ದ ಭಾರತ ಇದೇ ಮೊಟ್ಟಮೊದಲ ಬಾರಿಗೆ ಡ್ರೋನ್‌ ಬಳಸಿ ನಡೆಸುವ ಉಗ್ರ ದಾಳಿಗೆ ಸಾಕ್ಷಿಯಾಗಿದೆ. ಇದು ದಶಕಗಳಿಂದ ಕಾಶ್ಮೀರದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸುತ್ತಿದ್ದ ಉಗ್ರರು ಸಾಂಪ್ರದಾಯಿಕ ವಿಧಾನಗಳ ಬದಲಾಗಿ ಮತ್ತಷ್ಟುಆಧುನಿಕತೆಗೆ ಹೊರಳಿಸುವುದರ ಸ್ಪಷ್ಟಸುಳಿವನ್ನು ನೀಡಿದೆ.

ಮತ್ತೊಂದೆಡೆ ಶತ್ರು ದೇಶಗಳ ಕ್ಷಿಪಣಿ, ಬಾಂಬ್‌ ಮತ್ತಿತರೆ ದೊಡ್ಡ ಮಟ್ಟದ ದಾಳಿಗಳನ್ನು ಎದುರಿಸಲಷ್ಟೇ ಸಜ್ಜಾಗಿದ್ದ ಭಾರತಕ್ಕೆ ಇದು ಹೊಸ ಅಪಾಯ ಮತ್ತು ಆತಂಕ ಎರಡನ್ನೂ ತಂದೊಡ್ಡಿದೆ. ಭಾರತ ಮಾತ್ರವಲ್ಲ ಜಾಗತಿಕ ಮಟ್ಟದಲ್ಲೂ ಇವು ಹೊಸ ಆತಂಕವನ್ನು ಹುಟ್ಟಹಾಕಿವೆ.

ಇದೇ ಮೊದಲು:

ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳು 2018ರಿಂದಲೇ ಭಾರತದ ಗಡಿಯೊಳಗೆ ಮಾದಕ ವಸ್ತು, ಶಸ್ತಾ್ರಸ್ತ್ರ, ಮದ್ದುಗುಂಡು ಪೂರೈಕೆಗೆ ಡ್ರೋನ್‌ಗಳನ್ನು ಬಳಸಿಕೊಳ್ಳುತ್ತಿದ್ದವಾದರೂ, ದಾಳಿಗೆಂದು ಡ್ರೋನ್‌ ಬಳಸಿದ್ದು ಇದೇ ಮೊದಲು. ಹೀಗಾಗಿಯೇ ಭಾನುವಾರದ ದಾಳಿ ಭಾರೀ ಆತಂಕಕ್ಕೆ ಕಾರಣವಾಗಿದೆ.

ಪತ್ತೆ ಕಷ್ಟ:

ಉಗ್ರರು ತಮ್ಮ ಕೃತ್ಯಗಳಿಗೆ ಬಳಸುತ್ತಿರುವ ಡ್ರೋನ್‌ ಅತ್ಯಂತ ಚಿಕ್ಕದು. ಇವು ಮಿಲಿಟರಿ ರಾಡಾರ್‌ಗಳ ಕಣ್ಣಿಗೆ ಸಿಗದು. ಜೊತೆಗೆ ಹೀಗೆ ಸಣ್ಣ ಡ್ರೋನ್‌ಗಳ ಮೇಲೆ ನಿಗಾ ಇಡುವುದು ಅತ್ಯಂತ ವೆಚ್ಚದಾಯಕ ಕೂಡಾ ಹೌದು. ಹಾಲಿ ಭಾರತ ಸೇರಿದಂತೆ ಹಲವಾರು ದೇಶಗಳ ಬಳಿ ದೊಡ್ಡ ಮತ್ತು ಸಾಂಪ್ರದಾಯಿಕ ಡ್ರೋನ್‌ಗಳನ್ನು ಪತ್ತೆಹಚ್ಚುವ ತಂತ್ರಜ್ಞಾನ ಮಾತ್ರ ಇದೆ. ನೆಲಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಕೂಡಾ ಇವುಗಳ ಸದ್ದು ಕೇಳಿಬರಲ್ಲ. ಭಾನುವಾರ ಜಮ್ಮು ಏರ್‌ಪೋರ್ಟ್‌ನಲ್ಲಿ ಆಗಿದ್ದೂ ಇದೆ.

ಡ್ರೋನ್‌ ಬಳಕೆ ಏಕೆ?

