ನವದೆಹಲಿ[ಫೆ.27]: ದಿಲ್ಲಿಯಲ್ಲಿ ಸಂಭವಿಸುತ್ತಿರುವ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಪರ-ವಿರೋಧಿ ಹೋರಾಟದ ಹಿಂಸಾಚಾರಕ್ಕೆ ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ಬಲಿಯಾಗಿದ್ದಾರೆ. ಗುಪ್ತಚರ ಅಧಿಕಾರಿ ಅಂಕಿತ್‌ ಶರ್ಮಾ ಅವರ ಮೃತದೇಹ ಚಾಂದ್‌ಬಾಗ್‌ ಪ್ರದೇಶದ ಮೋರಿಯೊಂದರಲ್ಲಿ ಪತ್ತೆಯಾಗಿದೆ.

ಅಂಕಿತ್‌ ಅವರು ಉದ್ರಿಕ್ತರ ಕಲ್ಲೇಟಿನಿಂದ ಗಾಯಗೊಂಡು ಮೃತಪಟ್ಟಿದ್ದಾರೆ ಎಂದು ಶಂಕಿಸಲಾಗಿದೆ. ಇವರು ಗುಪ್ತಚರ ಇಲಾಖೆಯಲ್ಲಿ ಭದ್ರತಾ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು.

ಮಂಗಳವಾರ ಸಂಜೆ ಅಂಕಿತ್‌ ಅವರು ಕೆಲಸ ಮುಗಿಸಿ ಚಾಂದ್‌ಬಾಗ್‌ನಲ್ಲಿರುವ ಮನೆಗೆ ಮರಳುತ್ತಿದ್ದರು. ಈ ವೇಳೆ ಅವರನ್ನು ಚಾಂದ್‌ಬಾಗ್‌ ಸೇತುವೆಯ ಮೇಲೆ ಅಡ್ಡಗಟ್ಟಿದ ಗುಂಪೊಂದು ಕಲ್ಲಿನಿಂದ ಹೊಡೆದಿದೆ ಹಾಗೂ ಮಾರಣಾಂತಿಕವಾಗಿ ಥಳಿಸಿದೆ. ಬಳಿಕ ಅವರ ದೇಹವನ್ನು ಮೋರಿಯಲ್ಲಿ ಎಸೆದು ಪರಾರಿಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

"

ಆದರೆ ಅಂಕಿತ್‌ ಮಂಗಳವಾರ ಸಂಜೆ ಮನೆಗೆ ಮರಳದೇ ಇದ್ದುದರಿಂದ ಚಿಂತಿತರಾದ ಅವರ ಕುಟುಂಬದವರು, ಅವರಿಗಾಗಿ ಹುಡುಕಾಡಿದ್ದಾರೆ. ಬಳಿಕ ಶವವು ಬುಧವಾರ ಪತ್ತೆಯಾಗಿದೆ.

ಆಪ್‌ ಮೇಲೆ ತಂದೆ ಆರೋಪ:

ಅಂಕಿತ್‌ ಅವರ ತಂದೆ ರವೀಂದ್ರ ಶರ್ಮಾ ಕೂಡ ಗುಪ್ತಚರ ಇಲಾಖೆಯಲ್ಲೇ ಕೆಲಸ ಮಾಡುತ್ತಿದ್ದಾರೆ. ರವೀಂದ್ರ ಅವರು ತಮ್ಮ ಪುತ್ರನ ಸಾವಿಗೆ ದಿಲ್ಲಿಯ ಆಡಳಿತಾರೂಢ ಆಮ್‌ ಆದ್ಮಿ ಪಕ್ಷದ (ಆಪ್‌) ಕಾರ್ಯಕರ್ತರು ಕಾರಣ ಎಂದು ಆರೋಪಿಸಿದ್ದಾರೆ. ಹೊಡೆದ ನಂತರ ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದೂ ಅವರು ಪೊಲೀಸರಿಗೆ ತಿಳಿಸಿದ್ದಾರೆ. ಅಂಕಿತ್‌ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದ್ದು, ಅಲ್ಲಿ ಸಾವಿನ ಕಾರಣ ತಿಳಿದುಬರಲಿದೆ.

ಈ ನಡುವೆ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರು ಅಂಕಿತ್‌ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಇದೊಂದು ದುರಂತಮಯ ಸಾವು. ದುಷ್ಕರ್ಮಿಗಳನ್ನು ಸುಮ್ಮನೇ ಬಿಡಲ್ಲ. 20ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ದಿಲ್ಲಿ ಪೊಲೀಸರು ದಾಳಿಗೆ ಒಳಗಾಗುತ್ತಿರುವುದು ನೋವು ತರಿಸುತ್ತಿದೆ. ಈ ದುಃಖದ ಸನ್ನಿವೇಶದಿಂದ ಶೀಘ್ರ ಹೊರಬರಲು ಪ್ರಾರ್ಥಿಸುವೆ’ ಎಂದು ಟ್ವೀಟ್‌ ಮಾಡಿದ್ದಾರೆ.

ದಿಲ್ಲಿ ಹಿಂಸಾಚಾರದ ಬಗ್ಗೆ ವಿಚಾರಣೆ ನಡೆಸುತ್ತಿರುವ ದಿಲ್ಲಿ ಹೈಕೋರ್ಟ್‌ ಕೂಡ, ಅಂಕಿತ್‌ ಸಾವನ್ನು ‘ದುರದೃಷ್ಟಕರ’ ಎಂದು ಬಣ್ಣಿಸಿದೆ.

ರತನ್‌ ಲಾಲ್‌ಗೆ 1 ಕೋಟಿ ಪರಿಹಾರ

ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ದೆಹಲಿ ಪೊಲೀಸ್‌ ಇಲಾಖೆಯ ಹೆಡ್‌ಕಾನ್ಸ್‌ಟೇಬಲ್‌ಗೆ 1 ಕೋಟಿ ರು.ಪರಿಹಾ ನೀಡಲಾಗುವುದು ಎಂದು ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಘೋಷಿಸಿದ್ದಾರೆ. ಇದೇ ವೇಳೆ ದೆಹಲಿ ಹಿಂಸಾಚಾರದಲ್ಲಿ ಬಲಿಯಾದವರ ಕುಟುಂಬಕ್ಕೆ ತಲಾ 2 ಲಕ್ಷ ರು. ಮತ್ತು ಗಾಯಗೊಂಡವರಿಗೆ ತಲಾ 50000 ರು. ಪರಿಹಾರ ನೀಡಲು ನಿರ್ಧರಿಸಲಾಗಿದೆ.