ಕೋವ್ಯಾಕ್ಸಿನ್, ಕೋವಿಶೀಲ್ಡ್ ಪಡೆದಿದ್ದರೂ ‘ಡೆಲ್ಟಾ’ ದಾಳಿ: ಏಮ್ಸ್ ವರದಿ!
* ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಎರಡೂ ಡೋಸ್ಗಳನ್ನು ಪಡೆದರೂ ಡೆಲ್ಟಾವೈರಸ್ ದಾಳಿ
* ಏಮ್ಸ್ ಹಾಗೂ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್ಸಿಡಿಸಿ) ನಡೆಸಿದ ಪ್ರತ್ಯೇಕ ಅಧ್ಯಯನ
* ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ಲಸಿಕೆಗಳು ರೂಪಾಂತರಿ ವೈರಸ್ ವಿರುದ್ಧ ಪರಿಣಾಮಕಾರಿ
ನವದೆಹಲಿ(ಜೂ.10): ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಎರಡೂ ಡೋಸ್ಗಳನ್ನು ಪಡೆದುಕೊಂಡಿದ್ದರೂ ಡೆಲ್ಟಾವೈರಸ್, ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ ಎಂದು ಏಮ್ಸ್ ಹಾಗೂ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ (ಎನ್ಸಿಡಿಸಿ) ನಡೆಸಿದ ಪ್ರತ್ಯೇಕ ಅಧ್ಯಯನವೊಂದು ತಿಳಿಸಿದೆ. ಈ ಮುನ್ನ ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಎರಡೂ ಲಸಿಕೆಗಳು ರೂಪಾಂತರಿ ವೈರಸ್ ವಿರುದ್ಧ ಪರಿಣಾಮಕಾರಿ ಆಗಿದೆ ಎಂದು ಹೇಳಲಾಗಿತ್ತು.
ಏಮ್ಸ್ ಅಧ್ಯಯನದ ಪ್ರಕಾರ ಡೆಲ್ಟಾವೈರಸ್, ಬ್ರಿಟನ್ನಲ್ಲಿ ಪತ್ತೆ ಆದ ಅಲ್ಫಾ ವೈರಸ್ ಪ್ರಭೇದಕ್ಕಿಂತ ಶೇ.40ರಿಂದ 50ರಷ್ಟುಹೆಚ್ಚು ಸೋಂಕುಕಾರಕವಾಗಿದೆ. ಅತಿಯಾದ ಜ್ವರದ ಕಾರಣ ಆಸ್ಪತ್ರೆಗೆ ದಾಖಲಾದ 63 ರೋಗಿಗಳ ಪೈಕಿ 36 ಮಂದಿ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ 2 ಡೋಸ್ ಪಡೆದಿದ್ದ ಹೊರತಾಗಿಯೂ ಅವರಲ್ಲಿ ಡೆಲ್ಟಾ ವೈರಸ್ ಪತ್ತೆ ಆಗಿದೆ ಎಂದು ವರದಿ ತಿಳಿಸಿದೆ.
ಡೆಲ್ಟಾವೈರಸ್ ವಿರುದ್ಧವೂ ಕೋವ್ಯಾಕ್ಸಿನ್ನಿಂದ ರಕ್ಷಣೆ
ಸ್ವದೇಶಿ ನಿರ್ಮಿತ ಕೋವ್ಯಾಕ್ಸಿನ್ ಲಸಿಕೆ ಮಾರಣಾಂತಿಕ ಬೀಟಾ(ಬಿ.1.351) ಮತ್ತು ಡೆಲ್ಟಾ(ಬಿ.1.617.2) ರೂಪಾಂತರಿ ವೈರಸ್ ವಿರುದ್ಧವೂ ಜನರಿಗೆ ರಕ್ಷಣೆ ನೀಡಬಲ್ಲದು ಎಂದು ಅಧ್ಯಯನವೊಂದು ತಿಳಿಸಿದೆ.
ದಕ್ಷಿಣ ಆಫ್ರಿಕಾದಲ್ಲಿ ಪತ್ತೆ ಆದ ರೂಪಾಂತರಿ ವೈರಸ್- ಬೀಟಾ ಹೆಸರಿನಿಂದ ಗುರುತಿಸಲ್ಪಟ್ಟಿದ್ದರೆ, ಭಾರತದಲ್ಲಿ ಪತ್ತೆ ಆದ ರೂಪಾಂತರಿ ವೈರಸ್- ಡೆಲ್ಟಾಹೆಸರಿನಿಂದ ಗುರುತಿಸಲ್ಪಟ್ಟಿದೆ. ಇವೆರಡೂ ಮಾರಣಾಂತಿಕ ವೈರಸ್ ಎನಿಸಿದ್ದು, ಲಕ್ಷಾಂತರ ಜನರ ಸಾವಿಗೆ ಕಾರಣವಾಗಿದೆ.
"
ಡೆಲ್ಟಾ ಮತ್ತು ಬೀಟಾ ವೈರಸ್ ಮೇಲೆ ಕೋವ್ಯಾಕ್ಸಿನ್ ಪರಿಣಾಮದ ಬಗ್ಗೆ ಐಸಿಎಂಆರ್, ಎನ್ಐವಿ ಮತ್ತು ಭಾರತ್ ಬಯೋಟೆಕ್ನ ತಜ್ಞರ ತಂಡ ಸಂಶೋಧನೆ ಕೈಗೊಂಡಿತ್ತು. ಕೋವ್ಯಾಕ್ಸಿನ್ನ 2 ಡೋಸ್ ಲಸಿಕೆ ಪಡೆದು 28 ದಿನಗಳ ಬಳಿಕ 17 ಜನರ ರಕ್ತದ ಮಾದರಿಗಳನ್ನು ಅಧ್ಯಯನ ನಡೆಸಿದ ವೇಳೆ ಬೀಟಾ ಮತ್ತು ಡೆಲ್ಟಾರೂಪಾಂತರಿ ವೈರಸ್ಗಳನ್ನು ನಿಷ್ಪರಿಣಾಮಗೊಳಿಸುವ ಸಮಾರ್ಥ್ಯವನ್ನು ಕೋವ್ಯಾಕ್ಸಿನ್ ಹೊಂದಿದೆ ಎಂಬುದು ಕಂಡುಬಂದಿದೆ.