ಆತ್ಮಾಹುತಿ ದಾಳಿ ಸೇರಿದಂತೆ ಇನ್ನಿತರೆ ಯಾವುದೇ ರೀತಿಯ ದಾಳಿಯಲ್ಲಿ ದಾಳಿ ಮಾಡಿದವರ ಸುಳಿವು ಒಂದಲ್ಲಾ ಒಂದು ರೀತಿಯಲ್ಲಿ ಸಿಕ್ಕೇ ಸಿಗುತ್ತದೆ. ಒಂದು ವೇಳೆ ಪಾಕಿಸ್ತಾನ ಕಡೆಯಿಂದ ದಾಳಿ ನಡಸಲಾಗಿದ್ದರೆ, ಸಾಕ್ಷ್ಯ ಸಿಕ್ಕ ಬಳಿಕ ಅದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಟೀಕೆಗೆ ಗುರಿಯಾಗಬೇಕು. ಜೊತೆಗೆ ಆತ್ಮಾಹುತಿ ದಾಳಿಕೋರರೂ ಬೇಕಾಗಿಲ್ಲ. ಯಾವುದೇ ಸಮಯದಲ್ಲಿ ಯಾರ ಕಣ್ಣಿಗೂ ಬೀಳದಂತೆ ದಾಳಿ ನಡೆಸಬಹುದು.

ಡ್ರೋನ್‌ ಹಾರಿಬಂದ ಪಥ ಪತ್ತೆ ಮೂಲಕ ಅದು ನೆರೆಯ ದೇಶದಿಂದ ಬಂದಿದ್ದು ಹೌದೋ ಅಲ್ಲವೋ ಎಂಬುದು ಕಂಡುಹಿಡಿಯಬಹುದಾದರೂ, ಒಂದು ವೇಳೆ ಪಾಕಿಸ್ತಾನವು, ಭಾರತದಲ್ಲೇ ಇರುವ ತನ್ನ ಉಗ್ರರನ್ನು ಬಳಸಿಕೊಂಡು ದಾಳಿ ನಡೆಸಿದರೆ, ಪಾಕಿಸ್ತಾನದ ಕಡೆಗೆ ಬೊಟ್ಟು ಮಾಡಲೂ ಸಾಧ್ಯವಿಲ್ಲ. ಹೀಗಾಗಿಯೇ ಪಾಕ್‌ ಗುಪ್ತಚರ ಸಂಸ್ಥೆ ಮತ್ತು ಉಗ್ರರು ಡ್ರೋನ್‌ಗೆ ಮೊರೆ ಹೋಗಿದ್ದಾರೆ.

ಬಾಂಗ್ಲಾ ಉಗ್ರನ ಆವಿಷ್ಕಾರ:

ಹೀಗೆ ಡ್ರೋನ್‌ ಮೂಲಕ ಶಸ್ತಾ್ರಸ್ತ್ರ ಸಾಗಣೆ ಮತ್ತು ದಾಳಿಯ ದುಷ್ಕೃತ್ಯ ಆವಿಷ್ಕರಿಸಿದ್ದು ಬಾಂಗ್ಲಾದೇಶ ಮೂಲದ, ಬ್ರಿಟನ್‌ನ ಗ್ಲಾಮರ್ಗನ್‌ನಲ್ಲಿ ಕಂಪ್ಯೂಟರ್‌ ಎಂಜಿನಿಯರ್‌ ಪದವಿ ಪಡೆದ ಸೈಫುಲ್‌ ಹಖ್‌ ಸುಜನ್‌ ಎಂಬಾತ. ಐಸಿಸ್‌ ಪರವಾಗಿ ಕಾರ್ಯನಿರ್ವಹಿಸುತ್ತಿರುವ ಸುಜನ್‌ 2014ರಲ್ಲಿ ಇರಾಕ್‌ನಲ್ಲಿ ಡ್ರೋನ್‌ ಮೂಲಕ ಶಸ್ತಾ್ರಸ್ತ್ರ ಸಾಗಣೆಯನ್ನು ಮೊದಲ ಬಾರಿಗೆ ಬಳಸಿದ್ದ. ನಂತರ ಅದು ಜಾಗತಿಕ ಮಟ್ಟದಲ್ಲಿ ಉಗ್ರರಿಗೆ ಹೊಸ ಸಾಧನವಾಗಿ ಹೊರಹೊಮ್ಮಿದೆ.

Follow Us:
Download App:
  • android
  • ios